Mehul Choksi: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ
Mehul Choksi Arrest:ಪಿಎನ್‌ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್) ವಂಚನೆ ಹಗರಣದ ಆರೋಪಿಯಾಗಿರುವ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಈತನ ಮೇಲೆ 13,500 ಕೋಟಿ ಬ್ಯಾಂಕ್ ಸಾಲ ವಂಚನೆ ಆರೋಪವಿದೆ.

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿಯಾಗಿರುವ ಮೆಹುಲ್ ಚೋಕ್ಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಇದೀಗ ಇವರನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಿಎನ್‌ಬಿ ಹಗರಣದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಚೋಕ್ಸಿ ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ರೆಸಿಡೆನ್ಸಿ ಕಾರ್ಡ್ ಪಡೆದು ಪತ್ನಿ ಪ್ರೀತಿ ಚೋಕ್ಸಿ ಅವರೊಂದಿಗೆ ವಾಸಿಸುತ್ತಿದ್ದರು. ಈ ವಿಚಾರ ಬೆಳಕಿಗೆ ಬಂದ ವಾರದೊಳಗೆ ಚೋಕ್ಸಿಯನ್ನು ಬಂಧಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 13,500 ಕೋಟಿ ಸಾಲ ಪಡೆದಿರುವ ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಾಲ ಮರುಪಾವತಿ ಮಾಡದೇ ಬ್ಯಾಂಕ್ ವಂಚಿಸಿ, ವಿದೇಶಕ್ಕೆ ಓಡಿಹೋಗಿದ್ದರು. ಇವರಿಗಾಗಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಹುಡುಕಾಟ ನಡೆಸಿತ್ತು. ಇದೀಗ ಬೆಲ್ಜಿಯಂನಲ್ಲಿ ಸೆರೆ ಸಿಕ್ಕಿರುವ ಇವರನ್ನು ಅಲ್ಲಿಂದ ಗಡಿಪಾರು ಮಾಡುವಂತೆ ಮನವಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೆರಿಬಿಯನ್ ಪ್ರದೇಶವನ್ನು ಕೇಂದ್ರೀಕರಿಸುವ ಮಾಧ್ಯಮ ಸಂಸ್ಥೆ ಅಸೋಸಿಯೇಟೆಡ್ ಟೈಮ್ಸ್ ಮಾರ್ಚ್‌ನಲ್ಲಿ ಭಾರತೀಯ ಅಧಿಕಾರಿಗಳು ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬೆಲ್ಜಿಯಂ ಅಧಿಕಾರಿಗಳನ್ನು ಕೋರಿದ್ದಾರೆ ಎಂದು ವರದಿ ಮಾಡಿತ್ತು. ಇದೀಗ ಭಾರತ ಸರ್ಕಾರದ ಕೋರಿಕೆಯ ಮೇರಿಗೆ ಚೋಕ್ಸಿಯನ್ನು ಬಂಧಿಸಿರುವ ಬೆಲ್ಜಿಯಂ ಪೊಲೀಸರು ಆತನನ್ನು ಜೈಲಿಗೆ ಹಾಕಿದ್ದಾರೆ.
ಯಾರು ಈ ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ ಗೀತಾಂಜಲಿ ಜೆಮ್ಸ್ ಸಂಸ್ಥಾಪಕ, ವಜ್ರದ ವ್ಯಾಪಾರಿ. ಈತ ಹಾಗೂ ನೀರವ್ ಮೋದಿ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಲ್ಲಿ ಸಾಲ ಪಡೆದು ವಂಚಿಸಿದ್ದರು. 2013, ನವೆಂಬರ್ 15ರಲ್ಲಿ ಈತ ಬೆಲ್ಜಿಯಂನಲ್ಲಿ ರೆಸಿಡೆನ್ಸ್ ಕಾರ್ಡ್ ಪಡೆಯುತ್ತಾರೆ. ಬೆಲ್ಜಿಯಂಗೆ ಸ್ಥಳಾಂತರಗೊಳ್ಳುವ ಮೊದಲು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಪ್ರೀತಿ ಚೋಕ್ಸಿ ಬೆಲ್ಜಿಯಂ ಪ್ರಜೆಯಾಗಿದ್ದಾರೆ.
ಅಸೋಸಿಯೇಟೆಡ್ ಟೈಮ್ಸ್ ವರದಿಯ ಪ್ರಕಾರ, ಬೆಲ್ಜಿಯಂನಲ್ಲಿ ಉಳಿಯಲು 'ಎಫ್ ರೆಸಿಡೆನ್ಸಿ ಕಾರ್ಡ್‘ ಪಡೆಯುತ್ತಾರೆ. ಆದರೆ ಭಾರತಕ್ಕೆ ಹಸ್ತಾಂತರವಾಗುವುದನ್ನು ತಡೆಯಲು ಇವರು ಬೆಲ್ಜಿಯಂ ಅಧಿಕಾರಿಗಳಿಗೆ ಸುಳ್ಳು ಘೋಷಣೆಗಳು ಮತ್ತು ನಕಲಿ ದಾಖಲೆಗಳನ್ನು ಒಳಗೊಂಡಂತೆ ದಾರಿತಪ್ಪಿಸುವ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ.
