Lok Sabha Election: ಚುನಾವಣಾ ಬಾಂಡ್‌ ವಿವರ ಶುಕ್ರವಾರದೊಳಗೆ ಬಹಿರಂಗ; ಯೋಜನೆ ಶುರುವಾದಲ್ಲಿಂದ ಇಲ್ಲಿವರೆಗೆ ಏನೇನಾಯಿತು-india news sbi submits electoral bonds data a timeline of what has happened so far lok sabha election 2024 uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Election: ಚುನಾವಣಾ ಬಾಂಡ್‌ ವಿವರ ಶುಕ್ರವಾರದೊಳಗೆ ಬಹಿರಂಗ; ಯೋಜನೆ ಶುರುವಾದಲ್ಲಿಂದ ಇಲ್ಲಿವರೆಗೆ ಏನೇನಾಯಿತು

Lok Sabha Election: ಚುನಾವಣಾ ಬಾಂಡ್‌ ವಿವರ ಶುಕ್ರವಾರದೊಳಗೆ ಬಹಿರಂಗ; ಯೋಜನೆ ಶುರುವಾದಲ್ಲಿಂದ ಇಲ್ಲಿವರೆಗೆ ಏನೇನಾಯಿತು

ಲೋಕಸಭಾ ಚುನಾವಣೆ ಸಮೀಪದಲ್ಲಿದ್ದು, ಚುನಾವಣಾ ಬಾಂಡ್‌ಗಳ ವಿವರ ಶೀಘ್ರವೇ ಬಹಿರಂಗವಾಗಲಿದೆ. ಏನಿದು ಚುನಾವಣಾ ಬಾಂಡ್‌, ಇದುವರೆಗೆ ಏನೇನಾಯಿತು. ಈ ಯೋಜನೆ ಜಾರಿಯಾದ್ದು ಯಾವಾಗ ಎಂಬಿತ್ಯಾದಿ ವಿವರ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಡ ಚಿತ್ರ); ಚುನಾವಣಾ ಬಾಂಡ್ (ಮಧ್ಯ ಚಿತ್ರ); ಭಾರತದ ಸುಪ್ರೀಂ ಕೋರ್ಟ್ (ಬಲ ಚಿತ್ರ)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಡ ಚಿತ್ರ); ಚುನಾವಣಾ ಬಾಂಡ್ (ಮಧ್ಯ ಚಿತ್ರ); ಭಾರತದ ಸುಪ್ರೀಂ ಕೋರ್ಟ್ (ಬಲ ಚಿತ್ರ)

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಆದೇಶದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರ್ಚ್ 12 ರಂದು ಚುನಾವಣಾ ಬಾಂಡ್‌ (Electoral Bonds) ಗಳ ವಿವರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಿದೆ. ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಎಸ್‌ಬಿಐ ಹಂಚಿಕೊಂಡ ವಿವರಗಳನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಚುನಾವಣಾ ಬಾಂಡ್ ವಿಚಾರ ಮುನ್ನೆಲೆಗೆ ಬಂದಿದೆ. ಚುನಾವಣಾ ಬಾಂಡ್‌ಗೆ ಹಣ ಹೂಡಿಕೆ ಮಾಡಿದವರ ವಿವರ ಬಹಿರಂಗವಾಗಬೇಕು. ಇದರಲ್ಲಿ ಪಾರದರ್ಶಕ ವ್ಯವಸ್ಥೆ ಕಾಪಾಡಬೇಕು ಎಂಬ ಆಗ್ರಹ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಮಹತ್ವದ್ದು ಎನಿಸಿಕೊಂಡಿದೆ.

ಚುನಾವಣಾ ಬಾಂಡ್ ಯೋಜನೆ ಎಂದರೇನು?

ಭಾರತದಲ್ಲಿ ರಾಜಕೀಯ ಧನಸಹಾಯಕ್ಕೆ ಅನುಕೂಲವಾಗುವಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿತು. 2017 ರಲ್ಲಿ ಪರಿಚಯಿಸಲಾದ ಚುನಾವಣಾ ಬಾಂಡ್ ಯೋಜನೆಯು ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಗುಂಪುಗಳಿಗೆ ತಮ್ಮ ಗುರುತನ್ನು ಬಹಿರಂಗಪಡಿಸದೆ ತಮ್ಮ ಅಪೇಕ್ಷಿತ ರಾಜಕೀಯ ಪಕ್ಷಗಳಿಗೆ ಹಣವನ್ನು ದಾನ ಮಾಡಲು (ಯಾವುದೇ ಮಿತಿಯಿಲ್ಲದೆ) ಅನುವು ಮಾಡಿಕೊಟ್ಟಿತು. ದೇಣಿಗೆಗಳಿಗಾಗಿ, ಜನರು ಎಸ್‌ಬಿಐನಿಂದ ಬಾಂಡ್‌ಗಳನ್ನು ಖರೀದಿಸಬಹುದು.

ಆದರೆ, ಸುಪ್ರೀಂ ಕೋರ್ಟ್‌, ಈ ವರ್ಷದ ಫೆಬ್ರವರಿಯಲ್ಲಿ ಏಳು ವರ್ಷಗಳ ಹಳೆಯ ಚುನಾವಣಾ ನಿಧಿ ವ್ಯವಸ್ಥೆಯನ್ನು ರದ್ದುಗೊಳಿಸಿತು. ಅನಾಮಧೇಯ ರಾಜಕೀಯ ಧನಸಹಾಯಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ರದ್ದುಗೊಳಿಸಿದೆ. ಅಲ್ಲದೆ, ಈ ಯೋಜನೆಯನ್ನು "ಅಸಂವಿಧಾನಿಕ" ಎಂದು ವ್ಯಾಖ್ಯಾನಿಸಿತು.

ಚುನಾವಣಾ ಬಾಂಡ್ ಗಳ ಪ್ರಮುಖ ಲಕ್ಷಣವೆಂದರೆ ದಾನಿಗಳ ಅನಾಮಧೇಯತೆ. ಯೋಜನೆಯ ಪ್ರಕಾರ, ಒಬ್ಬ ವ್ಯಕ್ತಿ ಅಥವಾ ನಿಗಮವು ಯಾವುದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದಾಗ, ದೇಣಿಗೆಯ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ.

ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದೇಕೆ

ಚುನಾವಣಾ ಬಾಂಡ್ ಯೋಜನೆಯು ರಾಜಕೀಯ ಪಕ್ಷಗಳ ನಿಧಿಯ ಮೂಲಗಳ ಬಗ್ಗೆ ಮತದಾರರ ಮಾಹಿತಿಯ ಹಕ್ಕನ್ನು ಉಲ್ಲಂಘಿಸಿದೆ ಎಂದು ಸುಪ್ರೀಂ ಕೋರ್ಟ್ ಫೆಬ್ರವರಿ 15 ರಂದು ರದ್ದುಗೊಳಿಸಿತು.

ಈ ಯೋಜನೆಯನ್ನು ಪರಿಚಯಿಸಿದ ನಂತರ ಚುನಾವಣಾ ಹಣಕಾಸು ಕುರಿತ ಪ್ರಮುಖ ಕಾನೂನುಗಳಿಗೆ ಮಾಡಿದ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ಚುನಾವಣಾ ಬಾಂಡ್‌ಗಳ ಅನಾಮಧೇಯ ಸ್ವರೂಪವು ಸಂವಿಧಾನದ 19 (1) (ಎ) ವಿಧಿಯಡಿ ರಕ್ಷಿಸಲಾದ ಮಾಹಿತಿ ಹಕ್ಕನ್ನು ಉಲ್ಲಂಘಿಸಿದೆ ಎಂದು ಎತ್ತಿ ತೋರಿಸಿದೆ. ಮಾರ್ಚ್ 6 ರೊಳಗೆ ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳು ಸ್ವೀಕರಿಸಿದ ದೇಣಿಗೆಗಳ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಪೀಠ ಎಸ್‌ಬಿಐಗೆ ನಿರ್ದೇಶನ ನೀಡಿತು.

ಚುನಾವಣಾ ಬಾಂಡ್ ಸಾಗಿಬಂದ ಹಾದಿ

ಭಾರತ ಸರ್ಕಾರವು 2017-18ರ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಮಸೂದೆಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿತು.

2017ರ ಸೆಪ್ಟೆಂಬರ್ 14 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' ಎಂಬ ಎನ್ಜಿಒ ಈ ಯೋಜನೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತು.

2017ರ ಅಕ್ಟೋಬರ್ 3: ಎನ್‌ಜಿಒ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕುರಿತು ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತು.

2018ರ ಜನವರಿ 2- ಕೇಂದ್ರ ಸರ್ಕಾರವು ಚುನಾವಣಾ ಬಾಂಡ್ ಯೋಜನೆಗೆ ಚಾಲನೆ ನೀಡಿ ಅಧಿಸೂಚನೆ ಹೊರಡಿಸಿತು.

2022ರ ನವೆಂಬರ್ 7- ಯಾವುದೇ ವಿಧಾನಸಭಾ ಚುನಾವಣೆ ನಿಗದಿಯಾಗಬಹುದಾದ ವರ್ಷದಲ್ಲಿ ಮಾರಾಟದ ದಿನಗಳನ್ನು 70 ದಿನಗಳಿಂದ 85 ದಿನಗಳಿಗೆ ವಿಸ್ತರಿಸಲು ಯೋಜನೆಯನ್ನು ತಿದ್ದುಪಡಿ ಮಾಡಲಾಯಿತು.

2023: ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಪ್ರಕರಣದ ವಿಚಾರಣೆ ಆರಂಭವಾಯಿತು. ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.

2023ರ ಅಕ್ಟೋಬರ್ 16 ರಂದು, ಸುಪ್ರೀಂ ಕೋರ್ಟ್ ಪೀಠವು ಯೋಜನೆಯ ವಿರುದ್ಧದ ಅರ್ಜಿಗಳನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತು.

2023ರ ಅಕ್ಟೋಬರ್ 31 ಸುಪ್ರೀಂ ಕೋರ್ಟ್ ಪೀಠವು ಯೋಜನೆಯ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತು. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ 2023ರ ನವೆಂಬರ್ 2 ರಂದು ಕಾಯ್ದಿರಿಸಿತ್ತು.

2024: ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತು. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಮತ್ತು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ರದ್ದುಗೊಳಿಸಿ ಸರ್ವಾನುಮತದ ತೀರ್ಪು ನೀಡಿತು.

2024ರ ಮಾರ್ಚ್ 4 ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್ನ ವಿವರಗಳನ್ನು ಬಹಿರಂಗಪಡಿಸುವ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸುವಂತೆ ಎಸ್‌ಬಿಐ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತು.

ಮಾರ್ಚ್‌ 7: ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕೆಂದು ಕೋರಿ ಮಾರ್ಚ್ 7 ರಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಮಾರ್ಚ್ 11 ರಂದು, ಸುಪ್ರೀಂ ಕೋರ್ಟ್ ಪೀಠವು ಸಮಯವನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿತು.

ಮಾರ್ಚ್ 12 ರೊಳಗೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಿತು. ಅದರಂತೆ ಎಸ್‌ಬಿಐ ಚುನಾವಣಾ ಬಾಂಡ್ ವಿವರವನ್ನು ಹಸ್ತಾಂತರಿಸಿದೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.