Transporters Strike: ಹೊಸ ಹಿಟ್ ಆಂಡ್ ರನ್ ಕಾನೂನು ವಿರೋಧಿಸಿ 3 ದಿನಗಳ ಸಾರಿಗೆ ಮುಷ್ಕರ; 10 ಅಂಶಗಳಲ್ಲಿ ಪ್ರತಿಭಟನೆಯ ಚಿತ್ರಣ
ಭಾರತದ ಉದ್ದಗಲಕ್ಕೂ ಸೋಮವಾರದಿಂದ ಆರಂಭವಾದ 3 ದಿನಗಳ ಸಾರಿಗೆ ಮುಷ್ಕರವು ಮುಂದಿನ ದಿನಗಳಲ್ಲಿ ಇಂಧನ ಕೇಂದ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಮತ್ತು ಹಣ್ಣು ಮತ್ತು ತರಕಾರಿ ಪೂರೈಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೊಸ ಗುದ್ದೋಡು (Hit and Run) ಕಾನೂನು ವಿರೋಧಿಸಿ ಮುಷ್ಕರ ನಡೆಯುತ್ತಿದೆ. 10 ಅಂಶಗಳಲ್ಲಿ ಈ ವಿದ್ಯಮಾನದ ಚಿತ್ರಣ.
ಮುಂಬಯಿ: ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕಾರವಾಗಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿರುವ ಗುದ್ದೋಡು ಕಾನೂನು ಕಠಿಣವಾಗಿದ್ದು, ವಾಹನ ಚಾಲಕರ ಹಿತವನ್ನು ಕಡೆಗಣಿಸಿದೆ ಎಂದು ಆಪಾದಿಸಿ ಟ್ರಕ್, ಟ್ಯಾಕ್ಸಿ, ಬಸ್ ಸೇರಿ ಸಾರಿಗೆ ಚಾಲಕರು ಸೋಮವಾರ ಪ್ರತಿಭಟನೆ ಶುರುಮಾಡಿದ್ದಾರೆ.
ಈ ಪ್ರತಿಭಟನೆಯ ಮೂರು ದಿನ ನಡೆಯಲಿದ್ದು, ನಿತ್ಯ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳ ವ್ಯಕ್ತವಾಗಿದೆ.
ಹೊಸ ಗುದ್ದೋಡು ಕಾನೂನು ವಿರೋಧಿಸಿ 3 ದಿನಗಳ ಸಾರಿಗೆ ಮುಷ್ಕರದ ಚಿತ್ರಣ ನೀಡುವ 10 ಅಂಶಗಳು:
1. ಹೊಸ ಹಿಟ್ ಆಂಡ್ ರನ್ ಕಾನೂನು ಪ್ರಕಾರ, ಗುದ್ದೋಡು ಕೇಸ್‌ನಲ್ಲಿ ಚಾಲಕರಿಗೆ ಗರಿಷ್ಠ 7 ಲಕ್ಷ ರೂಪಾಯಿ ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇನ್ನೂ ಜಾರಿಗೆ ಬರದ ಈ ನಿಬಂಧನೆಗಳು ಅನಗತ್ಯ ಕಿರುಕುಳಕ್ಕೆ ಕಾರಣವಾಗಬಹುದು ಮತ್ತು ಅದನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಆಗ್ರಹಿಸಿದೆ.
2. ಮುಂಬೈನಲ್ಲಿ ಒಟ್ಟು ಟ್ರಕ್, ಟೆಂಪೋ, ಕಂಟೇನರ್‌ಗಳ ಪೈಕಿ ಶೇಕಡ 70ರಷ್ಟು ಅಂದರೆ 1.2 ಲಕ್ಷ ವಾಹನಗಳು ಸೋಮವಾರ ರಸ್ತೆಗೆ ಇಳಿದಿಲ್ಲ. ಮೂರು ದಿನ ಪ್ರತಿಭಟನೆಯಲ್ಲಿ ಈ ವಾಹನಗಳ ಚಾಲಕರು ಭಾಗಿಯಾಗಿದ್ದು, ಮುಂಬಯಿನಲ್ಲಿ ಇಂಧನ, ಹಣ್ಣು, ತರಕಾರಿ ಪೂರೈಕೆಗೆ ತೊಂದರೆ ಉಂಟಾಗಿದೆ.
3. ಒಟ್ಟು ವಾಹನಗಳ ಪೈಕಿ 35 ಪ್ರತಿಶತ ಭಾರೀ ವಾಹನಗಳು ಪೆಟ್ರೋಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸುತ್ತವೆ. ಒಂದು ದಿನದ ಮುಷ್ಕರದಿಂದ ಕೇವಲ ಮುಂಬಯಿ ಒಂದರಲ್ಲೇ 120-150 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ತಿಳಿಸಿದೆ.
4. ಸಾರಿಗೆ ಮುಷ್ಕರದ ಪರಿಣಾಮ ಮೊದಲ ದಿನವೇ ಅದರ ಕೆಟ್ಟ ಪರಿಣಾಮ ಎದುರಿಸಿದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಬಿಹಾರಗಳು ಸೇರಿವೆ. ಈ ರಾಜ್ಯಗಳಲ್ಲಿ ಮುಷ್ಕರ ಭಾಗಶಃ ಬಾಧಿಸಿವೆ.
5. ಗುಜರಾತ್‌ನ ಸೂರತ್, ಹರಿಯಾಣದ ಅಂಬಾಲಗಳಲ್ಲಿ ಬಹುತೇಕ ಚಾಲಕರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಪಂಜಾಬ್‌ನಲ್ಲಿ 7 ಲಕ್ಷ ಚಾಲಕರು ವಾಹನವನ್ನು ರಸ್ತೆಗೆ ಇಳಿಸಿಲ್ಲ. ಮಧ್ಯಪ್ರದೇಶದಲ್ಲಿ 10,000 ಖಾಸಗಿ ಬಸ್, ಟ್ರಕ್, ಟ್ಯಾಕ್ಸಿಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ.
6. ಹೊಸ ಗುದ್ದೋಡು ಕಾನೂನನ್ನು ಕರಾಳ ಕಾನೂನು ಕರೆದಿರುವ ಟ್ರಕ್ ಚಾಲಕರು, ಈ ಕಾನೂನು ಹಿಂಪಡೆಯದ ಹೊರತು ತರಕಾರಿ, ಹಣ್ಣು ಹಂಪಲನ್ನು ಸಾಗಿಸುವುದಿಲ್ಲ ಎಂದು ಮುಂಬಯಿನಲ್ಲಿ ಪಟ್ಟುಹಿಡಿದು ಪ್ರತಿಭಟನೆ ನಡೆಸಿದ್ದಾರೆ.
7. ಮಹಾರಾಷ್ಟ್ರದ ಕೆಲವು ಕಡೆಗೆ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರಗಳು ನಡೆದಿವೆ. ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಗಳೂ ದಾಖಲಾಗಿವೆ. ಸಿಯೋನ್ ಪನ್ವೇಲ್ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಲು ಪ್ರಯತ್ನಿಸಿದ ಘಟನೆಗಳೂ ವರದಿಯಾಗಿವೆ.
8. ಮಹಾರಾಷ್ಟ್ರದ ನಾಗಪುರದಲ್ಲಿ ಟ್ರಕ್, ಟ್ಯಾಂಕರ್ ಮುಷ್ಕರದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಸಿಗಲ್ಲ ಎಂದು ಪೆಟ್ರೋಲ್ ಬಂಕ್‌ಗೆ ಜನ ಮುಗಿಬಿದ್ದ ಘಟನೆ ನಡೆಯಿತು.
9. ದೊಡ್ಡ ವಿತರಕರು ಮತ್ತು ಪೆಟ್ರೋಲ್ ಪಂಪ್ ಮಾಲೀಕರು 3-4 ದಿನಗಳವರೆಗೆ ಸ್ಟಾಕ್ ಹೊಂದಿರುತ್ತಾರೆ. ಮಂಗಳವಾರ ಮುಷ್ಕರ ನಡೆದರೆ, ಕನಿಷ್ಠ 50-60 ಪ್ರತಿಶತ ಇಂಧನ ಕೇಂದ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅಖಿಲ ಭಾರತ ಪೆಟ್ರೋಲ್ ಪಂಪ್ ಮಾಲೀಕರ ಸಂಘಟನೆಯ ಚೇತನ್ ಮೋದಿ ತಿಳಿಸಿದ್ದಾರೆ.
10. ಮಹಾರಾಷ್ಟ್ರದಲ್ಲಿ ಸಾರಿಗೆ ಮುಷ್ಕರ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಇಂಧನ, ತರಕಾರಿ ಮತ್ತು ಇತರೆ ಅಗತ್ಯ ವಸ್ತುಗಳ ಸಾಗಣೆಗೆ ಅನುಕೂಲ ಮಾಡಿಕೊಡುವಂತೆ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.