ಏನಿದು ತಮಿಳುನಾಡಿನ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ, ಈ ಘಟನೆಯ ಹಿನ್ನೆಲೆಯೇನು; ಇಲ್ಲಿದೆ ಸಂಪೂರ್ಣ ಮಾಹಿತಿ
ತಮಿಳುನಾಡಿನ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯೇನು, 2019ರ ಈ ಪ್ರಕರಣ ಈಗೇಕೆ ಸುದ್ದಿಯಲ್ಲಿದೆ, ಈ ಪ್ರಕರಣದಲ್ಲಿ ಎಐಎಡಿಎಂಕೆ ಹೆಸರು ತಳಕು ಹಾಕಿಕೊಂಡಿದ್ದೇಕೆ, ಇಲ್ಲಿದೆ ಈ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರ. (ಬರಹ: ಪರಿಣಿತಾ, ಬೆಂಗಳೂರು)

2019, ಫೆಬ್ರವರಿ 24ರಂದು 19ರ ಹರೆಯದ ವಿದ್ಯಾರ್ಥಿನಿ ಆಕೆಯ ಸಹೋದರನ ಜತೆ ತಮಿಳುನಾಡಿನ ಪೊಲ್ಲಾಚಿಯ ಪೂರ್ವ ಪೊಲೀಸ್ ಠಾಣೆಗೆ ಬಂದು ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ್ದರು. ಪೊಲ್ಲಾಚಿಯಲ್ಲಿ ಹೀಗೊಂದು ಅಪರಾಧ ನಡೆದಿರುವುದು ಶರವೇಗದಲ್ಲಿ ಎಲ್ಲೆಡೆ ಸುದ್ದಿಯಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಈ ಪ್ರಕರಣ ಪ್ರಧಾನ ವಿಷಯವಾಗಿತ್ತು. ಈ ಪ್ರಕರಣ ನಡೆದ 6 ವರ್ಷಗಳ ಬಳಿಕ ಅಂದರೆ 2025 ಮೇ 13ರಂದು ಲೈಂಗಿಕ ದೌರ್ಜನ್ಯವೆಸಗಿದ 9 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಿದ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ?
2019 ಫೆಬ್ರುವರಿ 24ರಂದು ಹುಡುಗನೊಬ್ಬ ಫೇಸ್‌ಬುಕ್‌ನಲ್ಲಿ ಹುಡುಗಿಯ ಪ್ರೊಫೈಲ್ ಕ್ರಿಯೇಟ್ ಮಾಡಿ, ಹುಡುಗಿಯಂತೆ ಚಾಟ್ ಮಾಡಿ ಸಂತ್ರಸ್ತ ಹುಡುಗಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಆತ ಭೇಟಿಯಾಗಬೇಕು ಎಂದು ಹೇಳಿ ಅವಳನ್ನು ಕರೆಸಿಕೊಂಡಿದ್ದ. ಭೇಟಿಯಾಗಲು ಹೋದಾಗ ನಾಲ್ವರು ಹುಡುಗರು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದರು. ಆಗ ಆ ಹುಡುಗಿ ಕಿರುಚಿದ್ದರಿಂದ ಅವರು ಅಲ್ಲಿಂದ ಓಡಿ ಹೋಗಿದ್ದರು. ಹೀಗೆ ಓಡುವಾಗ ಆಕೆಯ ಚಿನ್ನದ ಸರವನ್ನೂ ಕಸಿದುಕೊಂಡಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಆ ಹುಡುಗರು ಅಲ್ಲಿ ನಡೆದುದ್ದನ್ನು ರೆಕಾರ್ಡ್ ಮಾಡಿದ್ದರು. ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಅವರು ನಾನು ಸಹಕರಿಸದೇ ಇದ್ದರೆ ವಿಡಿಯೊ ಲೀಕ್ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದ ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದರು.
ಆಕೆಯ ಹೇಳಿಕೆಯ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ, ಈ ಜಾಲದಲ್ಲಿ ಹಲವಾರು ಮಹಿಳೆಯರು ಸಿಲುಕಿದ್ದಾರೆ ಎಂದು ತಿಳಿದುಬಂದಿತ್ತು.
ಪ್ರಕರಣ ಬಯಲಾಗಿದ್ದು ಹೇಗೆ?
ವಿದ್ಯಾರ್ಥಿನಿಯ ದೂರಿನ ನಂತರ, ಪೊಲೀಸರು ಪೊಲ್ಲಾಚಿಯಿಂದ ಆರೋಪಿಗಳನ್ನು ಬಂಧಿಸಿದರು. ಮೂರು ವರ್ಷಗಳಿಂದ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವುದನ್ನು ತೋರಿಸುವ ಹಲವಾರು ವಿಡಿಯೊಗಳನ್ನು ಇವರಿಂದ ವಶಪಡಿಸಲಾಗಿತ್ತು.
ಆರಂಭದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಐಡಿ ಪ್ರಕರಣದ ತನಿಖೆ ನಡೆಸಿತ್ತು. ಆದರೆ ಸಾರ್ವಜನಿಕ ಆಕ್ರೋಶದ ನಡುವೆ, ಎಐಎಡಿಎಂಕೆ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದು 2019 ಏಪ್ರಿಲ್ 25ರಂದು ತನಿಖೆ ಪ್ರಾರಂಭವಾಗಿತ್ತು.
ಸಿಬಿಐ ವರದಿಯಲ್ಲೇನಿದೆ?
- ತಿರುನಾವುಕ್ಕರಸು ಮತ್ತು ಎಂಟು ಯುವಕರು ಹುಡುಗಿಯರನ್ನು ಪುಸಲಾಯಿಸಲು ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯರ ಹೆಸರಲ್ಲಿ ನಕಲಿ ಪ್ರೊಫೈಲ್‌ಗಳನ್ನು ರಚಿಸುವ ತಂಡ ರಚಿಸಿದರು.
- ಅವರು ಹುಡುಗಿಯರನ್ನು ಪ್ರತ್ಯೇಕ ಸ್ಥಳಗಳಿಗೆ ಕರೆದೊಯ್ದು, ಅಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅದನ್ನು ರೆಕಾರ್ಡ್ ಮಾಡುತ್ತಿದ್ದರು.
- ಈ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಕುಟುಂಬಗಳಿಗೆ ಶೇರ್ ಮಾಡುತ್ತೇವೆ ಎಂದು ಸಂತ್ರಸ್ತರಿಗೆ ಬೆದರಿಕೆಯೊಡ್ಡಲಾಗುತ್ತಿತ್ತು.
- 2016 ಮತ್ತು 2018 ರ ನಡುವೆ ಈ ಯುವಕರ ತಂಡ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕಾರ್ಮಿಕ ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ.
ಪ್ರಕರಣವು ಸುದ್ದಿಯಾಗುತ್ತಿದ್ದಂತೆ ತಮಿಳುನಾಡಿನಲ್ಲಿ ಅನೇಕ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು. ಆರೋಪಿಗಳನ್ನು ಶಿಕ್ಷಿಸಬೇಕೆಂಬ ಬೇಡಿಕೆ ತೀವ್ರಗೊಂಡಿತು. ಆರೋಪಿಗಳು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡರು.
ವಿಚಾರಣೆಯ ವೇಳೆ ಆರೋಪಿಯೊಬ್ಬ ಹೇಳಿರುವ ವಿಡಿಯೊ ಕೂಡಾ ವರದಿಯಲ್ಲಿದೆ. ಈ ವಿಡಿಯೊದಲ್ಲಿ ಆತ ‘ನಾನು ಅವಳಿಗೆ (ಸಂತ್ರಸ್ತೆಗೆ) ಮುತ್ತು ಕೊಟ್ಟಾಗ ಆಕೆ ತಡೆಯಲಿಲ್ಲ. ನಾನು ಅವಳ ಬಟ್ಟೆ ಬಿಚ್ಚಲು ಹೋದಾಗ, ಆಕೆ ತಡೆದಳು. ಆದರೆ ನಾನು ಬಿಡಲಿಲ್ಲ. ಮುತ್ತು ಕೊಟ್ಟಾಗ ಆಕ್ಷೇಪ ವ್ಯಕ್ತಪಡಿಸದೇ ಇದ್ದವಳು, ಬಟ್ಟೆ ಬಿಚ್ಚುವಾಗ ತಡೆದಿದ್ದು ಯಾಕೆ? ಎಂದು ಕೇಳಿದ್ದಾನೆ.
9 ಆರೋಪಿಗಳ ವಿರುದ್ಧ ಯಾವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ?
ಪೊಲ್ಲಾಚಿ ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಲೈಂಗಿಕ ಕಿರುಕುಳ, ದರೋಡೆ, ವಿವಸ್ತ್ರಗೊಳಿಸುವಿಕೆ ಮತ್ತು ಬೆದರಿಕೆಯೊಡ್ಡಿದ್ದಕ್ಕಾಗಿ ಐಪಿಸಿಯ 13 ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ತಮಿಳುನಾಡಿನ ಲೈಂಗಿಕ ಕಿರುಕುಳ ಕಾನೂನಿನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
- ಐಪಿಸಿ ಸೆಕ್ಷನ್ 34: ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಉದ್ದೇಶಪೂರ್ವಕವಾಗಿ ಅಪರಾಧ ಮಾಡಿದರೆ, ಕಾವಲು ಕಾಯುವುದು ಅಥವಾ ವಾಹನ ಚಲಾಯಿಸುವಂತಹ ಅಪರಾಧವನ್ನು ಮಾಡಿದವರು ಸೇರಿದಂತೆ ಪ್ರತಿಯೊಬ್ಬರೂ ಸಮಾನವಾಗಿ ಜವಾಬ್ದಾರರಾಗಿರುತ್ತಾರೆ.
- ಐಪಿಸಿ ಸೆಕ್ಷನ್ 376D: ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಿಗೆ ಅತ್ಯಾಚಾರ ಮಾಡಿದಾಗ ಅದು ಸಾಮೂಹಿಕ ಅತ್ಯಾಚಾರವಾಗುತ್ತದೆ, ಸಂತ್ರಸ್ತೆಯನ್ನು ಹಿಡಿದಿಟ್ಟುಕೊಂಡಿದ್ದರೂ ಸಹ, ಭಾಗಿಯಾಗಿರುವ ಎಲ್ಲರೂ ಸಮಾನವಾಗಿ ತಪ್ಪಿತಸ್ಥರು. ಈ ಅಪರಾಧಕ್ಕೆ ಶಿಕ್ಷೆಯು 20 ವರ್ಷಗಳಿಂದ ಜೀವಾವಧಿ ಶಿಕ್ಷೆ, ಜೊತೆಗೆ ದಂಡ ಪಾವತಿಸಬೇಕಾಗುತ್ತದೆ.
- ಐಪಿಸಿ ಸೆಕ್ಷನ್ 376(2)(N): ಈ ಸೆಕ್ಷನ್ ಅಡಿಯಲ್ಲಿ ಒಬ್ಬ ವ್ಯಕ್ತಿಯು ಓರ್ವ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದರೆ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
- ಐಪಿಸಿ ಸೆಕ್ಷನ್ 366: ಮಹಿಳೆಯನ್ನು ಅಪಹರಿಸಿ ಬಲವಂತದ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದಾಗ, ಈ ಸೆಕ್ಷನ್ ಅಡಿಯಲ್ಲಿ ದೋಷಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
- ಐಪಿಸಿ ಸೆಕ್ಷನ್ 354-A ಮತ್ತು 354-B: ಇದು ಲೈಂಗಿಕ ಸಂಪರ್ಕಕ್ಕೆ ಬೇಡಿಕೆ, ಅಶ್ಲೀಲ ಕಾಮೆಂಟ್‌ಗಳು ಅಥವಾ ಅಶ್ಲೀಲ ವಿಷಯವನ್ನು ತೋರಿಸುವಂತಹ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಅನ್ವಯವಾಗುತ್ತದೆ. ಈ ಅಪರಾಧವೆಸಗಿದವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಸೆಕ್ಷನ್ 354-ಬಿ ಅಡಿಯಲ್ಲಿ ವಿವಸ್ತ್ರಗೊಳಿಸುವುದು ಅಥವಾ ಬಲವಂತವಾಗಿ ವಿವಸ್ತ್ರಗೊಳಿಸುವ ಅಪರಾಧವೆಸಗಿದ್ದರೆ, ಅಪರಾಧಿಗೆ 3 ರಿಂದ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
- ಐಪಿಸಿ ಸೆಕ್ಷನ್ 370: ಶೋಷಣೆಗಾಗಿ ವ್ಯಕ್ತಿಯನ್ನು ಖರೀದಿಸುವುದು, ಮಾರಾಟ ಮಾಡುವುದು ಅಥವಾ ಬಲವಂತವಾಗಿ ಕರೆದೊಯ್ಯುವುದು ಅಪರಾಧ. ಅಪರಾಧಿಗೆ ಈ ಸೆಕ್ಷನ್ ಅಡಿಯಲ್ಲಿ 7 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು.
- ಐಪಿಸಿ ಸೆಕ್ಷನ್ 509: ಮಹಿಳೆಯ ಘನತೆಗೆ ಧಕ್ಕೆ ತರುವುದು ಅಥವಾ ಅವಮಾನಿಸಿದರೆ ಒಂದು ವರ್ಷದ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು.
ತಮಿಳುನಾಡಿನ TNPHW (ಕಿರುಕುಳ ಪ್ರಚೋದನೆ) ಸೆಕ್ಷನ್ 4 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66E ಮತ್ತು 67 (ಅಶ್ಲೀಲ ಕಂಟೆಂಟ್ ಹಂಚಿಕೆ) ಅಡಿಯಲ್ಲಿಯೂ ಅವರನ್ನು ದೋಷಿಗಳೆಂದು ಘೋಷಿಸಲಾಯಿತು.
ಪೊಲ್ಲಾಚಿ ಸಾಮೂಹಿಕ ಅತ್ಯಾಚಾರ ಪ್ರಕರಣದ ತೀರ್ಪು ಬರಲು ಇಷ್ಟು ವರ್ಷ ಕಾದಿದ್ದೇಕೆ?
ಕೊಯಮತ್ತೂರಿನ ಎಸ್‌ಪಿ ಆರ್. ಪಾಂಡಿಯರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆಯ ಹೆಸರನ್ನು ಹೇಳಿ ಆಕೆಯ ಗುರುತನ್ನು ಬಹಿರಂಗಪಡಿಸಿದ ನಂತರ ಸ್ಥಳೀಯ ಪೊಲೀಸರ ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸಲಾಯಿತು. ಅನಂತರ ಪ್ರಕರಣವನ್ನು 2019 ಏಪ್ರಿಲ್ ತಿಂಗಳಲ್ಲಿ ಸಿಬಿಐಗೆ ವರ್ಗಾಯಿಸಲಾಯಿತು.
ಸಂತ್ರಸ್ತೆಯನ್ನು ಪುಸಲಾಯಿಸಿ ಕರೆತಂದು ದೌರ್ಜನ್ಯವೆಸಗಿ ಅದನ್ನು ರೆಕಾರ್ಡ್ ಮಾಡುವುದಕ್ಕೆ ನಿರ್ದಿಷ್ಟ ವ್ಯಕ್ತಿಗಳು ಕಾರಣರಾಗಿದ್ದಾರೆ ಎಂದು ಸಿಬಿಐ ಕಂಡುಹಿಡಿದಿದೆ. ಆರೋಪಿಗಳಿಂದ ಸಿಬಿಐ 200 ಕ್ಕೂ ಹೆಚ್ಚು ದಾಖಲೆಗಳು, ವಿಡಿಯೊಗಳು ಸೇರಿದಂತೆ 400 ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಸಂತ್ರಸ್ತೆಯರು ಮತ್ತು 48 ಸಾಕ್ಷಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಂಡ ಸಿಬಿಐ 1,500 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು.
2023 ರಲ್ಲಿ, ಮದ್ರಾಸ್ ಹೈಕೋರ್ಟ್ ಆದೇಶದ ನಂತರ ಕೊಯಮತ್ತೂರಿನ ಮಹಿಳಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಯಿತು. ಸಂತ್ರಸ್ತೆಯರು ಯಾರು ಎಂದು ಗೊತ್ತಾಗದಂತೆ ನೋಡಿಕೊಳ್ಳಲಾಗಿತ್ತು. ಸಿಬಿಐ ಸಾಕ್ಷಿಗಳಲ್ಲಿ ಯಾರೂ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿಲ್ಲ.
ತೀರ್ಪಿನ ನಂತರ, ಪಬ್ಲಿಕ್ ಪ್ರಾಸಿಕ್ಯೂಟರ್ ವಿ. ಸುರೇಂದ್ರ ಮೋಹನ್ ಸಿಬಿಐನ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
ಮೇ 13 ರಂದು ಕೊಯಮತ್ತೂರಿನ ವಿಶೇಷ ಮಹಿಳಾ ನ್ಯಾಯಾಲಯ ನೀಡಿದ ತೀರ್ಪು ಏನು?
ಮೇ 13 ರಂದು, ಕೊಯಮತ್ತೂರಿನ ವಿಶೇಷ ಮಹಿಳಾ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಆರ್. ನಂದಿನಿ ದೇವಿ ಅವರು ಎಲ್ಲಾ ಒಂಬತ್ತು ಆರೋಪಿಗಳನ್ನು 13 ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿದರು. ಅವರನ್ನು ಸೇಲಂ ಕೇಂದ್ರ ಜೈಲಿನಿಂದ ಕರೆತರಲಾಯಿತು.
ಪ್ರತಿಯೊಬ್ಬರಿಗೂ 1 ರಿಂದ 5 ಜೀವಾವಧಿ ಶಿಕ್ಷೆ, ಜೊತೆಗೆ ಹೆಚ್ಚುವರಿಯಾಗಿ 10, 7 ಮತ್ತು 3 ವರ್ಷಗಳ ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಜಾರಿಗೊಳಿಸಲು ಶಿಕ್ಷೆ ವಿಧಿಸಲಾಯಿತು. ಪ್ರತಿಯೊಬ್ಬರಿಗೂ ₹1.5 ಲಕ್ಷ ದಂಡ ವಿಧಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಎಂಟು ಸಂತ್ರಸ್ತೆಯರಿಗೆ ₹85 ಲಕ್ಷ ಪರಿಹಾರವನ್ನು ಆದೇಶಿಸಲಾಯಿತು.
ಎಲ್ಲಾ ಆರೋಪಿಗಳಿಗೆ 1 ರಿಂದ 5 ಬಾರಿ ಜೀವಾವಧಿ ಶಿಕ್ಷೆ? ಏನಿದರ ಅರ್ಥ?
ನ್ಯಾಯಾಮೂರ್ತಿ ನಂದಿನಿ ದೇವಿ ಅವರು ಎಲ್ಲಾ ಒಂಬತ್ತು ಆರೋಪಿಗಳನ್ನು 13 ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅಪರಾಧದ ತೀವ್ರತೆಯಿಂದಾಗಿ, ಪ್ರತಿಯೊಬ್ಬರಿಗೂ ಒಂದರಿಂದ ಐದು ಬಾರಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅಂದರೆ ಅವರು ಯಾವುದೇ ರಿಯಾಯಿತಿ ಅಥವಾ ಜಾಮೀನು ಇಲ್ಲದೆ ಸಾಯುವವರೆಗೂ ಜೈಲಿನಲ್ಲಿಯೇ ಇರುತ್ತಾರೆ.
ಉದಾಹರಣೆಗೆ: ಟಿ. ವಸಂತ್ ಕುಮಾರ್ ಎಂಬಾತ ಹಲವಾರು ಅತ್ಯಾಚಾರ ಪ್ರಕರಣಗಳಲ್ಲಿ ದೋಷಿ ಆಗಿದ್ದಾನೆ. ಈತನಿಗೆ ಸೆಕ್ಷನ್ 370 ಮತ್ತು ಸೆಕ್ಷನ್ 376(2)(N) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಂದರೆ ಈತನಿಗೆ ಎರಡು ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿದೆ.
ಅಪರಾಧಿಯು ಜೀವಾವಧಿ ಶಿಕ್ಷೆಗೆ ಅರ್ಹವಾದ ಒಂದಕ್ಕಿಂತ ಹೆಚ್ಚು ಅಪರಾಧಗಳನ್ನು ಮಾಡಿರುವ ಪ್ರಕರಣಗಳಲ್ಲಿ ಇಂತಹ ಶಿಕ್ಷೆಯನ್ನು ನೀಡಲಾಗುತ್ತದೆ. ಭಾರತೀಯ ಕಾನೂನಿನಲ್ಲಿ, ಜೀವಾವಧಿ ಶಿಕ್ಷೆ ಎಂದರೆ ಯಾವಾಗಲೂ ಸಾಯುವವರೆಗೂ ಜೈಲಿನಲ್ಲಿ ಇರುವುದು ಎಂದರ್ಥವಲ್ಲ. ಅನೇಕ ಸಂದರ್ಭಗಳಲ್ಲಿ, ಜೀವಾವಧಿ ಶಿಕ್ಷೆ ಎಂದರೆ 30 ವರ್ಷ ಅಥವಾ 20 ವರ್ಷಗಳ ಶಿಕ್ಷೆ. ಈ ಕಾರಣಕ್ಕಾಗಿ, ನ್ಯಾಯಮೂರ್ತಿ ನಂದಿನಿ ದೇವಿ 5 ಜೀವಾವಧಿ ಶಿಕ್ಷೆಗಳನ್ನು ವಿಧಿಸಿದರು, ಇದರಿಂದಾಗಿ ಆರೋಪಿಯು ಬದುಕಿರುವವರೆಗೆ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಅಶ್ವಿನಿ ದುಬೆ ಹೇಳಿದ್ದಾರೆ.
ಎಐಎಡಿಎಂಕೆಯ ಹೆಸರು ಈ ಪ್ರಕರಣದೊಂದಿಗೆ ತಳುಕು ಹಾಕಿದ್ದು ಹೇಗೆ?
ಪೊಲ್ಲಾಚಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ, ಒಂಬತ್ತು ಅಪರಾಧಿಗಳಲ್ಲಿ ಒಬ್ಬನಾದ ಕೆ. ಅರುಳಾನಂದಮ್, ಪೊಲ್ಲಾಚಿಯಲ್ಲಿ ಎಐಎಡಿಎಂಕೆ ವಿದ್ಯಾರ್ಥಿ ಘಟಕದ ಕಾರ್ಯದರ್ಶಿಯಾಗಿದ್ದರು. ಈತನನ್ನು 2021 ರಲ್ಲಿ ಸಿಬಿಐ ಬಂಧಿಸಿದ ನಂತರ ಪಕ್ಷದಿಂದ ಉಚ್ಚಾಟಿಸಲಾಯಿತು.
ಈ ಹಿಂದೆ 2019 ರಲ್ಲಿ ಆತನ ಸಹಚರ, ವಿದ್ಯಾರ್ಥಿ ಘಟಕದಲ್ಲಿದ್ದ ಎ. ನಾಗರಾಜ್, ಸಂತ್ರಸ್ತೆಯ ಸಹೋದರನ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಂಧಿತನಾಗಿದ್ದ. ಆತನನ್ನೂ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಬಂಧನಗಳ ನಂತರ ಎಐಎಡಿಎಂಕೆ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ ಡಿಎಂಕೆ, ಹಿರಿಯ ನಾಯಕರೂ ಈ ಪ್ರಕರಣದೊಂದಿಗೆ ನಂಟು ಹೊಂದಿದ್ದಾರೆ ಎಂದಿತ್ತು.
2019 ರ ಲೋಕಸಭಾ ಚುನಾವಣೆಗೆ ಮೊದಲು ನಾಗರಾಜ್ ಮತ್ತು 2021 ರ ವಿಧಾನಸಭಾ ಚುನಾವಣೆಗೆ ಮೊದಲು ಅರುಳಾನಂದಮ್‌ನನ್ನು ಬಂಧಿಸಲಾಗಿತ್ತು. 2019 ರಲ್ಲಿ ತಮಿಳುನಾಡು ಗೃಹ ಸಚಿವಾಲಯವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.
ಆದಾಗ್ಯೂ, ವರ್ಗಾವಣೆ ಮಾಡಿದ ದಾಖಲೆಗಳಲ್ಲಿ ಸಂತ್ರಸ್ತೆಯ ಹೆಸರು, ಕಾಲೇಜು ಮತ್ತು ಸಹೋದರನ ಗುರುತನ್ನು ಬಹಿರಂಗಪಡಿಸಿ ಗೌಪ್ಯತಾ ಕಾನೂನುಗಳನ್ನು ಉಲ್ಲಂಘಿಸಲಾಗಿತ್ತು. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಆದಾಗ್ಯೂ, ತೀರ್ಪಿನ ನಂತರವೂ ಎಐಎಡಿಎಂಕೆ ಆರೋಪಿಗಳನ್ನು ರಕ್ಷಿಸುವ ಆರೋಪಗಳನ್ನು ಎದುರಿಸುತ್ತಲೇ ಇದೆ.
(ಬರಹ: ಪರಿಣಿತಾ, ಬೆಂಗಳೂರು)
ವಿಭಾಗ