TTD Muslim Devotees: ತಿರುಪತಿ ದೇಗುಲದಲ್ಲಿ ಶ್ರೀವಾರಿ ಸೇವೆಗೆ ಅವಕಾಶ ಕೇಳಿದ ಮುಸ್ಲೀಂ ಭಕ್ತ; ಅನುಮತಿ ದೊರೆಯಿತೇ?
ಆಂಧ್ರಪ್ರದೇಶದ ಪ್ರಸಿದ್ದ ದೇಗುಲ ತಿರುಪತಿಯಲ್ಲಿ ಶ್ರೀವಾರಿ ಸೇವೆಗೆ ಮುಸ್ಲೀಂ ಭಕ್ತರಿಂದ ಬೇಡಿಕೆ ಬಂದಿದೆ. ಮೊದಲ ಬಾರಿ ಬಂದಿರುವ ಇಂತಹ ಬೇಡಿಕೆ ಕುರಿತು ಟಿಟಿಡಿ ತೀರ್ಮಾನ ಕೈಗೊಳ್ಳಲು ಸಮಯ ಕೇಳಿದೆ.
ತಿರುಪತಿ: ಭಾರತದ ಪ್ರಸಿದ್ದ ಧಾರ್ಮಿಕ ಕ್ಷೇತ್ರ, ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ ಕಚೇರಿಗೆ (TTD)ಕರೆಯೊಂದು ಬಂದಿತ್ತು. ಕರೆ ಸ್ವೀಕರಿಸಿದವರು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ( EO) ಧರ್ಮಾರೆಡ್ಡಿ. ಮುಸ್ಲೀಂ ಭಕ್ತರು ಶ್ರೀವಾರಿ ಸೇವೆ ಮಾಡಬೇಕು ಎಂದುಕೊಂಡಿದ್ದೇವೆ. ಅನುಮತಿ ಕೊಡಿ ಎನ್ನುವುದು ಅವರ ಬೇಡಿಕೆಯಾಗಿತ್ತು. ಕರೆ ಮಾಡಿದ್ದವರು ಆಂಧ್ರಪ್ದೇಶ ನಾಯ್ಡು ಪೇಟಾದ ನಿವಾಸಿ ಹುಸೇನ್ ಭಾಷಾ ಎನ್ನುವವರು. ಹಿಂದೂಯೇತರರು ಶ್ರೀವಾರಿ ಸೇವೆಯಲ್ಲಿ ಪಾಲ್ಗೊಳ್ಳಲು ಬಯಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಇಒ, ಹುಸೇನ್ ಅವರ ಪ್ರಶ್ನೆಯನ್ನು ಪರಿಶೀಲಿಸುವುದಾಗಿ ಉತ್ತರಿಸಿದರು. ಈ ಮನವಿಯನ್ನು ಅವರು ಸಮಿತಿ ಅಧ್ಯಕ್ಷರ ಗಮನಕ್ಕೆ ತಂದರು. ಇದೇ ವೇಳೆ ಟಿಟಿಡಿ ಆಶ್ರಯದಲ್ಲಿ ಆಂಧ್ರದಲ್ಲಿ ನಡೆದಿರುವ ಧರ್ಮಚಿಂತಕರ ಸಭೆ ಆಯೋಜನೆಗೊಂಡಿದ್ದರಿಂದ ಅಲ್ಲಿಯೂ ಇದು ಸುಧೀರ್ಘ ಚರ್ಚೆಯಾಯಿತು.
ಸಭೆಯಲ್ಲೂ ವಿಭಿನ್ನ ಅಭಿಪ್ರಾಯ
ಇದರ ಮಧ್ಯೆ ಟಿಟಿಡಿ ಮಂಡಳಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ದೇಶಾದ್ಯಂತ ಪೀಠಾಧಿಪತಿಗಳು, ಹಿಂದೂ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಧರ್ಮಚಿಂತಕರ ಸಭೆಯಲ್ಲೂ ಈ ಪ್ರಸ್ತಾಪಿಸಲಾಯಿತು.
ಸಮಾವೇಶದಲ್ಲಿ ಮಾತನಾಡಿದ ಕೆಲವರು ಎಚ್ಚರಿಕೆಯಿಂದಲೇ ಅಭಿಪ್ರಾಯ ವ್ಯಕ್ತಪಡಿಸಿದರು. ಹುಸೇನ್ ಭಾಷಾ ಅವರ ವಿನಂತಿ, ಉದ್ದೇಶ ಕುರಿತು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ ಎಂದು ಕೆಲವರು ಸೂಚಿಸಿದರು. ಎಲ್ಲಾ ಭಾರತೀಯರು ಹಿಂದೂಗಳು ಅಥವಾ ಹಿಂದೂ ಮೂಲದವರು, ಶತಮಾನಗಳಿಂದ ವಿವಿಧ ಕಾರಣಗಳಿಗಾಗಿ ಇಸ್ಲಾಂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಭಾರತದಲ್ಲಿ ಅನಾದಿಕಾಲದಿಂದಲೂ ಹಿಂದೂ ಧರ್ಮವು ಪ್ರಮುಖ ಧರ್ಮವಾಗಿದೆ. ವಿದೇಶಿ ಮಿಷನರಿಗಳ ಆಗಮನದಿಂದ ಕೆಲವು ಬದಲಾವಣೆಗಳು, ಮತಾಂತರಗಳು ನಡೆದವು. ಮತಾಂತರಗೊಂಡಿರುವ ನಮ್ಮ ಸಹೋದರರು, ಸಹೋದರಿಯರು ಸನಾತನ ಧರ್ಮವನ್ನು ಸ್ವೀಕರಿಸಲು ಬಯಸಿದರೆ ಅಥವಾ ಸೇವೆಯಂತಹ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಬಯಸಿದರೆ, ಅವರಿಗೆ ಸ್ವಾಗತವಿದೆ. ಆದರೆ ಸರಿಯಾದ ದೀಕ್ಷೆ, ತರಬೇತಿ ಇರಬೇಕು - ಗೊತ್ತಿದ್ದೂ, ತಿಳಿಯದೆಯೂ - ನಮ್ಮ ಆಚಾರಗಳ ಬಗ್ಗೆ ಅಗೌರವ ತೋರಿದರೆ, ನಂಬಿಕೆಯು ಭಾವನೆಗಳನ್ನು ನೋಯಿಸುತ್ತದೆ. ಮುಂದೆ ಅನಗತ್ಯ ಅಪಶ್ರುತಿಯನ್ನು ಉಂಟುಮಾಡಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಯಾವುದೇ ಸ್ಪಷ್ಟ ನಿರ್ಧಾರ ಮಾತ್ರ ಕೈಗೊಳ್ಳಲಿಲ್ಲ.
ವಿವಾದವಿಲ್ಲ, ಬಗೆಹರಿಸುತ್ತೇವೆ: ಟಿಟಿಡಿ ಅಧ್ಯಕ್ಷ
ಈ ವಿಚಾರದಲ್ಲಿ ಯಾವುದೇ ವಿವಾದಕ್ಕೆ ಅವಕಾಶವಿಲ್ಲ. ನಾವು ಅವರ ವಿನಂತಿಯನ್ನು ಪರಿಶೀಲಿಸುತ್ತಿದ್ದೇವೆ. ಅಷ್ಟದಳ ಪಾದ ಪದ್ಮಾರ್ಚನೆ, ಮಂಗಳವಾರದಂದು ದೇವಾಲಯದಲ್ಲಿ ದೈವೀಕರಣದ ಪಠಣವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಭಗವಾನ್ ಬಾಲಾಜಿಗೆ ಉಡುಗೊರೆಯಾಗಿ ನೀಡಿದ 108 ಚಿನ್ನದ ಹೂವುಗಳಿಂದ ನಡೆಸಲಾಗುತ್ತದೆ ಎಂದು ಇಲ್ಲಿ ಉಲ್ಲೇಖಿಸಬೇಕು. ಆದರೆ ಈ ಹಿಂದೆ ಬೇರೆ ಧರ್ಮದ ಯಾರೂ ನಮಗೆ ಇಂತಹ ವಿನಂತಿಯನ್ನು ಮಾಡಿರಲಿಲ್ಲ. ಇಲ್ಲಿಯವರೆಗೆ, ನಾವು ಈ ಸೇವೆಗೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ. ಹಿಂದೂ ಸಂಪ್ರದಾಯವನ್ನು ಅನುಸರಿಸುವವರನ್ನು ಮಾತ್ರ ನಾವು ಶ್ರೀವಾರಿ ಸೇವಕರು ಎಂದು ಸ್ವೀಕರಿಸುತ್ತೇವೆ. ಅದನ್ನು ಹುಸೇನ್ ಅವರಿಗೆ ತಿಳಿಸಿ ಅವರಿಂದ ಅಭಿಪ್ರಾಯ ಬಂದ ಬಳಿಕ ತೀರ್ಮಾನಿಸುತ್ತೇವೆ. ಮುಸ್ಲಿಂ ಭಕ್ತರ ಮನವಿಯನ್ನು ಕೂಲಂಕಷವಾಗಿ ಚರ್ಚಿಸಿ ಅನುಮೋದನೆಗಾಗಿ ಟಿಟಿಡಿ ಟ್ರಸ್ಟಿಗಳ ಮುಂದೆ ಇಡುತ್ತೇವೆ ಎಂದು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ದಿ ಪ್ರಿಂಟ್‌ಗೆ ತಿಳಿಸಿದರು.
ಸರ್ಕಾರದ ಹಿಂದೂ ನಿಲುವು
ಪ್ರಸ್ತುತ ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿರುವ ರಾಜ್ಯ-ಸರ್ಕಾರದ ನಿಯಂತ್ರಿತ ಸಂಸ್ಥೆಯಾದ ಟಿಟಿಡಿಯು ನಡೆಸುವ ಮೂರು ದಿನಗಳ 'ಧಾರ್ಮಿಕ ಸದಸ್' ಪ್ರಾರಂಭವಾಗುವ ಒಂದು ದಿನದ ಮೊದಲು ಹುಸೇನ್ ಅವರ ವಿನಂತಿಯು ಹಿಂದೂ ನಂಬಿಕೆಯನ್ನು ಪ್ರಚಾರ ಮಾಡುವ ಪ್ರಯತ್ನಗಳ ಭಾಗವಾಗಿ ಬಂದಿದೆ ಎನ್ನುವ ವಿಶ್ಲೇಷಣೆ ರಾಜಕೀಯವಾಗಿಯೂ ನಡೆದಿದೆ.
ಏನಿದು ಶ್ರೀವಾರಿ ಸೇವೆ
ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾದ ಬಾಲಾಜಿ ದೇವಸ್ಥಾನಕ್ಕೆ ದಿನಕ್ಕೆ ಸುಮಾರು 70,000 ಯಾತ್ರಿಗಳು ಭೇಟಿ ನೀಡುತ್ತಾರೆ. ಕೆಲವು ಪ್ರಮುಖ ದಿನಗಳು ಮತ್ತು ರಜಾದಿನ, ವಾರಾಂತ್ಯಗಳಲ್ಲಿ ಈ ಸಂಖ್ಯೆಯು ಒಂದು ಲಕ್ಷವನ್ನೂ ದಾಟುತ್ತದೆ. ಎಲ್ಲ ಧರ್ಮೀಯರೂ ದೇಗುಲಕ್ಕೆ ಭೇಟಿ ನೀಡುತ್ತಾರೆ.
ತಿರುಮಲ ಬೆಟ್ಟದಲ್ಲಿ ಜನಸಂದಣಿ ನಿರ್ವಹಣೆ, ಕೊಠಡಿ ಹಂಚಿಕೆ, ಸರತಿ ಸಾಲಿನಲ್ಲಿ ಆಹಾರ ವಿತರಣೆ ಮತ್ತು ಇತರ ಕರ್ತವ್ಯಗಳಲ್ಲಿ ಟಿಟಿಡಿ ಸಿಬ್ಬಂದಿಗೆ ಸಹಾಯ ಮಾಡುವ ಮೂಲಕ ದೇಶಾದ್ಯಂತದ ಸುಮಾರು 2,500 ದಾಖಲಾದ ಭಕ್ತರು ಪ್ರತಿದಿನ ಸಲ್ಲಿಸುವ ಸ್ವಯಂಪ್ರೇರಿತ ಸೇವೆಯೇ ‘ಶ್ರೀವಾರಿ ಸೇವೆ’. ಶ್ರೀವಾರಿ ಸೇವಕರು "ಮಾನವ ಸೇವೆಯೇ, ಮಾಧವ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಾರೆ. ದೇವಸ್ಥಾನದ ಸಮೀಪವಿರುವ ಎರಡು ಬೃಹತ್ ಸೇವಾ ಸದನಗಳಲ್ಲಿ ಒಂದು ವಾರದವರೆಗೆ ತಂಗುವ ಈ ಸೇವಕರಿಗೆ ಟ್ರಸ್ಟ್ ಊಟ ಮತ್ತು ವಸತಿಯನ್ನು ಒದಗಿಸುವುದು ಈ ಸೇವೆ ವಿಶೇಷ.