Himachal-Uttarakhand Rain: ಮಳೆ ಅಬ್ಬರಕ್ಕೆ ಹಿಮಾಚಲ ಪ್ರದೇಶ ತತ್ತರ; ಕಳೆದ 3 ದಿನಗಳಲ್ಲಿ 71 ಮಂದಿ ಸಾವು, ಉತ್ತರಾಖಂಡದಲ್ಲಿ 10 ಜನರು ಬಲಿ
Himachal Pradesh Rain: ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಕಳೆದ ಮೂರು ದಿನಗಳಲ್ಲಿ 71 ಜನರು ಮೃತಪಟ್ಟಿದ್ದಾರೆ. ಉತ್ತರಾಖಂಡದಲ್ಲಿ ಮಳೆ, ಭೂಕುಸಿತಕ್ಕೆ 10 ಮಂದಿ ಬಲಿಯಾಗಿದ್ದಾರೆ.
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಕಳೆದ ಮೂರು ದಿನಗಳಲ್ಲಿ 71 ಜನರು ಸಾವನ್ನಪ್ಪಿದ್ದಾರೆ. ಈ ವರ್ಷದ ಮಾನ್ಸೂನ್‌ನಲ್ಲಿ ರಾಜ್ಯವು 75,000 ಕೋಟಿ ರೂಪಾಯಿ ನಷ್ಟವನ್ನು ಎದುರಿಸುತ್ತಿದೆ.
ಮಳೆಯಲ್ಲಿ ಕೊಚ್ಚಿ ಹೋಗಿರುವ ಸಾರ್ವಜನಿಕ ಆಸ್ತಿ-ಪಾಸ್ತಿ, ಮೂಲಸೌಕರ್ಯಗಳನ್ನು ಪುನರಾಭಿವೃದ್ಧಿ ಮಾಡಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಬೆಟ್ಟದಂತಹ ಸವಾಲು ನಮ್ಮ ಮುಂದಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ.
ಮಂಗಳವಾರ (ಆಗಸ್ಟ್ 16) ಶಿಮ್ಲಾದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಮತ್ತು ಐದರಿಂದ ಏಳು ಮನೆಗಳು ಕುಸಿದಿವೆ. ಭೂಕುಸಿತದಿಂದಾಗಿ ರಸ್ತೆಗಳು ಬ್ಲಾಕ್ ಆಗುತ್ತಿರುವುದರಿಂದ ಇಂದು (ಆಗಸ್ಟ್ 17) ಶಿಮ್ಲಾದಲ್ಲಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಿಮಾಚಲದಲ್ಲಿ ಋತುಮಾನದ ಸರಾಸರಿಗಿಂತ ಹೆಚ್ಚು ಮಳೆಯಾಗಿದೆ. ಈ ವರ್ಷ ಮಾನ್ಸೂನ್‌ನ 54 ದಿನಗಳಲ್ಲಿ ರಾಜ್ಯದಲ್ಲಿ 742 ಮಿಮೀ ಮಳೆಯಾಗಿದೆ. ಆದರೆ ಸರಾಸರಿ ಮಳೆ ಪ್ರಮಾಣವು 730 ಮಿಮೀ ಆಗಿದೆ. ಈ ಜುಲೈನಲ್ಲಿ ರಾಜ್ಯದಲ್ಲಿ ಸುರಿದ ಮಳೆಯು ಕಳೆದ 50 ವರ್ಷಗಳ ಜುಲೈ ತಿಂಗಳ ದಾಖಲೆಯನ್ನು ಮುರಿದಿದ್ದು, ಅತ್ಯಂತ ವಿನಾಶಕಾರಿ ನೈಸರ್ಗಿಕ ವಿಕೋಪಕ್ಕೆ ಕಾರಣವಾಯಿತು.
ಹಳೆಯ ಬಹುಮಹಡಿ ಸರ್ಕಾರಿ ಕಟ್ಟಡಗಳು ಯಾವುದೇ ಅಪಾಯವನ್ನು ಎದುರಿಸದೆ ನಿಂತಿವೆ. ಆದರೆ ಬೆಟ್ಟಗಳಲ್ಲಿನ ಕಟ್ಟಡಗಳನ್ನು ವಿವೇಚನಾರಹಿತವಾಗಿ ನಿರ್ಮಿಸಲಾಗಿದೆ. ವೈಜ್ಞಾನಿಕ ವಿಧಾನಗಳ ಬಗ್ಗೆ ತಿಳಿದಿಲ್ಲದ ಹೊರಗಿನವರು ನಡೆಸುತ್ತಿರುವ ವಿವೇಚನೆಯಿಲ್ಲದ ನಿರ್ಮಾಣ ಕಾರ್ಯಗಳು ಭೂಕುಸಿತಕ್ಕೆ ಕಾರಣವಾಗಿವೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಮಳೆ, ಭೂಕುಸಿತಕ್ಕೆ 10 ಮಂದಿ ಸಾವು
ಉತ್ತರಾಖಂಡದಲ್ಲಿ ಮಳೆ, ಭೂಕುಸಿತಕ್ಕೆ 10 ಮಂದಿ ಬಲಿಯಾಗಿದ್ದಾರೆ. ರುದ್ರಪ್ರಯಾಗದಲ್ಲಿ ಮದ್ಮಹೇಶ್ವರ ದೇವಸ್ಥಾನದ ಚಾರಣ ಮಾರ್ಗದಲ್ಲಿ ಸಿಲುಕಿದ್ದ 293 ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ. ಲಕ್ಷ್ಮಣ್ ಜುಲಾ ಪ್ರದೇಶದ ನೈಟ್ ಪ್ಯಾರಡೈಸ್ ಕ್ಯಾಂಪ್ ರೆಸಾರ್ಟ್‌ನಲ್ಲಿ ಸೋಮವಾರ (ಆಗಸ್ಟ್ 15) ಭೂಕುಸಿತದಿಂದ ಆರು ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್ 19ರ ವರೆಗೆ ಉತ್ತರಾಖಂಡದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.