Mann ki Baat; ವಿಕಸಿತ ಭಾರತಕ್ಕಾಗಿ ಬೆಂಗಳೂರಲ್ಲಿ ಚಿಗುರಿದೆ ಹೊಸ ಕನಸು, ನವೋದ್ಯಮಿಗಳ ಜೊತೆಗೆ ಪ್ರಧಾನಿ ಮೋದಿ ಮನ್ ಕೀ ಬಾತ್
Mann Ki Baat Highlights; ವಿಕಸಿತ ಭಾರತದ ಕಡೆಗೆ ಎಲ್ಲರೂ ಒಂದೇ ದೃಷ್ಟಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕಾದ ಸಮಯ ಇದು. ಹಲವು ಆಲೋಚನೆಗಳನ್ನು ಸಾಕಾರಗೊಳಿಸಬೇಕು ಎಂದು ಪ್ರಧಾನಿ ಮೋದಿ ವಿವರಿಸಿದರು. ವಿಕಸಿತ ಭಾರತಕ್ಕಾಗಿ ಬೆಂಗಳೂರಲ್ಲಿ ಚಿಗುರಿದೆ ಹೊಸ ಕನಸು. ಅದರ ನವೋದ್ಯಮಿಗಳ ಜೊತೆಗೆ ಪ್ರಧಾನಿ ಮೋದಿ ಮನ್ ಕೀ ಬಾತ್ ನಾಡಿನ ಗಮನಸೆಳೆಯಿತು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಆಗಸ್ಟ್ 25) ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವಿಕಸಿತ ಭಾರತ, ರಾಜಕೀಯದಲ್ಲಿ ಯುವ ಜನರು ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿದರು. ಅಲ್ಲದೆ, ಭಾರತದ ಸ್ವಾತಂತ್ರ್ಯಕ್ಕಾಗಿ ಪೂರ್ವಜನರು ತೋರಿದ ಅರ್ಪಣಾ ಭಾವವನ್ನು ನಾವು ಮತ್ತೆ ತೋರಿಸಬೇಕಾಗಿದೆ. ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಅದು ವ್ಯಕ್ತವಾಗಬೇಕು. ಅದೇ ಚೈತನ್ಯವನ್ನು ಪುನರುಜ್ಜೀವನಗೊಳಿಸಬೇಕು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರು ರಾಜಕೀಯಕ್ಕೆ ಸೇರಲು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಕರೆ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ಹೊಂದಿದ ಭಾರತ ಮತ್ತು ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲು ಈ ಕ್ರಮಗಳು ಯುವಕರನ್ನು ಪ್ರೇರೇಪಿಸುತ್ತವೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಸಮಾಜದ ಎಲ್ಲಾ ವರ್ಗದ ಜನರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡರು ಎಂಬುದನ್ನು ಅವರು ನೆನಪಿಸಿಕೊಂಡರು.
ಹೆಚ್ಚಿನ ಸಂಖ್ಯೆಯ ಯುವಕರು ರಾಜಕೀಯಕ್ಕೆ ಸೇರಲು ಸಿದ್ಧರಿದ್ದಾರೆ ಆದರೆ ಅವರಿಗೆ ಸರಿಯಾದ ಅವಕಾಶ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಕುಟುಂಬ ರಾಜಕಾರಣವು ಹೊಸ ಪ್ರತಿಭೆಗಳನ್ನು ಹತ್ತಿಕ್ಕುತ್ತದೆ ಎಂಬುದನ್ನು ಪ್ರಧಾನಿ ಮೋದಿ ಬೆಟ್ಟುಮಾಡಿ ತೋರಿಸಿದರಲ್ಲದೆ, ಯುವಕರು ತಮಗೆ ಬರೆದ ಪತ್ರಗಳನ್ನು ಉಲ್ಲೇಖಿಸಿದರು.
ಬೆಂಗಳೂರು ನವೋದ್ಯಮ ಗ್ಯಾಲಕ್ಸ್‌ಐ ಸಂಸ್ಥಾಪಕರ ಜೊತೆಗೆ ಪ್ರಧಾನಿ ಮೋದಿ ಹೃದ್ಯ ಮಾತುಕತೆ
ಆಗಸ್ಟ್ 23 ರಂದು, ಚಂದ್ರಯಾನ-3 ರ ಯಶಸ್ಸನ್ನು ಆಚರಿಸುವ ಮೂಲಕ ರಾಷ್ಟ್ರವು ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಗುರುತಿಸಿತು. ಕಳೆದ ವರ್ಷ, ಇದೇ ದಿನ ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿ ಶಿವ-ಶಕ್ತಿ ಬಿಂದುವಿನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು ಎಂದು ಪ್ರಧಾನಿ ಮೋದಿ ಹೇಳುತ್ತ, ಬೆಂಗಳೂರಿನ ನವೋದ್ಯಮ ಗ್ಯಾಲಕ್ಸ್ ಐ ಕುರಿತು ಪ್ರಸ್ತಾಪಿಸಿದರು.
ಬೆಂಗಳೂರು ಮೂಲದ ನವೋದ್ಯಮ ಗ್ಯಾಲಕ್ಸ್ಐ ಸಂಸ್ಥೆಯ ಐದು ಸಂಸ್ಥಾಪಕ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೃದ್ಯ ಮಾತುಕತೆ ಈ ಮನ್ ಕೀ ಬಾತ್‌ನ ಹೈಲೈಟ್ ಆಗಿತ್ತು. ಈ ನವೋದ್ಯಮಿಗಳು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿಗಳು. ಇಸ್ರೋ ಮತ್ತು ಇತರೆ ಸಂಸ್ಥೆಗಳ ಉದ್ಯಮ ತಜ್ಞರು, ಐಐಟಿ ನೆರವಿನೊಂದಿಗೆ ನವೋದ್ಯಮವನ್ನು ಅಭಿವೃದ್ಧಿ ಪಡಿಸುತ್ತಿರುವುದಾಗಿ ಹೇಳಿದ ಅವರು, ಅದರ ಒಳನೋಟಗಳನ್ನು ಮೋದಿ ಅವರಿಗೆ ವಿವರಿಸಿದರು.
ಭಾರತೀಯ ಯುವಕರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಬದಲು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಯುವ ಉದ್ಯಮಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಅವರು ಬಾಹ್ಯಾಕಾಶ ಮತ್ತು ವಿಜ್ಞಾನದಲ್ಲಿ ವಿಶೇಷವಾಗಿ ಮಿಂಚುವುದನ್ನು ನೋಡುವುದು ಖುಷಿಯ ವಿಚಾರ ಎಂದು ಗ್ಯಾಲಕ್ಸ್ ಐ ಸಂಸ್ಥಾಪಕರು ಹೇಳಿದಾಗ ಅದಕ್ಕೆ ಮೋದಿ ತಲೆದೂಗಿದರು.
ವಿಕಸಿತ ಭಾರತ ಎಂಬುದು 140 ಕೋಟಿ ಭಾರತೀಯರ ಕನಸು
ವಿಕಸಿತ ಭಾರತ ಎಂಬುದು ಭಾರತದ 140 ಕೋಟಿ ಜನರಿಗೆ ಒಂದು ದೃಷ್ಟಿಯಾಗಿದೆ. ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನಾನು ರಾಷ್ಟ್ರವನ್ನು ಒತ್ತಾಯಿಸುತ್ತೇನೆ. ಈ ದೃಷ್ಟಿಕೋನವನ್ನು ಒಂದು ಕನಸಷ್ಟೇ ಅಲ್ಲ, ಅದನ್ನು ನನಸಾಗಿಸಬೇಕು. ಇದಕ್ಕಾಗಿ ಸಹಾಯ ಮಾಡುವಂತೆ ನಿಮ್ಮ ಆಲೋಚನೆಗಳೊಂದಿಗೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಸಮಾಜದ ಎಲ್ಲ ಸ್ತರದ ಅಸಂಖ್ಯಾತ ಜನರು ಮುಂದೆ ಬಂದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಇಂದು, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಧಿಸಲು, ನಾವು ಮತ್ತೊಮ್ಮೆ ಅದೇ ಮನೋಭಾವವನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಭಾಗ