Explainer; ಕೇಂದ್ರ ಸರ್ಕಾರಿ ಸೇವೆಗೆ ಲ್ಯಾಟರಲ್ ಎಂಟ್ರಿ ನೇಮಕಾತಿಯಲ್ಲಿ ಮೀಸಲಾತಿ ಇಲ್ವಾ, ನಿಯಮಗಳು ಹೇಳುವುದೇನು-india news union govt asks upsc to cancel latest advt for lateral entry in bureaucracy why no reservation explainer uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer; ಕೇಂದ್ರ ಸರ್ಕಾರಿ ಸೇವೆಗೆ ಲ್ಯಾಟರಲ್ ಎಂಟ್ರಿ ನೇಮಕಾತಿಯಲ್ಲಿ ಮೀಸಲಾತಿ ಇಲ್ವಾ, ನಿಯಮಗಳು ಹೇಳುವುದೇನು

Explainer; ಕೇಂದ್ರ ಸರ್ಕಾರಿ ಸೇವೆಗೆ ಲ್ಯಾಟರಲ್ ಎಂಟ್ರಿ ನೇಮಕಾತಿಯಲ್ಲಿ ಮೀಸಲಾತಿ ಇಲ್ವಾ, ನಿಯಮಗಳು ಹೇಳುವುದೇನು

Lateral Entry Recruitment; ಕೇಂದ್ರ ಸರ್ಕಾರದ ಕೆಲವು ಹುದ್ದೆಗಳಿಗೆ ಕ್ಷೇತ್ರ ಪರಿಣತರನ್ನು ನೇಮಕಮಾಡುವ ಲ್ಯಾಟರಲ್ ಎಂಟ್ರಿ ನೇಮಕಾತಿಗೆ ಯುಪಿಎಸ್‌ಸಿ ಎರಡು ದಿನದ ಹಿಂದೆ ಜಾಹೀರಾತು ನೀಡಿತ್ತು. ಇದರಲ್ಲಿ ಮೀಸಲಾತಿ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿ ಟೀಕೆಗಳು ಎದುರಾಗಿದ್ದವು. ಇದರ ನಿಯಮಗಳು ಹೇಳುವುದೇನು- ಇಲ್ಲಿದೆ ವಿವರಣೆ.

ಕೇಂದ್ರ ಸರ್ಕಾರಿ ಸೇವೆಗೆ ಲ್ಯಾಟರಲ್ ಎಂಟ್ರಿ ನೇಮಕಾತಿ ನಿಯಮ ಮತ್ತು ಟೀಕೆ (ಸಾಂಕೇತಿಕ ಚಿತ್ರ)
ಕೇಂದ್ರ ಸರ್ಕಾರಿ ಸೇವೆಗೆ ಲ್ಯಾಟರಲ್ ಎಂಟ್ರಿ ನೇಮಕಾತಿ ನಿಯಮ ಮತ್ತು ಟೀಕೆ (ಸಾಂಕೇತಿಕ ಚಿತ್ರ)

ನವದೆಹಲಿ: ಲ್ಯಾಟರಲ್ ಎಂಟ್ರಿ ನೇಮಕಕ್ಕೆ ಕೇಂದ್ರೀಯ ಲೋಕಸೇವಾ ಆಯೋಗ ಎರಡು ದಿನಗಳ ಹಿಂದೆ ಪ್ರಕಟಿಸಿದ್ದ ಜಾಹೀರಾತು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪ ಕಾರ್ಯದರ್ಶಿಗಳ ಹುದ್ದೆಗಳ ನೇಮಕಾತಿ ಜಾಹೀರಾತು ಇದಾಗಿದ್ದು, ಇದರಲ್ಲಿ ಮೀಸಲಾತಿ ವಿಚಾರ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು.

ಈಗ ಸಾಮಾಜಿಕ ನ್ಯಾಯವನ್ನು ಉಲ್ಲೇಖಿಸಿರುವ ಕೇಂದ್ರ ಸರ್ಕಾರ, ಈ ಯೋಜಿತ ನೇಮಕಾತಿಗಳನ್ನು ರದ್ದುಗೊಳಿಸಲು ಮುಂದಾಗಿದ್ದು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸುಡಾನ್ ಅವರಿಗೆ ಪತ್ರ ಬರೆದಿದ್ದಾರೆ. ಈಗ ಟೀಕೆಗೆ ಗುರಿಯಾಗಿರುವ ಈ ಪಾರ್ಶ್ವ ಪ್ರವೇಶ ನೇಮಕಾತಿ ಅಥವಾ ಲ್ಯಾಟರಲ್ ಎಂಟ್ರಿ ನೇಮಕಾತಿಯ ಹಿನ್ನೆಲೆ ಮತ್ತು ಅದರ ನಿಯಮಗಳ ಕಿರು ಅವಲೋಕನ ಇಲ್ಲಿದೆ.

ಏನಿದು ಪಾರ್ಶ್ವ ಪ್ರವೇಶ ನೇಮಕಾತಿ, ನಿಯಮಗಳೇನು

1) ಪಾರ್ಶ್ವ ಪ್ರವೇಶ ನೇಮಕಾತಿ ಅಥವಾ ಲ್ಯಾಟರಲ್ ಎಂಟ್ರಿ ನೇಮಕಾತಿಯನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದೇಕೆ

"ತಾಜಾ ಪ್ರತಿಭೆಗಳನ್ನು ಸರ್ಕಾರದ ವ್ಯವಸ್ಥೆಗೆ ತರುವ ಮತ್ತು ಮಾನವ ಸಂಪನ್ಮೂಲದ ಲಭ್ಯವಿರುವುದನ್ನು ಹೆಚ್ಚಿಸುವ ಅವಳಿ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಲ್ಯಾಟರಲ್ ನೇಮಕಾತಿ ಹೊಂದಿದೆ" ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು 2019 ರಲ್ಲಿ ಸಂಸತ್ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭೆಗೆ ಹೇಳಿದರು.

ರಾಜ್ಯಸಭೆಯಲ್ಲಿ ಕೇಳಲಾದ ಇನ್ನೊಂದು ಪ್ರಶ್ನೆಗೆ 2024ರ ಆಗಸ್ಟ್ 8ರಂದು ಉತ್ತರ ನೀಡಿದ ಸಚಿವ ಸಿಂಗ್‌ ಅವರು, “ನಿರ್ದಿಷ್ಟ ಕ್ಷೇತ್ರದಲ್ಲಿ ಅವರ ವಿಶೇಷ ಜ್ಞಾನ ಮತ್ತು ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಮಟ್ಟದಲ್ಲಿ ಪಾರ್ಶ್ವ ನೇಮಕಾತಿ, ನಿರ್ದಿಷ್ಟ ಕಾರ್ಯಯೋಜನೆಗಳಿಗಾಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಇದನ್ನು ಜಾರಿಗೊಳಸಿಲಾಗಿದೆ” ಎಂದು ಹೇಳಿದ್ದರು.

ಸರಳವಾಗಿ ಹೇಳಬೇಕು ಎಂದರೆ ಈ ಪಾರ್ಶ್ವ ಪ್ರವೇಶ ನೇಮಕಾತಿ ಅನುಷ್ಠಾನಗೊಳ್ಳುವುದಕ್ಕೆ ಕಾರಣ ಇಷ್ಟೆ - ನಿರ್ದಿಷ್ಟ ಕ್ಷೇತ್ರದ ಪರಿಣತರನ್ನು ಸರ್ಕಾರಿ ಸೇವೆಗೆ ನಿಯೋಜಿಸುವುದು. ಅವರ ವೃತ್ತಿಜೀವನದಲ್ಲಿ ಸರ್ಕಾರಿ ಅಧಿಕಾರಿಗಳಾಗಿದ್ದರೇ ಇಲ್ಲವೇ ಎಂಬುದನ್ನು ಪರಿಗಣಿಸದೇ ನೇಮಕಾತಿ ಮಾಡಿಕೊಂಡು ಸರ್ಕಾರದ ಅಗತ್ಯಗಳನ್ನು ಪೂರ್ಣಗೊಳಿಸುವುದು ಈ ನೇಮಕಾತಿಯ ಉದ್ದೇಶ. ಕೇಂದ್ರ ಸಚಿವಾಲಯದಲ್ಲಿ ವಿವಿಧ ಹೊಣೆಗಾರಿಕೆ ನಿಭಾಯಿಸುವುದಕ್ಕೆ ನಾಗರಿಕ ಸೇವಾ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ಇದು ಐಎಎಸ್‌ ಪ್ರಾಬಲ್ಯದ ಕ್ಷೇತ್ರವೆಂದು ಪರಿಗಣಿಸಲಾಗಿದೆ.

2) ಲ್ಯಾಟರಲ್ ಎಂಟ್ರಿ ಮೂಲಕ ಇದುವರೆಗೆ ಎಷ್ಟು ಜನರ ನೇಮಕವಾಗಿದೆ

ಮೊದಲ ಸುತ್ತಿನ ಲ್ಯಾಟರಲ್ ಎಂಟ್ರಿ ನೇಮಕ ಪ್ರಕ್ರಿಯೆ 2018 ರಲ್ಲಿ ನಡೆಯಿತು. ಇದರಲ್ಲಿ, ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗಳಿಗೆ ಒಟ್ಟು 6,077 ಅರ್ಜಿಗಳು ಬಂದಿದ್ದವು. ಯುಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯ ನಂತರ, 2019 ರಲ್ಲಿ ಒಂಬತ್ತು ವಿಭಿನ್ನ ಸಚಿವಾಲಯಗಳು/ಇಲಾಖೆಗಳಿಗೆ ನೇಮಕಾತಿಗಾಗಿ ಒಂಬತ್ತು ವ್ಯಕ್ತಿಗಳ ನೇಮಕಾತಿ ಮಾಡುವಂತೆ ಶಿಫಾರಸು ಮಾಡಲಾಯಿತು.

ಮತ್ತೊಂದು ಸುತ್ತಿನ ಲ್ಯಾಟರಲ್ ನೇಮಕಾತಿ 2021ರಲ್ಲಿ ನಡೆಯಿತು. 2023ರ ಮೇ ತಿಂಗಳಲ್ಲಿ ಇನ್ನೂ ಎರಡು ಸುತ್ತು ನೇಮಕಾತಿ ನಡೆದವು. ಕಳೆದ ಐದು ವರ್ಷಗಳಲ್ಲಿ 63 ನೇಮಕಾತಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ಮಾಡಲಾಗಿದೆ. ಪ್ರಸ್ತುತ, 57 ಅಧಿಕಾರಿಗಳು (ಲ್ಯಾಟರಲ್ ಎಂಟ್ರಿ ನೇಮಕಾತಿ) ವಿವಿಧ ಸಚಿವಾಲಯಗಳು / ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ಆಗಸ್ಟ್ 9 ರಂದು ರಾಜ್ಯಸಭೆಗೆ ತಿಳಿಸಿದ್ದರು.

3) ಈ ಪಾರ್ಶ್ವ ಪ್ರವೇಶ ನೇಮಕಾತಿ ಪ್ರಕ್ರಿಯೆ ಕುರಿತಾದ ಟೀಕೆಗಳೇನು?

ಕೇಂದ್ರ ಸರ್ಕಾರದ ಪಾರ್ಶ್ವ ಪ್ರವೇಶ ನೇಮಕಾತಿ ಪ್ರಕ್ರಿಯೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಯಾವುದೇ ಕೋಟಾಗಳಿಲ್ಲ ಎಂಬುದೇ ಪ್ರಮುಖ ಟೀಕೆಯಾಗಿದೆ. ಇಲ್ಲಿ ಸಾಮಾಜಿಕ ನ್ಯಾಯಕ್ಕೆ ಅವಕಾಶ ಇಲ್ಲ ಎಂಬ ಆರೋಪವಿದೆ.

4) ಪಾರ್ಶ್ವ ಪ್ರವೇಶ ನೇಮಕಾತಿಯನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಹೇಗೆ

ಸಾರ್ವಜನಿಕ ಉದ್ಯೋಗ ಮತ್ತು ವಿಶ್ವವಿದ್ಯಾನಿಲಯಗಳ ಮೀಸಲಾತಿಯನ್ನು "13-ಪಾಯಿಂಟ್ ರೋಸ್ಟರ್" ಎಂದು ಕರೆಯಲಾಗುತ್ತದೆ. ಈ ನೀತಿಯ ಪ್ರಕಾರ, ಅವರ ಗುಂಪಿನ (ಎಸ್‌ಸಿ, ಎಸ್‌ಟಿ, ಒಬಿಸಿ, ಮತ್ತು ಈಗ ಇಡಬ್ಲ್ಯುಎಸ್‌) ಕೋಟಾದ ಶೇಕಡಾವಾರು ಪ್ರಮಾಣವನ್ನು ನೂರರಿಂದ ಭಾಗಿಸಿ, ಆ ಮೂಲಕ ಮೂಲಕ ಅಭ್ಯರ್ಥಿಯ ಆರಂಭಿಕ ರೋಸ್ಟರ್‌ನಲ್ಲಿನ ಸ್ಥಾನವನ್ನು ನಿರ್ಧರಿಸಲಾಗುತ್ತದೆ.

ಉದಾಹರಣೆಗೆ, ಒಬಿಸಿ ಕೋಟಾ ಶೇಕಡ 27. ಆದ್ದರಿಂದ ಒಬಿಸಿ ಅಭ್ಯರ್ಥಿಗಳನ್ನು ನೇಮಕ ಮಾಡುವಾಗ ಪ್ರತಿ ನಾಲ್ಕನೇ ಹುದ್ದೆಗೆ (ಇಲಾಖಾವಾರು/ಕೆಡರ್‌ ಪ್ರಕಾರ) 100/27= 3.7 ಆಗುತ್ತದೆ. ಇದೇ ರೀತಿ ಎಸ್‌ಸಿ ಅಭ್ಯರ್ಥಿಗಳಿಗೆ ಇದು ಶೇಕಡ 7.5 ಇದ್ದು ಪ್ರತಿ 14ನೇ ಹುದ್ದೆಗೆ 100/7.5=13.33 ಎಂಬುದನ್ನು ಪರಿಗಣಿಸಬೇಕು ಇದೇ ರೀತಿ ಇಡಬ್ಲ್ಯುಎಸ್ ಕೋಟಾ ಶೇಕಡ 10 ಇದ್ದು, ಇದರಂತೆ 100/10=10 ಎಂದು ಪರಿಗಣಿಸಿ ಪ್ರತಿ 10ನೇ ಹುದ್ದೆ ಭರ್ತಿ ಮಾಡಬೇಕು. ಈ ಸೂತ್ರದ ಪ್ರಕಾರ ಮೂರು ಹುದ್ದೆಗಳ ತನಕ ಮೀಸಲಾತಿ ವಿಚಾರವೇ ಬರುವುದಿಲ್ಲ. ಲ್ಯಾಟರಲ್ ಎಂಟ್ರಿ ಪ್ರಕಾರ ಒಂದು ಹುದ್ದೆ, ಎರಡು ಹುದ್ದೆಗಳ ನೇಮಕಾತಿ ಮಾಡುವಾಗ ಈ ಸೂತ್ರದ ಪ್ರಕಾರ ಮೀಸಲಾತಿ ಅನ್ವಯವಾಗುವುದಿಲ್ಲ.

5) ಲ್ಯಾಟರಲ್‌ ಎಂಟ್ರಿ ನೇಮಕಾತಿಯಲ್ಲಿ ಮೀಸಲು ಯಾಕಿಲ್ಲ

ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆ 2018ರ ಮೇ 15ರಂದು ಪ್ರಕಟಿಸಿದ ಸುತ್ತೋಲೆ ಪ್ರಕಾರ, "ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಸೇವೆಗಳ ನೇಮಕಾತಿಗಳಿಗೆ ಸಂಬಂಧಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿಗಳಲ್ಲಿ ಸೇವಾ ಅವಧಿ 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಮೀಸಲಾತಿ ಅನ್ವಯವಾಗುತ್ತದೆ. ಈ ಸುತ್ತೋಲೆಯಲ್ಲಿರುವ ಅಂಶವು 1968ರ ಸೆಪ್ಟೆಂಬರ್ 24ರಂದು ಗೃಹ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯ ಅಂಶಗಳನ್ನು ಒಳಗೊಂಡಿದೆ. ಯಾವುದೇ ನೇಮಕದಲ್ಲಿ ಕೂಡ ಮೀಸಲಾತಿ ಬೇಕು ಎಂಬುದನ್ನು ಇದು ದೃಢಪಡಿಸಿದೆ.

ಆದಾಗ್ಯೂ, ಪ್ರಸ್ತುತ ಯುಪಿಎಸ್‌ಸಿ ಪ್ರಕಟಿಸಿದ್ದ ಜಾಹೀರಾತಿನಲ್ಲಿ 45 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಿಸಲಾಗಿತ್ತು. ಇದನ್ನು ಸಿಂಗಲ್ ಗ್ರೂಪ್ ಎಂದು ಪರಿಗಣಿಸಿದರೆ ಆಗ 13 ಪಾಯಿಂಟ್ ರೋಸ್ಟರ್ ಪ್ರಕಾರ ಇದರಲ್ಲಿ 6 ಹುದ್ದೆ ಎಸ್‌ಸಿಗೆ, 3 ಹುದ್ದೆ ಎಸ್‌ಟಿಗೆ, ಒಬಿಸಿ 12, ಇಡಬ್ಲ್ಯುಎಸ್‌ಗೆ 4 ಹುದ್ದೆಗಳು ಮೀಸಲಿಡಬೇಕಾಗಿತ್ತು. ಆದರೆ, ಈ ಹುದ್ದೆಗಳ ನೇಮಕಾತಿಯನ್ನು ಪ್ರತಿ ಇಲಾಖೆಗೆ ಪ್ರತ್ಯೇಕವಾಗಿ ನಡೆಸುತ್ತಿರುವ ಕಾರಣ ಮೀಸಲು ಅನ್ವಯವಾಗಿಲ್ಲ.

ಕೇಂದ್ರ ಸರ್ಕಾರದ ಪಾರ್ಶ್ವ ಪ್ರವೇಶ ನೇಮಕಾತಿ ಕುರಿತು ಯಾರು ಏನು ಹೇಳಿದ್ದಾರೆ

ಲ್ಯಾಟರಲ್ ಎಂಟ್ರಿ ನೇಮಕ ಪ್ರಕ್ರಿಯೆ "ಉದ್ದೇಶಪೂರ್ವಕ ಪಿತೂರಿಯ ಒಂದು ಭಾಗ" ಮತ್ತು “ಬಿಜೆಪಿ ಉದ್ದೇಶಪೂರ್ವಕವಾಗಿ ಉದ್ಯೋಗಗಳಲ್ಲಿ ಇಂತಹ ನೇಮಕಾತಿಗಳನ್ನು ಮಾಡುತ್ತಿದೆ. ಆ ಮೂಲಕ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಗಳನ್ನು ಮೀಸಲಾತಿಯಿಂದ ದೂರವಿಡಬಹುದು” ಎಂದು ಭಾವಿಸಿದಂತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.

ಈ ಕ್ರಮವನ್ನು "ಕೊಳಕು ಜೋಕ್" ಎಂದು ಖಂಡಿಸಿದ ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, 45 ನೇಮಕಾತಿಗಳನ್ನು ನಾಗರಿಕ ಸೇವಾ ಪರೀಕ್ಷೆಯ ಮೂಲಕ ಮಾಡಲು ಜಾಹೀರಾತು ನೀಡಿದರೆ, ಅದರಲ್ಲಿ "ಸುಮಾರು ಅರ್ಧದಷ್ಟು ಹುದ್ದೆಗಳನ್ನು ಎಸ್‌ಸಿ, ಎಸ್‌ಟಿಗೆ ಮೀಸಲಿಡಲಾಗುವುದು. ಮತ್ತು OBC ಅಭ್ಯರ್ಥಿಗಳಿಗೆ ಮೀಸಲಿರಬೇಕಾಗಿತ್ತು ಎಂದು ಹೇಳಿದ್ದಾರೆ.

ಇನ್ನೂ ಕೆಲವು ನಾಯಕರು ಈ ಮೀಸಲಾತಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.