Breaking News: ಉತ್ತರ ಪ್ರದೇಶದಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ, ಮಕ್ಕಳೂ ಸೇರಿ 87 ಮಂದಿ ದುರ್ಮರಣ
Uttar Pradesh Stampede ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿ 87 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಲಕ್ನೋ: ಉತ್ತರ ಪ್ರದೇಶದಲ್ಲಿ( Uttar Pradesh Stampede) ಮಂಗಳವಾರ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ ಸತ್ಸಂಗಕ್ಕೆ ಬಂದಿದ್ದವರಲ್ಲಿ ಕಾಲ್ತುಳಿತ ಸಂಭವಿಸಿ ಮೂವರು ಮಕ್ಕಳು ಸೇರಿ 87 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ( Hathras) ದುರ್ಘಟನೆ ನಡೆದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಸಮಗ್ರ ತನಿಖೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್(Yogi Adityanath) ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಿದ್ದಾರೆ.
ಹತ್ರಾಸ್‌ನ ಸಿಕಂದರ್‌ರಾವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಸ್ಥಳೀಯ ಸ್ವಾಮೀಜಿ ಒಬ್ಬರ ಸತ್ಸಂಗ ಏರ್ಪಾಡಾಗಿತ್ತು. ಹತ್ರಾಸ್ ಮಾತ್ರವಲ್ಲದೇ ಅಕ್ಕಪಕ್ಕದ ಭಾಗಗಳಿಂದಲೂ ಹೆಣ್ಣು ಮಕ್ಕಳ ಸಹಿತ ಹಲವರು ಸೇರಿದ್ದರು. ಈ ವೇಳೆ ಸ್ವಾಮೀಜಿ ಅವರಿಗೆ ಸನ್ಮಾನ ಇದೆ ಎನ್ನುವ ಮಾಹಿತಿಯನ್ನೂ ನೀಡಲಾಗಿದೆ. ಸತ್ಸಂಗ ಆಯೋಜಿಸಿದ್ದ ಸಭಾಂಗಣ ಸಣ್ಣದಾಗಿತ್ತು. ಅಲ್ಲಿಯೇ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮಕ್ಕಳೊಂದಿಗೆ ಬಂದಿದ್ದ ಹೆಣ್ಣುಮಕ್ಕಳು, ಹಿರಿಯರು ಒಳಗೆ ಸೇರಿದ್ದರು. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದೆ. ಆಗ ಅಲ್ಲಿದ್ದವರು ಹೊರಕ್ಕೆ ಬರಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ.
ಸಂಜೆ ನಂತರ ಸಾವಿನ ಸಂಖ್ಯೆ ಏರುತ್ತಲೇ ಹೋಯಿತು. ಮೊದಲು 27 ಜನ ಮೃತಪಟ್ಟಿದ್ದರು. ನಂತರ ಆಸ್ಪತ್ರೆ, ಸತ್ಸಂಗ ನಡೆದ ಸ್ಥಳದಲ್ಲೂ ಹಲವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರಿಗೂ ಜನ ಎದ್ದು ಹೋಗುವುದನ್ನು ತಡೆಯಲು ಆಗಿಲ್ಲ. ಮಕ್ಕಳು ಕಾಲ್ತುಳಿತಕ್ಕೆ ಸಿಲುಕಿದ್ದು, ಮಹಿಳೆಯರು ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದಿದ್ದಾರೆ, ಕೂಡಲೇ ಕೆಲವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಕೆಲವರಂತೂ ಸತ್ಸಂಗ ನಡೆದ ಭವನದ ಹೊರ ಭಾಗದಲ್ಲಿಯೇ ಬಿದ್ದು ಮೃತಪಟ್ಟಿರುವುದು ಕರುಳು ಹಿಂಡುವ ಹಾಗಿತ್ತು. ಮೃತಪಟ್ಟ ದೇಹಗಳನ್ನು ಬಸ್, ಕಾರುಗಳ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು.
ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು ಅವರನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಹಲವು ಮಕ್ಕಳು, ಕೆಲವ ರು ಪುರುಷರು ಹಾಗೂ ಹೆಚ್ಚಿನ ಸಂಖ್ಯೆಯವರು ಮಹಿಳೆಯರೇ.
ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಉಮೇಶ್ ಕುಮಾರ್ ತ್ರಿಪಾಠಿ ಅವರ ಪ್ರಕಾರ, ನಗರದಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ಕೆಲವರು ಅಸ್ವಸ್ಥಗೊಂಡಿದ್ಧಾರೆ ಎನ್ನುವ ಮಾಹಿತಿ ದೊರೆಯಿತು. ಗಾಯಾಳುಗಳಿಗೆ ಚಿಕಿತ್ಸೆ ನಡೆದಿದೆ. ಮೃತರ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಗುತ್ತದೆ ಎಂದು ಹೇಳಿದ್ಧಾರೆ.
ಎಟಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಅವರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಿದರು. ಘಟನೆಗೆ ನಿಖರ ಕಾರಣ ಏನು ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಹೆಚ್ಚು ಜನ ಸೇರಿದ್ದು ಈ ವೇಳೆ ಗೊಂದಲ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಎಂದು ವಿವರಿಸಿದರು.

ವಿಭಾಗ