ಕನ್ನಡ ಸುದ್ದಿ  /  Nation And-world  /  India News Smoke In Vande Bharat Train In Kerala Due To Inadvertent Activation Of Fire Extinguisher Kasaragod News Uks

ಕಾಸರಗೋಡಿಗೆ ಹೊರಟಿದ್ದ ವಂದೇ ಭಾರತ್‌ ರೈಲಿನ ಸಿ5 ಬೋಗಿಯಲ್ಲಿ ಹೊಗೆ; ತೊಂದರೆಗೊಳಗಾದ ಪ್ರಯಾಣಿಕರು

ಕೇರಳದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಬೋಗಿಯೊಂದರಲ್ಲಿ ನಿನ್ನೆ ಮಂಜಿನಂತಹ ಹೊಗೆ ಆವರಿಸಿಕೊಂಡು ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದ ಘಟನೆ ನಡೆಯಿತು. ಆಲುವಾ ರೈಲ್ವೆ ನಿಲ್ಧಾಣದಲ್ಲಿ ತಾಂತ್ರಿಕ ದೋಷ ಸರಿಪಡಿಸಲಾಯಿತು. ಯಾಕೆ ಈ ಹೊಗೆ ಆವರಿಸಿಕೊಂಡಿತು, ಭಾರತೀಯ ರೈಲ್ವೆ ಹೇಳಿರುವುದು ಇಷ್ಟು.

ತಿರುವನಂತಪುರದಿಂದ ಕಾಸರಗೋಡಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ಕಂಡು ಬಂದ ದಟ್ಟ ಹೊಗೆ (ಎಡಚಿತ್ರ); ವಂದೇ ಮಾತರಂ ರೈಲು (ಬಲಚಿತ್ರ -ಸಾಂಕೇತಿಕ)
ತಿರುವನಂತಪುರದಿಂದ ಕಾಸರಗೋಡಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ಕಂಡು ಬಂದ ದಟ್ಟ ಹೊಗೆ (ಎಡಚಿತ್ರ); ವಂದೇ ಮಾತರಂ ರೈಲು (ಬಲಚಿತ್ರ -ಸಾಂಕೇತಿಕ)

ಕೊಚ್ಚಿ: ಕೇರಳದ ರಾಜಧಾನಿ ತಿರುವನಂತಪುರದಿಂದ ಕಾಸರಗೋಡಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಯಲ್ಲಿ ಲೋಪ ಉಂಟಾಗಿ ಬಿಳಿ ಮಂಜಿನಂತಹ ಹೊಗೆ ತುಂಬಿಕೊಂಡು ಪ್ರಯಾಣಿಕರು ತೊಂದರೆಗೆ ಒಳಗಾದ ಘಟನೆ ವರದಿಯಾಗಿದೆ.

ಶೌಚಾಲಯದಲ್ಲಿ ಅಳವಡಿಸಿದ್ದ ಅಗ್ನಿಶಾಮಕ ಓಪನ್ ಆದ ಕಾರಣ ಅದರಿಂದ ಬೆಂಕಿ ನಂದಿಸುವ ಅನಿಲ ಹೊರಗೆ ಬಂದಿದೆ. ಅದು ಬೋಗಿಯನ್ನು ಆವರಿಸಿತ್ತು. ಅಜಾಗರೂಕತೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ಸಂಭವಿಸಿತ್ತು. ಅಗ್ನಿಶಾಮಕ ಸಿಲಿಂಡರ್ ಒಳಗಿನಿಂದ ರಾಸಾಯನಿಕ ಹೊರಬಂದ ಕಾರಣ ಈ ಅನಾಹುತ ಸಂಭವಿಸಿತು ಎಂದು ವರದಿಗಳು ಹೇಳಿವೆ. ಕೆಲವು ಪ್ರಯಾಣಿಕರು ಇದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಟಿವಿ ಚಾನೆಲ್ ಗಳಲ್ಲಿ ಈ ಘಟನೆಯ ದೃಶ್ಯಗಳು ರೈಲಿನ ಪ್ರಯಾಣಿಕರ ಕ್ಯಾಬಿನ್ ಗಳಲ್ಲಿ ಬಿಳಿ ಹೊಗೆ ಮತ್ತು ಜನರನ್ನು ಅಲ್ಲಿಂದ ಸ್ಥಳಾಂತರಿಸುತ್ತಿರುವುದನ್ನು ತೋರಿಸಿದೆ. ಹೊಗೆಯಿಂದಾಗಿ ಯಾವುದೇ ಪ್ರಯಾಣಿಕರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿರುವುದೇನು

ಈ ಅನಾಹುತದ ಬಳಿಕ ಪಿಟಿಐ ಜೊತೆಗೆ ಮಾತನಾಡಿದ ರೈಲ್ವೆ ಅಧಿಕಾರಿಯೊಬ್ಬರು ಸಿಸಿಟಿವಿ ದೃಶ್ಯಗಳ ವಿವರ ನೀಡಿದ್ದರು. ಈ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರೈಲಿನೊಳಗೆ ಸ್ವಚ್ಛತಾ ಸಿಬ್ಬಂದಿಯೊಬ್ಬರು ಶೌಚಾಲಯದಲ್ಲಿದ್ದ ಅಗ್ನಿಶಾಮಕ ಸಿಲಿಂಡರ್‌ನ ಸೇಫ್ಟಿ ಕ್ಯಾಚ್ (ಅದರ ಮುಚ್ಚಳ) ಅನ್ನು ಗೊತ್ತಿಲ್ಲದೇ ಎಳೆದುದು ಕಂಡುಬಂದಿದೆ. ಹೀಗಾಗಿ ಕೂಡಲೇ ಬೋಗಿಯೊಳಗೆ ಆ ರಾಸಾಯನಿಕ ತುಂಬಿಕೊಂಡು ಮಂಜು ಆವರಿಸಿದಂತೆ ಕಂಡುಬಂತು.

ಭಾರತೀಯ ರೈಲ್ವೆ ಕೂಡ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಸ್ವಚ್ಛತಾ ಸಿಬ್ಬಂದಿ ಅಜಾಗರೂಕತೆಯಿಂದ ಅಗ್ನಿಶಾಮಕದ ಸೇಫ್ಟಿ ಕ್ಯಾಚ್ ಅನ್ನು ಎಳೆದರು. ಪರಿಣಾಮ ಅದು ಸಕ್ರಿಯವಾಯಿತು. ಹೀಗಾಗಿ ಬೋಗಿಯಲ್ಲಿ ದಟ್ಟ ಮಂಜು ಅಥವಾ ಹೊಗೆ ತುಂಬಿಕೊಂಡಂತಾಯಿತು ಎಂದು ತಿಳಿಸಿದೆ.

"ಸಕ್ರಿಯ ಅಗ್ನಿಶಾಮಕದ ಕಾರಣ ಸಂಭವಿಸಿದ ರಾಸಾಯನಿಕ ಪ್ರತಿಕ್ರಿಯೆಯಿಂದ ಮಂಜು ಬೋಗಿಯೊಳಗೆ ಹರಡಿತು. ಬೋಗಿಯಲ್ಲಿ ಬಿಳಿ ಮಂಜು ತುಂಬಿದೆ ಎಂಬ ಭಾವನೆಯನ್ನು ಹರಿಡಿತು ಎಂದು ರೈಲ್ವೆ ಹೇಳಿದೆ.

ಕಲಮಸ್ಸೆರಿ-ಅಲುವಾ ವಿಭಾಗ ನಡೆದ ಅನಾಹುತ

ವಂದೇ ಭಾರತ್ ರೈಲು ಬೆಳಿಗ್ಗೆ 8.55ಕ್ಕೆ ಕಲಮಸ್ಸೆರಿ-ಆಲುವಾ ವಿಭಾಗದಲ್ಲಿದ್ದಾಗ, ರೈಲಿನ ಸಿ -5 ಬೋಗಿಯಲ್ಲಿ ಈ ಘಟನೆ ವರದಿಯಾಗಿದೆ.

"ಬೋಗಿಯಲ್ಲಿ ಅನಾಹುತ ಸಂಭವಿಸಿದ ಕೂಡಲೇ ರೈಲನ್ನು ನಿಲ್ಲಿಸಲಾಯಿತು. ರೈಲಿನಲ್ಲೇ ಇದ್ದ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ವಿಭಾಗಗಳ ತಾಂತ್ರಿಕ ಸಿಬ್ಬಂದಿ ತಪಾಸಣೆ ನಡೆಸಿದಾಗ, ಬೋಗಿಯಲ್ಲಿ ಅಗ್ನಿಶಾಮಕದ ಹೊಗೆ ತುಂಬಿರುವುದು ಕಂಡುಬಂದಿದೆ. ಬಳಿಕ ಬೆಂಕಿ ಅಥವಾ ಯಾಂತ್ರಿಕ/ ವಿದ್ಯುತ್ ದೋಷ ಉಂಟಾಗಿದೆಯೇ ಎಂದು ಪರಿಶೀಲಿಸಿದರು. ಅದ್ಯಾವುದೂ ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಸಿಬ್ಬಂದಿ ಬಳಿಕ ರೈಲನ್ನು ಆಲುವಾ ರೈಲು ನಿಲ್ಧಾಣಕ್ಕೆ ಕೊಂಡೊಯ್ದರು.

ಅಲ್ಲಿ ಬೋಗಿಯನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಯಿತು. ಸಿ 5 ಬೋಗಿಯ ಯುರೋಪಿಯನ್ ಮಾದರಿ ಶೌಚಾಲಯದೊಳಗೆ ಅಳವಡಿಸಿದ್ದ ಏರೋಸಾಲ್ ಮಾದರಿಯ ಅಗ್ನಿಶಾಮಕ ಸಕ್ರಿಯವಾಗಿದ್ದು ಕಂಡುಬಂತು. ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿ ಅಜಾಗರೂಕತೆಯಿಂದ ಅನಾಹುತವಾಗಿರುವುದು ಖಚಿತವಾಗಿದೆ" ಎಂದು ರೈಲ್ವೆ ಹೇಳಿದೆ. ಆದರೆ, ಬೋಗಿಯಲ್ಲಿ ಅನಿಲ ಸೋರಿಕೆಯಾಗಿದೆ ಎಂಬ ಕೆಲವು ಮಾಧ್ಯಮ ವರದಿಗಳ ಸತ್ಯಕ್ಕೆ ದೂರವಾದುದು ಎಂದು ಭಾರತೀಯ ರೈಲ್ವೆ ಹೇಳಿದೆ.

ಸಮಸ್ಯೆ ಬಗೆಹರಿಯುವವರೆಗೆ ರೈಲನ್ನು ಆಲುವಾ ರೈಲು ನಿಲ್ಧಾಣದಲ್ಲಿ ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಲಾಯಿತು. ನಂತರ ಬೆಳಿಗ್ಗೆ 9.24 ರ ಸುಮಾರಿಗೆ ತನ್ನ ಪ್ರಯಾಣವನ್ನು ಪುನರಾರಂಭಿಸಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)