Congress CWC Meet: ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ರೆ ಸಾಕು, ಅದೇ ಮಹಾತ್ಮ ಗಾಂಧಿಗೆ ಸಲ್ಲುವ ಗೌರವ ಎಂದ ಖರ್ಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Congress Cwc Meet: ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ರೆ ಸಾಕು, ಅದೇ ಮಹಾತ್ಮ ಗಾಂಧಿಗೆ ಸಲ್ಲುವ ಗೌರವ ಎಂದ ಖರ್ಗೆ

Congress CWC Meet: ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ರೆ ಸಾಕು, ಅದೇ ಮಹಾತ್ಮ ಗಾಂಧಿಗೆ ಸಲ್ಲುವ ಗೌರವ ಎಂದ ಖರ್ಗೆ

ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಯ ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಕುರಿತಾದ ವಿಸ್ತೃತ ಚಿಂತನ ಮಂಥನ ಸಭೆಯಲ್ಲಿ ಚುನಾವಣಾ ಕಾರ್ಯತಂತ್ರಗಳ ವಿಚಾರ ಚರ್ಚೆಗೆ ಒಳಗಾಗಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್. (Twitter/@INCIndia)

ಕಾಂಗ್ರೆಸ್ ಪಕ್ಷವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಡಿಪಾಯವನ್ನು ಹಾಕಿದೆ ಮತ್ತು ಅವುಗಳನ್ನು ರಕ್ಷಿಸುವ ಜವಾಬ್ದಾರಿಯೂ ಕಾಂಗ್ರೆಸ್‌ನ ಮೇಲಿದೆ. ನಮ್ಮ ಕೊನೆಯ ಉಸಿರು ಇರುವ ತನಕವೂ ಅದನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅವರು ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಯ ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಕುರಿತಾದ ವಿಸ್ತೃತ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶತಮಾನೋತ್ಸವದ ಸಂಭ್ರಮ ಹೆಚ್ಚಾಗಬೇಕಾದರೆ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕು: ಖರ್ಗೆ

ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದಿನ ವರ್ಷ 100 ತುಂಬುತ್ತದೆ. ಆದ್ದರಿಂದ 2024 ರಲ್ಲಿ ಈ ಐತಿಹಾಸಿಕ ಘಟನೆಯ ಶತಮಾನೋತ್ಸವ ಆಚರಣೆ ಇದೆ. ಇದು ನಿರ್ಣಾಯಕ ಸಂದರ್ಭ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಪದಚ್ಯುತಗೊಳಿಸಬೇಕು. ಅದುವೇ ಮಹಾತ್ಮ ಗಾಂಧಿಯವರಿಗೆ ನಾವು ನೀಡಬಹುದಾದ ನಿಜವಾದ ಗೌರವ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ಇದುವರೆಗೆ ಎರಡು ವಿಧಾನಸಭಾ ಚುನಾವಣೆಗಳನ್ನು ಗೆದ್ದಿದೆ. ಮೂಲಭೂತ ಸಮಸ್ಯೆಗಳನ್ನು "ನಿರಂತರವಾಗಿ" ಪ್ರಶ್ನಿಸುವಂತೆ ಮತ್ತು ಬಿಜೆಪಿಯ "ಲೋಪಗಳನ್ನು ಮತ್ತು ಜನವಿರೋಧಿ ನೀತಿಗಳನ್ನು" ಬಹಿರಂಗಪಡಿಸುವಂತೆ ಅವರು ಪಕ್ಷದ ಮುಖಂಡರನ್ನು ಕೇಳಿಕೊಂಡರು.

ವಿಸ್ತೃತ ಸಿಡಬ್ಲ್ಯೂಸಿ ಸಭೆಯಲ್ಲಿ ಚುನಾವಣಾ ಕಾರ್ಯತಂತ್ರ ಚರ್ಚೆಗೆ

ಕಾರ್ಯಕಾರಿ ಸಮಿತಿಯ ಸದಸ್ಯರಲ್ಲದೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಘಟಕದ ಮುಖ್ಯಸ್ಥರು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಒಳಗೊಂಡಿರುವ ವಿಸ್ತೃತ ಸಿಡಬ್ಲ್ಯೂಸಿ ಭಾನುವಾರ ನಡೆಯಿತು. ಇದರಲ್ಲಿ ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರವನ್ನು ಚರ್ಚಿಸಲಾಗಿದೆ.

ಶನಿವಾರದಂದು ಚರ್ಚಿಸಲಾದ ರೇಜಿಂಗ್ ಸಮಸ್ಯೆಗಳು ಮತ್ತು ನೀತಿಗಳ ಕುರಿತು ಸಿಡಬ್ಲ್ಯೂಸಿಯ ಚರ್ಚೆಗಳು ಮತ್ತು ನಿರ್ಣಯದ ಹಿನ್ನೆಲೆಯಲ್ಲಿ ಚುನಾವಣಾ ಯೋಜನೆಯು ಚರ್ಚೆಗೆ ಬಂದಿದೆ.

ಪ್ರಸ್ತುತ ಭಾರತವು ಆಡಳಿತ ಬದಲಾವಣೆಯನ್ನು ಎದುರು ನೋಡುತ್ತಿದೆ. ಅದರ ಲಕ್ಷಣಗಳು ಸ್ಪಷ್ಟವಾಗಿವೆ ಎಂದು ಸೂಚಿಸಿದ ಖರ್ಗೆ, ಪಕ್ಷವು ಹಗಲಿರುಳು ಕೆಲಸ ಮಾಡಬೇಕಾಗಿದೆ. ಈ ಸರ್ವಾಧಿಕಾರಿ ಸರಕಾರವನ್ನು ತೊಲಗಿಸಿ ಭಾರತದ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತು ತಕ್ಷಣವೇ ಸುಳ್ಳುಸುದ್ದಿಗಳನ್ನು ಎದುರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಪಕ್ಷದ ಮುಖಂಡರನ್ನು ಕೋರಿದರು.

ಕರ್ನಾಟಕ, ಹಿಮಾಚಲದ ಗೆಲುವು ಪ್ರಸ್ತಾಪ

“ದೇಶವು ಬದಲಾವಣೆಯನ್ನು ಬಯಸುತ್ತಿದೆ. ಅದರ ಲಕ್ಷಣಗಳು ಗೋಚರಿಸುತ್ತಿವೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಮ್ಮ ಗೆಲುವು ಇದಕ್ಕೆ ಸಾಕ್ಷಿ. ಸುಮ್ಮನೆ ಕೂರುವ ಸಮಯ ಇದಲ್ಲ. ನೀವು ಹಗಲಿರುಳು ಶ್ರಮಿಸಬೇಕಾಗುತ್ತದೆ” ಎಂದು ಸಿಡಬ್ಲ್ಯುಸಿ ಸಭೆಯ ಎರಡನೇ ದಿನದಂದು ಖರ್ಗೆ ಹೇಳಿದರು.

“ಕಳೆದ ಎರಡು ತಿಂಗಳಲ್ಲಿ ನಾವು 20 ರಾಜ್ಯಗಳ ಅಧಿಕಾರಿಗಳು ಮತ್ತು ಪ್ರಮುಖ ನಾಯಕರೊಂದಿಗೆ ವಿವರವಾದ ಸಭೆಗಳನ್ನು ನಡೆಸಿದ್ದೇವೆ ಮತ್ತು ಕಾರ್ಯತಂತ್ರವನ್ನು ರೂಪಿಸಿದ್ದೇವೆ. ರಾಹುಲ್‌ ಗಾಂಧಿ ಕೂಡ ಈ ಸಭೆಗಳಲ್ಲಿ ಭಾಗವಹಿಸಿದ್ದರು. ಇತ್ತೀಚಿಗೆ ನಾವು ಕೂಡ ಚುನಾವಣಾ ರಾಜ್ಯಗಳಲ್ಲಿ ಅನೇಕ ರ್ಯಾಲಿಗಳಿಗೆ ಹೋಗಿದ್ದೆವು. ಪ್ರಿಯಾಂಕಾ ಗಾಂಧಿ ಕೂಡ ಸಾರ್ವಜನಿಕ ಸಭೆ ನಡೆಸುತ್ತಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಪರವಾಗಿ ಉತ್ತಮ ವಾತಾವರಣವಿದೆ' ಎಂದರು.

ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಏಪ್ರಿಲ್-ಮೇ, 2024 ರಲ್ಲಿ ಲೋಕಸಭೆ ಚುನಾವಣೆ ನಿರೀಕ್ಷಿಸಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.