ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸೂಪರ್ ಹರ್ಕ್ಯುಲಸ್‌ನ ಕಾರ್ಗತ್ತಲ ಕಾರ್ಯಾಚರಣೆ; ಶಸ್ತ್ರ ಚಿಕಿತ್ಸೆ ಯಶಸ್ವಿ, ಯೋಧನಿಗೆ ಮರಳಿ ಸಿಕ್ಕಿದ ಕೈ

ಸೂಪರ್ ಹರ್ಕ್ಯುಲಸ್‌ನ ಕಾರ್ಗತ್ತಲ ಕಾರ್ಯಾಚರಣೆ; ಶಸ್ತ್ರ ಚಿಕಿತ್ಸೆ ಯಶಸ್ವಿ, ಯೋಧನಿಗೆ ಮರಳಿ ಸಿಕ್ಕಿದ ಕೈ

ಲೇಹ್‌ನ ಫಾರ್ವರ್ಡ್‌ ಪಾಯಿಂಟ್‌ನಿಂದ ದೆಹಲಿಗೆ ಭಾರತೀಯ ವಾಯುಪಡೆಯ ಸೂಪರ್ ಹರ್ಕ್ಯುಲಸ್‌ನ ಕಾರ್ಗತ್ತಲ ಕಾರ್ಯಾಚರಣೆ ಗಮನಸೆಳೆದಿದೆ. ಏಪ್ರಿಲ್ 9 ರ ಈ ಕಾರ್ಯಾಚರಣೆಯ ಕಾರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಯೋಧನಿಗೆ ತುಂಡಾದ ಕೈ ಮರಳಿ ಸಿಕ್ಕಿದೆ. ಕಾರ್ಯಾಚರಣೆಯ 5 ಅಂಶಗಳ ವಿವರಣೆ ಇಲ್ಲಿದೆ.

ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೈ ಜೋಡಿಸುವ ಶಸ್ತ್ರಕ್ರಿಯೆ ಯಶಸ್ವಿಯಾದ ನಂತರ ವೈದ್ಯಕೀಯ ತಂಡದೊಂದಿಗೆ ಯೋಧ ಇರುವ ಫೋಟೋ. ಭಾರತೀಯ ವಾಯುಪಡೆ ಇದನ್ನು ಶೇರ್ ಮಾಡಿದೆ.
ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೈ ಜೋಡಿಸುವ ಶಸ್ತ್ರಕ್ರಿಯೆ ಯಶಸ್ವಿಯಾದ ನಂತರ ವೈದ್ಯಕೀಯ ತಂಡದೊಂದಿಗೆ ಯೋಧ ಇರುವ ಫೋಟೋ. ಭಾರತೀಯ ವಾಯುಪಡೆ ಇದನ್ನು ಶೇರ್ ಮಾಡಿದೆ. (IAF)

ನವದೆಹಲಿ: ಭಾರತೀಯ ವಾಯುಪಡೆಯ ಸೂಪರ್ ಹರ್ಕ್ಯುಲಸ್ ವಿಮಾನ ತಡರಾತ್ರಿ ನಡೆಸಿದ ಏರ್‌ಲಿಫ್ಟ್‌ ಕಾರ್ಯಾಚರಣೆ ಫಲವಾಗಿ ಯೋಧರೊಬ್ಬರ ತುಂಡಾಗಿದ್ದ ಕೈಯನ್ನು ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಜೋಡಿಸುವುದು ಸಾಧ್ಯವಾಗಿದೆ. ಈ ಕಾರ್ಯಾಚರಣೆ ವ್ಯಾಪಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಟ್ರೆಂಡಿಂಗ್​ ಸುದ್ದಿ

ಲಡಾಖ್‌ ಸೆಕ್ಟರ್‌ನಲ್ಲಿ ಯಂತ್ರೋಪಕರಣ ನಿರ್ವಹಿಸುತ್ತಿದ್ದಾಗ ಯೋಧರೊಬ್ಬರ ಕೈ ತುಂಡಾಗಿತ್ತು. ತುರ್ತು ವೈದ್ಯಕೀಯ ನೆರವು ಅಗತ್ಯವಿದ್ದ ಕಾರಣ ಅಲ್ಲಿಂದ ಭಾರತೀಯ ವಾಯುಪಡೆಯ ಸಿ 130 ಜೆ ವಿಮಾನದಲ್ಲಿ ಕ್ಷಿಪ್ರ ಕಾರ್ಗತ್ತಲ ಏರ್‌ಲಿಫ್ಟ್ ಕಾರ್ಯಾಚರಣೆ (dark night airlift) ನೆಡಸಲಾಗಿತ್ತು. ಈ ಘಟನೆ ಏಪ್ರಿಲ್ 9ರಂದು ನಡೆದಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಏಪ್ರಿಲ್ 12 ರಂದು ಭಾರತೀಯ ವಾಯುಪಡೆ ಈ ವಿವರನ್ನು ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.

ಭಾರತೀಯ ವಾಯುಪಡೆಯ ಟ್ವೀಟ್‌

“ಫಾರ್ವರ್ಡ್ ಏರಿಯಾದಲ್ಲಿರುವ ಯಂತ್ರವನ್ನು ನಿರ್ವಹಿಸುತ್ತಿದ್ದಾಗ ಭಾರತೀಯ ಸೇನಾ ಸಿಬ್ಬಂದಿಯೊಬ್ಬರ ಕೈ ತುಂಡಾಗಿತ್ತು. ತುಂಡಾಗಿದ್ದ ಕೈಯನ್ನು ಜೋಡಿಸುವುದಕ್ಕೆ 6 ರಿಂದ 8 ಗಂಟೆ ಒಳಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸಬೇಕಾಗಿತ್ತು. ಕಡಿಮೆ ಅವಧಿ ಇದ್ದ ಕಾರಣ, ಯೋಧನನ್ನು ಒಂದು ಗಂಟೆಯೊಳಗೆ ದೆಹಲಿಯ ಆರ್ ಆಂಡ್ ಆರ್‌ ಆಸ್ಪತ್ರೆಗೆ ಸ್ಥಳಾಂತರಿಸುವ ಕಾರ್ಯ ನಡೆಸಲಾಯಿತು. ಐಎಎಫ್‌ನಿಂದ ಲಡಾಖ್ ಸೆಕ್ಟರ್‌ನಿಂದ ನೈಟ್ ವಿಷನ್ ಗಾಗಲ್ಸ್ ಬಳಸಿಕೊಂಡು ಡಾರ್ಕ್ ನೈಟ್ ಏರ್‌ಲಿಫ್ಟ್ ಮಾಡಿದ ಕಾರಣ ಗಾಯಗೊಂಡ ಸಿಬ್ಬಂದಿಗೆ ತತ್‌ಕ್ಷಣವೇ ವೈದ್ಯಕೀಯ ಚಿಕಿತ್ಸೆ ದೊರಕುವುದು ಸಾಧ್ಯವಾಯಿತು. ವೈದ್ಯಕೀಯ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಯೋಧ ಈಗ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಭಾರತೀಯ ವಾಯುಪಡೆ ನಡೆಸಿದ ಡಾರ್ಕ್‌ ನೈಟ್ ಏರ್‌ಲಿಫ್ಟ್ ಆಪರೇಷನ್ ಕುರಿತು 5 ಅಂಶಗಳು

1) ಲಡಾಖ್‌ನಲ್ಲಿದ್ದ ಕೈ ತುಂಡಾಗಿ ಗಾಯಗೊಂಡ ಸೈನಿಕನಿಗೆ ಚಿಕಿತ್ಸೆ ನೀಡಲು ಲೇಹ್‌ನಲ್ಲಿರುವ ಮಿಲಿಟರಿ ಗ್ಯಾರಿಸನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೈಯನ್ನು ಜೋಡಿಸುವುದಕ್ಕೆ ಅಗತ್ಯ ವೈದ್ಯೋಪಕರಣಗಳು ಲಭ್ಯವಿಲ್ಲದ ಕಾರಣ, ಕೂಡಲೇ ದೆಹಲಿಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ಸಾಗಿಸುವ ನಿರ್ಧಾರವನ್ನು ಸೇನೆ ಕೈಗೊಂಡಿತು.

2) ರಾತ್ರಿ ಕಾರ್ಯಾಚರಣೆಯಾದ ಕಾರಣ ಸೂಪರ್ ಹರ್ಕ್ಯುಲಸ್‌ ವಿಮಾನವನ್ನು ಈ ಕಾರ್ಯಾಚರಣೆಗೆ ಬಳಸಲು ಭಾರತೀಯ ವಾಯುಪಡೆ ತೀರ್ಮಾನಿಸಿತು. ಘಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಿಂದ ಅದನ್ನು ಕರೆಯಿಸಿಕೊಳ್ಳಲಾಗಿತ್ತು. ನೈಟ್ ವಿಷನ್ ಉಪಕರಣ ಬಳಸಿ ಅದನ್ನು ಲೇಹ್‌ನ ವಾಯುನೆಲೆಯಲ್ಲಿ ಇಳಿಸಲಾಯಿತು.

3) ಸೂಪರ್ ಹರ್ಕ್ಯುಲಸ್ ವಿಮಾನದ ಮೂಲಕ ಲೇಹ್‌ನಿಂದ ದೆಹಲಿಯ ಪಾಲಂ ವಾಯುನೆಲೆಗೆ ಗಾಯಗೊಂಡ ಯೋಧನನ್ನು ಕರೆದೊಯ್ಯಲಾಯಿತು. ನಿರ್ಣಾಯಕ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಇದ್ದ ಕಡಿಮೆ ಸಮಯಾವಾಕಾಶ ಇದ್ದ ಕಾರಣ ಈ ರೀತಿ ಮಾಡಲಾಯಿತು.

4) ಭಾರತೀಯ ಸೇನಾಪಡೆಯ ಮನವಿ ಮತ್ತು ಸೇನಾ ಘಟಕಗಳೊಳಗಿನ ಸಮನ್ವಯದ ಕಾರಣ ನಿಗದಿತ ಸಮಯದಲ್ಲಿ ಕ್ಷಿಪ್ರವಾಗಿ ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿತು.

5) ಲೇಹ್‌ನಲ್ಲಿ ಯೋಧನ ಕೈ ತುಂಡಾದ ಬಳಿಕ 4 ಗಂಟೆಗಳ ಒಳಗಾಗಿ ಈ ಎಲ್ಲ ಕಾರ್ಯಾಚರಣೆಗಳೂ ಮುಗಿದಿದ್ದವು. ನಿರ್ಣಾಯಕ ಶಸ್ತ್ರಚಿಕಿತ್ಸೆಯೂ ನಡೆದಿದ್ದು, ತುಂಡಾಗಿದ್ದ ಕೈಯನ್ನು ಜೋಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಯೋಧನ ಆರೋಗ್ಯ ಚೇತರಿಕೆ ಕಂಡಿದೆ.

ಭಾರತೀಯ ವಾಯುಪಡೆಯ ಈ ಟ್ವೀಟ್‌ಗೆ ಬಹಳ ಜನ ಸ್ಪಂದಿಸಿದ್ದು 1.8 ಲಕ್ಷ ಜನ ವೀಕ್ಷಿಸಿದ್ದಾರೆ. 100 ಜನ ಕಾಮೆಂಟ್ ಮಾಡಿದ್ದಾರೆ. ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, 600ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

IPL_Entry_Point