ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂವಿಧಾನದ ಹೊಸ ಪ್ರತಿಯ ಪೀಠಿಕೆಯಲ್ಲಿ ಸೋಷಿಯಲಿಸ್ಟ್, ಸೆಕ್ಯುಲರ್ ಪದ ಮಿಸ್ಸಿಂಗ್ ಆರೋಪ, ಈ ವಿದ್ಯಮಾನದ ಕುರಿತು ಕಿರು ಅವಲೋಕನ

ಸಂವಿಧಾನದ ಹೊಸ ಪ್ರತಿಯ ಪೀಠಿಕೆಯಲ್ಲಿ ಸೋಷಿಯಲಿಸ್ಟ್, ಸೆಕ್ಯುಲರ್ ಪದ ಮಿಸ್ಸಿಂಗ್ ಆರೋಪ, ಈ ವಿದ್ಯಮಾನದ ಕುರಿತು ಕಿರು ಅವಲೋಕನ

ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಮುಂದುವರಿದಿದೆ. ಹೊಸ ಸಂಸತ್ ಭವನ ಪ್ರವೇಶಿಸಿದ ಕೂಡಲೆ ಎಲ್ಲ ಸದಸ್ಯರಿಗೆ ಸಂವಿಧಾನದ ಹೊಸ ಪುಸ್ತಗಳನ್ನು ನೀಡಲಾಗಿದೆ. ಸಂವಿಧಾನದ ಈ ಪುಸ್ತಕದ ಪೀಠಿಕೆಯಲ್ಲಿ ಸೋಷಿಯಲಿಸ್ಟ್ (ಸಮಾಜವಾದ) ಮತ್ತು ಸೆಕ್ಯುಲರ್ (ಜಾತ್ಯತೀತ) ಪದಗಳು ಕಣ್ಮರೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಆರೋಪಿಸಿದ್ದಾರೆ. ಈ ವಿದ್ಯಮಾನದ ವಿವರ ಹೀಗಿದೆ.

ಸಂವಿಧಾನದ ಪ್ರತಿಯೊಂದಿಗೆ ಅಧೀರ್ ರಂಜನ್ ಚೌಧರಿ
ಸಂವಿಧಾನದ ಪ್ರತಿಯೊಂದಿಗೆ ಅಧೀರ್ ರಂಜನ್ ಚೌಧರಿ (PTI)

ಸಂಸತ್ತಿನ ವಿಶೇಷ ಅಧಿವೇಶನ ಸೋಮವಾರ ಹಳೆಯ ಸಂಸತ್ ಭವನದಲ್ಲಿ ಶುರುವಾಗಿದ್ದು, ಮಂಗಳವಾರದಿಂದ ಹೊಸ ಸಂಸತ್‌ಭವನದಲ್ಲಿ ಮುಂದುವರಿದಿದೆ. ಇದೇ ವೇಳೆ ಎಲ್ಲ ಸಂಸದರಿಗೂ ಸಂವಿಧಾನದ ಹೊಸ ಪ್ರತಿಗಳನ್ನು ವಿತರಿಸಲಾಗಿತ್ತು. ಈ ಸಂವಿಧಾನದ ಪ್ರತಿಯಲ್ಲಿ ಲೋಪವಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಬುಧವಾರ (ಸೆ.20) ಆರೋಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ನಮಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳು ... ನಾವು ನಮ್ಮ ಕೈಯಲ್ಲಿ ಹಿಡಿದು ಹೊಸ ಸಂಸತ್ತಿನ ಕಟ್ಟಡಕ್ಕೆ ಪ್ರವೇಶಿಸಿದ್ದೇವೆ. ಅದರ ಪೀಠಿಕೆಯಲ್ಲಿ 'ಸಮಾಜವಾದಿ, ಜಾತ್ಯತೀತ' (socialist, secular) ಎಂಬ ಪದಗಳಿಲ್ಲ" ಎಂದು ಅವರು ಎಎನ್‌ಐಗೆ ತಿಳಿಸಿದರು.

ಸಮಾಜವಾದಿ, ಜಾತ್ಯತೀತ ಪದಗಳ ವಿವಾದ

ಭಾರತ ಸರ್ಕಾರ 2015 ರಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಿದ್ದ ಜಾಹೀರಾತಿನಲ್ಲಿ ಸಂವಿಧಾನದ ಪೀಠಿಕೆಯ ಚಿತ್ರದಲ್ಲಿ ಸಮಾಜವಾದಿ, ಜಾತ್ಯತೀತ ಪದಗಳು ಇರಲಿಲ್ಲ. ಇದು ಬಹಳ ಕೋಲಾಹಲವನ್ನು ಉಂಟುಮಾಡಿತ್ತು.

ಇದನ್ನೂ ಓದಿ| ಮಹಿಳಾ ಮೀಸಲಾತಿ ಮಸೂದೆ ಎಂದರೇನು, ಇಷ್ಟು ದಿನ ನಾರಿ ಶಕ್ತಿಗೆ ಸಿಗದಿದ್ದು ಯಾಕೆ?

ಸಂವಿಧಾನಕ್ಕೆ 1976ರಲ್ಲಿ ಈ ಎರಡು ಪದಗಳನ್ನು ಅಂದರೆ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸಂವಿಧಾನದ 42ನೇ ತಿದ್ದುಪಡಿ ಮೂಲಕ ಸೇರಿಸಲಾಗಿತ್ತು. "ಭಾರತದ ಜನರು, ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪಿಸಲು ಗಂಭೀರವಾಗಿ ನಿರ್ಧರಿಸಿದ್ದೇವೆ..." ಎಂದು ಅದು ಮುಂದುವರಿಯುತ್ತದೆ.

ಭಾರತ ಸರ್ಕಾರ 2015ರಲ್ಲಿ ಸಮಾಜವಾದಿ, ಜಾತ್ಯತೀತ ಪದ ಬಳಕೆ ಕುರಿತು ಏನು ಹೇಳಿತ್ತು

ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು 2015ರ ಜನವರಿಯಲ್ಲಿ ಸಂವಿಧಾನದ ಪೀಠಿಕೆಯ ಸಮಾಜವಾದಿ, ಜಾತ್ಯತೀತ ಪದಗಳ ಬಳಕೆ ಕುರಿತು ಸ್ಪಷ್ಟೀಕರಣ ನೀಡಿದ್ದರು. ಅದರಂತೆ, ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಬಳಸದೇ ಇರುವುದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ರಾಜಕೀಯ ಪಕ್ಷ ಆರಂಭಿಸಲು ಇರುವ ಷರತ್ತುಗಳಲ್ಲಿ ಈ ತತ್ವಗಳೂ ಇವೆ

ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಯೋಜಿಸುತ್ತಿರುವ ಇಬ್ಬರು ವಕೀಲರು ಮತ್ತು ಸಮಾಜ ಸೇವಕರು 2020 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿ, ಸಂವಿಧಾನದ ಪೀಠಿಕೆಯಿಂದ “ಜಾತ್ಯತೀತ” ಮತ್ತು “ಸಮಾಜವಾದಿ” ಪದಗಳನ್ನು ಅಳಿಸಲು ಕೋರಿದ್ದರು.

ಇದನ್ನೂ ಓದಿ| ಮಹಿಳಾ ಮೀಸಲು ಮಸೂದೆ ಪ್ರಸ್ತಾಪ ಅಂಗೀಕರಿಸಿದ ಕೇಂದ್ರ ಸಚಿವ ಸಂಪುಟ: ವರದಿ

ಭಾರತದ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವನ್ನು ನೋಂದಾಯಿಸುವಾಗ, ಸಮಾಜವಾದ ಮತ್ತು ಜಾತ್ಯತೀತತೆಯ ತತ್ವಗಳನ್ನು ಕಡ್ಡಾಯವಾಗಿ ಅನುಸರಿಸುವುದು ಷರತ್ತುಗಳಲ್ಲಿ ಒಂದಾಗಿದೆ. ಇದನ್ನು 1989 ರಲ್ಲಿ ತಿದ್ದುಪಡಿ ಮಾಡುವ ಮೂಲಕ ಜನರ ಪ್ರಾತಿನಿಧ್ಯ ಕಾಯಿದೆ, 1951 ರ ಸೆಕ್ಷನ್ 29-A (5) ಗೆ ಸೇರಿಸಲಾಯಿತು.

ಸೋಷಿಯಲಿಸ್ಟ್ ಮತ್ತು ಸೆಕ್ಯುಲರ್ ಪದಗಳು ಹೇಗೆ ಹೆಚ್ಚು ಬಳಕೆಗೆ ಬಂದವು

ಕಾಲಾನುಕ್ರಮದಲ್ಲಿ ಸರ್ಕಾರಗಳನ್ನು ಗಮನಿಸಿದರೆ, ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ, ಗರೀಬಿ ಹಟಾವೋ (ಬಡತನ ನಿರ್ಮೂಲನೆ) ಯೋಜನೆಗಳ ಮೂಲಕ ಗಮನಸೆಳೆದರು. ಅವರ ಆಡಳಿತದಲ್ಲಿ ಸಮಾಜವಾದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದನ್ನು ಬಿಂಬಿಸಲಾಗಿತ್ತು. ಇದರ ಫಲವಾಗಿಯೇ ಸೋಷಿಯಲಿಸ್ಟ್ ಪದ ಭಾರತದಲ್ಲಿ ರಾಜಕೀಯವಾಗಿ ಹೆಚ್ಚು ಬಳಕೆಗೆ ಬಂತು. ಸಂವಿಧಾನದ ಪೀಠಿಕೆಗೆ ಸೇರಿಸಲ್ಪಟ್ಟಿತು.

ಇನ್ನು ಸೆಕ್ಯುಲರ್ ಪದವು ಭಾರತದ ಜಾತ್ಯತೀತ ಜನಸಮೂಹವನ್ನು ಬಿಂಬಿಸುವಂಥದ್ದು. ಭಾರತದಲ್ಲಿ ನೂರಾರು ನಂಬಿಕೆ, ಶ್ರದ್ಧೆಗಳಿರುವ ಜನಸಮೂಹ ಇದೆ. ಅದನ್ನು ಬಲಗೊಳಿಸಬೇಕು ಎಂದು ಸಂವಿಧಾನದ ಪೀಠಿಕೆಗೆ ಅಂದು ಸೇರಿಸಲಾಗಿತ್ತು.

IPL_Entry_Point