ಕನ್ನಡ ಸುದ್ದಿ  /  Nation And-world  /  India News Uttarkashi Rescue Workers Evacuated From Silkyara Tunnel Rescue Operation Underway Uks

Uttarkashi Rescue: ಉತ್ತರಕಾಶಿ ಸುರಂಗ ಕುಸಿತ, 17 ದಿನಗಳ ಬಳಿಕ 41 ಕಾರ್ಮಿಕರ ರಕ್ಷಣೆ, ನ.12ರಿಂದ ಇಲ್ಲಿತನಕ ಏನೇನಾಯಿತು ಇಲ್ಲಿದೆ ವಿವರ

ಬಹಳ ದಿನಗಳ ಕಾಲ ಉತ್ತರಾಖಂಡದ ಉತ್ತರಕಾಶಿಯ ಸಿಲ್ಕಯಾರ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ. ನವೆಂಬರ್ 12ರಿಂದ ಇಂದುವರೆಗೆ ಏನೇನಾಯಿತು. ಇಲ್ಲಿದೆ ಪೂರ್ಣ ವಿವರ.

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ, ರಕ್ಷಣಾ ಕಾರ್ಯದ ಅಂತಿಮ ಹಂತದ ನೋಟ.
ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ, ರಕ್ಷಣಾ ಕಾರ್ಯದ ಅಂತಿಮ ಹಂತದ ನೋಟ. (ANI)

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕಯಾರ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಪೈಕಿ ಮೊದಲ ಹಂತದಲ್ಲಿ ಐವರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಕಾರ್ಮಿಕರ ಜತೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ್ ದಾಮಿ ಮಾತನಾಡಿದ್ದು, ಅವರ ಆರೋಗ್ಯ ವಿಚಾರಿಸಿ, ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದರು.

ಈ ಕಾರ್ಮಿಕರು ನವೆಂಬರ್ 12ರಿಂದ ಸುರಂಗದಲ್ಲೇ ಸಿಲುಕಿಕೊಂಡಿದ್ದರು. ಉಳಿದ ಕಾರ್ಮಿಕರು ಕೂಡ ಸುರಕ್ಷಿತವಾಗಿದ್ದಾರೆ. ಹಂತ ಹಂತವಾಗಿ ಕಾರ್ಮಿಕರನ್ನು ಅಲ್ಲಿಂದ ಹೊರತರುವ ಕೆಲಸ ಮಾಡಲಾಗುತ್ತಿದೆ. ಮತ್ತೆ 10 ಕಾರ್ಮಿಕರು ಹೊರಗೆ ಬಂದಿದ್ದು, ಒಟ್ಟು 15 ಕಾರ್ಮಿಕರು ಹೊರಗೆ ಬಂದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಲ್ಕ್‌ಯಾರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ನವೆಂಬರ್ 12ರಂದು ಕುಸಿದಿತ್ತು. ಹೀಗಾಗಿ 41 ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು. ಅವರನ್ನು ಅಲ್ಲಿಂದ ಹೊರತರಲು ಕುಸಿದ ಮಣ್ಣನ್ನು ಸರಿಸುವ ಪ್ರಯತ್ನ ಮಾಡಿದರು. ಕೊನೆಗೆ ಸುರಂಗ ಕೊರೆದು ಹೊರತರುವ ಪ್ರಯತ್ನ ಮಾಡಿ ಅದರಲ್ಲಿ ಈಗ ಯಶಸ್ಸು ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸುರಂಗದಿಂದ ಹೊರ ಬಂದ ಕಾರ್ಮಿಕರನ್ನು ಬರಮಾಡಿಕೊಂಡ ಕ್ಷಣ..

ಕಳೆದ 17 ದಿನಗಳಿಂದ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆ ದೇಶದ ಗಮನ ಸೆಳೆದಿತ್ತು. ಭೂಕುಸಿತ ಸಂಭವಿಸಿದ್ದರಿಂದ 41 ಕಾರ್ಮಿಕರು ನಿರ್ಮಾಣ ಹಂತದ ಸುರಂಗದಲ್ಲಿ 4.5-ಕಿಲೋಮೀಟರ್ (2.8-ಮೈಲಿ) ಒಳಗೆ ಸಿಲುಕಿದ್ದರು. ಪ್ರವೇಶದ್ವಾರದಿಂದ ಸುಮಾರು 200 ಮೀಟರ್ (650 ಅಡಿ) ದೂರದಲ್ಲಿ ಭೂಕುಸಿತ ಉಂಟಾಗಿತ್ತು. ಈಗ ಆ ಮಣ್ಣು ತೆರವುಗೊಳಿಸಲು ಮತ್ತೆ ಸುರಂಗ ಕೊರೆದು ಕಾರ್ಮಿಕರನ್ನು ರಕ್ಷಿಸಲಾಗಿದೆ.

ಕಿರಿದಾದ ಉಕ್ಕಿನ ಕೊಳವೆಗಳ ಮೂಲಕ ಸರಬರಾಜು ಮಾಡಿದ ಆಹಾರ ಮತ್ತು ಆಮ್ಲಜನಕದ ಕಾರಣ ಕಾರ್ಮಿಕರು ಬದುಕುಳಿದರು. 13 ಮೀಟರ್ (42.6 ಅಡಿ) ಅಗಲದ ಸುರಂಗದ ಮೂಲಕ ಹೊರ ಕರೆತಂದ ನಂತರ, ಅವರನ್ನು ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಕಾಶಿ ಸುರಂಗ ದುರಂತದ ಆ 17 ದಿನಗಳು

ಉತ್ತರಕಾಶಿ ಸುರಂಗ ದುರಂತ ಆಗಿ 17 ದಿನಗಳ ಬಳಿಕ 41 ಕಾರ್ಮಿಕರ ರಕ್ಷಣೆ ಆಗಿದೆ. ಆ ಹದಿನೇಳು ದಿನಗಳಲ್ಲಿ ಏನೇನಾಯಿತು ಇಲ್ಲಿದೆ ವಿವರ.

ನವೆಂಬರ್ 12 - ದೀಪಾವಳಿಯ ದಿನ ಬೆಳಿಗ್ಗೆ 5.30 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ನಂತರ ಬ್ರಹ್ಮಖಾಲ್-ಯಮುನೋತ್ರಿ ಹೆದ್ದಾರಿಯಲ್ಲಿ ಸಿಲ್ಕ್ಯಾರಾ-ದಂಡಲ್ಗಾಂವ್ ನಿರ್ಮಾಣ ಹಂತದ ಸುರಂಗದ ಭಾಗಗಳು ಕುಸಿದಿ ಕಾರಣ 41 ಕಾರ್ಮಿಕರು ಅದರೊಳಗೆ ಸಿಲುಕಿಕೊಂಡರು.

ಕೂಡಲೇ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಬಿಆರ್‌ಒ, ಪ್ರಾಜೆಕ್ಟ್ ಎಕ್ಸಿಕ್ಯೂಟಿಂಗ್ ಏಜೆನ್ಸಿ ಎನ್‌ಎಚ್‌ಐಡಿಸಿಎಲ್ ಮತ್ತು ಐಟಿಬಿಪಿ ಸೇರಿದಂತೆ ಅನೇಕ ಏಜೆನ್ಸಿಗಳು ರಕ್ಷಣಾಕಾರ್ಯಾಚರಣೆ ಶುರುಮಾಡದವು. ಸಪೂರ ಕೊಳವೆಯ ಮೂಲಕ ಆಮ್ಲಜನಕ, ವಿದ್ಯುತ್ ಮತ್ತು ಆಹಾರ ಪೂರೈಕೆ ಮಾಡುವ ಪ್ರಯತ್ನ ನಡೆದಿದೆ. ಇದರ ಜತೆಗೆ ರಕ್ಷಣಾ ಕಾರ್ಯ ಶುರುವಾಗಿದೆ.

ನವೆಂಬರ್ 13 - ಸುರಂಗದೊಳಗಿದ್ದ ಕಾರ್ಮಿಕರಿಗೆ ಆಮ್ಲಜನಕ ಪೂರೈಸುವ ಪೈಪ್ ಸಿಕ್ಕಿದೆ. ಅವರು ಸುರಕ್ಷಿತವಾಗಿರುವುದು ಖಚಿತವಾಗಿದೆ. ಹೊಸದಾಗಿ ಭೂಕುಸಿತ ಸಂಭವಿಸುತ್ತಿತ್ತು. 30 ಮೀಟರ್ ವ್ಯಾಪ್ತಿಯಲ್ಲಿದ್ದ ಭೂಕುಸಿತದ ಮಣ್ಣು 60 ಮೀಟರ್‌ ತನಕ ವ್ಯಾಪಿಸಿದೆ.

ನವೆಂಬರ್ 14 - 800- ಮತ್ತು 900-ಮಿಲಿಮೀಟರ್ ವ್ಯಾಸದ ಉಕ್ಕಿನ ಪೈಪ್‌ಗಳನ್ನು ಸುರಂಗದ ಸ್ಥಳಕ್ಕೆ ತಂದು ಸಮತಲ ಅಗೆಯಲು ಆಗರ್ ಯಂತ್ರವನ್ನೂ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ, ಭೂಕುಸಿತ ಸಂಭವಿಸಿದ್ದರಿಂದ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿವೆ.

ನವೆಂಬರ್ 15 - ಮೊದಲ ಆಗರ್ ಯಂತ್ರದ ಕೆಲಸ ತೃಪ್ತಿಕರವಲ್ಲದ ಕಾರಣ, ಹೊಸ ಆಗರ್ ಯಂತ್ರವನ್ನು ವಿಮಾನದ ಮೂಲಕ ತರಿಸಿಕೊಳ್ಳಲಾಗುತ್ತದೆ.

ನವೆಂಬರ್ 16 - ಹೊಸ ಆಗರ್ ಯಂತ್ರವನ್ನು ಸ್ಥಾಪಿಸಿ ಮಧ್ಯರಾತ್ರಿ ರಕ್ಷಣಾ ಕಾರ್ಯ ಮತ್ತೆ ಮುಂದುವರಿದಿದೆ.

ನವೆಂಬರ್ 17 - ಈ ಆಗರ್ ಯಂತ್ರವು ಮಧ್ಯಾಹ್ನದ ವೇಳೆಗೆ 57 ಮೀಟರ್ ಕಲ್ಲುಮಣ್ಣುಗಳ ಮೂಲಕ ಸುಮಾರು 24 ಮೀಟರ್‌ಗಳನ್ನು ಕೊರೆದಿದೆ. ನಾಲ್ಕು ಎಂಎಸ್ ಪೈಪ್‌ಗಳನ್ನು ಸೇರಿಸಲಾಗಿದೆ. ಐದನೇ ಪೈಪ್ ಸೇರಿಸುವಾಗ ಅಡಚಣೆ ಉಂಟಾಯಿತು. ಸುರಂಗದಲ್ಲಿ ದೊಡ್ಡ ಬಿರುಕು ಮತ್ತು ಸದ್ದುಗಳಾದ ಕಾರಣ ಕಾರ್ಯಾಚರಣೆ ಸ್ಥಗಿತ.

ನವೆಂಬರ್ 18 - ಸುರಂಗದೊಳಗೆ ಡೀಸೆಲ್ ಚಾಲಿತ 1,750-ಅಶ್ವಶಕ್ತಿಯ ಅಮೇರಿಕನ್ ಆಗರ್‌ ಹೆಚ್ಚು ಕಂಪನ ಸೃಷ್ಟಿಸಿ ಇನ್ನಷ್ಟು ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಪರಿಣತರು ಹೇಳಿದ್ದರು. ಹೀಗಾಗಿ ಸುರಂಗದ ಮೇಲ್ಭಾಗದಿಂದ ಲಂಬವಾಗಿ ಸುರಂಗ ಕೊರೆಯಲು ತೀರ್ಮಾನ.

ನವೆಂಬರ್ 19 - ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೃಹತ್ ಆಗರ್ ಯಂತ್ರದೊಂದಿಗೆ ಲಂಬವಾಗಿ ಸುರಂಗ ಕೊರೆಯುವುದು ಉತ್ತಮ ಎಂದಾಗ, ಮತ್ತೆ ಕಾರ್ಯಾಚರಣೆ ಸ್ಥಗಿತ. ಸಾಧಕ ಬಾಧಕ ಚಿಂತನೆ.

ನವೆಂಬರ್ 20 - ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರೊಂದಿಗೆ ದೂರವಾಣಿ ಮೂಲಕ ಕಾರ್ಯಾಚರಣೆಗಳ ವಿವರ ಪಡೆದರು. ಆ ಸಂದರ್ಭದಲ್ಲಿ, ಆಗರ್ ಯಂತ್ರದ ಕೆಲಸಕ್ಕೆ ಬಂಡೆ ಅಡ್ಡವಾದ ಕಾರಣ ನಿಂತಿತ್ತು.

ನವೆಂಬರ್ 21- ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರ ಮೊದಲ ವೀಡಿಯೊವನ್ನು ಬಿಡುಗಡೆ ಮಾಡಲಾಯಿತು. ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿರುವ ಕಾರ್ಮಿಕರು ಪೈಪ್‌ಲೈನ್ ಮೂಲಕ ಕಳುಹಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಿ ಪರಸ್ಪರ ಮಾತನಾಡುತ್ತಿರುವ ದೃಶ್ಯ ಅದರಲ್ಲಿತ್ತು. ಮತ್ತೊಂದು ಸುರಂಗವನ್ನು ಕೊರೆಯುವ ಪ್ರಕ್ರಿಯೆ ಶುರು.

ನವೆಂಬರ್ 22 - ರಕ್ಷಣಾ ಕಾರ್ಯಕ್ಕೆ ಸುರಂಗ ಕೊರೆಯುವಿಕೆಯಲ್ಲಿ ಬಹಳಷ್ಟು ಪ್ರಗತಿ ಆಗಿದ್ದು, ಕಾರ್ಮಿಕರನ್ನು ಹೊರಕರೆತರುವ ಆಶಾಭಾವ ಹೆಚ್ಚಾಗಿತ್ತು. ಆಗರ್ ಯಂತ್ರಕ್ಕೆ ಕಬ್ಬಿಣದ ಸರಳುಗಳಿಂದ ಅಡ್ಡಿ ಉಂಟಾಗಿ ಕೆಲ ಕಾಲ ಕಾರ್ಯ ನಿಂತಿತ್ತು.

ನವೆಂಬರ್ 23 - ಆರು ಗಂಟೆ ವಿಳಂಬವಾಗಿ ಕಬ್ಬಿಣದ ಸರಳುಗಳನ್ನು ತೆಗೆದು ಆಗರ್ ಯಂತ್ರದ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲಾಗಿತ್ತು. ಇದು ಮತ್ತೂ 48 ಮೀಟರ್ ಒಳಗೆ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ನವೆಂಬರ್ 24 - ಮುಂದುವರಿದ ಕಾರ್ಯಾಚರಣೆ

ನವೆಂಬರ್ 25 - ಅವಶೇಷಗಳ ಮೂಲಕ ಕೊರೆಯುವ ಆಗರ್ ಯಂತ್ರದ ಬ್ಲೇಡ್‌ಗಳು ಜಾಮ್ ಆಗಿದ್ದವು. ಪರ್ಯಾಯ ಕ್ರಮಗಳ ಕುರಿತು ಚಿಂತನೆ ನಡೆಸಿದ ಪರಿಣತರು.

ನವೆಂಬರ್ 26 - ಪರ್ಯಾಯವಾಗಿ 19.2 ಮೀಟರ್‌ಗಳ ಲಂಬ ಕೊರೆಯುವಿಕೆ ಬಳಿಕ, ಕಾರ್ಮಿಕರು ಹೊರಗೆ ಬರುವ ಸುರಂಗ ರಚನೆಗೆ 700-ಮಿಮೀ ಅಗಲದ ಪೈಪ್‌ಗಳನ್ನು ಸೇರಿಸಲಾಯಿತು.

ನವೆಂಬರ್ 27 - ಗಣಿಗಾರಿಕೆ ತಜ್ಞರ ನೆರವಿನೊಂದಿಗೆ 10 ಮೀಟರ್‌ ಅಡ್ಡಲಾಗಿ ಸುರಂಗ ಕೊರೆಯಲಾಗುತ್ತದೆ. ಇನ್ನೊಂದೆಡೆ ಸುರಂಗದ ಮೇಲಿನಿಂದ ಲಂಬ ಕೊರೆಯುವಿಕೆಯು 36 ಮೀಟರ್ ಆಳವನ್ನು ತಲುಪಿತು.

ನವೆಂಬರ್ 28 - ಸತತ ಕಾರ್ಯಾಚರಣೆ ಬಳಿಕ ಮುಸ್ಸಂಜೆ 7 ಗಂಟೆ ಸುಮಾರಿಗೆ ಕಾರ್ಮಿಕರನ್ನು ಹೊರ ಕರೆತಂದ ತಂಡ.

ವಿಭಾಗ