ISRO News: ಐಎಸ್‌ಎಸ್‌ಗಿಂತ ಸಣ್ಣ ಬಾಹ್ಯಾಕಾಶ ಕೇಂದ್ರವನ್ನು ಭಾರತವೂ ನಿರ್ಮಿಸಲಿದೆ, ಯಾವಾಗ ಎಂಬ ಪ್ರಶ್ನೆಗೆ ಇಸ್ರೋ ಮುಖ್ಯಸ್ಥರ ಉತ್ತರ ಇದು
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮಾದರಿಯಲ್ಲೇ ಭಾರತದ್ದೂ ಒಂದು ಬಾಹ್ಯಕಾಶ ಕೇಂದ್ರ ಸ್ಥಾಪನೆಯಾಗಲಿದೆ. ಗಗನಯಾನ್ ಯೋಜನೆ ಪೂರ್ಣಗೊಂಡ ಬಳಿಕ ಈ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಳ್ಳಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದ್ದಾರೆ.

ಭಾರತವು ಮುಂದಿನ 20 ರಿಂದ 25 ವರ್ಷಗಳಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಶುಕ್ರವಾರ ಹೇಳಿದರು.
"ನಮ್ಮ ಗಗನಯಾನ್ ಕಾರ್ಯಕ್ರಮವು ಬಾಹ್ಯಾಕಾಶಕ್ಕೆ ಮಾನವ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಬಲಪಡಿಸಲಿದೆ. ಅದಾದ ನಂತರ, ನಾವು ಮುಂದಿನ ಮಾಡ್ಯೂಲ್‌ಗಳಲ್ಲಿ ಬಾಹ್ಯಾಕಾಶ ನಿಲ್ದಾಣದ ಕಟ್ಟಡವನ್ನು ನಿರ್ಮಿಸುವುದು ಸಾಧ್ಯವಾಗಲಿದೆ" ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) ಗೆ ನೀಡಿದ ಸಂದರ್ಶನದಲ್ಲಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದರು.
ಈ ಬಾಹ್ಯಾಕಾಶ ನಿಲ್ದಾಣ ಯೋಜನೆಯ ಕಾಲಮಿತಿಯು ಮುಂದಿನ 20 ರಿಂದ 25 ವರ್ಷಗಳವರೆಗೆ ವ್ಯಾಪಿಸುತ್ತದೆ. ನಾವು ಖಂಡಿತವಾಗಿಯೂ ಮಾನವ ಸಹಿತ ಪರಿಶೋಧನೆ, ದೀರ್ಘಾವಧಿಯ ಮಾನವ ಬಾಹ್ಯಾಕಾಶ ಯಾನ, ನಮ್ಮ ಕಾರ್ಯಸೂಚಿಯಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ನೋಡುತ್ತೇವೆ ಎಂದು ಭಾರತದ ಬಾಹ್ಯಾಕಾಶ ನಿಲ್ದಾಣದ ಯೋಜನೆಗಳ ಬಗ್ಗೆ ಕೇಳಿದಾಗ ಸೋಮನಾಥ್ ಉತ್ತರಿಸಿದರು.
ಭಾರತದ ಮೊದಲ ಮಾನವಸಹಿತ ಮಿಷನ್ ಗಗನ್‌ಯಾನ್ ಯೋಜನೆ 2019ರಲ್ಲಿ ಆರಂಭಿಸುವ ಉದ್ದೇಶ ಇತ್ತು. ಆದರೆ ಕೋವಿಡ್ ಕಾರಣ ಇದು ಮುಂದೂಡಲ್ಪಟ್ಟಿತ್ತು. ಆದಾಗ್ಯೂ, 2021 ರ ವೇಳೆಗೆ ಶುರುಮಾಡಲಾಗಿದೆ.
'ಐಎಸ್‌ಎಸ್‌ಗಿಂತ ಸಣ್ಣ ಬಾಹ್ಯಾಕಾಶ ಕೇಂದ್ರ'
ಗಗನಯಾನ್ ನಂತರ, ಮುಂದಿನ “ತಾರ್ಕಿಕ ಹಂತವು ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವುದು ಮತ್ತು ನಂತರ ಚಂದ್ರನಲ್ಲಿಗೆ ಮಾನವಸಹಿತ ಯೋಜನೆ ಯಶಸ್ವಿಗೊಳಿಸುವುದು. ಈ ವಿಚಾರವಾಗಿ ನಮಗೆ ಸ್ಪಷ್ಟವಾದ ಯೋಜನೆ ಇದೆ” ಎಂದು ಅಂದಿನ ಇಸ್ರೋ ಮುಖ್ಯಸ್ಥ ಕೆ ಶಿವನ್ ಹೇಳಿದ್ದರು.
ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಿದರೆ, ಆಗ ಅದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಎಂದು ಅವರು ಹೇಳಿದ್ದರು.
"ನಾವು ಸಣ್ಣ ಮಾಡ್ಯೂಲ್ ಅನ್ನು ಪ್ರಾರಂಭಿಸುತ್ತೇವೆ ಮತ್ತು ಅದನ್ನು ಮೈಕ್ರೋಗ್ರಾವಿಟಿ ಪ್ರಯೋಗಗಳನ್ನು ಕೈಗೊಳ್ಳಲು ಬಳಸಲಾಗುತ್ತದೆ. ಪ್ರವಾಸೋದ್ಯಮ ಮತ್ತು ಇತರ ವಿಷಯಗಳಿಗೆ ಮನುಷ್ಯರನ್ನು ಕಳುಹಿಸುವ ದೊಡ್ಡ ಯೋಜನೆಯನ್ನು ನಾವು ಹೊಂದಿಲ್ಲ" ಎಂದು ಶಿವನ್ ಹೇಳಿದ್ದರು.
ಪ್ರಸ್ತುತ, ಅಲ್ಲಿ ಇರುವುದು ಐಎಸ್‌ಎಸ್ ಮಾತ್ರ. ಅಂತಹ ಸೌಲಭ್ಯ ಇನ್ನೊಂದು ಇಲ್ಲ. ಐಎಸ್‌ಎಸ್ ಭೂಮಿಯ ಕೆಳ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತದೆ. 90 ನಿಮಿಷಗಳಲ್ಲಿ ನಮ್ಮ ಗ್ರಹದ ಸಂಪೂರ್ಣ ಸರ್ಕ್ಯೂಟ್ ಮಾಡಲು ಮೇಲ್ಮೈಯಿಂದ 400 ಕಿ.ಮೀ. ಎತ್ತರದಲ್ಲಿ ಹಾರುತ್ತದೆ.
ಯುಎಸ್, ರಷ್ಯಾ, ಜಪಾನ್, ಕೆನಡಾ ಮತ್ತು ಯುರೋಪಿಯನ್ ರಾಷ್ಟ್ರಗಳು 1998 ರಲ್ಲಿ ಸಹಭಾಗಿತ್ವದೊಂದಿಗೆ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಿದವು.
‘ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್
“ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮ್ಮಿಷ್ಟದ ವಿಷಯಗಳ ತ್ವರಿತ ಅಪ್‌ಡೇಟ್ ಪಡೆಯಲು 'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್ 🚀 ಫಾಲೊ ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್” ಕ್ಲಿಕ್ ಮಾಡಿ.
