ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಆಯ್ಕೆಯಾಗದ ವಿಗ್ರಹಗಳನ್ನು ಏನು ಮಾಡಲಾಗುವುದು? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಆಯ್ಕೆಯಾಗದ ವಿಗ್ರಹಗಳನ್ನು ಏನು ಮಾಡಲಾಗುವುದು? ಇಲ್ಲಿದೆ ಉತ್ತರ

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಆಯ್ಕೆಯಾಗದ ವಿಗ್ರಹಗಳನ್ನು ಏನು ಮಾಡಲಾಗುವುದು? ಇಲ್ಲಿದೆ ಉತ್ತರ

ಅಯೋಧ್ಯೆ ರಾಮಮಂದಿರದಲ್ಲಿ ಇರಿಸಲು ಒಟ್ಟು ಮೂರು ಬಾಲರಾಮನ ಪ್ರತಿಮೆಗಳನ್ನು ಕೆತ್ತಲಾಗಿತ್ತು. ಅದರಲ್ಲಿ ಮೈಸೂರಿನ ಅರುಣ್‌ ಯೋಗಿರಾಜ್‌ ಕೈಯಿಂದ ಅರಳಿದ ವಿಗ್ರಹವನ್ನು ಪ್ರಾಣಪ್ರತಿಷ್ಠೆ ಮಾಡಲಾಗಿದೆ. ಹಾಗಾದರೆ ಉಳಿದ ಎರಡು ವಿಗ್ರಹಗಳನ್ನು ಏನು ಮಾಡಲಾಗುವುದು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಮಮಂದಿರದಲ್ಲಿ ಇರಿಸಲು ಕೆತ್ತಲಾದ ವಿಗ್ರಹಗಳು
ರಾಮಮಂದಿರದಲ್ಲಿ ಇರಿಸಲು ಕೆತ್ತಲಾದ ವಿಗ್ರಹಗಳು (Times now )

ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಬಾಲರಾಮನ ಪ್ರಾಣಪ್ರತಿಷ್ಠೆ ಮಾಡಲಾಗಿದೆ. ಜನವರಿ 22 ರಂದು ಬಾಲರಾಮನನ್ನು ಅದ್ದೂರಿ ಕಾರ್ಯಕ್ರಮದ ಮೂಲಕ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ರಾಮಮಂದಿರದ ಗರ್ಭಗುಡಿಯಲ್ಲಿ 51 ಇಂಚಿನ ಬಾಲರಾಮನ ಭವ್ಯ ವಿಗ್ರಹವು ರಾರಾಜಿಸುತ್ತಿದೆ. ಮೂರು ಶತಕೋಟಿ ವರ್ಷಗಳಷ್ಟು ಹಳೆಯದಾದ ಕಪ್ಪು ಕಲ್ಲಿನಿಂದ ಈ ಸುಂದರ ವಿಗ್ರಹವನ್ನು ಕೆತ್ತಿದ್ದಾರೆ ಮೈಸೂರಿನ ಶಿಲ್ಪ ಅರುಣ್ ಯೋಗಿರಾಜ್.

ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲು 3 ಮೂರ್ತಿಗಳನ್ನು ಕೆತ್ತಲಾಗಿತ್ತು. ಆದರೆ ಅರುಣ್‌ ಅವರು ಕೆತ್ತಿದ ಮೂರ್ತಿ ಕೊನೆಯಲ್ಲಿ ಆಯ್ಕೆಯಾಗಿತ್ತು. ಹಾಗಾದರೆ ಉಳಿದ 2 ಮೂರ್ತಿಗಳನ್ನು ಏನು ಮಾಡಬಹುದು, ಇದನ್ನು ಎಲ್ಲಿ ಇರಿಸಬಹುದು ಎಂಬ ಯೋಚನೆ ಬರುವುದು ಸಹಜ. ಆದರೆ ಈ ವಿಗ್ರಹಗಳನ್ನು ರಾಮಮಂದಿರದ ಬೇರೆಡೆ ಇರಿಸಲಾಗುವುದು, ಈ ಎರಡೂ ವಿಗ್ರಹಗಳನ್ನು ದೇವಾಲಯದ ಆವರಣದಲ್ಲೇ ಪ್ರತಿಷ್ಠಾಪಿಸಲಾಗುವುದು ಎಂದು ದೇವಾಲಯದ ಟ್ರಸ್ಟ್‌ ಹೇಳಿದೆ ಎಂಬ ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಟೈಮ್ಸ್‌ ನೌ ಉಲ್ಲೇಖಿಸಿದೆ.

ಈ ಎರಡು ವಿಗ್ರಹಗಳಲ್ಲಿ ಒಂದು ವಿಗ್ರಹವು ಬಿಳಿ ಬಣ್ಣದಲ್ಲಿದೆ. ಈ ವಿಗ್ರಹದಲ್ಲಿರುವ ರಾಮನು ಚಿನ್ನದ ಬಿಲ್ಲು ಬಾಣಗಳನ್ನು ಹಿಡಿದಿರುವುದನ್ನು ಗಮನಿಸಬಹುದಾಗಿದೆ. ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಕೆತ್ತಿರುವ ಈ ವಿಗ್ರಹವು ವಿವಿಧ ಅವತಾರಗಳು ಇರುವ ಕಮಾನಿನಿಂದ ಸುತ್ತುವರಿದಿರುವುದನ್ನು ಕಾಣಬಹುದಾಗಿದೆ. ಈ ವಿಗ್ರಹವನ್ನು ದೇವಾಲಯದ ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸುವ ಸಾಧ್ಯತೆ ಇದೆ. ತಾಜ್ ಮಹಲ್‌ಗಾಗಿ ಅಮೃತಶಿಲೆ ತಂದ ಸ್ಥಳವಾದ ರಾಜಸ್ಥಾನದ ಮಕ್ರಾನಾದಿಂದ ಪಡೆದ ಬಿಳಿ ಅಮೃತಶಿಲೆಯನ್ನು ಬಳಸಿ ಇದನ್ನು ಕೆತ್ತಲಾಗಿದೆ.

ಈ ವಿಗ್ರಹವು ಕಮಾನು ರೀತಿಯ ರಚನೆಯಿಂದ ಆವೃತವಾಗಿರುವ ಭಗವಾನ್‌ ರಾಮನನ್ನು ತೋರಿಸುತ್ತದೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿಯಂತಹ ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ ಸಣ್ಣ ಶಿಲ್ಪಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಕರ್ನಾಟಕದ ಗಣೇಶ್‌ ಭಟ್‌ ಎನ್ನುವವರು ಕೆತ್ತಿದ ಕಪ್ಪು ಬಣ್ಣದ ವಿಗ್ರಹ ಮೂರನೇ ವಿಗ್ರಹವಾಗಿದೆ. ಈ ವಿಗ್ರಹದಲ್ಲಿ ಕಿರೀಟದ ಮೇಲೆ ಸೂರ್ಯನ ಜೊತೆಗೆ ಬಾಲರಾಮ, ಸೂರ್ಯಚಕ್ರ ಹಾಗೂ ಸಿಂಹವನ್ನು ಕಾಣಬಹುದಾಗಿದೆ. ಮೈಸೂರಿನ ಹೆಗಡದೇವನ ಕೋಟೆಯಿಂದ ಬಂದ ಕೃಷ್ಣ ಶಿಲಾ ಎಂಬ ವಿಶಿಷ್ಟ ಕಲ್ಲಿನಿಂದ ಇದನ್ನು ತಯಾರಿಸಲಾಗಿದೆ. ಇದು ಸಾಂಪ್ರದಾಯಿಕ ಭಾರತೀಯ ಶೈಲಿಯ ಕೆತ್ತನೆಯನ್ನು ಪ್ರತಿಬಿಂಬಿಸುವ ಐದು ವರ್ಷದ ಬಾಲರಾಮ ಮುಗ್ಧನೋಟವನ್ನು ಈ ವಿಗ್ರಹದಲ್ಲಿ ಕಾಣಬಹುದಾಗಿದೆ.

ಕಾಗೆಯ ಮೇಲಿರುವ ಸೂರ್ಯದೇವನು ಶ್ರೀರಾಮ ಸೂರ್ಯವಂಶವನ್ನು ಸಂಕೇತಿಸುತ್ತದೆ. ಸೂರ್ಯ ಚಕ್ರವು ಸೂರ್ಯ ದೇವರ ಶಕ್ತಿ ಮತ್ತು ವೈಭವವನ್ನು ಪ್ರತಿನಿಧಿಸುತ್ತದೆ. ಈ ವಿಗ್ರಹದಲ್ಲಿ ಸಿಂಹದ ಕೆತ್ತನೆ ಇದ್ದು ಇದು ಧೈರ್ಯ ಹಾಗೂ ಶಕ್ತಿಯನ್ನು ಸೂಚಿಸುತ್ತದೆ.

ಈ ವಿಗ್ರಹಗಳೂ ವಿಶಿಷ್ಟವಾಗಿದ್ದು, ಇವನ್ನೂ ರಾಮಮಂದಿರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.