Viral Video: ತರಕಾರಿ ಬದಲು ಮಗುವನ್ನೇ ರೆಫ್ರಿಜರೇಟರ್ ಒಳಗಿಟ್ಟ ತಾಯಿಯ ವಿಡಿಯೋ ವೈರಲ್; ಇದು ಪೇರೆಂಟಿಂಗ್ ಕ್ರಮವಲ್ಲ ಎಂದ ಜನ
ಪ್ರಸ್ತುತ ಪೇರೆಂಟಿಂಗ್ ವಿಚಾರ ಹೆಚ್ಚು ಗಮನಸೆಳೆಯವಂಥದ್ದು. ಆದ್ದರಿಂದಲೇ ತರಕಾರಿ ಬದಲು ಮಗುವನ್ನೇ ರೆಫ್ರಿಜರೇಟರ್ ಒಳಗಿಟ್ಟ ತಾಯಿಯ ವಿಡಿಯೋ ವೈರಲ್ ಆಗಿದೆ. ಇದು ಪೇರೆಂಟಿಂಗ್ ಕ್ರಮವಲ್ಲ ಎಂದ ಜನ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಕುರಿತ ವರದಿ ಇಲ್ಲಿದೆ.
ಬೆಂಗಳೂರು: ವಿಲಕ್ಷಣ ವರ್ತನೆಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗ ಗಮನಸೆಳೆಯುತ್ತವೆ. ಅಂತಹ ವಿಡಿಯೋಗಳು ವೈರಲ್ ಆಗುತ್ತವೆ. ಇದಕ್ಕೆ ಹೊಸ ಸೇರ್ಪಡೆ ಈ ತಾಯಿಯ ಕೃತ್ಯ. ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ, ಬಾಕಿ ಉಳಿದ ತರಕಾರಿಯನ್ನು ರೆಫ್ರಿಜರೇಟರ್ ಒಳಗೆ ಇಡುವ ಬದಲು ಮಗುವನ್ನೇ ಇಟ್ಟ ವರ್ತನೆ ಮೈ ನಡುಗಿಸುವಂತೆ ಇದೆ.
ಮೊಬೈಲ್ ಫೋನ್, ಮಾತಿಗಿಳಿದರೆ ಹೊರ ಜಗತ್ತಿನ ಪರಿವೆಯೇ ಇಲ್ಲ ಎಂಬ ಟೀಕೆಗೆ ಪೂರಕವಾಗಿದೆ ಆ ತಾಯಿಯ ವರ್ತನೆ. ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಲಾಗಿದ್ದು, ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ದೃಶ್ಯ ನಿಜವಾದುದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಒಂದು ನಿಮಿಷ 7 ಸೆಕೆಂಡ್ ಅವಧಿಯದ್ದು. ಅದೊಂದು ರೀತಿ ಜಾಗೃತಿ ಮೂಡಿಸುವ ವಿಡಿಯೋದಂತೆಯೇ ಕಾಣುತ್ತಿದೆಯಾದರೂ ಒಂದು ಕ್ಷಣ ಮೈ ನಡುಗುವಂತೆ ಮಾಡುತ್ತದೆ. ಕಾರಣ ಮಗುವನ್ನು ಅವರು ಬಳಸಿಕೊಂಡ ರೀತಿ.
ಇಲ್ಲಿದೆ ಆ ವೈರಲ್ ವಿಡಿಯೋ
ಈ ವೈರಲ್ ವಿಡಿಯೋ ಪ್ರೊಫ್ ಚೀಮ್ಸ್ ಖಾತೆಯಲ್ಲಿ ಶೇರ್ ಆಗಿದೆ. ಇದರ ಮೂಲ ಇನ್‌ಸ್ಟಾಗ್ರಾಂನ ಸಟ್ಟಾ ಗ್ರಾಮ್ ಖಾತೆ.
ವಿಡಿಯೋ ಶುರುವಾಗುವುದೇ ಹೀಗೆ - ನೆಲದ ಮೇಲೆ ಪುಟ್ಟ ಮಗು ಆಟವಾಡ್ತಾ ಇರುತ್ತೆ. ತಾಯಿ ಅಲ್ಲಿಗೆ ಬರುತ್ತಾರೆ. ಕೈಯಲ್ಲೊಂದು ಫೋನ್ ಇದೆ. ಫೋನ್ ಡಯಲ್ ಮಾಡಿ ಮಾತನಾಡಲು ಶುರುಮಾಡ್ತಾರೆ. ಹನ್ನೊಂದು ಸೆಕೆಂಡ್ ಆಗ್ತಾ ಇದ್ದ ಹಾಗೆ ವಿಡಿಯೋ ಫ್ರೇಮ್ ವ್ಯತ್ಯಾಸವಾಗುತ್ತೆ. ತಾಯಿ ತರಕಾರಿ ಟ್ರೇ ಹತ್ತಿರ ಇಟ್ಟುಕೊಂಡು ತರಕಾರಿ ಕಟ್ ಮಾಡಲು ಶುರುಮಾಡ್ತಾರೆ. ಹದಿನೆಂಟು ಸೆಕೆಂಡ್ ಆಗುತ್ತಲೇ ಕತ್ತರಿಸಿದ ತರಕಾರಿ ಬೇರೆಡೆ ಸಾಗಿಸುತ್ತಾರೆ. ವಿಡಿಯೋ ಫ್ರೇಮ್ ಅದೇ ಇರುತ್ತದೆ. ತರಕಾರಿ ಟ್ರೇ ನೆಲದ ಮೇಲೆಯೇ ಇದೆ. ತಾಯಿ ಬಂದು ಮಗುವನ್ನು ಎತ್ತಿಕೊಳ್ಳುತ್ತಾರೆ. ರೆಫ್ರಿಜರೇಟರ್ ಬಳಿ ಹೋಗ್ತಾರೆ. ಅದರ ಬಾಗಿಲು ತೆರೆಯುತ್ತಾರೆ. ಇದಕ್ಕೂ ಮೊದಲು 22ನೇ ಸೆಕೆಂಡ್‌ನಲ್ಲಿ ವಿಡಿಯೋ ಸಂಕಲನ ಮಾಡಿರುವುದು ಥಟ್ಟಂತ ಗೊತ್ತಾಗುತ್ತದೆ.
ರೆಫ್ರಿಜರೇಟರ್ ಒಳಗೆ ಮಗುವನ್ನು ಕೂರಿಸುವಷ್ಟು ಜಾಗ ಖಾಲಿ ಇರುವುದು ಗಮನಸೆಳೆಯುತ್ತದೆ. ಅದೇ ಜಾಗದಲ್ಲಿ ಮಗುವನ್ನು ಕೂರಿಸಿ ಬಾಗಿಲು ಮುಚ್ಚುತ್ತಾರೆ. ಕೆಲವು ಸೆಕೆಂಡ್‌ಗಳ ಬಳಿಕ ಪತಿ ಬಂದು ರಿಲ್ಯಾಕ್ಸ್ ಆಗ್ತಾ ಮಗು ಎಲ್ಲಿ ಎಂದು ಕೇಳಿದಾಗ, ಫೋನ್ ಸಂಭಾಷಣೆಯಲ್ಲಿ ತೊಡಗಿದ್ದ ತಾಯಿ ಮಗುವಿಗಾಗಿ ಹುಡುಕಾಟ ಶುರುಮಾಡ್ತಾರೆ.
ಇಬ್ಬರೂ ಹುಡುಕಾಟದ ನಡುವೆ ಮಗು ಅಳ್ತಾ ಇರುವ ಧ್ವನಿ ರೆಫ್ರಿಜರೇಟರ್‌ನಿಂದ ಕೇಳ್ತಾ ಇದೆ ಎಂದು ಡೋರ್ ಓಪನ್ ಮಾಡಿ ಮಗುವನ್ನು ಹೊರತೆಗೆಯುವ ದೃಶ್ಯವಿದೆ. ಇದು ಎಡಿಟೆಡ್ ವಿಡಿಯೋ. ಫೋನ್‌ಗೆ ಅಡಿಕ್ಟ್ ಆಗಿ ಕೆಲಸ ಮಾಡಿದರೆ ಆಗಬಹುದಾದ ಅಪಾಯಗಳ ಕುರಿತು ಜಾಗೃತಿ ಮೂಡಿಸುವಂತೆ ಇದೆ. ಪೇರೆಂಟಿಂಗ್ ಕ್ರಮ ಇದಲ್ಲ ಎಂಬ ಸಂದೇಶವೂ ವಿಡಿಯೋ ಜೊತೆಗೆ ನೀಡಲಾಗಿದೆ.
ಇದನ್ನೂ ಓದಿ| ಪೇರೆಂಟಿಂಗ್ ಸಂಬಂಧಿಸಿದ ಎಲ್ಲ ಮಾಹಿತಿಗಳಿಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಈ ಪೇರೆಂಟಿಂಗ್ ಪುಟ ಗಮನಿಸಿ.
ಈ ವಿಡಿಯೋ ಯಾವುದೋ ಧಾರಾವಾಹಿಯ ತುಣುಕಿನಂತೆ ಕಾಣುತ್ತಿದೆ. ಇದ ಸಾಚಾತನವನ್ನು ದೃಢೀಕರಿಸುವುದು ಹಿಂದೂಸ್ತಾನ್ ಟೈಮ್ಸ್ ಕನ್ನಡದಿಂದ ಸಾಧ್ಯವಾಗಿಲ್ಲ. ಆದರೆ ಪೇರೆಂಟಿಂಗ್ ಕುರಿತು ತಿಳಿವಳಿಕೆ ಮೂಡಿಸುವ ದೃಷ್ಟಿಯಿಂದ ಇದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಸೋಷಿಯಲ್ ಮೀಡಿಯಾ ಕಾಮೆಂಟ್
ಈ ವಿಡಿಯೋ ಕುರಿತು ಸಾಕಷ್ಟು ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿದೆ. ಎಕ್ಸ್‌ನಲ್ಲಿ ಪ್ರೊಫ್ ಚೀಮ್ಸ್ ಈ ವಿಡಿಯೋವನ್ನು ಮಾರ್ಚ್ 30ರಂದು ಶೇರ್ ಮಾಡಿದ್ದು, 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 400ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ಅನೇಕರು ಇದು ಸ್ಕ್ರಿಪ್ಟೆಡ್ ವಿಡಿಯೋ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಸಿಸಿಟಿವಿ ಕ್ಯಾಮೆರಾ ದೃಶ್ಯ ಚೆಕ್ ಮಾಡಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎಂಬುದು ಬಹಿರಂಗವಾಗಿಲ್ಲ. ಇನ್‌ಸ್ಟ್ರಾಗ್ರಾಂನ ಸಟ್ಟಾ ಗ್ರಾಂ ಖಾತೆಯು ಮೀಮ್ಸ್ ಖಾತೆಯಾಗಿದ್ದು ಇಂತಹ ನೂರಾರು ರೀಲ್ಸ್ ಅಲ್ಲಿವೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.