ಸರ್ಕಾರಿ ಸೇವೆಗೆ ಲ್ಯಾಟರಲ್ ಎಂಟ್ರಿ ನೇಮಕಾತಿಯ ಜಾಹೀರಾತು ಹಿಂಪಡೆಯಲು ಯುಪಿಎಸ್‌ಸಿಗೆ ಕೇಂದ್ರ ಸರ್ಕಾರದ ಸೂಚನೆ, ಯಾಕೆ, ಏನಾಯಿತು
ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ನೇಮಕಾತಿ ನಡೆಸುವುದಕ್ಕೆ ಎರಡು ದಿನ ಹಿಂದೆ ಯುಪಿಎಸ್‌ಸಿ ಜಾಹೀರಾತು ನೀಡಿತ್ತು. ಇದನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಈಗ ಯುಪಿಎಸ್‌ಸಿಗೆ ಸೂಚನೆ ನೀಡಿದೆ. ಯಾಕೆ, ದಿಢೀರ್ ಈ ಯೂಟರ್ನ್‌ಗೆ ಕಾರಣವೇನು- ಇಲ್ಲಿದೆ ವಿವರ.
ನವದೆಹಲಿ: ಕೇಂದ್ರ ಸರ್ಕಾರದ 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪ ಕಾರ್ಯದರ್ಶಿಗಳ ಹುದ್ದೆಗಳ ನೇಮಕಾತಿ ಜಾಹೀರಾತು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಇಂದು (ಆಗಸ್ಟ್ 20) ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ)ಕ್ಕೆ ನಿರ್ದೇಶಿಸಿದೆ. ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಮಟ್ಟದ 45 ಹುದ್ದೆಗಳಿಗೆ ಸರ್ಕಾರಿ ಸೇವೆಗೆ ಲ್ಯಾಟರಲ್ ನೇಮಕಾತಿಗಾಗಿ ಯುಪಿಎಸ್‌ಸಿ ಎರಡು ದಿನಗಳ ಹಿಂದೆ ಜಾಹೀರಾತು ನೀಡಿತ್ತು.
ಸಾಮಾಜಿಕ ನ್ಯಾಯವನ್ನು ಉಲ್ಲೇಖಿಸಿರುವ ಕೇಂದ್ರ ಸರ್ಕಾರ, ಈ ಯೋಜಿತ ನೇಮಕಾತಿಗಳನ್ನು ರದ್ದುಗೊಳಿಸಲು ಮುಂದಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಮಂಗಳವಾರ (ಆಗಸ್ಟ್ 20) ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸುಡಾನ್ ಅವರಿಗೆ ಪತ್ರ ಬರೆದು ಜಾಹೀರಾತುಗಳನ್ನು ಹಿಂಪಡೆಯಬೇಕು ಮತ್ತು ನೇಮಕಾತಿಯ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಸರ್ಕಾರಿ ಸೇವೆಗೆ ನೇಮಕಾತಿ ಮಾಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಕೋಟಾಗಳಿಲ್ಲದೆ ಸರ್ಕಾರಿ ಸೇವೆಗೆ ಪ್ರವೇಶ "ಸ್ವೀಕಾರಾರ್ಹವಲ್ಲ" ಎಂದು ಪ್ರತಿಪಕ್ಷಗಳು ಪ್ರತಿಭಟನೆ ವ್ಯಕ್ತಪಡಿಸಿದ್ದವು. ಇದಲ್ಲದೆ, ಎನ್‌ಡಿಎ ಮಿತ್ರ ಪಕ್ಷ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಸಚಿವ ಜಿತೇಂದ್ರ ಸಿಂಗ್ ಪತ್ರದ ಸಾರವಿದು
ಈ ಹಿಂದೆ 2005ರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ ಸ್ಥಾಪಿಸಲಾದ 2ನೇ ಆಡಳಿತ ಸುಧಾರಣಾ ಆಯೋಗ (ಎಆರ್‌ಸಿ) ಮತ್ತು ಆರನೇ ವೇತನ ಆಯೋಗದ (2013) ಸರ್ಕಾರದ ವ್ಯವಸ್ಥೆಯಿಂದ ಹೊರಗಿರುವ ಪ್ರತಿಭೆಗಳನ್ನು ಸರ್ಕಾರಿ ಸೇವೆಯಲ್ಲಿ ಬಳಸಿಕೊಳ್ಳುವುದಕ್ಕೆ ಶಿಫಾರಸು ಮಾಡಲಾಗಿತ್ತು. ಈ ಹಿಂದೆ ಇಂತಹ ನೇಮಕಾತಿಯನ್ನು ಪ್ರಧಾನಿ ಕಚೇರಿಯನ್ನು ನಿಯಂತ್ರಿಸುವ ಸೂಪರ್ ಪವರ್ ಅಧಿಕಾರಶಾಹಿ ನೇಮಕಾತಿಗೆ ಹಿಂದಿನ ರಾಷ್ಟ್ರೀಯ ಸಲಹಾ ಮಂಡಳಿ ಬಳಸಿಕೊಳ್ಳುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಪ್ರದಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಇಂತಹ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಇರಬೇಕು
ಲ್ಯಾಟರಲ್ ಎಂಟ್ರಿ ನೇಮಕಾತಿ ಪ್ರಕ್ರಿಯೆಯು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳೊಂದಿಗೆ, ವಿಶೇಷವಾಗಿ ಮೀಸಲಾತಿಗಳ ನಿಬಂಧನೆಗಳಿಗೆ ಅನುಗುಣವಾಗಿರಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ದೃಢವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ. ಉದ್ಯೋಗ ಮೀಸಲು ನಮ್ಮ ಸಾಮಾಜಿಕ ನ್ಯಾಯದ ಚೌಕಟ್ಟಿನ ಮೂಲಾಧಾರವಾಗಿದೆ. ಐತಿಹಾಸಿಕ ಅನ್ಯಾಯಗಳನ್ನು ಪರಿಹರಿಸುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂಬುದನ್ನು ಪ್ರಧಾನಿ ಮೋದಿಯವರು ನಂಬಿದ್ದಾರೆ” ಎಂದು ಪತ್ರದ ಪಠ್ಯದಲ್ಲಿ ತಿಳಿಸಲಾಗಿದೆ.
ನೇಮಕಾತಿ ಮೀಸಲಾತಿಯ ಅಂಶದ ನಿಬಂಧನೆಗಳು ಇತ್ತೀಚಿನ ಲ್ಯಾಟರಲ್ ನೇಮಕಾತಿ ಜಾಹೀರಾತಿನಲ್ಲಿ ಇರಲಿಲ್ಲ. ಆದ್ದರಿಂದ ಇವುಗಳನ್ನು ಪರಿಶೀಲಿಸಿ, ಸುಧಾರಿಸಬೇಕು. ಪ್ರಸ್ತುತ ಜಾಹೀರಾತು ರದ್ದುಗೊಳಿಸಬೇಕು ಎಂದು ಸಚಿವ ಸಿಂಗ್ ಅವರ ಪತ್ರ ಉಲ್ಲೇಖಿಸಿದೆ.
ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ
ಲ್ಯಾಟರಲ್ ನೇಮಕಾತಿ ಪ್ರಕ್ರಿಯೆಯಿಂದ ಹಿಂದೆ ಸರಿದ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಪ್ರತಿಪಕ್ಷಗಳು ಮತ್ತು ಎನ್‌ಡಿಎ ಮಿತ್ರಪಕ್ಷಗಳ ಪ್ರತಿಭಟನೆಯ ಕಾವು ತಟ್ಟಿದಂತೆ ಕಾಣುತ್ತಿದೆ. ಬಿಜೆಪಿ ನಾಯಕರು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಪಾಠ ಎಂಬಂತೆ ತೆಗೆದುಕೊಂಡು ತಮ್ಮ ಆಡಳಿತದಲ್ಲಿ ಕ್ಷಿಪ್ರವಾದ ಬದಲಾವಣೆಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಮೀಸಲಾತಿ ಕುರಿತು ಬಿಜೆಪಿ ಸಂಸದರ ಬೇಜವಾಬ್ದಾರಿ ಹೇಳಿಕೆಗಳು ಪಕ್ಷಕ್ಕೆ ಭಾರಿ ಹಿನ್ನಡೆ ಉಂಟುಮಾಡಿರುವುದನ್ನು ಪಕ್ಷದ ವರಿಷ್ಠರು ಗುರುತಿಸಿದ್ದಾರೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನದಲ್ಲಿ ಬದಲಾವಣೆ ಮಾಡಿ ಮೀಸಲಾತಿ ರದ್ದುಗೊಳಿಸುವುದೆಂಬ ಪ್ರಚಾರವನ್ನು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳು ಮಾಡಿದ್ದವು. ಇದಕ್ಕೆ ಪೂರಕವಾಗಿ ಬಿಜೆಪಿ 400ಕ್ಕಿಂತ ಹೆಚ್ಚಿನ ಸ್ಥಾನಗಳ ಬಹುಮತವನ್ನು ಪಕ್ಷ ಬಯಸುತ್ತಿದೆ ಎಂದು ಪ್ರಚಾರ ಮಾಡಿತ್ತು. ಇದರ ಪರಿಣಾಮ ಫಲಿತಾಂಶದ ಮೇಲೂ ಆಗಿದ್ದು ಈಗ ಇತಿಹಾಸ.