ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

ಅಹಮದಾಬಾದ್‌ನಲ್ಲಿ ಮಹಿಳೆಯೊಬ್ಬರು ಪನೀರ್‌ ಟಿಕ್ಕಾಗೆ ಆರ್ಡರ್‌ ಮಾಡಿದರೆ ಚಿಕನ್‌ ಸ್ಯಾಂಡ್‌ ವಿಚ್‌ ಕಳುಹಿಸಿರುವ ಘಟನೆ ನಡೆದಿದೆ.

ವೆಜ್‌ ಬದಲು ನಾನ್‌ ವೆಜ್‌ ಸ್ಯಾಂಡ್‌ ವಿಚ್‌ ಬಂದ ಕ್ಷಣ
ವೆಜ್‌ ಬದಲು ನಾನ್‌ ವೆಜ್‌ ಸ್ಯಾಂಡ್‌ ವಿಚ್‌ ಬಂದ ಕ್ಷಣ

ಅಹಮದಾಬಾದ್‌: ಆಕೆ ಅಪ್ಪಟ ಸಸ್ಯಾಹಾರಿ. ಮನೆಯಲ್ಲಿ ಅಡುಗೆ ಮಾಡುವ ಬದಲು ಪನ್ನೀರ್‌ ಟಿಕ್ಕಾ ಸ್ಯಾಂಡ್‌ ವಿಚ್‌ ತಿನ್ನಬೇಕು ಎನ್ನಿಸಿತು. ಪಿಕ್‌ ಅಪ್‌ ದಿ ಮೀಲ್ಸ್‌ ಬೈ ಟೆರ್ರಾ(Pick Up Meals by Terra) ರೆಸ್ಟೋರೆಂಟ್‌ಗೆ ಆಪ್‌ ಮೂಲಕ. ಸ್ಯಾಂಡ್‌ ವಿಚ್‌ ಏನೋ ಬಂದಿತು. ಆಕೆ ತಿನ್ನಲು ಆರಂಭಿಸಿದಳು. ಆದರೆ ಏಕೋ ಅನುಮಾನ, ಬಿಚ್ಚಿ ನೋಡಿದರೆ ಅದರಲ್ಲಿ ಇದ್ದುದ್ದು ಚಿಕನ್‌ ಸ್ಯಾಂಡ್‌ ವಿಚ್‌. ಇದನ್ನು ಕಂಡು ಎಂದೂ ಮಾಂಸಾಹಾರ ಸೇವಿಸದ ಮಹಿಳೆಗೆ ಕಸಿವಿಸಿ. ಕೊನೆಗೆ ಆಕೆ ರೆಸ್ಟೋರೆಂಟ್‌ ವಿರುದ್ದ ಬರೋಬ್ಬರಿ 50 ಲಕ್ಷ ರೂ. ಪಾವತಿಸುವಂತೆ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದು ನಡೆದಿರುವುದು ಗುಜರಾತ್‌ ನ ರಾಜಧಾನಿ ಅಹಮದಾಬಾದ್‌ನಲ್ಲಿ. ನಿರಾಲಿ ಎಂಬ ಮಹಿಳೆ ಮೇ 3ರಂದು ಅಹಮದಾಬಾದ್‌ನ ಸೈನ್ಸ್‌ ಸಿಟಿ ಮನೆಯಿಂದ ಆಹಾರ ತರಿಸಲು ಆರ್ಡರ್‌ ಮಾಡಿದ್ದರು. ಆಪ್‌ ಮೂಲಕ ಪನ್ನೀರ್‌ ಟಿಕ್ಕಾ ಸ್ಯಾಂಡ್‌ ವಿಚ್‌ಗೆ ಬುಕ್‌ ಮಾಡಿದ್ದರು. ಆಹಾರವೇನೋ ಮನೆಗೆ ಸರಿಯಾದ ಸಮಯಕ್ಕೆ ತಲುಪಿತು. ಆಕೆ ಸ್ಯಾಂಡ್‌ ವಿಚ್‌ ಸೇವಿಸಿದಾಗ ಪನ್ನೀರ್‌ ಕೊಂಚ ಗಟ್ಟಿ ಇರುವಂತೆ ಕಾಣಿಸಿತು.ಇದು ಸೋಯಾ ಇದರೊಂದಿಗೆ ಇರಬೇಕು ಎಂದು ಮತ್ತೊಮ್ಮೆ ಸೇವಿಸಿದರೆ ಅದು ಇನ್ನಷ್ಟು ಗಟ್ಟಿಯಾಗಿತ್ತು. ಬಿಡಿಸಿ ನೋಡಿದರೆ ಅದರಲ್ಲಿ ಇದ್ದುದು ಚಿಕನ್‌. ಇದು ಪನ್ನೀರ್‌ ಬದಲು ಚಿಕನ್‌ ಸ್ಯಾಂಡ್‌ ವಿಚ್‌ ಆಗಿತ್ತು.ʼ

ನಾನು ಎಂದೂ ಮಾಂಸಾಹಾರ ಸೇವಿಸಿರಲಿಲ್ಲ. ಈ ರೀತಿ ನಾನು ಮಾಂಸಾಹಾರ ಸೇವಿಸುವಂತೆ ಮಾಡಿದ್ದೀರಿ. ನನಗೆ ತೊಂದರೆಯಾಗಿದೆ ಎಂದು ಆಕ್ರೋಶ ಹೊರಹಾಕಿದ ನಿರಾಲಿ ನಗರ ಪಾಲಿಕೆ ಆರೋಗ್ಯಾಧಿಕಾರಿಗೆ ದೂರು ನೀಡಿದರು.

ದೂರು ಸ್ವೀಕರಿಸಿದ ಅಹಮದಾಬಾದ್‌ ನಗರ ಪಾಲಿಕೆ ಆರೋಗ್ಯಾಧಿಕಾರಿ ರೆಸ್ಟೋರೆಂಟ್‌ ಮೇಲೆ 5,000 ರೂ. ದಂಡ ವಿಧಿಸಿ ಆದೇಶಿಸಿದರು. ಇದನ್ನು ನಿರಾಲಿ ಅವರಿಗೆ ಪಾವತಿಸಬೇಕು ಎಂದು ಸೂಚಿಸಿದ್ದರು.

ಆದರೆ ನಿರಾಲಿ ಇದಕ್ಕೆ ಒಪ್ಪಲಿಲ್ಲ. ಬರೀ 5,000 ರೂ. ದಂಡ ಹಾಕುವುದರಿಂದ ಪ್ರಯೋಜನವಾಗಲ್ಲ. ಬದಲಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಅಹಮದಾಬಾದ್‌ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನನಗೆ ಆಹಾರ ನೀಡುವ ವಿಚಾರದಲ್ಲಿ ರೆಸ್ಟೋರೆಂಟ್‌ನವರು ಪ್ರಮಾದ ಎಸಗಿದ್ದಾರೆ. ಇದರಿಂದ ಅವರ ಮೇಲೆ ಸೂಕ್ತ ಕ್ರಮ ಆಗಬೇಕು ಎಂದು ದೂರು ನೀಡಿದೆ. ಪಾಲಿಕೆ ದಂಡ ವಿಧಿಸಿದರೂ ನಾನು ಗ್ರಾಹಕರ ನ್ಯಾಯಾಲಯ ಮೊರೆ ಹೋಗಿದ್ದೇನೆ ಎಂದು ನಿರಾಲಿ ಹೇಳಿದ್ದಾರೆ.

ಸಸ್ಯಾಹಾರದ ಬದಲು ಮಾಂಸಾಹಾರ ನೀಡಿದ್ದ ರೆಸ್ಟೋರೆಂಟ್‌ ನಿಂದ ಘಟನೆ ಕುರಿತು ಈವರೆಗೂ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಈ ಘಟನೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆದಿದೆ. ಭಾರೀ ಮೊತ್ತದ ದಂಡಕ್ಕೆ ಮೊರೆ ಹೋಗುವುದು ಸರಿಯಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಇದನ್ನು ಬೆಂಬಲಿಸಿದ್ದಾರೆ. ಸಣ್ಣ ಮೊತ್ತದ ದಂಡ ಪಾವತಿಸಿ ಮತ್ತೆ ಇದನ್ನೇ ಅವರು ಮಾಡುತ್ತಾರೆ. ಮುಂದೆಯೂ ಹಲವರು ನನ್ನ ಹಾಗೆಯೇ ತೊಂದರೆ ಅನುಭವಿಸಬೇಕಾಗುತ್ತದೆ. ಜಾಗೃತಿ ಮೂಡಿಸುವ ಉದ್ದೇಶದಿಂದ ಹೆಚ್ಚಿನ ದಂಡ ಕೇಳಿದ್ದೇನೆ ಎನ್ನುವುದು ನಿರಾಲಿ ನೀಡಿರುವ ಸ್ಪಷ್ಟನೆ.

IPL_Entry_Point

ವಿಭಾಗ