ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆಗೆ ಏನೆಲ್ಲಾ ನೋಡಬಹುದು? ಯಾತ್ರಿಗಳ ತಿಳಿಯಲೇಬೇಕಾದ ವಿವರಗಳಿವು
Ayodhya Tourism ಐತಿಹಾಸಿಕ ಪಟ್ಟಣ ಅಯೋಧ್ಯೆ ಈ ಸಾಲಿನ ಪ್ರಮುಖ ಪ್ರವಾಸಿ ತಾಣವೂ ಹೌದು. ಅಯೋಧ್ಯೆಗೆ ಬರುವುದಾರೆ ನೀವು ಏನೆಲ್ಲಾ ನೋಡಬಹುದು ಎನ್ನುವ ವಿವರ ಇಲ್ಲಿದೆ.
ಪ್ರವಾಸ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಭಾಗ. ಅದಕ್ಕೆ ದೇಶ ಸುತ್ತು, ಕೋಶ ಓದುವುದು ನಮ್ಮಲ್ಲಿ ಜನಜನಿತ. ಕೆಲವು ಪ್ರವಾಸಗಳು ವಾರ್ಷಿಕ ನೆಲೆಯಲ್ಲಿದ್ದರೆ, ಇನ್ನಷ್ಟು ಪ್ರವಾಸಗಳು ಆ ಸಮಯಕ್ಕೆ ಯೋಜಿತವಾಗಿ ಬಿಡುತ್ತವೆ. ಈಗ ಭಾರತದಲ್ಲಿ ಅಯೋಧ್ಯೆ ಹಾಗೂ ರಾಮಮಂದಿರದ ಪ್ರವಾಸೋದ್ಯಮವೂ ಹೆಚ್ಚು ಜನಪ್ರಿಯವಾಗಿ ಮಾರ್ಪಟ್ಟಿದೆ.
ನೀವು ಅಯೋಧ್ಯೆಗೆ ಹೋಗಿ ಐತಿಹಾಸಿಕ ರಾಮಮಂದಿರದ ಉದ್ಘಾಟನಾ ಕ್ಷಣಗಳಿಗೆ ಸಾಕ್ಷಿಯಾಗಿ ಬರಬಹುದು. ಅಷ್ಟು ದೂರ ಹೋದ ಮೇಲೆ ಅಯೋಧ್ಯೆ ಹಾಗೂ ಅದರ ಸುತ್ತಮುತ್ತಲಿನ ಪ್ರೇಕ್ಷಣಿಕ, ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳನ್ನೂ ನೋಡಿಕೊಂಡು ಬರಬಹುದು. ಉಳಿಯಲು, ಊಟಕ್ಕೂ ಸೂಕ್ತ ವ್ಯವಸ್ಥೆಗಳುಂಟು. ಯಾವುದೇ ಊರಿಗೆ ಒಂದು ಐತಿಹ್ಯವಿದ್ದರೆ ಊಟೋಪಚಾರದ ಹಿನ್ನಲೆಯು ಇದ್ದೇ ಇರುತ್ತದೆ. ಅಯೋಧ್ಯೆ ಅಂತಹ ಪಟ್ಟಣಗಳಲ್ಲಿ ಒಂದು. ನೀವು ರೂಪಿಸಿಕೊಳ್ಳಬಹುದಾದ ಸಮಗ್ರ ವಿವರ ಇಲ್ಲಿದೆ.
ರಾಮಾಯಣ ನಂಟು
ಅಯೋಧ್ಯೆಯು ರಾಮಾಯಣ ಸಂಬಂಧದಿಂದಾಗಿ ಹಿಂದೂ ಪುರಾಣಗಳ ಪ್ರಕಾರ ಭಾರತದ ಏಳು ಪವಿತ್ರ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇತರ ಆರು ನಗರಗಳಲ್ಲಿ ಮಥುರಾ, ಮಾಯಾ (ಹರಿದ್ವಾರ), ಕಾಶಿ (ವಾರಣಾಸಿ), ಕಾಂಚಿ (ಕಾಂಚಿಪುರಂ), ಆವಂತಿಕಾ (ಉಜ್ಜಯಿನಿ) ಮತ್ತು ದ್ವಾರಾವತಿ (ದ್ವಾರಕಾ) ಸೇರಿವೆ.
ಹಿಂದೂ ಪುರಾಣಗಳಲ್ಲಿ, ಅಯೋಧ್ಯೆಯು ನಗರವನ್ನಾಳಿದ ರಾಜ ದಶರಥನ ಮಗ ಭಗವಾನ್ ರಾಮನ ಜನ್ಮಸ್ಥಳ. ಆದಾಗ್ಯೂ, ಕೆಲವು ವಿದ್ವಾಂಸರು ಅಯೋಧ್ಯೆಯು ಸಾಕೇತಕ್ಕೆ ಸಮಾನಾರ್ಥಕವಾಗಿದೆ ಎಂದು ನಂಬುತ್ತಾರೆ. ಅಲ್ಲಿ ಬುದ್ಧ ಸ್ವಲ್ಪ ಸಮಯದವರೆಗೆ ವಾಸಿಸುತ್ತಿದ್ದ. ಅಯೋಧ್ಯೆಯು ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿದ್ದಾಗ, ಶ್ರಾವಸ್ತಿಯು ಬೌದ್ಧರ ಕಾಲದಲ್ಲಿ ಅಂದರೆ ಐದನೇ ಮತ್ತು ಆರನೇ ಶತಮಾನದ ವೇಳೆ ಪ್ರಮುಖ ನಗರವಾಯಿತು ಎನ್ನುತ್ತದೆ ಇತಿಹಾಸ.
ಅಯೋಧ್ಯೆಗೆ ಭೇಟಿ ನೀಡಲು ಉತ್ತಮ ಸಮಯ
ಈ ಪವಿತ್ರ ನಗರದ ಭೇಟಿ ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಆಹ್ಲಾದಕರ ಹವಾಮಾನ ಮತ್ತು ಹಬ್ಬದ ವಾತಾವರಣ. ದಸರಾ ಮತ್ತು ದೀಪಾವಳಿಯ ಭವ್ಯವಾದ ಆಚರಣೆಗಳನ್ನು ವೀಕ್ಷಿಸಲು ಅಕ್ಟೋಬರ್-ನವೆಂಬರ್‌ನಲ್ಲಿ ಭೇಟಿ ನೀಡಬಹುದು. ಆಗ ಇಡೀ ನಗರವನ್ನು ಸುಂದರವಾಗಿ ಬೆಳಗಿಸಿ ಅಲಂಕರಿಸಲಾಗುತ್ತದೆ.ಆದಾಗ್ಯೂ, ರಾಮ ನವಮಿಯನ್ನು ಅನುಭವಿಸಲು, ಮಾರ್ಚ್-ಏಪ್ರಿಲ್‌ನಲ್ಲಿ ಭೇಟಿ ಮಾಡುವುದು ಮತ್ತೊಂದು ಸೂಕ್ತ ಸಮಯ.
ನೀವು ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತಿದ್ದರೆ, ಜುಲೈನಿಂದ ಸೆಪ್ಟೆಂಬರ್ ವರೆಗೆ ಸೂಕ್ತ. ಆಗ ಮಳೆಗಾಲದ ಕಾರಣಕ್ಕೆ ಜನವೂ ಕಡಿಮೆ. ಏಪ್ರಿಲ್ ಮತ್ತು ಜೂನ್ ನಡುವಿನ ತಿಂಗಳಲ್ಲಿ ಇಲ್ಲಿನ ತಾಪಮಾನವು 30 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುವುದರಿಂದ ಆಗ ಬರುವುದು ಬೇಡ ಎನ್ನುವ ಸಲಹೆಯನ್ನು ನೀಡಲಾಗುತ್ತದೆ. ಉಳಿದಂತೆ ಡಿಸೆಂಬರ್ ಮತ್ತು ಜನವರಿಯ ಚಳಿಗಾಲದ ತಿಂಗಳು ಅಯೋಧ್ಯೇ ಅನ್ವೇಷಣೆ ಅಹ್ಲಾದಕರವಾಗಿರುತ್ತದೆ. ಇದೇ ವೇಳೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಯೂ ಬಂದಿರುವುದರಿಂದ ಪ್ರವಾಸಕ್ಕೆ ಯೋಜಿಸಬಹುದು.
ಅಯೋಧ್ಯೆ ರಾಮಮಂದಿರದ ಬಗ್ಗೆ ಒಂದಷ್ಟು
ಹೊಸ ರಾಮಮಂದಿರ ಮೂರು ಬೃಹತ್ ಮಹಡಿಗಳೊಂದಿಗೆ 11,000 ಚದರ ಮೀಟರ್ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಈ ದೇವಾಲಯವು 366 ಅಂಕಣಗಳು ಮತ್ತು 12 ದ್ವಾರಗಳನ್ನು ಹೊಂದಿದೆ. 161 ಅಡಿ ಎತ್ತರದೊಂದಿಗೆ ಆವರಣದಲ್ಲಿ ಹರಡಿರುವ ಐದು ಮಂಟಪಗಳನ್ನು ಒಳಗೊಂಡಿದೆ.
ದೇವಾಲಯದ ಆವರಣದ ಒಳಗೆ ಮತ್ತು ಸಮೀಪವಿರುವ ಪ್ರಮುಖ ಸ್ಥಳಗಳೆಂದರೆ ಶ್ರೀ ರಾಮ್ ಕುಂಡ್, ಶ್ರೀ ರಾಮಲಾಲಾ ಪುರಕಾಲಿಕ್ ದರ್ಶನ ಮಂಡಲ, ಕರ್ಮ್ ಕ್ಷೇತ್ರ , ಗುರು ವಶಿಷ್ಠ ಪೀಠಿಕಾ, ರಾಮ್ ದರ್ಬಾರ್ , ತುಳಸಿ, ಭಕ್ತಿ ಟೀಲಾ , ಶ್ರೀ ಕಮ್ಮ ಕೀರ್ತಿ ವಿಶೇಷ. ಇತರ ಆಕರ್ಷಣೆಗಳಲ್ಲಿ ಲವ್ ಕುಶ್ ನಿಕುಂಜ್, ಲಕ್ಷ್ಮಣ್ ವಾಟಿಕಾ, ಮರ್ಯಾದಾ ಖಂಡ್, ರಾಮಾಯಣ ಗ್ರಂಥಾಲಯ ಮತ್ತು ವಾಚನಾಲಯ ಇಲ್ಲಿನ ವಿಶೇಷ. ಪ್ರತಿಯೊಂದು ಒಂದೊಂದು ಮಾಹಿತಿಯ ಕಣಜದಂತೆಯೇ ಇವೆ.
ಅಯೋಧ್ಯೆಯಲ್ಲಿ ಭೇಟಿ ನೀಡಬಹುದಾದ ಸ್ಥಳ
ರಾಮಮಂದಿರ ಹೊರತುಪಡಿಸಿ ಅಯೋಧ್ಯೆಯಲ್ಲಿ ಹಲವು ಧಾರ್ಮಿಕ ತಾಣಗಳೂ ಇವೆ. ಇವುಗಳಲ್ಲಿ ಹನುಮಾನ್ ಗಾಧಿ ಮತ್ತು ಸೀತಾ ಕಿ ರಸೋಯಿ ಪ್ರಮುಖ. ದಶರಥ್ ಮಹಲ್, ಕನಕ ಭವನ ಮತ್ತು ವಿವಿಧ ಬಾವಿಗಳಿಗೆ ಭೇಟಿ ನೀಡಬಹುದು. ನಗರದ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸಲು ಉತ್ತಮ ಮಾರ್ಗಇಲ್ಲಿನ ಅನೇಕ ಘಾಟ್‌ಗಳ ಭೇಟಿ. ವಿಶೇಷವಾಗಿ ರಾಮ್ ಘಾಟ್ ಮತ್ತು ಲಕ್ಷ್ಮಣ ಘಾಟ್‌ಗಳಲ್ಲಿ ಸರಯೂ ನದಿಯಿಂದ ಸೂರ್ಯಾಸ್ತವನ್ನು ವೀಕ್ಷಿಸುವುದು. ಗುಪ್ತರಘಾಟ್ ಮತ್ತು ನಯಾಘಾಟ್ ಸೇರಿದಂತೆ ಈ ಘಾಟ್‌ಗಳು ರಾಮ್ ಕಿ ಪೈಡಿ ಎಂದು ಕರೆಯಲ್ಪಡುತ್ತದೆ. ಇದು ಶಿವನಿಗೆ ಅರ್ಪಿತವಾದ ನಾಗೇಶ್ವರನಾಥ ದೇವಾಲಯವನ್ನು ಹೊಂದಿದೆ.
ತುಳಸಿ ಸ್ಮಾರಕ ಭವನದಲ್ಲಿರುವ ಅಯೋಧ್ಯೆ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ. ಹೆಚ್ಚುವರಿಯಾಗಿ, ಸರಯೂ ನದಿಯ ಮೇಲೆ ಹೊಸದಾಗಿ ಪ್ರಾರಂಭಿಸಲಾದ ಜಟಾಯು ಕ್ರೂಸ್ ನೊಂದಿಗೆ ಪ್ರಾಚೀನ ನಗರದ ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸಬಹುದು.
ಅಯೋಧ್ಯೆಯ ರುಚಿ
ಪಟ್ಟಣದಲ್ಲಿ ಏನು ತಿನ್ನಬೇಕು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಉತ್ತರ ಪ್ರದೇಶದ ಹೆಚ್ಚಿನ ನಗರಗಳಂತೆ, ಅಯೋಧ್ಯೆಯು ಆಲೂ ಟಿಕ್ಕಿ, ದಹಿ ವಡಾ ಮತ್ತು ಪಾಪ್ಡಿ ಚಾಟ್ ಸೇರಿದಂತೆ ಸರ್ವೋತ್ಕೃಷ್ಟವಾದ ಕಚೋರಿಗಳು, ಸಮೋಸಾಗಳು ಮತ್ತು ಚಾಟ್‌ಗಳಿಗೆ ಹೆಸರುವಾಸಿಯಾಗಿದೆ. ರಬಡಿ-ಜಿಲೇಬಿ ಕೂಡ ರುಚಿಕರ. ಮಖಾನ್-ಮಲೈ ರೆಸ್ಟೋರೆಂಟ್‌ನಲ್ಲಿ ಉತ್ತರ-ಭಾರತೀಯ ಥಾಲಿಯನ್ನು ಸವಿಯಬಹುದು.
ಅಯೋಧ್ಯೆಯನ್ನು ತಲುಪುವುದು ಹೇಗೆ
ಹೊಸದಾಗಿ ನಿರ್ಮಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್ ನಗರ ಕೇಂದ್ರದಿಂದ 10 ಕಿಮೀ ದೂರದಲ್ಲಿದೆ. ಅಯೋಧ್ಯೆಯು ಫೈಜಾಬಾದ್‌ನಿಂದ 6 ಕಿಮೀ, ಲಕ್ನೋದಿಂದ 136 ಕಿಮೀ ಮತ್ತು ಪ್ರಯಾಗರಾಜ್‌ನಿಂದ 168 ಕಿಮೀ ದೂರದಲ್ಲಿದೆ. ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವೂ ಸಮೀಪದಲ್ಲಿಯೇ ಇದೆ.
ಎಲ್ಲವನ್ನೂ ಯೋಜಿಸಿಕೊಂಡು ಹೊರಟರೆ ಅಯೋಧ್ಯೆಯ ಪ್ರವಾಸ ನಿಮ್ಮ ಸ್ಮರಣೆಯಲ್ಲಿ ಉಳಿಯಬಹುದು. ತಡ ಏಕೆ ಶುರುವಾಗಲಿ ತಯಾರಿ.