ಬೆಂಗಳೂರು-ಎರ್ನಾಕುಲಂ ವಂದೇಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ವಾರಕ್ಕೆ 3 ದಿನ ಸಂಚಾರ ಶುರು, ಪ್ರಯಾಣ ದರ ಮತ್ತು ಇತರೆ ವಿವರ ಹೀಗಿದೆ
Vande Bharat Express Special: ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ಇರುವ ಹೆಚ್ಚುವರಿ ಪ್ರಯಾಣಿಕ ದಟ್ಟಣೆ ನಿವಾರಿಸುವುದಕ್ಕಾಗಿ ನೈಋತ್ಯ ರೈಲ್ವೆ ಆಗಸ್ಟ್ 26ರ ತನಕ ವಾರಕ್ಕೆ 3 ದಿನ ಬೆಂಗಳೂರು-ಎರ್ನಾಕುಲಂ ವಂದೇಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ ಶುರುಮಾಡಿದೆ. ಇದರ ವಿವರ ಹೀಗಿದೆ.

ಬೆಂಗಳೂರು: ಹೆಚ್ಚುವರಿ ಪ್ರಯಾಣಿಕ ದಟ್ಟಣೆ ನೀಗಿಸುವುದಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್ ಮತ್ತು ಎರ್ನಾಕುಲಂ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ ಶುರುವಾಗಿದೆ. ಈ ರೈಲು ವಾರಕ್ಕೆ ಮೂರು ದಿನ ಎರಡೂ ಮಾರ್ಗಗಳಲ್ಲಿ ಸಂಚರಿಸಲಿದ್ದು, ಜುಲೈ 31ರಂದು ಮೊದಲ ಪ್ರಯಾಣ ಮುಗಿಸಿದೆ. ಈ ರೈಲುಗಳು ಒಟ್ಟು ತಲಾ 12 ಟ್ರಿಪ್ ಮಾಡಲಿದ್ದು, ಆಗಸ್ಟ್ 26ರ ತನಕ ಮಾತ್ರ ಪ್ರಯಾಣಿಕರಿಗೆ ಸೇವೆ ಒದಗಿಸಲಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿಶೇಷ ರೈಲು ಸಂಚಾರ ನಿನ್ನೆ (ಜುಲೈ 31) ಮಧ್ಯಾಹ್ನ 12.50ಕ್ಕೆ ಎರ್ನಾಕುಲಂನಿಂದ ಆರಂಭವಾಗಿದ್ದು, ರೈಲು ಬೆಂಗಳೂರಿಗೆ ರಾತ್ರಿ 10 ಗಂಟೆಗೆ ತಲುಪಿದೆ. ಅದೇ ರೀತಿ ಬೆಂಗಳೂರು ಕಂಟೋನ್ಮೆಂಟ್‌ನಿಂದ ಇಂದು (ಆಗಸ್ಟ್ 1) ಮೊದಲ ಸಂಚಾರ ಮುಂಜಾನೆ 5.30ಕ್ಕೆ ಶುರುವಾಗಿದ್ದು, ಮಧ್ಯಾಹ್ನ 2.20ಕ್ಕೆ ಎರ್ನಾಕುಲಂ ತಲುಪಿದೆ.
ಎರ್ನಾಕುಲಂ-ಬೆಂಗಳೂರು ವಂದೇಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು - ಮೊದಲ ಸಂಚಾರದ ವಿಡಿಯೋ
ಎರ್ನಾಕುಲಂ-ಬೆಂಗಳೂರು ವಂದೇಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ವೇಳಾಪಟ್ಟಿ, ದರ ಮತ್ತು ಇತರೆ ವಿವರ
1) ಬೆಂಗಳೂರು ಕಂಟೋನ್ಮೆಂಟ್‌ನಿಂದ ಎರ್ನಾಕುಲಂ ಜಂಕ್ಷನ್‌ಗೆ ವಂದೇ ಭಾರತ್ (06002) ಎಕ್ಸ್‌ಪ್ರೆಸ್: ಈ ರೈಲು ಬೆಂಗಳೂರು ಕಂಟೋನ್ಮೆಂಟ್‌ನಿಂದ ಬೆಳಿಗ್ಗೆ 5:30 ಕ್ಕೆ ಹೊರಟು ಗುರುವಾರ, ಶನಿವಾರ ಮತ್ತು ಸೋಮವಾರದಂದು ಮಧ್ಯಾಹ್ನ 2:20 ಕ್ಕೆ ಎರ್ನಾಕುಲಂ ತಲುಪುತ್ತದೆ.
2) ಎರ್ನಾಕುಲಂ-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ (06001) ಎಕ್ಸ್‌ಪ್ರೆಸ್: ಈ ರೈಲು ಎರ್ನಾಕುಲಂನಿಂದ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಮಧ್ಯಾಹ್ನ 12:50 ಕ್ಕೆ ಹೊರಟು ರಾತ್ರಿ 10 ಗಂಟೆಗೆ ಬೆಂಗಳೂರು ತಲುಪುತ್ತದೆ.
3) ವಂದೇ ಭಾರತ್ ಜುಲೈ 31 ರಿಂದ ಆಗಸ್ಟ್ 26 ರ ವರೆಗೆ ಎರಡೂ ದಿಕ್ಕುಗಳಲ್ಲಿ ಒಟ್ಟು 24 ಟ್ರಿಪ್‌ಗಳನ್ನು ನಿರ್ವಹಿಸುತ್ತದೆ.
4) ಎರ್ನಾಕುಲಂ-ಬೆಂಗಳೂರು (06001) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿವಿಧ ನಿಲ್ದಾಣಗಳನ್ನು ತಲುಪುವ/ಹೊರಡುವ ಸಮಯ ಹೀಗಿದೆ- ಎರ್ನಾಕುಲಂ (ಮಧ್ಯಾಹ್ನ 12.50), ತ್ರಿಶೂರ್ (ಮಧ್ಯಾಹ್ನ 1.53), ಪಾಲಕ್ಕಾಡ್ (ಮಧ್ಯಾಹ್ನ 3.15), ಪೊತನೂರ್ (ಸಂಜೆ 4.13), ತಿರುಪುರ್ (ಸಂಜೆ 4.58), ಈರೋಡ್ (ಸಂಜೆ 5.45), ಸೇಲಂ (ಸಂಜೆ 6.33), ಬೆಂಗಳೂರು ಕಂಟೋನ್ಮೆಂಟ್ (ರಾತ್ರಿ 10)
5) ಬೆಂಗಳೂರು-ಎರ್ನಾಕುಲಂ (06002) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ/ಹೊರಡುವ ಸಮಯ ಹೀಗಿದೆ- ಬೆಂಗಳೂರು ಕಂಟೋನ್ಮೆಂಟ್ (ಬೆಳಗ್ಗೆ 5.30), ಸೇಲಂ (ಬೆಳಗ್ಗೆ 8.58), ಈರೋಡ್ (ಬೆಳಿಗ್ಗೆ 9.50), ತಿರುಪುರ್ (ಬೆಳಿಗ್ಗೆ 10.33), ಪೊತನೂರ್ (11.15), ಪಾಲಕ್ಕಾಡ್ (ಮಧ್ಯಾಹ್ನ 12.08), ತ್ರಿಶೂರ್ (ಮಧ್ಯಾಹ್ನ 1.18), ಎರ್ನಾಕುಲಂ (2.20)
ಎರ್ನಾಕುಲಂನಿಂದ ಬೆಂಗಳೂರಿಗೆ ಚೇರ್ ಕಾರ್‌ನಲ್ಲಿ ಆಹಾರ ಸೇರಿ 1,465 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ 2,945 ರೂಪಾಯಿ ದರ ನಿಗದಿಯಾಗಿದೆ. 8 ಬೋಗಿಗಳ ರೈಲಲ್ಲಿ ಒಂದು ಎಕ್ಸಿಕ್ಯೂಟಿವ್ ಚೇರ್ ಕಾರ್ ಮತ್ತು ಏಳು ಸ್ಟಾಂಡರ್ಡ್ ಚೇರ್ ಕಾರ್‌ಗಳನ್ನು ಒಳಗೊಂಡಿದೆ.
ಭಾರತವು 2019ರ ಫೆಬ್ರವರಿ ತಿಂಗಳಲ್ಲಿ ದೇಶೀಯ ಅರೆ ಅತಿ ವೇಗದ ರೈಲುಗಳನ್ನು ಪರಿಚಯಿಸುವ ಮೂಲಕ ರೈಲು ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಉತ್ಪಾದನೆಯ ಸಮಯದಲ್ಲಿ ಟ್ರೈನ್ 18 ಎಂದು ಈ ಯೋಜನೆಯನ್ನು ಕರೆಯಲಾಗುತ್ತಿತ್ತು, ಈ ರೈಲುಗಳನ್ನು ಪ್ರಾರಂಭಿಸಿದಾಗ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು. ಇದು ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರಿಸುವುದಕ್ಕೆ ಅಗತ್ಯವಿರುವಂತೆ ವಿನ್ಯಾಸಗೊಳಿಸಲಾಗಿದೆ. ವಂದೇ ಭಾರತ್ ರೈಲುಗಳು ಸಾಮಾನ್ಯವಾಗಿ 130 ಕಿ.ಮೀ/ಗಂಟೆಗೆ ಟ್ರ್ಯಾಕ್ ಪರಿಸ್ಥಿತಿಗಳ ಕಾರಣದಿಂದಾಗಿ ಸೀಮಿತವಾಗಿದೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)
