ನನ್ನ ಬಗ್ಗೆ ಯೋಚಿಸಿದ್ದಕ್ಕೆ ಧನ್ಯವಾದ; ತಮ್ಮ ಆರೋಗ್ಯದ ವದಂತಿಗಳಿಗೆ ಬ್ರೇಕ್ ಹಾಕಿದ ರತನ್ ಟಾಟಾ
Ratan Tata: ತಮ್ಮ ಆರೋಗ್ಯಕ್ಕೆ ಸಂಬಂಧಿಸಿ ಎದ್ದಿರುವ ವದಂತಿಗಳಿಗೆ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಪ್ರತಿಕ್ರಿಯಿಸಿದ್ದು, ನನ್ನ ಬಗ್ಗೆ ಯೋಚಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಮುಂಬೈ: ಇಂದು (ಅಕ್ಟೋಬರ್ 7) ಮುಂಜಾನೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮುಂಬೈ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು, ತನ್ನ ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ನಂತರ 86 ವರ್ಷದ ಟಾಟಾ ಅವರಿಗೆ ನಿರಂತರ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಇದರ ಬೆನ್ನಲ್ಲೇ ಉದ್ಯಮಿ ಆರೋಗ್ಯ ತೀವ್ರ ಗಂಭೀರವಾಗಿದೆ ಎಂದು ಸುದ್ದಿ ಹರಡಿತು. ಹೀಗಾಗಿ ಚಿಕಿತ್ಸೆ ಬೆನ್ನಲ್ಲೇ ರತನ್ ಟಾಟಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ ರತನ್ ಟಾಟಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಇತ್ತೀಚೆಗೆ ಹರಡುತ್ತಿರುವ ವದಂತಿಗಳ ಬಗ್ಗೆ ನನಗೆ ತಿಳಿದಿದೆ. ಈ ವದಂತಿಗಳು ಆಧಾರರಹಿತವಾಗಿವೆ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ದೇಹ ತಪಾಸಣೆಗೆ ವೈದ್ಯರು ಶಿಫಾರಸು ಮಾಡಿದ ಕಾರಣ ನಾನು ತಪಾಸಣೆಗೆ ಒಳಗಾಗಿದ್ದೇನೆ. ಈ ಕಾರಣಕ್ಕೆ ನಾನು ಆಸ್ಪತ್ರೆಯಲ್ಲಿ ಇದ್ದೇನೆ. ಸಾರ್ವಜನಿಕರು ಮತ್ತು ಮಾಧ್ಯಮದ ಗೌರವದ ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯಬೇಕು ಎಂದು ವಿನಂತಿಸುತ್ತೇನೆ ಎಂದು ರತನ್ ಟಾಟಾ ಹೇಳಿದ್ದಾರೆ. ನನ್ನ ಬಗ್ಗೆ ಯೋಚಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
ರತನ್ ಟಾಟಾ ಹುಟ್ಟಿದ್ದು ಯಾವಾಗ?
ಸ್ವಾತಂತ್ರ್ಯಕ್ಕೂ ಮುನ್ನವೇ ಖ್ಯಾತ ಉದ್ಯಮಿಗಳಾಗಿದ್ದ ನವಲ್ ಟಾಟಾ ಮತ್ತು ಸೂನಿ ಟಾಟಾ ದಂಪತಿಗೆ 1937ರ ಡಿಸೆಂಬರ್ 28ರಂದು ಜನಿಸಿದ ರತನ್ ಟಾಟಾ, ಔದ್ಯಮಿಕ ಕುಟುಂಬದ ಪ್ರಮುಖ ವ್ಯಕ್ತಿಯಾಗಿದ್ದಾರೆ. 1970ರಲ್ಲಿ ಟಾಟಾ ಸಂಸ್ಥೆಗಳ ಜವಾಬ್ದಾರಿ ಪಡೆದಿದ್ದರು. ದಿನಗಳು ಕಳೆದಂತೆ ಈ ಕಂಪನಿಯಲ್ಲಿ ಬೆಳೆದ ಅವರು, ಬಳಿಕ ಟಾಟಾ ಸನ್ಸ್ ಹಾಗೂ ಟಾಟಾ ಗ್ರೂಪ್ ಕಂಪನಿಗಳ ಮುಖ್ಯಸ್ಥರಾದರು.
ಇತ್ತೀಚೆಗೆ ವರ್ಷಗಳಲ್ಲಿ ತಮ್ಮ ಹುದ್ದೆಗಳಿಂದ ನಿವೃತ್ತಿಯಾದರು. ಸರಳ ಜೀವನ ನಡೆಸುವ ಅವರು ಟಾಟಾ ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯನ್ನಾಗಿಸಿದರು. ಅಲ್ಲದೆ, ಟಾಟಾ ಕಂಪನಿಯು ಜಾಗ್ವಾರ್ ಸೇರಿ ಹಲವಾರು ವಿದೇಶಿ ಬ್ರಾಂಡ್ ಕಾರು ತಯಾರಿಕಾ ಕಂಪನಿಗಳನ್ನು ಖರೀದಿಸಿದ್ದು ಇವರ ದೊಡ್ಡ ಸಾಧನೆ ಎಂದರೆ ತಪ್ಪಾಗಲ್ಲ.