ಅಯೋಧ್ಯೆ ರಾಮ ಮಂದಿರ ಜ.22ಕ್ಕೆ ಉದ್ಘಾಟನೆ ಮಾಡಲಿದ್ದಾರೆ ಪ್ರಧಾನಿ ಮೋದಿ ಎನ್ನುತ್ತಿದೆ ವರದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಯೋಧ್ಯೆ ರಾಮ ಮಂದಿರ ಜ.22ಕ್ಕೆ ಉದ್ಘಾಟನೆ ಮಾಡಲಿದ್ದಾರೆ ಪ್ರಧಾನಿ ಮೋದಿ ಎನ್ನುತ್ತಿದೆ ವರದಿ

ಅಯೋಧ್ಯೆ ರಾಮ ಮಂದಿರ ಜ.22ಕ್ಕೆ ಉದ್ಘಾಟನೆ ಮಾಡಲಿದ್ದಾರೆ ಪ್ರಧಾನಿ ಮೋದಿ ಎನ್ನುತ್ತಿದೆ ವರದಿ

ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಮುಂದಿನ ವರ್ಷ ಜನವರಿ 22ರಂದು ಸೋಮವಾರ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ನಿರೀಕ್ಷೆ ಇದೆ. (ಸಾಂಕೇತಿಕ ಚಿತ್ರ)
ಮುಂದಿನ ವರ್ಷ ಜನವರಿ 22ರಂದು ಸೋಮವಾರ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ನಿರೀಕ್ಷೆ ಇದೆ. (ಸಾಂಕೇತಿಕ ಚಿತ್ರ)

ನವದೆಹಲಿ: ದೇಶದ ಗಮನ ಜಿ20 ಶೃಂಗ, ಭಾರತ ಮತ್ತು ಇಂಡಿಯಾ ಹೆಸರುಗಳ ವಿಚಾರದಲ್ಲಿ ಕೇಂದ್ರೀಕೃತವಾಗಿರುವಾಗಲೇ ಮತ್ತೊಂದು ಮಹತ್ವದ ಸುದ್ದಿ ಬಹಿರಂಗವಾಗಿದೆ. ವರದಿಗಳ ಪ್ರಕಾರ, 2024ರ ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾ ಕಾರ್ಯವನ್ನು ಜನವರಿ 22ರ ಸೋಮವಾರ ನಡೆಸಲು ಅಯೋಧ್ಯೆ ಟ್ರಸ್ಟ್‌ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಕೆಲವು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಏಪ್ರಿಲ್‌ನಲ್ಲಿ ಟೆಂಪಲ್ ಟ್ರಸ್ಟ್‌ನ ಎರಡು ದಿನಗಳ ಅನೌಪಚಾರಿಕ ಸಭೆಯನ್ನು ನಡೆಸಲಾಗಿತ್ತು. ಇದರಲ್ಲಿ ರಾಮ ಮಂದಿರದಲ್ಲಿ ಭಗವಾನ್ ರಾಮಲಲ್ಲಾನ ಪ್ರತಿಷ್ಠೆಯ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಇದಕ್ಕೂ ಮುನ್ನ ಸಮಿತಿಯು ರಾಮ ಜನ್ಮಭೂಮಿ ಸಂಕೀರ್ಣ ಮತ್ತು ರಾಮಸೇವಕಪುರಂಗಳನ್ನು ಪರಿಶೀಲಿಸಿತು.

ಏಪ್ರಿಲ್‌ನಲ್ಲಿ ನಡೆದ ಸಭೆಯಲ್ಲಿ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌, ಉಡುಪಿ ಪೇಜವಾಮಠದ ಪೀಠಾಧೀಶ್ವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಮೇಶ್ವರ ಚೌಪಾಲ್, ಅಯೋಧ್ಯೆ ರಾಜ ವಿಮಲೇಂದ್ರ ಮೋಹನ್ ಮಿಶ್ರಾ, ಡಾ. ಅನಿಲ್ ಮಿಶ್ರಾ ಮತ್ತು ನಿರ್ಮೋಹಿ ಅಖಾಡದ ಮಹಾಂತ ದಿನೇಂದ್ರ ದಾಸ್ ಭಾಗವಹಿಸಿದ್ದರು.

‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ಕೆ ಸಂಬಂಧಿಸಿ ವಿದ್ವಾಂಸರಿಂದ ಅಭಿಪ್ರಾಯ ಕೇಳಲಾಗಿದೆ. ರಾಮಲಲ್ಲಾ ವಿಗ್ರಹವನ್ನು ಮಾಡಲು ಸಹ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಶಿಲ್ಪಿಗಳು ಅಯೋಧ್ಯೆಗೆ ತಲುಪಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ಟ್ರಸ್ಟ್ ತಿಳಿಸಿದೆ.

ಅಯೋಧ್ಯೆಯ ರಾಮಮಂದಿರಕ್ಕೆ ಭೂಮಿ ಪೂಜೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರೇ ಪ್ರಾಣಪ್ರತಿಷ್ಠೆ ಮತ್ತು ದೇಗುಲ ಉದ್ಘಾಟನೆ ಕಾರ್ಯಕ್ರಮದ ನೇತೃತ್ವವಹಿಸಲಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜೂನ್ ಮಧ್ಯಬಾಗದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.