Accident News: ರಸ್ತೆ ಬದಿ ನಿಂತವರಿಗೆ ಕಾರು ಡಿಕ್ಕಿ, ಗರ್ಭಿಣಿ, ಮಗು ಸೇರಿ 4 ಮಂದಿ ದುರ್ಮರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Accident News: ರಸ್ತೆ ಬದಿ ನಿಂತವರಿಗೆ ಕಾರು ಡಿಕ್ಕಿ, ಗರ್ಭಿಣಿ, ಮಗು ಸೇರಿ 4 ಮಂದಿ ದುರ್ಮರಣ

Accident News: ರಸ್ತೆ ಬದಿ ನಿಂತವರಿಗೆ ಕಾರು ಡಿಕ್ಕಿ, ಗರ್ಭಿಣಿ, ಮಗು ಸೇರಿ 4 ಮಂದಿ ದುರ್ಮರಣ

ರಾಜಸ್ಥಾನದ ಡೆಗಾನ ಎಂಬಲ್ಲಿ ರಸ್ತೆ ಬದಿ ನಿಂತವರ ಮೇಲೆ ಕಾರು ಹರಿದು ಗರ್ಭಿಣಿ, ಮಗು ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ರಾಜಸ್ಥಾನದಲ್ಲಿ ಅಪಘಾತ ನಡೆದ ಸ್ಥಳ
ರಾಜಸ್ಥಾನದಲ್ಲಿ ಅಪಘಾತ ನಡೆದ ಸ್ಥಳ

ಜೈಪುರ: ತುತ್ತಿನ ಚೀಲ ತುಂಬಿಸಿಕೊಳ್ಳಲೆಂದು ಹೊರಡಲು ರಸ್ತೆ ಬದಿಯಲ್ಲಿ ನಿಂತಿದ್ದ ಗರ್ಭಿಣಿ ಸೇರಿ ನಾಲ್ವರ ಮೇಲೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆಯಿದು. ಎಂಟು ತಿಂಗಳ ತುಂಬಿ ಗರ್ಭಿಣಿ ಆಕೆಯ ಎರಡು ವರ್ಷದ ಮಗು, ಪತಿ, ಸಂಬಂಧಿಯೂ ಜೀವ ಕಳೆದುಕೊಂಡಿದ್ದಾರೆ. ಇದು ನಡೆದಿರುವುದು ರಾಜಸ್ಥಾನದಲ್ಲಿ. ಡಿಕ್ಕಿ ಹೊಡೆದು ಪರಾರಿಯಾಗಿರುವ ಕಾರು ಚಾಲಕನ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಾಜಸ್ಥಾನದ ಡೆಗಾನ ಎಂಬಲ್ಲಿ ಕೂಲಿಕಾರ್ಮಿಕರದ ಚೋಟುರಾಮ್‌, ಆತನ ಪತ್ನಿ ಗರ್ಭಿಣಿ ಸುಮನ್‌, ಪುತ್ರ ಹೃತ್ವಿಕ್‌ ಹಾಗೂ ಮಹಿಳಾ ಸಂಬಂಧಿಯೊಬ್ಬರು ಕೂಲಿ ಕೆಲಸಕ್ಕೆಂದು ಹೊರಟಿದ್ದರು. ಮದುವೆಯೊಂದರಲ್ಲಿ ಕೆಲಸ ಇದ್ದುದರಿಂದ ಮಧ್ಯಾಹ್ನ ಸ್ಥಳಕ್ಕೆ ಹೋಗಬೇಕಿತ್ತು. ಮದುವೆ ಗುತ್ತಿಗೆ ಪಡೆದವರ ಗುಂಪಿನೊಂದಿಗೆ ಎರಡು ದಿನ ಕೆಲಸ ಮುಗಿಸಿ ಬರಬೇಕಿತ್ತು.

ಇದಕ್ಕಾಗಿ ಬೆಳಿಗ್ಗೆ ಬೇಗನೇ ಎದ್ದು ಡೆಗಾನ ಬಳಿ ಬಂದು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಅಡ್ಡಾದಿಡ್ಡಿ ಚಲಿಸಿ ನಾಲ್ವರ ಮೇಲೂ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಾಯಗೊಂಡು ನರಳುತ್ತಿದ್ದವರನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ನೆರವಾದರು. ಪೊಲೀಸರು ಕೂಡಲೇ ಧಾವಿಸಿ ಸ್ಥಳ ಮಹಜರು ಮಾಡಿ ಮೊಕದ್ದಮೆ ದಾಖಲಿಸಿಕೊಂಡಿದ್ಧಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆತ ರಭಸದಲ್ಲಿ ಬಂದಿದ್ದು, ಏಕಾಏಕಿ ಡಿಕ್ಕಿ ಹೊಡೆದಿದ್ಧಾನೆ. ಡಿಕ್ಕಿ ಹೊಡೆದು ಅಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನೋಡಿದ್ದಾನೆ. ಆದರೆ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಆತ ಪರಾರಿಯಾಗಿರಬಹುದಾದ ಮಾರ್ಗವನ್ನು ಸಿಸಿ ಕ್ಯಾಮರಾದ ಮೂಲಕ ಪತ್ತೆ ಮಾಡಲಾಗುತ್ತಿದ್ದು, ತನಿಖೆ ತೀವ್ರಗೊಂಡಿದೆ. ಮೃತಪಟ್ಟಿರುವ ನಾಲ್ವರ ದೇಹಗಳ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.