Food Rates: ಫೆಬ್ರವರಿಯಲ್ಲಿ ಸಸ್ಯಾಹಾರಿ ಆಹಾರ ದರ ಇಳಿಕೆ, ಮಾಂಸಾಹಾರದ ದರದಲ್ಲಿ ಏರಿಕೆ !
ತರಕಾರಿಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಾರಣದಿಂದ ಭಾರತದಲ್ಲಿ ಸಸ್ಯಾಹಾರದ ಥಾಲಿ ಬೆಲೆ ಮೂರು ತಿಂಗಳಿನಿಂದ ಇಳಿಕೆಯಾಗುತ್ತಲೇ ಇದೆ. ಅದೇ ಮಾಂಸಾಹಾರದ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ.

ದೆಹಲಿ: ಸತತ ಮೂರು ತಿಂಗಳಿನಿಂದ ಭಾರತದಲ್ಲಿ ಸಸ್ಯಾಹಾರದ ದರದಲ್ಲಿ ಇಳಿಕೆ ಕಂಡು ಬಂದಿದೆ. ಹಿಂದಿನ ವರ್ಷವೆಲ್ಲಾ ಏರುಗತಿಯಲ್ಲಿ ಸಸ್ಯಾಹಾರದ ಬೆಲೆ ಮೊದಲ ಬಾರಿಗೆ ಇಳಿಕೆಯಾಗುತ್ತಲೇ ಇದೆ. ಆದರೆ ಅದೇ ಮಾಂಸಾಹಾರದ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಪ್ರತಿ ಸಸ್ಯಾಹಾರದ ಊಟದ ಬೆಲೆಯಲ್ಲಿ ಶೇ. 2ರಷ್ಟು ಇಳಿಕೆ ಕಂಡು ಬಂದಿದೆ. ಅಂದರೆ ಪ್ರತಿ ಥಾಲಿಯ ದರ 27.50 ನಷ್ಟಿದೆ. ಅದೇ ಮಾಂಸಾಹಾರದ ಊಟದ ಬೆಲೆಯಲ್ಲಿ ಶೇ. 4ರಷ್ಟು ಏರಿಕೆಯಾಗಿದ್ದರೆ, ಪ್ರತಿ ತಾಲಿ ದರವು ಸರಾಸರಿ 54 ರೂ.ನಷ್ಟಿತ್ತು.
ಈ ಕುರಿತು ಕ್ರೆಸಿಲ್ ಸಂಸ್ಥೆಯು ಹೊಟೇಲ್ ಸಂಘಟನೆಗಳು, ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ಸಂಸ್ಥೆಗಳೊಂದಿಗೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಸಸ್ಯಾಹಾರ ಥಾಲಿ ಎನ್ನುವುದು ರೋಟಿ, ತರಕಾರಿಗಳು, ದಾಲ್, ಮೊಸರು, ಸಲಾಡ್‌ನ ಭಾಗ. ಅದೇ ರೀತಿ ಮಾಂಸಾಹಾರ ಥಾಲಿ ಎನ್ನುವುದು ದಾಲ್ ಬದಲು ಬಾಯ್ಲರ್ ಚಿಕನ್ ಮಸಾಲ ಒಳಗೊಂಡ ಊಟ. ಅಗತ್ಯ ವಸ್ತುಗಳ ದರ ಏರಿಳಿತ ಕಾಣುತ್ತಿದ್ದರೂ ಊಟದ ದರದಲ್ಲಿ ಭಾರೀ ವ್ಯತ್ಯಾಸವೇನೂ ಹೊಟೇಲ್ ಗಳಲ್ಲಿ ಆಗಿಲ್ಲ. ಅದರಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಥಾಲಿಗಳಲ್ಲಿ ಮಾತ್ರ ಸಣ್ಣ ಪುಟ್ಟ ಏರಿಳಿತ ಆಗುತ್ತಲೇ ಇದೆ.
ಆದರೆ ಕಳೆದ ವರ್ಷ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಸಹಿತ ಕೆಲವು ತರಕಾರಿಗಳ ವಸ್ತುಗಳ ಬೆಲೆ ಗಗನಕ್ಕೆ ಏರಿತ್ತು. ಆಗ ಸಸ್ಯಾಹಾರದ ದರದಲ್ಲಿ ಏರಿಕೆ ಕಂಡು ಬಂದು ಮಾಂಸಾಹಾರದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಅದರಲ್ಲೂ ಸಸ್ಯಾಹಾರದ ಥಾಲಿ ಬೆಲೆ ಭಾರೀ ಏರಿಕೆ ಕಂಡಿತ್ತು. ಮೂರು ತಿಂಗಳಲ್ಲಿ ಶೇ. 14ರಷ್ಟು ಸಸ್ಯಾಹಾರಿ ಥಾಲಿ ದರ ಇಳಿಕೆಯಾಗಿದೆ. ಅದೇ ಮಾಂಸಾಹಾರದ ಥಾಲಿ ದರ ಈಗ ಶೇ.10 ರಷ್ಟು ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಫ್ಲೂನಿಂದ ಕೋಳಿ ಸಾಗಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಕೋಳಿ ಮಾಂಸದ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು ದರ ಹೆಚ್ಚಲು ದಾರಿ ಮಾಡಿಕೊಟ್ಟಿತ್ತು ಎನ್ನುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಇದಲ್ಲದೇ ಇನ್ನೇನು ರಂಜಾನ್ ಹಬ್ಬವೂ ಶುರುವಾಗಲಿದೆ. ಪ್ರತಿ ದಿನ ಮಾಂಸಾಹಾರದ ಊಟ, ಇಫ್ತಿಯಾರ್ ಕೂಟಗಳು ನಡೆಯಲಿವೆ. ಹಬ್ಬದ ಕಾರಣದಿಂದ ಕೋಳಿ ಮಾಂಸದ ದರದಲ್ಲೂ ಏರಿಕೆ ಕಂಡು ಬರುತ್ತಿದೆ. ಇದು ಮಾಂಸಾಹಾರದ ಥಾಲಿ ಬೆಲೆ ಹೆಚ್ಚುವಂತೆ ಮಾಡಿದೆ ಎಂದು ಮಿಂಟ್ ಪತ್ರಿಕೆ ವರದಿ ಮಾಡಿದೆ.
ಈಗಾಗಲೇ ದೇಶಾದ್ಯಂತ ಈರುಳ್ಳಿ ಬೆಲೆ ಕುಸಿದಿದೆ. ಕೆಜಿಗೆ ಈರುಳ್ಳಿ ಬೆಲೆ 12 ರೂ. ಇದೆ. ಇದು ಇನ್ನೂ ಕಡಿಮೆಯಾಗುವ ಸೂಚನೆಗಳಿವೆ. ಏಕೆಂದರೆ ಮಾರ್ಚ್ ನಲ್ಲಿ ಇನ್ನಷ್ಟು ಇಳುವರಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರಿಂದ ಊಟದ ಬೆಲೆಯಲ್ಲಿ ಏರಿಳಿತ ಮತ್ತೆ ಕಾಣಬಹುದು ಎನ್ನುತ್ತಾರೆ ದೆಹಲಿಯ ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಸಿಸ್‌ನ ಸಂಶೋಧನಾ ವಿಭಾಗದ ನಿರ್ದೇಶಕ ಪವನ್ ಶರ್ಮ ಹೇಳುತ್ತಾರೆ.
ಭಾರತದಲ್ಲಿ ಮಾನ್‌ಸೂನ್ ಕಣ್ಣಾಮುಚ್ಚಾಲೆ, ಹವಾಮಾನ ವ್ಯತ್ಯಾಸಗಳು, ರೈತರ ಹೋರಾಟದಿಂದ ಆಹಾರ ಸಾಗಣೆ ಸರಪಳಿಯಲ್ಲೂ ವ್ಯತ್ಯಾಸಗಳಾಗಿ ಹಿಂದಿನ ವರ್ಷ ಬೆಲೆ ಏರುಗತಿಯಲ್ಲೇ ಇತ್ತು. ಇತ್ತೀಚಿನ ದಿನಗಳಲ್ಲಿ ರಫ್ತು ನಿಷೇಧ, ಆಮದು ಸರಳೀಕರಣಗೊಳಿಸಿರುವುದು ಆಹಾರ ವಸ್ತುಗಳ ಸಹಜ ಸರಬರಾಜಿಗೆ ದಾರಿ ಮಾಡಿಕೊಟ್ಟಿದೆ. ಆಹಾರ ಉತ್ಪನ್ನಗಳು, ಬೇಳೆ ಮತ್ತು ಕಾಳುಗಳ ದರದಲ್ಲಿಇಳಿಕೆಯಾಗುವ ಸೂಚನೆ ಇದೆ ಎನ್ನುವುದು ಕ್ರಿಸಿಲ್ ನೀಡಿರುವ ಮುನ್ಸೂಚನೆ.
