US Student Visa: ವಿದ್ಯಾರ್ಥಿಗಳಿಗೆ ದಾಖಲೆ ಸಂಖ್ಯೆಯ ವೀಸಾ ನೀಡಲು ಅಮೆರಿಕ ರಾಯಭಾರ ಕಚೇರಿ ಸಜ್ಜು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Us Student Visa: ವಿದ್ಯಾರ್ಥಿಗಳಿಗೆ ದಾಖಲೆ ಸಂಖ್ಯೆಯ ವೀಸಾ ನೀಡಲು ಅಮೆರಿಕ ರಾಯಭಾರ ಕಚೇರಿ ಸಜ್ಜು

US Student Visa: ವಿದ್ಯಾರ್ಥಿಗಳಿಗೆ ದಾಖಲೆ ಸಂಖ್ಯೆಯ ವೀಸಾ ನೀಡಲು ಅಮೆರಿಕ ರಾಯಭಾರ ಕಚೇರಿ ಸಜ್ಜು

US Embassy in India: ಪ್ರಸ್ತುತ 2 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದೀಗ ಅಮೆರಿಕದಲ್ಲಿರುವ ಒಟ್ಟು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ 20ರಷ್ಟಿದೆ.

ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟಿ ವಿದ್ಯಾರ್ಥಿ ವೀಸಾ ಪಡೆದವರನ್ನು ಅಭಿನಂದಿಸಿದರು.
ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟಿ ವಿದ್ಯಾರ್ಥಿ ವೀಸಾ ಪಡೆದವರನ್ನು ಅಭಿನಂದಿಸಿದರು. (twitter.com/USAmbIndia)

ದೆಹಲಿ: ಭಾರತದಲ್ಲಿರುವ ಅಮೆರಿಕ ರಾಯಭಾರ (US Embassy in India) ಕಚೇರಿಯು ತನ್ನ ಏಳನೆಯ ವಿದ್ಯಾರ್ಥಿ ವೀಸಾ ದಿನದ ಪ್ರಯುಕ್ತ ವಿಶೇಷ ವೀಸಾ ಸಂದರ್ಶನ ನಡೆಸಿತು. ಈ ಪ್ರಯುಕ್ತ ನವದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತಾ ಮತ್ತು ಮುಂಬೈ ದೂತಾವಾಸ ಕಚೇರಿಗಳಲ್ಲಿ ಸುಮಾರು 3,500 ವಿದ್ಯಾರ್ಥಿ ವೀಸಾ ಅರ್ಜಿದಾರರ ಸಂದರ್ಶನ ನಡೆಸಲಾಯಿತು. ವಿಶ್ವದಲ್ಲೇ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಾರಿ ವೀಸಾ ಪಡೆಯಲು ಬಂದ ವಿದ್ಯಾರ್ಥಿಗಳನ್ನು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಭಾರತದ ವಿವಿಧೆಡೆ ಇರುವ ಕಾನ್ಸುಲ್ ಜನರಲ್‌ಗಳು ಅಭಿನಂದಿಸಿದರು.

'ನಾನು ಮೊದಲಿಗೆ ಯುವ ವಿದ್ಯಾರ್ಥಿಯಾಗಿ ಭಾರತಕ್ಕೆ ಬಂದೆ. ಈ ಅನುಭವಗಳು ಹೇಗೆ ಪರಿವರ್ತನೆ ತರುತ್ತವೆ ಎನ್ನುವುದನ್ನು ನನ್ನದೇ ಜೀವನದಲ್ಲಿ ಕಂಡಿದ್ದೇನೆ' ಎಂದು ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದರು. 'ವಿದ್ಯಾರ್ಥಿ ವಿನಿಮಯವು ಅಮೆರಿಕ-ಭಾರತ ಬಾಂಧವ್ಯದಲ್ಲಿ ಅತ್ಯಂತ ಮಹತ್ವದ್ದು. ಇದಕ್ಕೆ ಉತ್ತಮ ಕಾರಣವೂ ಇದೆ. ಅಮೆರಿಕದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಜ್ಞಾನದ ಜಾಗತಿಕ ಜಾಲಕ್ಕೆ ಪ್ರವೇಶವನ್ನೂ ನೀಡುತ್ತದೆ. ಜೀವನಪೂರ್ತಿ ಒದಗುವ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ತಳಹದಿ ರೂಪಿಸುತ್ತದೆ. ಆದ್ದರಿಂದಲೇ ಈ ಅವಕಾಶಗಳನ್ನು ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಲು, ಪ್ರೋತ್ಸಾಹಿಸಲು ನಾವು ಇಲ್ಲಿದ್ದೇವೆ' ಎಂದರು.

ವಿದ್ಯಾರ್ಥಿ ವೀಸಾ ದಿನವು ಅಮೆರಿಕ ಮತ್ತು ಭಾರತದ ನಡುವೆ ಉನ್ನತ ಶೈಕ್ಷಣಿಕ ಸಹಯೋಗಗಳ ಸುದೀರ್ಘ ಬಾಂಧವ್ಯವನ್ನು ಸಂಭ್ರಮಿಸುತ್ತದೆ. ಪ್ರಸ್ತುತ 2 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದೀಗ ಅಮೆರಿಕದಲ್ಲಿರುವ ಒಟ್ಟು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ 20ರಷ್ಟಿದೆ.

ಕಳೆದ ವರ್ಷ ದಾಖಲೆಯ 1.25 ಲಕ್ಷ ವಿದ್ಯಾರ್ಥಿ ವೀಸಾಗಳನ್ನು ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾರ್ಥಿಗಳ ಸಂದರ್ಶನ ಮಾಡುತ್ತೇವೆ ಎಂದು ಭಾರತದ ಕಾನ್ಸುಲರ್ ಅಫೇರ್ಸ್‌ನ ಪ್ರಭಾರ ಮಿನಿಸ್ಟರ್ ಕೌನ್ಸೆಲ್ಲರ್ ಬ್ರೆಂಡೆನ್ ಮುಲ್ಲಾರ್ಕೀ ಹೇಳಿದರು.

ಅಮೆರಿಕ ರಾಯಭಾರ ಕಚೇರಿಯು ಅಮೆರಿಕದಲ್ಲಿ ಅಧ್ಯಯನ ಮಾಡಲು ಆಸಕ್ತಿ ಇರುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಮತ್ತು ವೀಸಾ ಪ್ರಕ್ರಿಯೆಗಳಿಗೆ ನೆರವಾಗುತ್ತಿದೆ. ವಿಶ್ವಾಸಾರ್ಹ ಮತ್ತು ಸಮಗ್ರ ಮಾಹಿತಿಯೊಂದಿಗೆ ನೆರವಾಗಲು ಅಮೇರಿಕ ಸರ್ಕಾರದ ಪ್ರಾಯೋಜಿತ ಸಲಹಾ ಸೇವೆ 'ಎಜುಕೇಷನ್ ಯುಎಸ್ಎ' ಸಂಪರ್ಕಿಸಬಹುದು. ಈ ಸಂಸ್ಥೆಯು ಅಮೆರಿಕ ಸರ್ಕಾರದ ಮಾನ್ಯತೆ ಪಡೆದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುತ್ತದೆ. ಭಾರತದಾದ್ಯಂತ ಎಂಟು ಸಲಹಾ ಕೇಂದ್ರಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು educationusa.state.gov ಭೇಟಿ ನೀಡಬಹುದು ಅಥವಾ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ @educationUSAIndia ನೋಡಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.