ಕನ್ನಡ ಸುದ್ದಿ  /  Nation And-world  /  India News Women Reservation Bill To Come Into Effect After Lok Sabha Delimitation Exercise Explainer In Kannada Uks

ಮಹಿಳಾ ಮೀಸಲು ಜಾರಿ ಯಾವಾಗ, ಮುಂದಿನ ಲೋಕಸಭಾ ಚುನಾವಣೆಗೆ ಸಾಧ್ಯವಾ, ಇಲ್ಲಿದೆ ಸಂಕ್ಷಿಪ್ತ ವಿವರಣೆ

ಸಂಸತ್ತಿನ ವಿಶೇಷ ಅಧಿವೇಶದಲ್ಲಿ ಮಹಿಳಾ ಮೀಸಲು ಮಸೂದೆ ಮಂಡನೆಯಾಗಿದೆ. ಇದರ ಕುರಿತು ಚರ್ಚೆ ನಡೆದಿರುವಾಗಲೇ, ಇದರ ಜಾರಿ ಯಾವಾಗ, ಮುಂದಿನ ಲೋಕಸಭೆ ಚುನಾವಣೆಗೆ ಜಾರಿ ಆಗುತ್ತಾ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ. ಇಲ್ಲಿದೆ ಸಂಕ್ಷಿಪ್ತ ವಿವರಣೆ.

ಹೊಸ ಸಂಸತ್ ಭವನದ ಕಟ್ಟಡದಲ್ಲಿ ಲೋಕಸಭೆ ಕಲಾಪದ ನೋಟ
ಹೊಸ ಸಂಸತ್ ಭವನದ ಕಟ್ಟಡದಲ್ಲಿ ಲೋಕಸಭೆ ಕಲಾಪದ ನೋಟ (ANI)

ಲೋಕಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲು ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಮಂಗಳವಾರ (ಸೆ.19) ಮಂಡಿಸಿದ ಮಸೂದೆ (Women Reservation Bill) ತತ್‌ಕ್ಷಣವೇ ಅಂಗೀಕಾರವಾಗುತ್ತಾ?, ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ ಇದು ಜಾರಿಗೆ ಬರುವುದೇ ಎಂಬಿತ್ಯಾದಿ ಸಂದೇಹ, ಪ್ರಶ್ನೆಗಳು ಬಹಳಷ್ಟು ಚರ್ಚೆಗೆ ಒಳಗಾಗಿವೆ.

ಸಂಸತ್‌ನ ವಿಶೇಷ ಅಧಿವೇಶನದ (Parliament Special Session)ವೇಳೆ ಲೋಕಸಭೆಯಲ್ಲಿ ಮಂಡನೆ ಆಗಿರುವ ಮಹಿಳಾ ಮಸೂದೆಯು (ಸಂವಿಧಾನದ (128ನೇ ತಿದ್ದುಪಡಿ) ಮಸೂದೆ 2023) ಇಂದು (ಸೆ.20) ಸದನ ಸದಸ್ಯರ ನಡುವೆ ಚರ್ಚೆಗೆ ಒಳಗಾಗಿದೆ. ಲೋಕಸಭೆಯಲ್ಲಿ ಈ ಮಸೂದೆಯನ್ನು ಪೂರಕ ವ್ಯವಹಾರಗಳ ಪಟ್ಟಿಯ ಮೂಲಕ ಸೇರಿಸಲಾಗಿದೆ.

ಇದನ್ನೂ ಓದಿ| ಮಹಿಳಾ ಮೀಸಲಾತಿ ಮಸೂದೆ ಎಂದರೇನು, ಇಷ್ಟು ದಿನ ನಾರಿ ಶಕ್ತಿಗೆ ಸಿಗದಿದ್ದು ಯಾಕೆ

ಸಂಸತ್ತಿನ ಡಿಸೆಂಬರ್ ತಿಂಗಳ ದತ್ತಾಂಶ ಪ್ರಕಾರ, ಪ್ರಸ್ತುತ ಲೋಕಸಭೆಯಲ್ಲಿ ಶೇಕಡ 15 ಮಹಿಳಾ ಸದಸ್ಯರಿದ್ದಾರೆ. ಅರ್ಥಾತ್, ಲೋಕಸಭೆ 543 ಸದಸ್ಯರ ಪೈಕಿ 82 ಮಹಿಳಾ ಸದಸ್ಯರು. ರಾಜ್ಯಸಭೆಯಲ್ಲಿ ಶೇಕಡ 14 ಮಹಿಳಾ ಸದಸ್ಯರಿದ್ದಾರೆ. ವಿವಿಧ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯಾಬಲ ಶೇಕಡ 10ಕ್ಕಿಂತ ಕಡಿಮೆ ಇದೆ.

ಮಹಿಳಾ ಮೀಸಲು ಮಸೂದೆಯ ವಿವರಗಳು

ಮಹಿಳಾ ಮೀಸಲಾತಿ ಮಸೂದೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಅದೇ ರೀತಿ, 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯನ್ನು ಸಾಧಿಸಲು ಮಹಿಳೆಯರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಮಸೂದೆಯ ಉದ್ದೇಶವನ್ನು ವಿವರಿಸುತ್ತ ಸರ್ಕಾರ ಹೇಳಿದೆ.

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ಕೈಗೊಂಡ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಇದಕ್ಕೆ ಸುಮಾರು 15 ವರ್ಷ ಬೇಕಾಗಬಹುದು. ಪ್ರತಿ ಕ್ಷೇತ್ರ ವಿಂಗಡಣೆ ಕಸರತ್ತು ಮುಗಿದ ಬಳಿಕ ಮಹಿಳೆಯರ ಕ್ಷೇತ್ರವನ್ನು ನಿರ್ಣಯಿಸಲಾಗುವುದು ಎಂದು ಮಸೂದೆ ವಿವರಿಸಿದೆ.

ಮಹಿಳಾ ಮೀಸಲು ಮಸೂದೆಯ ಕಿರು ಇತಿಹಾಸ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಸ್ಥಾನಗಳನ್ನು ಮೀಸಲಿಡುವ ಕ್ರಮವನ್ನು ವಿರೋಧಿಸಿದ ಕೆಲವು ಸಂಸದರನ್ನು ಮಾರ್ಷಲ್‌ಗಳು ಹೊರ ಹಾಕಿದ ಗದ್ದಲದ ನಡುವೆ ರಾಜ್ಯಸಭೆಯಲ್ಲಿ 2008ರ ಮಹಿಳಾ ಮೀಸಲು ಮಸೂದೆ 2010ರಲ್ಲಿ ಅಂಗೀಕಾರವಾಗಿತ್ತು. ಅದಾಗಿ ಮತ್ತೆ ಯಾವುದೇ ಬೆಳವಣಿಗೆ ಆಗಿರಲಿಲ್ಲ. ಲೋಕಸಭೆಯಲ್ಲಿ ಆ ಮಸೂದೆ ಅಂಗೀಕಾರವಾಗಿಲ್ಲ. ರಾಜ್ಯಸಭೆಯಲ್ಲೂ ಅದು ಲ್ಯಾಪ್ಸ್ ಆಗಿತ್ತು.

ಬಿಜೆಪಿ ಮತ್ತು ಕಾಂಗ್ರೆಸ್ ಯಾವಾಗಲೂ ಮಸೂದೆಯನ್ನು ಬೆಂಬಲಿಸುತ್ತಿದ್ದರೆ, ಇತರ ಪಕ್ಷಗಳ ವಿರೋಧ ಮತ್ತು ಮಹಿಳಾ ಕೋಟಾದೊಳಗೆ ಹಿಂದುಳಿದ ವರ್ಗಗಳಿಗೆ ಕೋಟಾ ಬೇಕು ಎಂಬ ಕೆಲವರ ಬೇಡಿಕೆಗಳ ಕಾರಣ ಒಮ್ಮತ ಮೂಡಿಲ್ಲ.

ಇದಕ್ಕೂ ಮೊದಲು ಇಂಥದ್ದೇ ಪ್ರಯತ್ನ 1996, 1998 ಮತ್ತು 1999ರಲ್ಲಿ ಇದೇ ರೀತಿಯ ಮಸೂದೆಗಳನ್ನು ಮಂಡಿಸಲಾಗಿತ್ತು. ಆದರೆ ಅದು ಅಂಗೀಕಾರವಾಗಿರಲಿಲ್ಲ.

ಗೀತಾ ಮುಖರ್ಜಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿ 1996ರ ಮಸೂದೆಯನ್ನು ಪರಿಶೀಲಿಸಿ ಏಳು ಅಂಶಗಳ ಶಿಫಾರಸನ್ನು ಸಲ್ಲಿಸಿತ್ತು. ಈ ಪೈಕಿ 5 ಶಿಫಾರಸುಗಳು 2008ರ ಮಸೂದೆಯಲ್ಲಿ ಸೇರ್ಪಡೆಯಾಗಿತ್ತು. ಮೂರು ಅಥವಾ ಅದಕ್ಕಿಂತ ಕಡಿಮೆ ಲೋಕಸಭಾ ಕ್ಷೇತ್ರಗಳಿರುವ ರಾಜ್ಯಗಳ ವಿಚಾರವೂ ಅಲ್ಲಿ ಪ್ರಸ್ತಾಪವಾಗಿತ್ತು.

IPL_Entry_Point