PM Modi: ಅಯೋಧ್ಯೆಯಲ್ಲಿ ಮೀರಾ ಮಾಂಜಿ ಮನೆಗೆ ಪ್ರಧಾನಿ ಮೋದಿ ದಿಢೀರ್ ಭೇಟಿ, ಯಾರು ಈ ಮಹಿಳೆ
ಪ್ರಧಾನಿ ನರೇಂದ್ರ ಮೋದಿ ಅವರ ಅಯೋಧ್ಯೆ ಭೇಟಿ ಬಹಳ ಮಹತ್ವದ್ದು. ರಾಮ ಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಗೆ ಮುಂಚಿತವಾಗಿ 15,700 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳನ್ನು ಅವರು ಇಂದು ಲೋಕಾರ್ಪಣೆ ಮಾಡಿದ್ದಾರೆ. ಈ ನಡುವೆ, ಮೀರಾ ಮಾಂಜಿ ಎಂಬ ಮಹಿಳೆಯ ಮನೆಗೆ ಅವರು ಭೇಟಿ ನೀಡಿದ್ದು ಗಮನಸೆಳೆದಿದೆ. ಈ ಮಹಿಳೆ ಯಾರು? ಯಾಕಿಷ್ಟು ಮಹತ್ವ ಇಲ್ಲಿದೆ ವಿವರ.
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿದ್ದು, ತಮ್ಮ ಕಾರ್ಯಕ್ರಮದ ಒತ್ತಡದ ನಡುವೆಯೂ ಮೀರಾ ಮಾಂಜಿ ಅವರ ಮನೆಗೆ ಅಚ್ಚರಿಯ ಭೇಟಿ ನೀಡಿ ಒಂದು ಕಪ್ ಚಹಾ ಸೇವಿಸಿದರು. ನಿಜಕ್ಕೂ ಇದು ಅಚ್ಚರಿಯೇ ಆಗಿತ್ತು.
ಮೀರಾ ಮಾಂಜಿ ಮನೆಗೆ ಪ್ರಧಾನಿ ಹೋಗುತ್ತಾರೆ ಎಂದರೆ, ಏನೋ ವಿಶೇಷ ಇದೆ ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಬಹುತೇಕರಿಗೆ ಮೀರಾ ಮಾಂಜಿ ಯಾರು ಎಂಬುದು ಗೊತ್ತಿಲ್ಲ. ಹೀಗಾಗಿ ಈ ಲೆಕ್ಕಾಚಾರ.
ಪ್ರಧಾನಿ ನರೇಂದ್ರ ಮೋದಿ ಅವರು ಮೀರಾ ಮಾಂಜಿ ಅವರ ಮನೆಗೆ ಭೇಟಿ, ಚಹಾ ಕುಡಿದ ಫೋಟೋ ಮತ್ತು ವಿಡಿಯೋವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್ ಮಾಡಿದ್ದಾರೆ. ಇಷ್ಟಕ್ಕೂ ಮೀರಾ ಮಾಂಜಿ ಯಾರು? ಎಂಬುದನ್ನು ವಿವರಿಸಿದ್ದಾರೆ.
ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಮೀರಾ ಮಾಂಜಿ ಸೇರ್ಪಡೆಯೊಂದಿಗೆ 10 ಕೋಟಿ ಫಲಾನುಭವಿಗಳ ಸಂಖ್ಯೆ ತಲುಪಿತ್ತು. ಇದುವೇ ವಿಶೇಷ. ಹೀಗಾಗಿಯೇ ಅವರ ಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿ ಚಹಾ ಕುಡಿದಿರುವಂಥದ್ದು.
ಪ್ರಧಾನಿ ಮೋದಿಯವರು ಮನೆಗೆ ಬರುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ಅವರ ಆಗಮನಕ್ಕೆ ಒಂದು ಗಂಟೆ ಮೊದಲು ಯಾರೋ ಬಂದು, ರಾಜಕೀಯ ನೇತಾರರು ಒಬ್ಬರು ಬರುತ್ತಾರೆ. ನಿಮ್ಮ ಜೊತೆಗೆ ಮತ್ತು ನಿಮ್ಮ ಕುಟುಂಬದವರ ಜತೆಗೆ ಮಾತನಾಡಬೇಕು ಎಂದು ಬಯಸಿದ್ದಾರೆ ಎಂದು ಹೇಳಿದಾಗ ಆಗಲಿ ಎಂದು ಹೇಳಿದ್ದಾಗಿ ಮೀರಾ ಮಾಂಜಿ ಎಎನ್‌ಐಗೆ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮೋದಿಯವರು ನಮ್ಮ ಮನೆಗೆ ಬಂದಾಗ ಬಹಳ ಅಚ್ಚರಿಯಾಗಿತ್ತು. ನಮ್ಮ ಕುಟುಂಬ ಸದಸ್ಯರ ಜೊತೆಗೆ ಮಾತನಾಡಿದರು. ಉಜ್ವಲಾ ಯೋಜನೆ ಕುರಿತು, ಅದರ ಪ್ರಯೋಜನಗಳ ಕುರಿತು ವಿಚಾರಿಸಿದರು. ಅಡುಗೆ ಏನು ಮಾಡಿದ್ದೀರಿ ಅಂತ ಕೇಳಿದ್ರು. ಅನ್ನ, ದಾಲ್ ಮತ್ತು ತರಕಾರಿ ಪಲ್ಯ ಎಂದು ಹೇಳಿದೆ. ಆಗ ಈ ತಣ್ಣಗಿನ ವಾತಾವರಣದಲ್ಲಿ ಚಹಾ ಕುಡಿಯಬೇಕಲ್ಲವೇ ಎಂದು ಹೇಳಿದರು. ಚಹಾ ಮಾಡಿಕೊಟ್ಟೆ. ಕುಡಿದು ಸ್ವಲ್ಪ ಸಿಹಿಯಾಗಿತ್ತು ಎಂದು ಮುಗುಳ್ನಕ್ಕರು ಎಂದು ಮೀರಾ ಮಾಂಜಿ ಖುಷಿಯಿಂದ ಹೇಳಿಕೊಂಡಿದ್ದಾರೆ.
"ಪ್ರಧಾನಿ ಅವರನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಅವರ ಆವಾಸ್ ಯೋಜನೆಯಲ್ಲಿ ನಮಗೆ ಮನೆ ಸಿಕ್ಕಿರುವುದಾಗಿ ಅವರಿಗೆ ತಿಳಿಸಿದೆ. ನಮಗೂ ನೀರು ಸಿಗುತ್ತಿದೆ. ನಾನು ಈಗ ಗ್ಯಾಸ್‌ನಲ್ಲಿ ಅಡುಗೆ ಮಾಡುತ್ತಿದ್ದೇನೆ. ಇದರಿಂದಾಗಿ ಬಹಳ ಸಮಯ ಉಳಿತಾಯವಾಗುತ್ತಿದ್ದು ಮಕ್ಕಳಿಗೆ ಹೆಚ್ಚು ಸಮಯ ಕೊಡುವುದು ಸಾಧ್ಯವಾಗಿದೆ ಎಂಬುದನ್ನು ಪ್ರಧಾನಿಯವರಿಗೆ ತಿಳಿಸಿರುವುದಾಗಿ ಮೀರಾ ಹೇಳಿದರು.
ಅಂದ ಹಾಗೆ, ಮೀರಾ ಮಾಂಜಿ ಕುಟುಂಬಕ್ಕೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಆಹ್ವಾನ ಸಿಕ್ಕಿರುವುದಾಗಿ ತಿಳಿಸಿದ್ದಾರೆ.