ಆಸ್ಪತ್ರೆಯಲ್ಲಿ ರಕ್ತದಾನ ಪಡೆದ 14 ಮಕ್ಕಳಲ್ಲಿ ಎಚ್‌ಐವಿ, ಹೆಪಟೈಟಿಸ್ ಸೋಂಕು ಪತ್ತೆ; ಆಘಾತಕಾರಿ ಬೆಳವಣಿಗೆಯಿಂದ ಹೆತ್ತವರು ಕಂಗಾಲು
ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ರಕ್ತದಾನ ಪಡೆದ 14 ಮಕ್ಕಳಲ್ಲಿ ಹೆಪಟೈಟಿಸ್, ಎಚ್‌ಐವಿ ಸೋಂಕು ಕಾಣಿಸಿದೆ. ಈ ಆಘಾತಕಾರಿ ಬೆಳವಣಿಗೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಆಸ್ಪತ್ರೆಗಳು ಮಾಡಿದ ಯಡವಟ್ಟಿನಿಂದಾಗಿ ಪೋಷಕರು ಕಂಗಾಲಾಗಿದ್ದಾರೆ.
ಉತ್ತರಪ್ರದೇಶ: ರಕ್ತದಾನ ಪಡೆದಿರುವ 14ಕ್ಕೂ ಹೆಚ್ಚು ಮಕ್ಕಳಲ್ಲಿ ಹೆಪಟೈಟಿಸ್ ಬಿ, ಸಿ ಮತ್ತು ಎಚ್‌ಐವಿ ಸೋಂಕಿನ ಪಾಸಿಟಿವ್ ಕಾಣಿಸಿದೆ ಎಂದು ಕಾನ್ಪುರದ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ. 6 ರಿಂದ 16 ವರ್ಷಗಳ ಮಕ್ಕಳಲ್ಲಿ ಈ ಸೋಂಕು ಕಾಣಿಸಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ಸರ್ಕಾರಿ ಸ್ವಾಮ್ಯದ ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ. ದಾನಿಗಳಿಂದ ರಕ್ತ ಪಡೆದ ಮೇಲೆ ಅದನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ಅಲ್ಲದೆ ಪಡೆದ ರಕ್ತವನ್ನು ಇನ್ನೊಬ್ಬರಿಗೆ ನೀಡುವಾಗ ಪರಿಶೀಲನೆ ನಡೆಸಿ ನೀಡಬೇಕು. ಆದರೆ ರಕ್ತ ನೀಡುವ ಕಾರ್ಯದ ವೇಳೆ ಉಂಟಾದ ಲೋಪ ದೋಷದ ಕಾರಣದಿಂದ ಈ ರೀತಿ ಆಗಿರಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಲಾಲಾ ಲಜಪತ್‌ರಾಯ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಹಾಗೂ ಈ ಆರೋಗ್ಯ ಕೇಂದ್ರದ ನೋಡಲ್ ಅಧಿಕಾರಿ ಡಾ. ಅರುಣ್ ಆರ್ಯ ಅವರು ʼಇದು ಕಳವಳಕಾರಿ ವಿಷಯವಾಗಿದೆ. ರಕ್ತ ವರ್ಗಾವಣೆಯ ಅಪಾಯಗಳನ್ನು ಇದು ತೋರಿಸುತ್ತಿದೆ ಎಂದಿದ್ದಾರೆ.
"ನಾವು ಹೆಪಟೈಟಿಸ್ ರೋಗಿಗಳನ್ನು ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ಮತ್ತು ಎಚ್‌ಐವಿ ರೋಗಿಗಳನ್ನು ಕಾನ್ಪುರದ ರೆಫರಲ್ ಸೆಂಟರ್‌ಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ್ದೇವೆ, ಎಚ್‌ಐವಿ ಸೋಂಕು ಆತಂಕಕಾರಿಯಾಗಿದೆʼ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ 180 ಥಲಸ್ಸೆಮಿಯಾ ರೋಗಿಗಳು ಕೇಂದ್ರದಲ್ಲಿ ರಕ್ತ ವರ್ಗಾವಣೆ ಪಡೆಯುತ್ತಾರೆ. ಪ್ರತಿ ಆರು ತಿಂಗಳಿಗೊಮ್ಮೆ ವೈರಲ್ ಕಾಯಿಲೆಗಳಿಗೆ ತಪಾಸಣೆ ನಡೆಯುತ್ತದೆ. ಈ 14 ಮಕ್ಕಳು ಖಾಸಗಿ, ಜಿಲ್ಲಾ ಆಸ್ಪತ್ರೆ ಹಾಗೂ ಕೆಲವು ಸಮಯ ಸ್ಥಳೀಯವಾಗಿ ಅವರಿಗೆ ತುರ್ತು ಅಗತ್ಯವಿದ್ದಾಗ ರಕ್ತ ಪಡೆದಿದ್ದಾರೆ.
ʼಈ ಮಕ್ಕಳು ಈಗಾಗಲೇ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದು, ಇದೀಗ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ವಿಂಡೋ ಅವಧಿ
ಯಾರಾದರೂ ರಕ್ತದಾನ ಮಾಡಿದಾಗ, ರಕ್ತವು ಬಳಕೆಗೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ರಕ್ತವನ್ನು ಪರೀಕ್ಷಿಸಲಾಗುತ್ತದೆ. ಆದಾಗ್ಯೂ, ಯಾರಾದರೂ ಸೋಂಕಿಗೆ ಒಳಗಾದ ನಂತರ ಪರೀಕ್ಷೆಗಳಿಂದ ವೈರಸ್ ಅನ್ನು ಪತ್ತೆಹಚ್ಚಲು ಸಾಧ್ಯವಾಗದ ಅವಧಿ ಇದೆ ಇದನ್ನು ʼವಿಂಡೋ ಅವಧಿʼ ಎಂದು ಕರೆಯಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ʼರಕ್ತ ವರ್ಗಾವಣೆಯ ಸಮಯದಲ್ಲಿ ವೈದ್ಯರು ಹೆಪಟೈಟಿಸ್ ಬಿ ಲಸಿಕೆಯನ್ನು ಕಡ್ಡಾಯವಾಗಿ ಮಕ್ಕಳಿಗೆ ನೀಡಬೇಕುʼ ಎಂದು ಅವರು ತಿಳಿಸಿದ್ದಾರೆ.
180 ರೋಗಿಗಳಲ್ಲಿ 14 ಮಕ್ಕಳು 6 ರಿಂದ 16 ವರ್ಷ ವಯಸ್ಸಿನವರಾಗಿದ್ದಾರೆ. ಸೋಂಕಿತ ಮಕ್ಕಳಲ್ಲಿ ಏಳು ಮಂದಿ ಹೆಪಟೈಟಿಸ್ ಬಿ, ಐವರು ಹೆಪಟೈಟಿಸ್ ಸಿ ಹಾಗೂ ಒಬ್ಬರಿಗೆ ಎಚ್‌ಐವಿ ಪಾಸಿಟಿವ್ ಬಂದಿದೆ ಎಂದು ಡಾ. ಆರ್ಯ ಹೇಳಿದ್ದಾರೆ.
ಕಾನ್ಪುರ್ ಸಿಟಿ, ದೇಹತ್, ಫರೂಕಾಬಾದ್, ಔರೈಯಾ, ಇಟಾವಾ ಮತ್ತು ಕನ್ನೌಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಮಕ್ಕಳು ಈ ರಕ್ತ ವರ್ಗಾವಣೆಗೆ ಒಳಗಾಗಿ ಹೆಪಟೈಟಿಸ್ ಹಾಗೂ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ.
ʼಯಾವ ಲ್ಯಾಬ್ ಅಥವಾ ಆಸ್ಪತ್ರೆಯಲ್ಲಿ ರಕ್ತ ಪಡೆದು ಮಕ್ಕಳು ಸೋಂಕಿ ಒಳಗಾಗಿದ್ದಾರೆ ಎಂಬುದನ್ನು ಸದ್ಯದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಉತ್ತರ ಪ್ರದೇಶ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಭಾಗ