ಕದನಕ್ಕೆ ವಿರಾಮ ಸಿಕ್ಕಾಗಿದೆ, ಈಗ ನಡೆಯಬೇಕಿರುವುದು ಯುದ್ಧೋನ್ಮಾದ ಶಮನಗೊಳಿಸುವ ಪ್ರಯತ್ನ: ವಸಂತ ನಡಹಳ್ಳಿ ಬರಹ
ವಸಂತ ನಡಹಳ್ಳಿ ಬರಹ: ಉನ್ಮಾದ ಎನ್ನುವುದು ತೆರೆದಿಟ್ಟ ಪೆಟ್ರೋಲ್ ಕ್ಯಾನ್‌ನಂತೆ, ಸಣ್ಣ ಕಿಡಿ ದೊಡ್ಡ ಸ್ಪೋಟವನ್ನೇ ಉಂಟುಮಾಡುತ್ತದೆ. ಹಾಗಾಗಿ ಎರಡೂ ದೇಶಗಳಲ್ಲಿಯೂ ಯುದ್ಧೋನ್ಮಾದವನ್ನು ಶಮನಗೊಳಿಸುವ ಪ್ರಯತ್ನ ನಡೆಯಬೇಕಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ನಿನ್ನೆಯವರೆಗೆ ಯುದ್ಧ ಪರಿಸ್ಥಿತಿ ಇತ್ತು. ಆದರೆ ನಿನ್ನೆ (ಮೇ 10) ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಹಾಗೂ ಪಾಕ್ ಕದನ ವಿರಾಮ ಘೋಷಿಸಿವೆ. ಆದರೆ ಯುದ್ಧದ ಉದ್ಮಾನ ಎರಡೂ ದೇಶಗಳ ಜನರಲ್ಲಿ ಹಾಗೇ ಇದೆ. ಅಂತಹ ಸಂದರ್ಭದಲ್ಲಿ ದೇಶದ ಪ್ರಭುದ್ಧ ನಾಯಕರು ಯುದ್ಧೋನ್ಮಾದವನ್ನು ಶಮನಗೊಳಿಸುವ ಪ್ರಯತ್ನ ಮಾಡಬೇಕು, ಈ ಹೊತ್ತಿನಲ್ಲಿ ಅದು ಎಷ್ಟರ ಮಟ್ಟಿಗೆ ಅವಶ್ಯ ಎಂಬುದನ್ನು ತಮ್ಮ ಫೇಸ್‌ಬುಕ್ ಬರಹದಲ್ಲಿ ಬರೆದುಕೊಂಡಿದ್ದಾರೆ ಆಪ್ತಸಮಾಲೋಚಕ ವಸಂತ ನಡಹಳ್ಳಿ. ಅವರ ಬರಹವನ್ನು ನೀವೂ ಓದಿ.
ವಸಂತ ನಡಹಳ್ಳಿ ಬರಹ
ಇದು ಕೂಡ ಸಂಪೂರ್ಣವಾಗಿ ವೈಜ್ಞಾನಿಕ ಬರಹ. ಸ್ವಲ್ಪ ಲಘುದಾಟಿಯಲ್ಲಿ ಹೇಳಿದ್ದೇನೆ ಎನ್ನಿಸಿ ಕೆರಳುವವರು ಸ್ವಲ್ಪ ದೂರವಿದ್ದರೆ ಉತ್ತಮ.
ನನಗೆ ಬೀದಿ ಜಗಳಗಳನ್ನು ನೋಡುವುದು ಬಹಳ ಇಷ್ಟವಾದ ಕೆಲಸ. ಹಾಗಂತ ನಾನು ಜಗಳಗಳನ್ನು ಹಚ್ಚಿಹಾಕಿ ಆನಂದಿಸುವುದಿಲ್ಲ! ಈ ಬೀದಿಜಗಳದಲ್ಲಿ ತೀವ್ರವಾಗಿ ಕೆರಳಿದ ಎರಡು ವ್ಯಕ್ತಿಗಳ ನಡುವಿನ ವ್ಯಕ್ತ ಮತ್ತು ಅವ್ಯಕ್ತ ಸಂಭಾಷಣೆ ಮತ್ತು ವರ್ತನೆ ಮನುಷ್ಯ ಸ್ವಭಾವದ ಕುರಿತು ಉತ್ತಮ ಒಳನೋಟಗಳನ್ನು ನನಗೆ ಒದಗಿಸುತ್ತದೆ. ಇದೇ ಒಳನೋಟಗಳು ದಂಪತಿಗಳ ನನ್ನೆದುರು ಕುಳಿತಾಗ ಸಹಾಯಕ್ಕೆ ಬರುತ್ತದೆ!
ಬೀದಿಜಗಳದಲ್ಲಿ ಇಬ್ಬರೂ ಸಾಕಷ್ಟು ಹೊತ್ತು ಇನ್ನೇನು ಕೈಕೈ ಮಿಲಾಯಿಸಿಬಿಟ್ಟರೇನೋ ಎನ್ನುವಂತೆ ಮಾತಿನ ಬಾಣಗಳನ್ನು ಬಿಡುತ್ತಿರುತ್ತಾರೆ. ʼಇನ್ನೊಂದು ಮಾತನಾಡಿದ್ರೆ ನೋಡು, ಇನ್ನೊಂದು ಹೆಜ್ಜೆ ಮುಂದಿಟ್ರೆ ಇವತ್ತು ನೀನು ಮನೆಗೆ ಹೋಗಲ್ಲ…ʼ ಹೀಗೆ ವೀರಾವೇಶದ ಮಾತುಗಳು ನಡೆಯುತ್ತಿರುತ್ತದೆ. ಅಷ್ಟರಲ್ಲಿ ಅಥವಾ ಕೆಲವೊಮ್ಮೆ ಸಣ್ಣ ಮಟ್ಟದ ಗುದ್ದಾಟ ನಡೆಯುತ್ತಿದ್ದಂತೆ ಸುತ್ತಲಿನವರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿ ದೂರ ಕಳಿಸಲು ಯತ್ನಿಸುತ್ತಾರೆ. ಆದರೆ ಇಬ್ಬರೂ ಕೊಸರಿಕೊಂಡು ಮುನ್ನುಗ್ಗಲು ಮತ್ತೆ ಹಾತೊರೆಯುತ್ತಾರೆ. ಕೊನೆಗೆ ಅನಿವಾರ್ಯವಾಗಿ ದೂರ ಹೋಗುವಾಗಲೂ ಇಬ್ಬರೂ ಒಬ್ಬರ ಕಡೆ ಮತ್ತೊಬ್ಬರು ನೋಡುತ್ತಾ ಆಕ್ರಮಣಶೀಲವಾಗಿ ಕೈಯಲ್ಲಾಡಿಸುತ್ತಾ ʼಇವತ್ತೇನೋ ಉಳಕೊಂಡೆ, ಇನ್ನೊಂದು ಸಾರಿ ಸಿಕ್ಕರೆ ನಿನ್ನ ಕತೆ ಮುಗಿಸ್ತೀನಿʼ ಎಂದೆಲ್ಲಾ ಕೂಗಾಡುತ್ತಿರುತ್ತಾರೆ. ಇಂತವರ ಆಕ್ರಮಣಶೀಲತೆ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಅಥವಾ ತಿಂಗಳು ವರ್ಷಗಟ್ಟಲೆ ಕಡಿಮೆಯಾಗದೆ ಅವರ ತಲೆಯಲ್ಲಿ ಇದೇ ಘಟನೆಯ ಬೇರೆ ಬೇರೆ Versions ಪುನರಾವರ್ತನೆಯಾಗುತ್ತಲೇ ಇರುತ್ತದೆ.
ಸದ್ಯಕ್ಕೆ ನಿಲುಗಡೆಯಾಗಿರುವ ಯುದ್ಧದ ಕುರಿತು ಎರಡೂ ದೇಶಗಳಲ್ಲಿಯೂ ಇದೇ ರೀತಿಯ ಪ್ರತಿಕ್ರಿಯೆ ಬರುತ್ತಿರುತ್ತದೆ. ʼಇನ್ನೊಮ್ಮೆ ಇಂತಹ ದುಸ್ಸಾಹಸ ಮಾಡದಂತೆ ಶತ್ರು ದೇಶಕ್ಕೆ ಪೆಟ್ಟು ಕೊಟ್ಟಿದ್ದೇವೆ. ಮುಂದೆ ಯಾವತ್ತೂ ಅವರು ನಮ್ಮ ಮೇಲೆ ಕೈ ಮಾಡುವ ಧೈರ್ಯ ಮಾಡುವುದಿಲ್ಲ, ಹಾಗೊಮ್ಮೆ ಮಾಡಿದರೆ ಅವರು ಸರ್ವನಾಶವಾಗುತ್ತಾರೆʼ ಎನ್ನುವ ಮಾತುಗಳ ಪ್ರವಾಹವೇ ಬರುತ್ತಿರುತ್ತದೆ. ಇದನ್ನು ಈ ಹಿಂದೆಯೂ ಸಾಕಷ್ಟು ಸಾರಿ ಕೇಳಿದ್ದೇವೆ.
ಅಂದರೆ ಬೀದಿ ಜಗಳವಿರಲಿ ಅಥವಾ ದೇಶಗಳ ನಡುವಿನ ಜಗಳವಿರಲಿ ಮನಸ್ಥಿತಿ ಮಾತ್ರ ಒಂದೇ ರೀತಿಯಲ್ಲಿರುತ್ತದೆ. ದಾಂಪತ್ಯದ ಭಿನ್ನಾಭಿಪ್ರಾಯಗಳಲ್ಲಿಯೂ ಇದರ Miniatureಗಳನ್ನು ಕಾಣಬಹುದು. ಯುದ್ಧ ಮುಗಿದರೂ ಯುದ್ಧೋನ್ಮಾದ ಮುಗಿದಿರುವುದಿಲ್ಲ. ಅದೇಕೆ ಹೀಗೆ?
ಈ ಉನ್ಮಾದ ಎನ್ನುವುದು ಕೇವಲ ಮನಸ್ಸಿನಲ್ಲಿರುತ್ತದೆ ಎನ್ನುವುದು ಬಹುಕಾಲದವರೆಗೆ ನಂಬಿಕೊಳ್ಳಲಾಗಿತ್ತು. ಉನ್ಮಾದ ಎನ್ನುವುದು Traumದ ಒಂದು ವ್ಯಕ್ತ ರೂಪ. PTSDಯ ಕುರಿತು ಸಂಶೋಧನೆಗಳಾದಂತೆ ಉನ್ಮಾದ ದೇಹದ ಕಣಕಣಗಳಲ್ಲಿಯೂ ಶೇಖರವಾಗುತ್ತದೆ ಎನ್ನುವುದು ಖಾತ್ರಿಯಾಯಿತು. ಅಮೆರಿಕದ ಮನೋವೈದ್ಯ ಸಂಶೋಧಕ ಮತ್ತು ಲೇಖದ ಡಾ. ಬೆಸೆಲ್ ವ್ಯಾನ್ ಡೆರ್ ಕಾಕ್ 2014ರಲ್ಲಿ The Body Keeps The Score ಎನ್ನುವ ಅದ್ಭುತ ಪುಸ್ತಕದಲ್ಲಿ Traumದಲ್ಲಿ ದೇಹ ಮನಸ್ಸುಗಳು ಒಳಗೊಳ್ಳುವ ಬಗೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾನೆ.
ಅಪಾಯಕ್ಕೆ ಸಿಲುಕಿ ಬದುಕಿ ಬರುವ ಪ್ರಾಣಿಗಳೂ ಅಪಾಯದ ಸಮಯದಲ್ಲಿ ಶೇಖರವಾಗಿದ್ದ ಉನ್ಮಾದವನ್ನು ತಣ್ಣಗಾಗಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಹೀಗೆ ತಮ್ಮ ಮೈಮನಸ್ಸನ್ನು ತಣಿಸಲು ಅಗತ್ಯವಿರುವ ವಿವೇಕವನ್ನು ಮತ್ತು ತಂತ್ರಗಳನ್ನು ಎಲ್ಲಾ ಪ್ರಾಣಿಗಳಿಗೂ ಪ್ರಕೃತಿ ಸಹಜವಾಗಿ ನೀಡಿದೆ. ಆದರೆ ಮನುಷ್ಯರಲ್ಲಿ ಇದರ ಕೊರತೆ ಎದ್ದು ಕಾಣುತ್ತದೆ. ಇದಕ್ಕೆ ಕಾರಣ ಮನುಷ್ಯರ ಮಿದುಳಿನ ರಚನೆಯಿಂದಾಗಿ Traum ಅವರನ್ನು ಬಹಳ ಆಳವಾಗಿ ಮತ್ತು ದೀರ್ಘಕಾಲದವರೆಗೂ ಬಾಧಿಸುತ್ತದೆ ಎನ್ನುವುದನ್ನು ಹಿಂದಿನ ಪೋಸ್ಟ್‌ನಲ್ಲಿ ವಿವರಿಸಿದ್ದೇನೆ.
ವ್ಯಕ್ತಿಗಳ ಮಟ್ಟದಲ್ಲಿ ದೇಹ ಮನಸ್ಸುಗಳನ್ನು ಒಟ್ಟಾಗಿಸಿ ಉನ್ಮಾದವನ್ನು ಹಿಡಿತಕ್ಕೆ ತರುವ ಅಗತ್ಯವಿರುತ್ತದೆ. ಇದಕ್ಕಾಗಿಯೇ ಹಲವಾರು ಮನೋಚಿಕಿತ್ಸಾ ವಿಧಾನಗಳು ರೂಪಿತವಾಗಿವೆ. ಹಾಗೆಯೇ ದೇಶಗಳು ಕೂಡ ಜನಸಮುದಾಯದಲ್ಲಿ ಶೇಖರವಾಗಿರುವ ಉನ್ಮಾದವನ್ನು ಕಡಿಮೆ ಮಾಡಬೇಕಾಗುತ್ತದೆ. ಅದಿಲ್ಲದೆ ಉನ್ಮಾದದ ಸ್ಥಿತಿಯನ್ನು ಬೇರೆಬೇರೆ ಉದ್ದೇಶಗಳಿಗಾಗಿ ಹಾಗೆಯೇ ಉಳಿಸಿಕೊಂಡರೆ ಅದು ಎಂದಾದರೂ ಕೆರಳಿ ಸ್ಫೋಟವಾಗುತ್ತದೆ. ಉನ್ಮಾದ ಎನ್ನುವುದು ತೆರೆದಿಟ್ಟ ಪೆಟ್ರೋಲ್ ಕ್ಯಾನ್ ಇದ್ದಂತೆ. ಸಣ್ಣ ಕಿಡಿ ದೊಡ್ಡ ಸ್ಪೋಟವನ್ನು ಉಂಟುಮಾಡುತ್ತದೆ.
ಹಾಗಾಗಿ ಎರಡೂ ದೇಶಗಳಲ್ಲಿಯೂ ಯುದ್ಧೋನ್ಮಾದವನ್ನು ಶಮನಗೊಳಿಸುವ ಪ್ರಯತ್ನ ನಡೆಯಬೇಕಾಗುತ್ತದೆ. ಇದಕ್ಕೆ ಪ್ರಬುದ್ಧ ನಾಯಕತ್ವದ ಅಗತ್ಯವಿರುತ್ತದೆ. ಅಂತಹ ನಾಯಕತ್ವ ಇಲ್ಲದಿದ್ದಾಗ ಉನ್ಮಾದ ಮತ್ತೆ ಸ್ಪೋಟವಾಗುವುದು ಅನಿವಾರ್ಯ ಎನ್ನುವುದಕ್ಕೆ ಇತಿಹಾಸದಲ್ಲಿ ದಂಡಿಯಾಗಿ ಉದಾಹರಣೆಗಳು ಸಿಗುತ್ತವೆ. ನಾಯಕರುಗಳು ಪ್ರಬುದ್ಧತೆ ತೋರಿಸದಿದ್ದಾಗ ಜನಸಾಮಾನ್ಯರು ತಮ್ಮ ವಿವೇಕವನ್ನು ಬಳಸಬೇಕಾಗುತ್ತದೆ.
ಇದೇ ಕೊನೆಯ ಯುದ್ಧವಾಗಲಿ ಎನ್ನುವ ಸದಾಶಯವನ್ನು ಸದ್ಯಕ್ಕೆ ಇಟ್ಟುಕೊಳ್ಳೋಣ.