ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Womens Reservation Bill: ಮಹಿಳಾ ಮೀಸಲಾತಿ ಮಸೂದೆ ಎಂದರೇನು, ಇಷ್ಟು ದಿನ ನಾರಿ ಶಕ್ತಿಗೆ ಸಿಗದಿದ್ದು ಯಾಕೆ?

Womens Reservation Bill: ಮಹಿಳಾ ಮೀಸಲಾತಿ ಮಸೂದೆ ಎಂದರೇನು, ಇಷ್ಟು ದಿನ ನಾರಿ ಶಕ್ತಿಗೆ ಸಿಗದಿದ್ದು ಯಾಕೆ?

Women Reservation bill: ಕೇಂದ್ರದ ಎನ್‌ಡಿಎ ಸರ್ಕಾರಿ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿ ಮಸೂದೆ ಎಂದರೇನು? ಇದುವರೆಗೆ ಯಾಕೆ ಇದಕ್ಕೆ ಅನುಮೋದನೆ ಸಿಕ್ಕಿಲ್ಲ ಅನ್ನೋದರ ಮಾಹಿತಿ ಇಲ್ಲಿದೆ.

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೂ ಮುನ್ನ ಲೋಕಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೂ ಮುನ್ನ ಲೋಕಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ದೆಹಲಿ: ಸೋಮವಾರ (ಸೆಪ್ಟೆಂಬರ್ 18) ರಾತ್ರಿ ಕೇಂದ್ರ ಸಚಿವ ಸಂಪುಟದಲ್ಲಿ (Central Cabinet Meeting) ಮಹಿಳಾ ಮೀಸಲಾತಿ ಮಸೂದೆಗೆ (Womens Reservation Bill) ಒಪ್ಪಿಗೆ ನೀಡಿದ ಬಳಿಕ ದೇಶಾದ್ಯಂತ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಸಂಸತ್ತಿನ ವಿಶೇಷ ಅಧಿವೇಶನದ ಉಭಯ ಸದನಗಳ ಮುಂದೆ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಎಂದರೇನು? ಇತರ ಇತಿಹಾಸ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ತಿಳಿಯೋಣ.

ಮಹಿಳಾ ಮೀಸಲಾತಿ ಮಸೂದೆಯ ಇತಿಹಾಸ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೊದಲ ಬಾರಿಗೆ ಮುನ್ನೆಲೆಗೆ ಬಂತು. 1989ರಲ್ಲಿ ರಾಜೀವ್ ಗಾಂಧಿ ಈ ವಿಚಾರದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಈ ಮಸೂದೆಯು ಗ್ರಾಮೀಣ ಮತ್ತು ನಗರ ಚುನಾವಣಾ ವ್ಯವಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಬೇಕು ಎಂದು ಹೇಳುತ್ತದೆ. ಅಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ.

1992 ಮತ್ತು 1993 ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರವು 72 ಮತ್ತು 73ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಸಂಸತ್ತಿನಲ್ಲಿ ಮರು ಮಂಡನೆ ಮಾಡಿತ್ತು. ನಗರ ಮತ್ತು ಗ್ರಾಮೀಣ ಸ್ಥಳೀಯ ವ್ಯವಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಚು ಮೀಸಲಾತಿಯನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಿತ್ತು.

ಈ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ಕಾನೂನಾತ್ಮಕ ರೂಪವನ್ನು ಪಡೆದುಕೊಂಡಿದೆ. ಇದರ ಪರಿಣಾಮ ಇಂದು ದೇಶಾದ್ಯಂತ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆಗಳಲ್ಲಿ 15 ಲಕ್ಷ ಮಹಿಳಾ ಸದಸ್ಯರಿದ್ದಾರೆ.

ಮಹಿಳಾ ಮೀಸಲಾತಿಗೆ ಎದುರಾದ ಸವಾಲುಗಳೇನು?

1996ರ ಸೆಪ್ಟೆಂಬರ್ 12 ರಂದು ದೇವೇಗೌಡರ ನೇತೃತ್ವದ ಸಂಯುಕ್ತ ರಂಗದ ಸರ್ಕಾರ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಥಮ ಬಾರಿಗೆ 81ನೇ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ತಂದಿತ್ತು. ಆದರೆ ಅದು ಲೋಕಸಭೆಯಲ್ಲಿ ಅಂಗೀಕಾರವಾಗಲಿಲ್ಲ. ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಲಾಗಿತ್ತು. 1996ರ ಡಿಸೆಂಬರ್‌ನಲ್ಲಿ ಈ ಸಮಿತಿಯು ತನ್ನ ವರದಿಯನ್ನು ನೀಡಿತ್ತು. ಆದರೆ ಲೋಕಸಭೆ ವಿಸರ್ಜನೆಯಾದ ಮೇಲೆ ಯಾರೂ ಈ ಮಸೂದೆಯತ್ತ ಗಮನ ಹರಿಸಲಿಲ್ಲ.

ಎರಡು ವರ್ಷಗಳ ನಂತರ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವೂ ಈ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಸ್ತಾಪ ಮಾಡಿತು. ಆಗಲೂ ಮಸೂದೆಗೆ ಬೆಂಬಲ ಸಿಕ್ಕಿಲ್ಲ. 1999, 2002 ಹಾಗೂ 2003ರಲ್ಲಿ ವಾಜಪೇಯಿ ಸರ್ಕಾರದ ಪ್ರಯತ್ನಗಳು ಸಂಸತ್ತಿನಲ್ಲಿ ಮತ್ತೊಮ್ಮೆ ವಿಫಲವಾದವು.

ಇದಾದ ಐದು ವರ್ಷಗಳ ನಂತರ ಮನಮೋಹನ್ ಸಿಂಗ್ ಸರ್ಕಾರ ಈ ಮಸೂದೆಯನ್ನು ಪ್ರಸ್ತಾಪ ಮಾಡಿತು. 2008ರ ಮೇ 6 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. (ರಾಜ್ಯಸಭೆಯಲ್ಲಿ ಮೊದಲು ಪರಿಚಯಿಸಲಾದ ಮಸೂದೆಗಳಿಗೆ ಯಾವುದೇ ಸಮಯದ ಮಿತಿಯಿಲ್ಲ)

1996ರಲ್ಲಿ ಇದಕ್ಕಾಗಿ ರಚಿಸಿದ್ದ ಸಮಿತಿ ಮಾಡಿದ್ದ 7 ಶಿಫಾರಸುಗಳ ಪೈಕಿ ಐದು ಶಿಫಾರಸುಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಅಂದಿನ ಯುಪಿಎ ಸರ್ಕಾರ ಮಾಹಿತಿ ಬಹಿರಂಗಪಡಿಸಿತ್ತು. ಕೆಲವೇ ದಿನಗಳಲ್ಲಿ ಈ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. 2009ರ ಡಿಸೆಂಬರ್‌ನಲ್ಲಿ ಸ್ಥಾಯಿ ಸಮಿತಿ ವರದಿ ಬಂದಿತ್ತು. 2010ರಲ್ಲಿ ಲೋಕಸಭೆಯನ್ನು ವಿಸರ್ಜಿಸಲಾಗಿತ್ತು. ಈ ಮಸೂದೆಯನ್ನು ಪ್ರಧಾನಿ ಮೋದಿ ಸರ್ಕಾರ ಲೋಕಸಭೆಯಲ್ಲಿ ಇದುವರೆಗೆ ಪ್ರಸ್ತಾಪವೇ ಮಾಡಿರಲಿಲ್ಲ.

ಮಸೂದೆಯನ್ನು ಬೆಂಬಲಿಸುವಷ್ಟೇ ವಿರೋಧಿಸುವವರೂ ಇದ್ದಾರೆ

ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸುವಷ್ಟೇ ವಿರೋಧಿಸುವವರೂ ಇದ್ದಾರೆ. ನೀತಿ ನಿರೂಪಣೆಯಲ್ಲಿ ಮಹಿಳೆಯ ಪಾತ್ರ ಇರಬೇಕು ಮತ್ತು ಲಿಂಗ ಸಮಾನತೆಯನ್ನು ಸಾಧಿಸಲು ಈ ಮಸೂದೆಯನ್ನು ಅಂಗೀಕರಿಸಬೇಕು ಎಂದು ಮಸೂದೆ ಪರ ಇರುವವರು ಹೇಳುತ್ತಾರೆ.

ಇದೇ ವೇಳೆ ಇನ್ನೂ ಕೆಲವರು ಮಹಿಳಾ ಮೀಸಲಾತಿಯನ್ನು ಜಾತಿಗೆ ನೀಡಿರುವ ಮೀಸಲಾತಿಗೆ ಹೋಲಿಕೆ ಮಾಡಬಾರದು ಎನ್ನುತ್ತಾರೆ. ಒಂದು ವೇಳೆ ಈ ಮಸೂದೆ ಜಾರಿಯಾದರೆ ಸಂವಿಧಾನದಲ್ಲಿರುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಲಿದೆ ಎಂದು ಆರೋಪಿಸಲಾಗಿದೆ. ಮೀಸಲಾತಿ ಬಂದರೆ ಮೆರಿಟ್ ಆಧಾರದ ಸೀಟುಗಳು ಮಾಯವಾಗುತ್ತವೆ ಎನ್ನತ್ತಾರೆ. ರಾಜ್ಯಸಭೆಯ ಚುನಾವಣಾ ಪ್ರಕ್ರಿಯೆಯೂ ಈ ಮೀಸಲಾತಿಯನ್ನು ಬೆಂಬಲಿಸುವುದಿಲ್ಲ.

ಈಗ ಪರಿಸ್ಥಿತಿ ಏನು?

ಸಂಸತ್ ವಿಶೇಷ ಅಧಿವೇಶನ: ಈ ಮಸೂದೆ ಅಂಗೀಕಾರವಾದರೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ಸಿಗಲಿದೆ. ಇದುವರೆಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕೇರಳ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ ಹಾಗೂ ತ್ರಿಪುರ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ. ಈ ವಿಧಾನಸಭೆಗಳಲ್ಲಿ ಶೇಕಡಾ 10ಕ್ಕಿಂತ ಮಹಿಳಾ ಪ್ರತಿನಿಧಿಗಳು ಇದ್ದಾರೆ.

ಬಿಹಾರ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ್, ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಮಹಿಳಾ ಪ್ರಾತನಿಧ್ಯ ಶೇಕಡಾ 10 ರಿಂದ 12ರ ನಡುವೆ ಇದೆ. ಛತ್ತೀಸ್‌ಗಢ ಶೇ.14.47, ಪಶ್ಚಿಮ ಬಂಗಾಳದಲ್ಲಿ ಶೇ. 13.7 ಮತ್ತು ಜಾರ್ಖಂಡ್‌ನಲ್ಲಿ ಶೇ.12.5 ರಷ್ಟಿದೆ.

ಲೋಕಸಬೆಯ 543 ಸದಸ್ಯರ ಪೈಕಿ ಮಹಿಳೆಯ ಪಾಲು ಶೇಕಡಾ 15 ರಷ್ಟಿದೆ. ರಾಜ್ಯಸಭೆಗೆ ಸಂಬಂಧಿಸಿದಂತೆ ಇದು ಕೇವಲ 14 ರಷ್ಟು ಮಾತ್ರ ಇದೆ. ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಉಭಯ ಸದನಗಳಲ್ಲಿ ಎನ್‌ಡಿಎ ಸರ್ಕಾರವೇ ಸ್ಪಷ್ಟ ಬಹುಮತವನ್ನು ಹೊಂದಿದ್ದು, ಈ ಬಾರಿ ಮಹಿಳಾ ಮೀಸಲಾತಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

IPL_Entry_Point