Explained: ತಮಿಳುನಾಡಿನಲ್ಲಿ ಬಿಜೆಪಿ ಜತೆ ಮೈತ್ರಿ ಕಡಿದುಕೊಂಡ ಎಐಎಡಿಎಂಕೆ; ದ್ರಾವಿಡ ಪಕ್ಷಕ್ಕಿಂತ ಬಿಜೆಪಿಗೇ ಹೆಚ್ಚು ನಷ್ಟ
ತಮಿಳುನಾಡಿನಲ್ಲಿ ನೆಲೆಯೇ ಇಲ್ಲದ ಬಿಜೆಪಿಗೆ ಚುನಾವಣೆಗಳನ್ನು ಎದುರಿಸಲು ಒಬ್ಬ ಸಂಗಾತಿ ಬೇಕಿತ್ತು. ಜಯಲಲಿತಾ ನಿಧನಾನಂತರ ಎಐಎಡಿಎಂಕೆ ಬಲಿಷ್ಠ ನಾಯಕತ್ವ ಇಲ್ಲದೆ ಮತ್ತು ಸಂಘಟನೆಯ ಕೊರತೆಯಿಂದ ಸೊರಗಿತ್ತು. ಹೀಗೆ ಎರಡೂ ಪಕ್ಷಗಳಿಗೆ ಮೈತ್ರಿಯಿಂದ ಪರಸ್ಪರ ಲಾಭವೇ ಆಗಿತ್ತು. ಆದರೆ ಮೈತ್ರಿ ಈಗ ಮುರಿದು ಬಿದ್ದಿದೆ.

ಅತ್ತ ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಎನ್‍ಡಿಎ ಮೈತ್ರಿಕೂಟವನ್ನು ಸೇರುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಇತ್ತ ದ್ರಾವಿಡನಾಡು ತಮಿಳುನಾಡಿನಲ್ಲಿ ಎಐಎಡಿಎಂಕೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿರುವುದಾಗಿ ಪ್ರಕಟಿಸಿತು. ತಮಿಳುನಾಡಿನಲ್ಲಿ ನೆಲೆಯೇ ಇಲ್ಲದ ಬಿಜೆಪಿಗೆ ಚುನಾವಣೆಗಳನ್ನು ಎದುರಿಸಲು ಒಬ್ಬ ಸಂಗಾತಿ ಬೇಕಿತ್ತು. ಜಯಲಲಿತಾ ನಿಧನಾನಂತರ ಎಐಎಡಿಎಂಕೆ ಬಲಿಷ್ಠ ನಾಯಕತ್ವ ಇಲ್ಲದೆ ಮತ್ತು ಸಂಘಟನೆಯ ಕೊರತೆಯಿಂದ ಸೊರಗಿತ್ತು. ಹೀಗೆ ಎರಡೂ ಪಕ್ಷಗಳಿಗೆ ಮೈತ್ರಿಯಿಂದ ಪರಸ್ಪರ ಲಾಭವೇ ಆಗಿತ್ತು. ಆದರೆ ಮೈತ್ರಿ ಮುರಿದು ಬಿದ್ದಿದೆ.
ಟ್ರೆಂಡಿಂಗ್ ಸುದ್ದಿ
ಮೈತ್ರಿ ಕಡಿತಕ್ಕೆ ಕಾರಣಗಳೇನು?
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಮೈತ್ರಿ ಕಡಿದುಕೊಳ್ಳುತ್ತಿರುವಿದಾಗಿ ಘೋಷಣೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನದಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ಹರಿಹಾಯ್ದಿದ್ದಾರೆ. ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಸಂಪೂರ್ಣವಾಗಿ ನೆಲ ಕಚ್ಚಿತ್ತು. ಸಮರ್ಥ ನಾಯಕರಿಲ್ಲದೆ ಪಕ್ಷ ಕಳೆಗುಂದಿತ್ತು. ಇದ್ದ ನಾಯಕರು ಯಾವುದೇ ರೀತಿಯಲ್ಲೂ ಸ್ಟಾಲಿನ್ ಅಥವಾ ಇತರ ನಾಯಕರಿಗೆ ಸರಿ ಸಮಾನವಾಗಿರಲಿಲ್ಲ. ಆದರೆ ಈಗ ಎಐಎಡಿಎಂಕೆ ಪರಿಸ್ಥಿತಿ ಸುಧಾರಿಸಿದೆ. ಪಳನಿಸ್ವಾಮಿ ಸಮರ್ಥ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಅವಶ್ಯಕತೆ ಕಂಡು ಬಂದಂತೆ ಈಗ ಬಿಜೆಪಿ ನೆರವು ಬೇಕಿಲ್ಲ. ಸ್ವತಂತ್ರವಾಗಿ ಸಂಘಟನೆ ನಡೆಸುವ ಚತುರತೆ ಮತ್ತು ಸಾಮಥ್ರ್ಯ ಪಳನಿಸ್ವಾಮಿ ಅವರಿಗಿದೆ. ದ್ರಾವಿಡನಾಡಿನಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಜೊತೆಯಲ್ಲಿ ಹೋದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ರಾಜಕೀಯವಾಗಿ ಎಐಎಡಿಎಂಕೆ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ ಮತ್ತು ಚುನಾವಣೆಯಲ್ಲಿ ಯಾವುದೇ ಲಾಭ ಆಗುವುದಿಲ್ಲ ಎನ್ನುವುದು ಅವರಿಗೆ ಮನದಟ್ಟಾಗಿದೆ ಎಂದು ವಿಶ್ಲೇಶಿಸಲಾಗುತ್ತಿದೆ.
ಸನಾತನ ಧರ್ಮ ವಿವಾದವೂ ಕಾರಣ
ತಮಿಳುನಾಡು ಸಚಿವ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಅವರ ಸನಾತನ ಧರ್ಮ ಕುರಿತ ಹೇಳಿಕೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು.. ಆಗಲೇ ಹೇಳಿದಂತೆ ಇಂತಹ ಭಾವನಾತ್ಮಕ ವಿಷಯಗಳೆಲ್ಲಾ ತಮಿಳುನಾಡು ಮತ್ತು ಕೇರಳದಲ್ಲಿ ಅಷ್ಟಾಗಿ ನಡೆಯುವುದಿಲ್ಲ. ಬಿಜೆಪಿ ಪ್ರತಿಕ್ರಿಯಿಸುತ್ತಿದ್ದ ರೀತಿ ಎಐಎಡಿಎಂಕೆಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು ಎಐಎಡಿಎಂಕೆ ಮುಖಂಡರು ಉದಯನಿಧಿಯನ್ನು ಟೀಕಿಸಿದ್ದಾರೆಯೇ ಹೊರತು ಸನಾತನ ಧರ್ಮ ಕುರಿತ ಅವರ ಹೇಳಿಕೆಯನ್ನು ಟೀಕಿಸುವ ಗೋಜಿಗೆ ಹೋಗಿಲ್ಲ.
ಧಕ್ಕೆ ತಂದ ಅಣ್ಣಾಮಲೈ ಹೇಳಿಕೆಗಳು
ಮಾಜಿ ಪೊಲೀಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಪೊಲೀಸ್ ಸ್ಟೈಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಿತ್ರ ಪಕ್ಷವನ್ನು ಬಿಡಿ, ಸ್ವತಃ ಬಿಜೆಪಿ ಕಾರ್ಯಕರ್ತರೇ ಇವರನ್ನು ಸಹಿಸಿಕೊಳ್ಳುತ್ತಿಲ್ಲ. ತಮಿಳುನಾಡಿನ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರನ್ನು ಕುರಿತು ಅಣ್ಣಾಮಲೈ ಹೇಳಿಕೆಗಳು ಬಿಜೆಪಿಗೂ ಹಾನಿಯುಂಟು ಮಾಡಿವೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳ ಭ್ರಷ್ಟಾಚಾರ ಕುರಿತು ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಪರೋಕ್ಷವಾಗಿ ಜಯಲಲಿತಾ ಅವರನ್ನು ಉದ್ದೇಶಿಸಿ ಹೇಳಿದ್ದರು. ಮತ್ತೊಂದು ಕಡೆ ಅಣ್ಣಾಮಲೈ ಮಾತನಾಡುತ್ತಾ ನನ್ನ ಪತ್ನಿ ಜಯಲಲಿತಾ ಅವರಿಗಿಂತ ನೂರು ಪಟ್ಟು ಪ್ರಭಾವಿ ಎಂದೂ ಹೇಳಿದ್ದರು. ಈ ಮೂಲಕ ಎಐಎಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಣ್ಣಾಮಲೈ ಕಾರಣಕ್ಕಾಗಿ ನೂರಾರು ಬಿಜೆಪಿ ಮುಖಂಡರು ಅನ್ಯ ಪಕ್ಷಗಳತ್ತ ವಲಸೆ ಹೋಗಿದಾರೆ. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖಂಡ ನಿರ್ಮಲ್ ಕುಮಾರ್ ಅವರು ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿಯೇ ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲೇ ಎರಡೂ ಪಕ್ಷಗಳ ನಡುವೆ ಬಿರುಕು ಮೂಡುತ್ತಿರುವುದು ಕಂಡು ಬಂದಿತ್ತು. ಆಗ ಎಐಎಡಿಎಂಕೆ ನಾಯಕ ಸಿ.ಪೊನ್ನಿಯನ್, ಎಐಎಡಿಎಂಕೆ ಪಕ್ಷವನ್ನು ಬಲಿಕೊಟ್ಟು ಬಿಜೆಪಿ ಕಟ್ಟಲು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದರು. ಈಗ ಪಳನಿಸ್ವಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಣ್ಣಾಮಲೈ ಪ್ರತಿಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ಕಾರಣಕ್ಕಾಗಿ ಈರೋಡ್ ಉಪ ಚುನಾವಣೆಯಲ್ಲಿ ಎನ್‍ಡಿಎ ಒಕ್ಕೂಟ ಎನ್ನುವುದಕ್ಕೆ ಬದಲಾಗಿ ಎಐಎಡಿಎಂಕೆ ಒಕ್ಕೂಟ ಎಂದು ಬ್ಯಾನರ್ ಹಾಕಲಾಗಿತ್ತು.
ಅಣ್ಣಾ ಡಿಎಂಕೆ ಬೆಂಬಲವಿಲ್ಲದೆ ಪಕ್ಷವನ್ನು ಸಂಘಟಿಸಿ ಹೆಸರು ಮಾಡಬೇಕು ಮತ್ತು ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಬೇಕು ಎನ್ನುವುದು ಅಣ್ಣಾಮಲೈ ಉದ್ದೇಶ ಎಂದು ಅವರ ಆಪ್ತರು ಹೇಳುತ್ತಾರೆ.
ಮರಳಿ ಯತ್ನವ ಮಾಡುತ್ತಿರುವ ಬಿಜೆಪಿ
ಬಿಜೆಪಿ ವರಿಷ್ಠರು ಸುಮ್ಮನೆ ಕುಳಿತಿಲ್ಲ. ದ್ರಾವಿಡರ ಬೆಂಬಲ ಗಳಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ವಿವಿಧ ಕಾರ್ಯಕ್ರಮಗಳ ಮೂಲಕ ವಿಶ್ವಾಸಗಳಿಸುವ ಕೆಲಸ ಮಾಡುತ್ತಿದೆ. ಕಾಶಿ ತಮಿಳ್ ಸಂಗಮಂ ಇಂತಹ ಒಂದು ಕಾರ್ಯಕ್ರಮ. ಸಂಸತ್ ಭವನ ಉದ್ಘಾಟನೆ ಸಂದರ್ಭದಲ್ಲಿ ಸೆಂಗೋಲ್ ಪ್ರದರ್ಶನ ಮಾಡಿದ್ದೂ ಓಲೈಕೆಯ ಭಾಗ ಎಂದು ರಾಜಕೀಯ ವಿಶ್ಲೇಷಣಾಕಾರರು ಹೇಳುತ್ತಾರೆ. ಪ್ರಧಾನಿ ಮೋದಿ ಅವರೇ ತಮಿಳುನಾಡಿನಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗಳೂ ಹಬ್ಬಿವೆ.
ಎಐಎಡಿಎಂಕೆ ದೂರ ಸರಿದಿದ್ದರಿಂದ ಬಿಜೆಪಿಗೆ ನಷ್ಟ ಹೆಚ್ಚು ಎನ್ನುವುದರಲ್ಲಿ ಎರಡು ಮಾತಿಲ್ಲ. ಎಐಎಡಿಎಂಕೆ ಪಕ್ಷಕ್ಕೆ 2024ರ ಲೋಕಸಭಾ ಚುನಾವಣೆಗಿಂತಲೂ 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಮುಖ್ಯವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದ್ದು ಡಿಎಂಕೆಗೆ ಹೆಚ್ಚು ಲಾಭ ಎಂದು ರಾಜಕೀಯ ಪಂಡಿತರ ಲೆಕ್ಕಾಚಾರ.
(ವರದಿ: ಎಚ್. ಮಾರುತಿ)