Ayodhya Ram Mandir: ಮನೆಯಲ್ಲೇ ಕುಳಿತು ಅಯೋಧ್ಯೆ ರಾಮಮಂದಿರ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ವೀಕ್ಷಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಮನೆಯಲ್ಲೇ ಕುಳಿತು ಅಯೋಧ್ಯೆ ರಾಮಮಂದಿರ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ವೀಕ್ಷಿಸಿ

Ayodhya Ram Mandir: ಮನೆಯಲ್ಲೇ ಕುಳಿತು ಅಯೋಧ್ಯೆ ರಾಮಮಂದಿರ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ವೀಕ್ಷಿಸಿ

Pran Pratishtha Live Telecast: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ವೀಕ್ಷಣೆಗೆ ಅಯೋಧ್ಯೆಗೇ ಹೋಗಬೇಕಿಲ್ಲ. ಮನೆಯಲ್ಲಿದ್ದುಕೊಂಡೇ ಐತಿಹಾಸಿಕ ಕಾರ್ಯಕ್ರಮದ ಸಂಭ್ರಮವನ್ನು ವೀಕ್ಷಿಸುವುದಕ್ಕೆ ಶ್ರೀರಾಮ ಜನ್ಮಭೂಮಿ ಮಂದಿರ ಟ್ರಸ್ಟ್ ಕ್ರಮತೆಗೆದುಕೊಂಡಿದೆ. ವಿವಿಧ ಚಾನೆಲ್‌ಗಳ ಮೂಲಕ ಈ ಕಾರ್ಯಕ್ರಮದ ನೇರಪ್ರಸಾರ ಇರಲಿದೆ.

ಬಾಲರಾಮನ ಪ್ರತಿಮೆ ಕೂರಿಸಿದ ಕೂರ್ಮಪೀಠ
ಬಾಲರಾಮನ ಪ್ರತಿಮೆ ಕೂರಿಸಿದ ಕೂರ್ಮಪೀಠ (ANI)

ಅಯೋಧ್ಯೆಯ ರಾಮಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತಕ್ಕೆ ಭಾರತವೇ ಕಾಯುತ್ತಿರುವ ಕ್ಷಣ ಇದು. ಇದೇ ಸೋಮವಾರ ಜನವರಿ 22 ರಂದು ಎಲ್ಲರ ಕನಸು ನನಸಾಗಲಿದೆ. ಈಗಾಗಲೇ ರಾಮಮಂದಿರದ ಗರ್ಭಗುಡಿಯೊಳಗೆ ಬಾಲರಾಮ ವಿರಾಜಮಾನನಾಗಿದ್ದಾನೆ. ಪ್ರಾಣಪ್ರತಿಷ್ಠೆಯ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಪ್ರಗತಿಯಲ್ಲಿದೆ. ಏಳು ದಿನಗಳ ಆಚರಣೆಯ ಭಾಗವಾಗಿ, ಮೂರನೇ ದಿನ ಬಾಲರಾಮನ ವಿಗ್ರಹ ಗರ್ಭಗುಡಿ ಪ್ರವೇಶಿಸಿದೆ.

ಜನವರಿ 22 ರಂದು ನಡೆಯುವ ಈ ಸಮಾರಂಭದಲ್ಲಿ ಸುಮಾರು 8 ಸಾವಿರ ಅತಿಥಿಗಳು ಭಾಗವಹಿಸಲಿದ್ದಾರೆ. ಈ ತಿಂಗಳ 23 ರಿಂದ ಭಕ್ತರ ದರ್ಶನಕ್ಕಾಗಿ ದೇವಾಲಯವನ್ನು ತೆರೆಯಲಾಗುತ್ತದೆ.

ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂಬ ಮನದಾಸೆ ಬಹುತೇಕ ಎಲ್ಲ ಭಾರತೀಯರಲ್ಲೂ ಇದೆ. ಆದರೆ ಎಲ್ಲರೂ ಅಯೋಧ್ಯೆಯ ರಾಮಜನ್ಮಭೂಮಿಗೆ ಹೋಗಲು ಸಾಧ್ಯವಿಲ್ಲ. ಹೋದರೂ ಅಲ್ಲಿ ಜನವರಿ 22ರಂದು ಕೋಟ್ಯಂತರ ಭಕ್ತರನ್ನು ಒಂದೇ ಸಲ ಬರಮಾಡಿಕೊಂಡು ಆತಿಥ್ಯ ನೀಡುವ ಸೌಕರ್ಯಗಳೂ ಇಲ್ಲ.

ಈ ಎಲ್ಲ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀರಾಮ ಜನ್ಮಭೂಮಿ ಮಂದಿರ ಟ್ರಸ್ಟ್‌ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದೆ. ಹೀಗಾಗಿ, ಎಲ್ಲರೂ ತಮ್ಮ ಮನೆಗಳಲ್ಲಿ ಕುಳಿತೇ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ.

ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸುವುದು ಎಲ್ಲಿ?

ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ರಾಮಭಕ್ತರು ವರ್ಚುವಲ್ ಮೋಡ್‌ನಲ್ಲಿ ಭಾಗವಹಿಸಬೇಕು ಎಂದು ರಾಮಮಂದಿರ ಟ್ರಸ್ಟ್ ಮನವಿ ಮಾಡಿದೆ. ಇದೇ ವೇಳೆ, ಪ್ರಪಂಚದಾದ್ಯಂತ ಇರುವ ಭಾರತೀಯ ದೂತಾವಾಸಗಳು ಮತ್ತು ರಾಯಭಾರ ಕಚೇರಿಗಳು ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತವೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುತ್ತಾರೆ. ಜನವರಿ 22ರಂದು ಮಧ್ಯಾಹ್ನ 12.30ಕ್ಕೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಬ್ಬರೂ ಮನೆಯಿಂದಲೇ ನೇರ ಪ್ರಸಾರದ ಮೂಲಕ ಈ ಐತಿಹಾಸಿಕ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ದೂರದರ್ಶನದಲ್ಲಿ ಕೂಡ ರಾಮಮಂದಿರದ ಪ್ರತಿಷ್ಠಾ ಕಾರ್ಯಕ್ರಮ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಪ್ರದರ್ಶನ ನಡೆಯಲಿದೆ. ಸಂಪೂರ್ಣ ನೇರ ಪ್ರಸಾರವನ್ನು ಡಿಡಿ ನ್ಯೂಸ್ ಮತ್ತು ಡಿಡಿ ನ್ಯಾಷನಲ್ ಚಾನೆಲ್‌ಗಳಲ್ಲಿ ನೋಡಬಹುದು. ಇದಲ್ಲದೆ, ದೂರದರ್ಶನ ಪರವಾಗಿ ಯೂಟ್ಯೂಬ್ ಲಿಂಕ್ ಅನ್ನು ಇತರ ಪ್ರಸಾರಕರೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ ದೂರದರ್ಶನವು ಒಟ್ಟು 40 ಕ್ಯಾಮೆರಾಗಳನ್ನು ಅಳವಡಿಸಿದೆ. ನೀವು 4K ಹೆಚ್‌ಡಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು. ಈ ಸಮಯದಲ್ಲಿ ಸರಯೂ ಘಾಟ್ ಮತ್ತು ಜಟಾಯು ಪ್ರತಿಮೆ ಸೇರಿದಂತೆ ಅನೇಕ ಸ್ಥಳಗಳಿಂದ ನೇರ ಪ್ರಸಾರವನ್ನು ವೀಕ್ಷಿಸಬಹುದು ಎಂದು ದೂರದರ್ಶನದ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು, ನಾಳೆ, ನಾಡಿದ್ದು ರಾಮಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮಗಳು

ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 19 ರಂದು ಯಜ್ಞ ಅಗ್ನಿ ಗುಂಡಂ ಸ್ಥಾಪನೆಯಾಗಲಿದೆ. ಮರುದಿನ (ಜ.20) ವಿವಿಧ ನದಿಗಳಿಂದ ಸಂಗ್ರಹಿಸಿದ ನೀರಿನಿಂದ ರಾಮಮಂದಿರದ ಗರ್ಭಗುಡಿಯನ್ನು ಸ್ವಚ್ಛಗೊಳಿಸಿ ಶಾಂತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜನವರಿ 21 ರಂದು ಚಂದ್ರನಿಗೆ 125 ಕಲಶಗಳಿರುವ ನೀರನ್ನು ತಂದು ಶ್ರೀರಾಮನಿಗೆ ಸ್ನಾನ ಮಾಡಲಾಗುತ್ತದೆ. ಜನವರಿ 22ರಂದು ಬಹು ನಿರೀಕ್ಷಿತ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮಧ್ಯಾಹ್ನ 12.30ರಿಂದ ಆರಂಭವಾಗಲಿದೆ.'

--------------------

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.