Paytm FasTag: ಮಾರ್ಚ್‌ 15 ರಿಂದ ಪೇಟಿಎಂ ಫಾಸ್ಟ್‌ಟ್ಯಾಗ್‌ಗೆ ಬೆಲೆ ಇಲ್ಲ, ಪರ್ಯಾಯ ಏನಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Paytm Fastag: ಮಾರ್ಚ್‌ 15 ರಿಂದ ಪೇಟಿಎಂ ಫಾಸ್ಟ್‌ಟ್ಯಾಗ್‌ಗೆ ಬೆಲೆ ಇಲ್ಲ, ಪರ್ಯಾಯ ಏನಿದೆ

Paytm FasTag: ಮಾರ್ಚ್‌ 15 ರಿಂದ ಪೇಟಿಎಂ ಫಾಸ್ಟ್‌ಟ್ಯಾಗ್‌ಗೆ ಬೆಲೆ ಇಲ್ಲ, ಪರ್ಯಾಯ ಏನಿದೆ

ಭಾರತದಲ್ಲಿ ತ್ವರಿತವಾಗಿ ಬೆಳೆದು ಹಲವಾರು ಕಾರಣದಿಂದ ಆರ್‌ಬಿಐ ಕೆಂಗೆಣ್ಣಿಗೆ ಗುರಿಯಾಗಿರುವ ಪೇಟಿಎಂ ಬ್ಯಾಂಕ್‌ನ ಫಾಸ್ಟ್‌ ಟ್ಯಾಗ್‌ ಸೇವೆಗಳು ಮಾರ್ಚ್‌ 15ರಿಂದಲೇ ಬಂದ್‌ ಆಗಲಿವೆ.

ಪೇಟಿಎಂ ಫಾಸ್ಟ್‌ ಟ್ಯಾಗ್‌ ಸೇವೆ ಮುಂದಿನ ತಿಂಗಳ 15ಕ್ಕೆ ಸ್ಥಗಿತಗೊಳ್ಳಲಿದೆ.
ಪೇಟಿಎಂ ಫಾಸ್ಟ್‌ ಟ್ಯಾಗ್‌ ಸೇವೆ ಮುಂದಿನ ತಿಂಗಳ 15ಕ್ಕೆ ಸ್ಥಗಿತಗೊಳ್ಳಲಿದೆ.

ದೆಹಲಿ: ಹೆದ್ದಾರಿಗಳಲ್ಲಿ ವಾಹನಗಳ ಸುಲಭ ಸಂಚಾರಕ್ಕೆ ರೂಪಿಸಿರುವ ಫಾಸ್ಟ್‌ಟ್ಯಾಗ್‌ನಿಂದ ಪೇಟಿಎಂ ಬ್ಯಾಂಕ್‌ ಸೇವೆಯನ್ನು ತೆಗೆದು ಹಾಕಲಾಗಿದೆ. ಮಾರ್ಚ್‌ 15ರಿಂದಲೇ ಪೇಟಿಎಂನ ಫಾಸ್ಟ್‌ ಟ್ಯಾಗ್‌ ಸೇವೆ ಬಂದ್‌ ಆಗಲಿವೆ. ಈಗಾಗಲೇ ಪೇಟಿಎಂ ಬ್ಯಾಂಕ್‌ ನ ಫಾಸ್ಟ್‌ ಟ್ಯಾಗ್‌ ಸೇವೆ ಬಳಸುತ್ತಿರುವವರು ಪರ್ಯಾಯ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದೇ ಇದ್ದರೆ ಟೋಲ್‌ಗಳಲ್ಲಿ ದುಪ್ಪಟ್ಟು ದಂಡವನ್ನು ವಾಹನ ಮಾಲೀಕರು ಪಾವತಿಸಬೇಕಾಗುತ್ತದೆ.

ಈ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌( RBI) ಸೂಚನೆಯನ್ನು ಹೊರಡಿಸಿದ್ದು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌(PPBL) ಅನ್ನು ಈಗಾಗಲೇ ನೀಡಿರುವ 32 ಅಧಿಕೃತ ಬ್ಯಾಂಕ್‌ಗಳ ಪಟ್ಟಿಯನ್ನು ತೆಗೆದು ಹಾಕಲಾಗಿದೆ. ಈಗಾಗಲೇ ಮಾರ್ಚ್‌ 15 ರ ನಂತರ ತನ್ನೆಲ್ಲಾ ಸೇವೆಗಳನ್ನು ಬಂದ್‌ ಮಾಡುವಂತೆ ಆರ್‌ಬಿಐ ಆದೇಶವನ್ನು ಜಾರಿಗೊಳಿಸಿದೆ. ಇದರ ಭಾಗವಾಗಿಯೇ ಫಾಸ್ಟ್‌ ಟ್ಯಾಗ್‌ ನ ಬಂದ್‌ನ ಆದೇಶವೂ ಬಂದಿದೆ ಎನ್ನಲಾಗುತ್ತಿದೆ.

ಟೋಲ್‌ಗಳಲ್ಲಿ ಯಾವುದೇ ಫಾಸ್ಟ್‌ ಟ್ಯಾಗ್‌ ಅಧಿಕೃತವಾಗಿದ್ದರೆ ಮಾತ್ರ ಹಣ ಕಡಿತಗೊಂಡು ಸುಸೂತ್ರ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ. ಇಲ್ಲದೇ ಇದ್ದರೆ ಫಾಸ್ಟ್‌ ಟ್ಯಾಗ್‌ ಸೇವೆ ಇಲ್ಲ ಎಂದು ಪರಿಗಣಿಸಿ ವಾಹನ ಸವಾರರು ನಗದು ಹಣವನ್ನೇ ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಭಾರತದ ಬಹುತೇಕ ಹೆದ್ದಾರಿ, ರಾಜ್ಯಗಳ ಹಲವಾರು ರಾಜ್ಯ ಹೆದ್ದಾರಿಗಳಲ್ಲೂ ಎಲೆಕ್ಟ್ರಾನಿಕ್‌ ಆಧರಿತ ಫಾಸ್ಟ್‌ ಟ್ಯಾಗ್‌ ಸೇವೆ ಜಾರಿಗೆ ಬಂದಿದೆ. ಬಹುತೇಕರು ಅವಕಾಶ ಇರುವ ಯಾವುದಾದರೂ ಒಂದು ಬ್ಯಾಂಕ್ ಖಾತೆಯಿಂದ ಫಾಸ್ಟ್‌ ಟ್ಯಾಗ್‌ ಅನ್ನು ಪಡೆದುಕೊಂಡು ವಾಹನದಲ್ಲಿ ಅಂಟಿಸಿಕೊಂಡು ಬಳಸುತ್ತಿದ್ದಾರೆ.

ಇದಕ್ಕಾಗಿ ಪರ್ಯಾಯಗಳೂ ಇವೆ. ಪೇಟಿಎಂ ಫಾಸ್ಟ್‌ಟಾಗ್‌ ಖಾತೆಯಲ್ಲಿರುವ ಹಣ ಹಿಂಪಡೆದು ಇಲ್ಲವೇ ಕೊನೆ ದಿನದವರೆಗೂ ಬಳಸಬಹುದು. ಆನಂತರ ಹೊಸ ಬ್ಯಾಂಕ್‌ನ ಫಾಸ್ಟ್‌ಟ್ಯಾಗ್‌ ಅನ್ನು ಈಗಿರುವ ಜಾಗದಲ್ಲಿಯೇ ಅಂಟಿಸಿಕೊಳ್ಳಬಹುದು.

  1. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ( NHAI)ವು ಫಾಸ್ಟ್‌ ಟ್ಯಾಗ್‌ ಸೇವೆಯನ್ನು ಒದಗಿಸುತ್ತದೆ. ಇದು ಯಾವುದೇ ಬ್ಯಾಂಕ್‌ನೊಂದಿಗೆ ಸಂಪರ್ಕ ಹೊಂದಿಲ್ಲ. ಬದಲಿಗೆ ಟೋಲ್‌ ಪ್ಲಾಜಾದಲ್ಲಿಯೇ ಪಡೆಯಬಹುದು. ಪೆಟ್ರೋಲ್‌ ಪಂಪ್‌, ಆನ್‌ಲೈನ್‌ ಫ್ಲಾಟ್‌ಫಾರಂಗಳು. ಅಮೆಜಾನ್‌ ಅಥವಾ ಫ್ಲಿಪ್‌ ಕಾರ್ಟ್‌ ಮುಖಾಂತರವೂ ಫಾಸ್ಟ್‌ ಟ್ಯಾಗ್‌ ಸೇವೆ ಪಡೆಯಬಹುದು.
  2. ಐಸಿಐಸಿಐ ಬ್ಯಾಂಕ್‌ ಕೂಡ ಈಗಾಗಲೇ ಫಾಸ್ಟ್‌ ಟ್ಯಾಗ್‌ ಸೇವೆಯನ್ನು ನೀಡುತ್ತಾ ಬಂದಿದೆ. ದೇಶದ ಯಾವುದೇ ಭಾಗದಲ್ಲಿರುವ ಬ್ಯಾಂಕ್‌ಗೆ ಹೋಗಬಹುದು. ಇಲ್ಲವೇ ವೆಬ್‌ಸೈಟ್‌ ಮೂಲಕವೂ ಫಾಸ್ಟ್‌ ಟ್ಯಾಗ್‌ ಪಡದುಕೊಳ್ಳಬಹುದು
  3. ಎಚ್‌ಡಿಎಫ್‌ಸಿ ಕೂಡ ಫಾಸ್ಟ್‌ ಟ್ಯಾಗ್‌ ಸೇವೆಯನ್ನು ತನ್ನ ಖಾತೆದಾರರಿಗೆ ಒದಗಿಸುತ್ತಿದೆ. ಎಚ್‌ಡಿಎಫ್‌ ಬ್ಯಾಂಕ್‌ ಮುಖಾಂತರವೂ ಫಾಸ್ಟ್‌ ಟ್ಯಾಗ್‌ ಪಡೆಯಬಹುದು. ಎಚ್‌ಡಿಎಫ್‌ಸಿ ಶಾಖೆ, ವೆಬ್‌ಸೈಟ್‌ ಇಲ್ಲವೇ ಆಪ್‌ ಬಳಸಿಕೊಂಡು ಪಡೆದುಕೊಳ್ಳಲು ಅವಕಾಶವಿದೆ.
  4. ಭಾರತದ ಸಾರ್ವಜನಿಕ ವಲಯದ ಹಳೆಯ ಬ್ಯಾಂಕ್‌ಗಳಲ್ಲಿ ಒಂದಾದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಕೂಡ ಫಾಸ್ಟ್‌ ಟ್ಯಾಗ್‌ ನೀಡಲಿದೆ. ನಿಮ್ಮ ಖಾತೆ ಇರುವ ಎಸ್‌ ಬಿಐ ಶಾಖೆಯಲ್ಲಿ ಅರ್ಜಿ ನೀಡಿದರೆ ಹೊಸ ಫಾಸ್ಟ್‌ ಟ್ಯಾಗ್‌ ಸಿಗಲಿದೆ.
    ಇದನ್ನೂ ಓದಿರಿ: Google Pay App: ಈ ದೇಶದಲ್ಲಿ ಮುಂದಿನ ಕೆಲ ತಿಂಗಳ ಬಳಿಕ ಗೂಗಲ್ ಪೇ ಸ್ಥಗಿತ; ಭಾರತೀಯರಿಗಿಲ್ಲ ಆತಂಕ
  5. ಕೋಟಾಕ್‌ ಮಹೀಂದ್ರ ಬ್ಯಾಂಕ್‌ ಕೂಡ ಈ ಸೇವೆಯನ್ನು ಹಲವು ವರ್ಷದಿಂದ ನೀಡುತ್ತಿದ್ದು, ಸಾಕಷ್ಟು ಗ್ರಾಹಕರು ಬಳಸುತ್ತಿದ್ದಾರೆ. ಆನ್‌ಲೈನ್‌ ಮೂಲಕವೇ ಫಾಸ್ಟ್‌ ಟ್ಯಾಗ್‌ ಅನ್ನು ಪಡೆದುಕೊಳ್ಳಲು ಅವಕಾಶವಿದೆ. ಇಲ್ಲವೇ ಹತ್ತಿರದ ಶಾಖೆಗೆ ಹೋದರೂ ಅಲ್ಲಿಯೂ ಸಿಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.