ಪಾಕಿಸ್ತಾನಕ್ಕೆ ʼರಕ್ತ ಸಿಂದೂರʼವಿಟ್ಟರೂ ಈ ರೀತಿಯ ಹುಚ್ಚಾಟವೇಕೆ, ಯುದ್ಧೋನ್ಮಾದದಲ್ಲಿ ವಾಸ್ತವ ಮರೆಯದಿರಿ; ರಾಜೀವ ಹೆಗಡೆ ಬರಹ
ರಾಜೀವ ಹೆಗಡೆ ಬರಹ: ಯುದ್ಧೋನ್ಮಾದದಲ್ಲಿ ವಾಸ್ತವ ಮರೆಯುವುದು ಬೇಡ. ಒಂದು ಸರ್ಕಾರದ ನಡೆಯಲ್ಲಿ ಕೆಲವರಿಗೆ ಮುಖಭಂಗ ಕಾಣಬಹುದು, ಕೆಲವರಿಗೆ ಸೋಲು ಕಾಣಬಹುದು. ಆದರೆ ದೇಶದ ಭದ್ರತೆ ವಿಚಾರ ಬಂದಾಗ ನಮ್ಮೆಲ್ಲರಿಗಿಂತ ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಕೂತವರು ಸರಿಯಾಗಿಯೇ ಕ್ರಮ ಕೈಗೊಂಡಿರುತ್ತಾರೆ.

ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಎರಡೂ ದೇಶಗಳಲ್ಲಿ ನಡುವಿದ್ದ ಯುದ್ಧದ ಪರಿಸ್ಥಿತಿ ಈಗ ತಿಳಿಗೊಂಡಿದೆ. ಆದರೆ ಕದನ ವಿರಾಮ ಘೋಷಣೆಯ ನಂತರ ಹಲವರು ಪ್ರಧಾನಿ ಮೋದಿಯನ್ನು ತೆಗಳುತ್ತಿದ್ದಾರೆ. ಸರ್ಕಾರದ ನಡೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಇಬ್ಬರ ಜಗಳದ ನಡುವೆ ಮೂರನೇಯವರಿಗೆ ಲಾಭ ಎಂಬಂತೆ ಭಾರತ್-ಪಾಕ್ ಕಲಹದಿಂದ ಅಮೆರಿಕ ಲಾಭ ಮಾಡಿಕೊಂಡಿದೆ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ಈ ಸಂದರ್ಭ ಕದನ ವಿರಾಮ ಎಷ್ಟರ ಮಟ್ಟಿಗೆ ಅನಿವಾರ್ಯವಿತ್ತು, ಭಾರತ ಸರ್ಕಾರದ ನಿಲುವು ಎಷ್ಟು ಸರಿ ಇದೆ, ಒಂದು ವೇಳೆ ಯುದ್ಧವಾದರೆ ದೇಶದ ಮೇಲೆ ಅದರ ಪರಿಣಾಮ ಈ ಎಲ್ಲದರ ಬಗ್ಗೆ ವಿಸ್ತಾರವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಪತ್ರಕರ್ತ ರಾಜೀವ ಹೆಗಡೆ. ಇವರ ಬರಹವನ್ನು ನೀವೂ ಓದಿ.
ರಾಜೀವ ಹೆಗಡೆ ಬರಹ
ಭಾರತ ಹಾಗೂ ಪಾಕಿಸ್ತಾನದ ನಡುವಿನ ಕದನ ವಿರಾಮದ ಸುದ್ದಿ ಬರುತ್ತಿದ್ದಂತೆ, ಒಂದಿಷ್ಟು ಜನರು ಮನಸ್ಸಿಗೆ ತೋಚಿದಂತೆ ಮಾತನಾಡಲು ಆರಂಭಿಸಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸಿದವರೆಲ್ಲ, ಟೀಕಿಸಲು ಆರಂಭಿಸಿದ್ದಾರೆ. ಇನ್ನೊಂದೆಡೆ ಯುದ್ಧವೇ ಬೇಡವೆಂದು ಶಾಂತಿಗಾಗಿ ಕೂಗುತ್ತಿರುವವರು ಕೂಡ ಮೋದಿಯನ್ನು ಹೀಯಾಳಿಸುತ್ತಿದ್ದಾರೆ. ಆದರೆ ನಾವೇಕೆ ವಾಸ್ತವವನ್ನು ಸಂಪೂರ್ಣವಾಗಿ ಬದಿಗಿಟ್ಟು, ಆಲೋಚಿಸಲು ಆರಂಭಿಸಿದ್ದೇವೆ ಎನ್ನುವುದೇ ಅರ್ಥವಾಗುವುದಿಲ್ಲ.
ಮೊದಲ ದಿನದಿಂದಲೂ ನಾನು ಸಂಪೂರ್ಣ ಯುದ್ಧದ ಪರವಾಗಿರಲಿಲ್ಲ. ಹಾಗೆಯೇ ದಾಳಿಯ ಬಳಿಕವೂ ನನ್ನ ನಿಲುವು ಬದಲಾಗಿರಲಿಲ್ಲ. ಈಗಲೂ ಹಾಗೆಯೇ ಇದ್ದೇನೆ. ಆದರೆ ನಾವೇ ಒಂದಿಷ್ಟು ಜನ ಉನ್ಮಾದದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ, ಕರಾಚಿ, ಇಸ್ಲಾಮಾಬಾದ್ ಎನ್ನುತ್ತ ಅಖಂಡ ಭಾರತದ ಕನಸು ಕಾಣುತ್ತಿದ್ದೆವು. ನಮ್ಮ ನಿರೀಕ್ಷೆ ಗೋಪುರವನ್ನು ಅಪರಿಮಿತವಾಗಿಸಿಕೊಂಡು, ಪ್ರಭಾವಿ ಫಲಿತಾಂಶ ಕೂಡ ಇಂದು ಕೆಟ್ಟದಾಗಿ ಕಾಣಿಸುವಂಥ ಸ್ಥಿತಿಯನ್ನು ನಾವೇ ನಿರ್ಮಿಸಿಕೊಂಡಿದ್ದೇವೆ. ಇದೊಂಥರ ಶೇ 95 ರಷ್ಟು ಅಂಕ ಗಳಿಸುತ್ತಿದ್ದ ಮಕ್ಕಳ ಮೇಲೆ ಶೇ 99ರ ಒತ್ತಡ ಹೇರಿ, ಶೇ 96 ಪಡೆದರೂ ಅನುತ್ತೀರ್ಣ ಎನ್ನುವ ಭಾವನೆ ಮೂಡಿಸುವ ಪ್ರಯತ್ನವಾಗಿದೆ. ವಿಪರ್ಯಾಸವೆಂದರೆ ಅನುತ್ತೀರ್ಣವಾಗಿ ಗೋಳಾಡುತ್ತಿರುವ ಪಾಕಿಸ್ತಾನ ಗೆದ್ದ ಸಂಭ್ರಮದಲ್ಲಿ ತೇಲುವಂತೆ ನಾವೇ ವಾತಾವರಣ ಸೃಷ್ಟಿಸುತ್ತಿದ್ದೇವೆ. ರಾಹುಲ್ ಗಾಂಧಿ 100 ಸೀಟು ಪಡೆಯದೆಯೂ ಚುನಾವಣೆ ಗೆದ್ದು ಸಂಭ್ರಮಿಸಿದಂತಾಗಿದೆ. ಅಂದ್ಹಾಗೆ ಭಾರತ ಸರ್ಕಾರದ ನಿಲುವು ಕೂಡ ಅದೇ ರೀತಿಯಿತ್ತು. ಮುಂದೆ ಪರಿಸ್ಥಿತಿ ಬಿಗಡಾಯಿಸಿದರೂ ಭಾರತದ ನಿಲುವು ಹೀಗೆ ಇರುತ್ತದೆ ಹಾಗೂ ಇರಬೇಕು. ಭಾರತದ ಸರ್ಕಾರವು ಈ ದೇಶದ 150 ಕೋಟಿ ಜನರ ಪ್ರತಿನಿಧಿಯಾಗಿದೆ. ಆದರೆ ಪಾಕಿಸ್ತಾನವು ಒಂದಿಷ್ಟು ಸಾವಿರ ಸೇನಾಧಿಕಾರಿಗಳು ಹಾಗೂ ಉಗ್ರರ ಪರವಾಗಿದೆಯಷ್ಟೇ.
ಅಷ್ಟಕ್ಕೂ ಭಾರತವು ಮೊದಲ ದಿನದಿಂದ ಕದನ ವಿರಾಮದ ಕ್ಷಣದವರೆಗೆ ಎಲ್ಲಿಯೂ ಪೂರ್ಣಕಾಲಿಕ ಯುದ್ಧ ಘೋಷಿಸಿರಲಿಲ್ಲ. ಅದಲ್ಲದೇ ಒಂದು ಕ್ಷಣವೂ ಆಕ್ರಮಣಕಾರಿಯಾಗಿ ಆಲೋಚನೆ ಮಾಡಿಲ್ಲ. ಒಂದು ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ದೇಶ ಏನು ಮಾಡಬೇಕೋ, ಆ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿ ತೋರಿಸಿದೆ. ಯಾರದ್ದೋ ನರೇಟಿವ್‌ಗೆ ಬಲಿಯಾಗುವ ಮೊದಲಿಗೆ, ಒಮ್ಮೆ ಪಹಲ್ಗಾಮ್ ದಾಳಿ ದಿನದಿಂದ ಭಾರತ ತೆಗೆದುಕೊಂಡ ಕ್ರಮವನ್ನು ಪರಿಶೀಲಿಸುತ್ತಾ ಬನ್ನಿ.
ಭಾರತದ ಮಹಿಳೆಯರ ಸಿಂದೂರ ಅಳಿಸಿದ ದಿನದ ಬಳಿಕ, ಭಾರತ ಸರ್ಕಾರವು ಮೊದಲಿಗೆ ಒಂದಿಷ್ಟು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿತು. ಯುದ್ಧಕ್ಕಿಂತ ಅತ್ಯಂತ ಪ್ರಭಾವಯುತ ಕ್ರಮಗಳು ಅದಾಗಿದ್ದವು. ಅದರಲ್ಲಿ ಪ್ರಮುಖವಾಗಿರುವುದು ಇಂಡಸ್ ಜಲ ಒಪ್ಪಂದ. ಭಾರತ ಸರ್ಕಾರದ ಈ ಕ್ರಮ ಎಷ್ಟು ಪರಿಣಾಮ ಬೀರಬಲ್ಲದು ಎನ್ನುವುದನ್ನು ಸ್ಥಳೀಯ ಜನರ ಪ್ರತಿಕ್ರಿಯೆಗಳನ್ನು ಕೇಳಿದರೆ ಗೊತ್ತಾಗುತ್ತದೆ. ಆದರೆ ಆ ದುಷ್ಟ ದೇಶದಲ್ಲಿ ಜನರ ಅಭಿಪ್ರಾಯಗಳನ್ನು ಗೌರವಿಸುವ ಸರ್ಕಾರವಿಲ್ಲದಿರುವಾಗ, ಭಾರತದ ಮೇಲೆ ದಾಳಿ ಮಾಡುವ ಆಯ್ಕೆಯನ್ನೇ ತನ್ನದಾಗಿಸಿಕೊಂಡಿತು. ಆದರೆ ಭಾರತ ಸರ್ಕಾರವು ಪಾಕಿಸ್ತಾನದಲ್ಲಿನ ಅಘೋಷಿತ ಸೇನಾ ಸರ್ಕಾರದಂತೆ ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವಿಲ್ಲ.
ಇದೇ ಕಾರಣಕ್ಕಾಗಿಯೇ ಭಾರತ ಪ್ರತಿ ಹೆಜ್ಜೆಯನ್ನೂ ಲೆಕ್ಕಾಚಾರ ಮಾಡಿಯೇ ಇಡಲಾರಂಭಿಸಿತು. ಪಾಕಿಸ್ತಾನದ ಸರ್ಕಾರದ ಪ್ರತಿನಿಧಿಗಳ ರೀತಿಯಲ್ಲಿ ಹುಚ್ಚಾಪಟ್ಟೆ ಮಾತನಾಡಲಿಲ್ಲ. ಪಾಕ್ ಸರ್ಕಾರದವರ ಮಾತು ಹಾಗೂ ಡ್ರೋನ್ ಹಾರಾಟ ಒಂದೇ ರೀತಿಯಿತ್ತು. ಅವುಗಳಿಗೆ ಲೆಕ್ಕಾಚಾರವೂ ಇರಲಿಲ್ಲ ಹಾಗೂ ನಿರ್ದಿಷ್ಟ ಗುರಿ ಇರಲಿಲ್ಲ. ಆದರೆ ಭಾರತದ ಪ್ರತಿ ಮಾತು ಹಾಗೂ ನಡೆ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡಿರುವುದು ಸ್ಪಷ್ಟವಾಗಿತ್ತು.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಮೇ 7 ಹಾಗೂ 8ರಂದು ಭಾರತವು ʼಆಪರೇಷನ್ ಸಿಂಧೂರʼ ಮೂಲಕ ಪ್ರತ್ಯುತ್ತರ ನೀಡಿತು. ಪಾಕ್ ಆಕ್ರಮಿತ ಕಾಶ್ಮೀರವಲ್ಲದೇ ಆ ದೇಶದ ಇತರ ನಗರದೊಳಗೆ ಹೋಗಿ ಅಟ್ಟಾಡಿಸಿ ದಾಳಿ ನಡೆಸಿತು. ಒಂದಿಷ್ಟು ಉಗ್ರ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿ, ಕೆಲವು ಹಳೆಯ ಲೆಕ್ಕವನ್ನು ಚುಕ್ತಾ ಮಾಡುವ ಕೆಲಸ ಮಾಡಿತು. ಅಂದರೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದೇವೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಪಾಕ್‌ನಲ್ಲಿನ ನಿರ್ದಿಷ್ಟ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ, ನಾಶ ಮಾಡಿದ್ದೇವೆ ಎನ್ನುವುದು ಸರ್ಕಾರದ ಸ್ಪಷ್ಟ ನಿಲುವಾಗಿತ್ತು. ಇದು ಯುದ್ಧಕ್ಕೆ ಆಹ್ವಾನ ಕೊಡುವ ನಡೆಯಾಗಿರಲಿಲ್ಲ. ʼನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ನಿಮ್ಮ ನೆಲವಷ್ಟೇ ಅಲ್ಲ, ಮನೆಯವರೆಗೂ ಬಂದು ದಾಳಿ ಮಾಡುತ್ತೇವೆʼ ಎನ್ನುವ ಕಠಿಣ ಸಂದೇಶವಾಗಿತ್ತು. ಹಾಗೆಯೇ ಇದು ಭಾರತದ ದಾಳಿಯಲ್ಲ, ಪ್ರತಿಕಾರದ ಕ್ರಮವೆಂದು ವಿಶ್ವ ಸಮುದಾಯಕ್ಕೆ ಭಾರತವು ಹೇಳಿತ್ತು. ಅದಲ್ಲದೇ ಪಾಕ್ ನಡೆ ಆಧರಿಸಿ, ನಮ್ಮ ಮುಂದಿನ ಕ್ರಮವಿರಲಿದೆ ಎನ್ನುವ ಸಂದೇಶವನ್ನು ಭಾರತ ಸರ್ಕಾರ ನೀಡಿತ್ತು.
ಇದಾದ ಬಳಿಕ ಭಾರತದ ನಾಗರಿಕರ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡಿತು. ಅದರ ಬೆನ್ನಲ್ಲೇ ನಮ್ಮ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ವಿಫಲ ಪ್ರಯತ್ನ ಮಾಡಲಾಯಿತು. ಭಾರತವು ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿತು. ಆ ಸಂದರ್ಭದಲ್ಲಿ ನಮ್ಮ ರಕ್ಷಣಾ ಪಡೆಗಳು ನೀಡಿದ ಉತ್ತರವನ್ನು ಸೂಕ್ಷ್ಮವಾಗಿ ಒಮ್ಮೆ ಗಮನಿಸಿ, ʼನಮ್ಮ ಮೇಲೆ ಯಾವ ಪ್ರದೇಶಗಳಿಂದ ದಾಳಿ ನಡೆಯಿತೋ, ಆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಾವು ಪ್ರತಿದಾಳಿ ನಡೆಸಿದ್ದೇವೆʼ ಎಂದು ಭಾರತ ಹೇಳಿತು. ಅಂದರೆ ನಾವು ಏನು ಮಾಡಬೇಕೋ ಅದನ್ನು ಮೇ 7 ಹಾಗೂ 8ರಂದು ಮಾಡಿದ್ದೇವೆ. ಈಗ ಪ್ರತ್ಯುತ್ತರ ಎನ್ನುವುದು ಭಾರತದ ನಡೆಯಾಗಿತ್ತು. ಅಂದರೆ ಆ ಕ್ಷಣದಿಂದಲೂ ಭಾರತವು ಯುದ್ಧಕ್ಕೆ ಕಾಲು ಕೆದರಿಕೊಂಡು ಹೋಗುವ ಯಾವುದೇ ಆಸಕ್ತಿಯನ್ನು ಹೊಂದಿರಲಿಲ್ಲ. ಆದರೆ ಪ್ರತಿ ದಾಳಿ ಮಾತ್ರ, ಸರಿಯಾಗಿಯೇ ಇರಲಿದೆ ಎನ್ನುವುದು ನಮ್ಮ ಜವಾಬ್ದಾರಿಯುತ ಸೇನೆ ಹಾಗೂ ಸರ್ಕಾರದ ನಿಲುವಾಗಿತ್ತು. ಆ ಪ್ರತ್ಯುತ್ತರದಲ್ಲಿ ನಯಾ ಪೈಸೆ ಕೂಡ ಕಡಿಮೆ ಭಾರತೀಯ ಸೇನೆ ಕಡಿಮೆ ಮಾಡಿಕೊಳ್ಳಲಿಲ್ಲ. ಇನ್ನೊಂದೆಡೆ ಭಾರತವು ಪಾಕಿಸ್ತಾನದಂತೆ ಬೂಟಾಟಿಕೆ ಮಾಡಲಿಲ್ಲ. ಮಕ್ಕಳ ಕೈಗೆ ಪಟಾಕಿ ಡಬ್ಬಾವನ್ನು ಕೊಟ್ಟಾಗ, ಸಿಕ್ಕಿದ್ದನ್ನೆಲ್ಲ ಹೊಡೆಯುವಂತೆ ಪಾಕಿಸ್ತಾನ ವರ್ತಿಸಿತು. ಇದರಿಂದ ಭಾರತವು ಸುಲಭವಾಗಿ ಆ ಡ್ರೋನ್ ಹಾಗೂ ಕ್ಷಿಪಣಿಗಳನ್ನು ನಾಶಪಡಿಸಲು ಸಾಧ್ಯವಾಯಿತು. ಆದರೆ ಪಾಕಿಸ್ತಾನದ ಮೇಲೆ ಭಾರತದ ದಾಳಿ ಬೇಕಾಬಿಟ್ಟಿ ಆಗಿರಲಿಲ್ಲ. ನಮ್ಮ ಸೇನೆಯ ದಾಳಿ ನಿರ್ದಿಷ್ಟ ಹಾಗೂ ಪ್ರಖರವಾಗಿತ್ತು. ನಮ್ಮ ಬಹುತೇಕ ಡ್ರೋನ್ ಹಾಗೂ ಕ್ಷಿಪಣಿಗಳು ನಿರ್ದಿಷ್ಟ ಗುರಿ ಮುಟ್ಟಿದ್ದವು. ಹಾಗೆಯೇ ಭಾರತ ಮಾಡಿದ್ದ ನಿರ್ದಿಷ್ಟ ದಾಳಿಯನ್ನು ಬಹಿರಂಗವಾಗಿ ಹೇಳಿತ್ತು ಹಾಗೂ ಅದಕ್ಕೆ ದಾಖಲೆಗಳನ್ನು ನೀಡಿತ್ತು. ಆದರೆ ಇನ್ನೊಂದೆಡೆ ಪಾಕಿಸ್ತಾನವು, ತಾನು ಮಾಡಿದ್ದ ಡ್ರೋನ್ ದಾಳಿಯನ್ನೇ ಒಪ್ಪಿಕೊಂಡಿರಲಿಲ್ಲ. ಅಂದರೆ ಅಂತಹ ರಣಹೇಡಿ, ಬೇಜವಾಬ್ದಾರಿ ಸೇನೆಯೊಂದಿಗೆ ಭಾರತ ಎದುರು ನಿಂತಿತ್ತು. ಮದರಸಾದಲ್ಲಿ ಓದುವ ಮಕ್ಕಳನ್ನೇ ಯುದ್ಧಕ್ಕೆ ಬಳಸಿಕೊಳ್ಳುವಂತಹ ಹುಚ್ಚುತನದವರೆಗೆ ಆ ದೇಶ ಹೋಗಿತ್ತು.
ಅಂದರೆ ಕೇವಲ ನಾಲ್ಕು ದಿನಗಳಲ್ಲಿ ಎರಡು ಸರ್ಕಾರ ಹಾಗೂ ದೇಶಗಳ ಬಣ್ಣ ಬಯಲಾಯಿತು. ಒಂದು ಕಡೆ ಮುಗ್ದ ಜನರ ಮಧ್ಯೆ ಅಡಗಿಕೊಂಡು ಪಾಕಿಸ್ತಾನದ ಸೇನೆ ಹಾಗೂ ಉಗ್ರರು ದಾಳಿ ಮಾಡುತ್ತಾರೆ. ಆದಾಗ್ಯೂ ಭಾರತವು ಅಲ್ಲಿಯ ಸಾಮಾನ್ಯ ಜನರ ಮೇಲೆ ದಾಳಿ ಮಾಡದೇ ಪಾಕಿಸ್ತಾನಕ್ಕೆ ಭಯ ಹುಟ್ಟಿಸುವ ಕೆಲಸ ಮಾಡಿದೆ. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ನಮ್ಮ ಸಾರ್ವಜನಿಕ ಪ್ರದೇಶಗಳ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದೆ. ಆದರೆ ಭಾರತದ ವೈಶಿಷ್ಟ್ಯವೆಂದರೆ, ಪಾಕಿಸ್ತಾನದ ಸಾಮಾನ್ಯ ಜನರಿಗೂ ಅತಿಯಾದ ಹಾನಿ ಮಾಡದೇ, ನಮ್ಮವರನ್ನೂ ರಕ್ಷಿಸುವ ಕೆಲಸ ಮಾಡಿದೆ. ಪಾಕಿಸ್ತಾನಕ್ಕೆ ಅಲ್ಲಿಯ ಜನರೇ ಏರ್ ಡಿಫೆನ್ಸ್ ಸಿಸ್ಟಮ್ ಆಗಿತ್ತು. ಅದಕ್ಕಾಗಿಯೇ ಯುದ್ಧೋನ್ಮಾದದ ವೇಳೆಯೂ ನಾಗರಿಕ ವಿಮಾನಯಾನ ಮಾಡಿಸುತ್ತಿತ್ತು. ಆದರೆ ಭಾರತವು ಎರಡು ಡಿಫೆನ್ಸ್ ಸಿಸ್ಟಮ್ ಇರಿಸಿಕೊಂಡಿತ್ತು ಎನ್ನುವುದನ್ನು ಮರೆಯಬೇಡಿ. ಒಂದೆಡೆ ಸೇನೆಯ ಬಳಿ ಇರುವ ಬಲಿಷ್ಠ ಶಸ್ತ್ರಾಸ್ತ್ರ ಹಾಗೂ ಇನ್ನೊಂದೆಡೆ ಜವಾಬ್ದಾರಿಯುತ ಸರ್ಕಾರ. ಪಾಕಿಸ್ತಾನದ ರೀತಿ ವರ್ತಿಸುವ ಸರ್ಕಾರಗಳು ನಮ್ಮ ದೇಶ ಹೊಂದಿದ್ದರೆ, ಸಾವಿರಾರು ಜನರು ಎರಡೇ ದಿನದಲ್ಲಿ ವೀರ ಮರಣ ಹೊಂದಬೇಕಾಗುತ್ತಿತ್ತು.
ವಾಸ್ತವ ಮರೆಯಬೇಡಿ!
ಅಮೆರಿಕದ ಒತ್ತಡಕ್ಕೆ ಮಣಿದು ಭಾರತವು ಕದನ ವಿರಾಮಕ್ಕೆ ಒಪ್ಪಿದೆ ಎಂದು ಸಾಕಷ್ಟು ಜನರಿಗೆ ಬೇಸರ ಮೂಡಿಸಿರಬಹುದು. ಒಂದು ಹಂತಕ್ಕೆ ಈ ಮಧ್ಯಸ್ಥಿಕೆ ಅಗತ್ಯವಿರಲಿಲ್ಲ ಎಂದು ಅನಿಸಬಹುದು. ಆದರೆ ಇಂತಹ ಸಂಘರ್ಷದ ವಾತಾವರಣದಲ್ಲಿ ಮಧ್ಯಸ್ಥಿಕೆ ಮಾತ್ರ ಕೆಲಸ ಮಾಡುವುದು. ಸಂಘರ್ಷ ಮಾಡುತ್ತಿರುವ ಇಬ್ಬರು ವ್ಯಕ್ತಿಗಳು ಕೂತು ಮಾತುಕತೆಯನ್ನಾಡಲು ʼಈಗೋʼ ಅಡ್ಡಿಯಾಗುತ್ತಿರುತ್ತದೆ. ಆದರೆ ಪೂರ್ಣ ಪ್ರಮಾಣದ ಯುದ್ಧ ನಡೆಯಬೇಕಿತ್ತು, ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರವನ್ನು ಆಕ್ರಮಿಸಿಕೊಳ್ಳಬೇಕಿತ್ತು, ಬಲೂಚಿಸ್ತಾನವನ್ನು ಇಷ್ಟಕ್ಕೇ ಬಿಡಬಾರದಿತ್ತು ಎಂದು ಅಖಂಡ ಭಾರತದ ನಕ್ಷೆಯನ್ನು ತೋರಿಸಿ ಕಣ್ಣೀರು ಇಡುತ್ತಿರುವವರು ದಯವಿಟ್ಟು ವಾಸ್ತವವನ್ನು ಮರೆಯುವ ಪ್ರಯತ್ನ ಮಾಡಬೇಡಿ.
ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರವನ್ನು ಭಾರತ ಪಡೆಯಬೇಕು ಎನ್ನುವುದು ಆಸೆಯಾಗಿರಬಹುದು. ಆದರೆ ಅಲ್ಲಿರುವ ಜನರನ್ನು ಉಳಿಸಿಕೊಂಡು ಭಾರತವು ಆ ಭಾಗವನ್ನು ಮರುವಶಕ್ಕೆ ತೆಗೆದುಕೊಂಡರೆ, ದೇಶದ ಪಾಲಿಗೆ ಇನ್ನೂ ದೊಡ್ಡ ತಲೆನೋವು ಸೃಷ್ಟಿಯಾಗಲಿದೆ ಎನ್ನುವ ಸಾಮಾನ್ಯ ವಿಚಾರ ಮರೆಯಬೇಡಿ. ಇಡೀ ಜಗತ್ತಿನ ಜಿಹಾದಿ ಆಲೋಚನೆಗಳು ಈ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿವೆ. ಅವರನ್ನು ಸಂಪೂರ್ಣ ನಾಶಪಡಿಸಿದಾಗ ಮಾತ್ರ, ಅದು ಭಾರತಕ್ಕೆ ಸಂಪನ್ಮೂಲವಾಗಬಹುದು. ಇಲ್ಲವಾದಲ್ಲಿ ಆ ಭಾಗವು ನಾವು ಕೇಳರಿಯದ ಮಟ್ಟಿಗೆ ದೊಡ್ಡ ತಲೆನೋವಾಗಲಿದೆ. ಇನ್ನು ಬಲೂಚಿಸ್ತಾನ ಎನ್ನುವ ದೇಶ ನಿರ್ಮಾಣವು ಇನ್ನು ಕೆಲವೇ ವರ್ಷಗಳಲ್ಲಿ ಆಗಲಿದೆ. ಆ ಭಾಗದ ಹೋರಾಟಕ್ಕಾಗಿ ನಮ್ಮ ಸಂಪನ್ಮೂಲವನ್ನು ಹಾಳು ಮಾಡಿಕೊಳ್ಳುವಷ್ಟರ ಮಟ್ಟಿಗೆ ಭಾರತ ಸಮೃದ್ಧವಾಗಿಲ್ಲ. ಹಾಗೆಯೇ ಪಾಕಿಸ್ತಾನದಲ್ಲಿ ಹೋರಾಟ ನಡೆಸುತ್ತಿರುವ ಬಹುತೇಕರು ಜಿಹಾದಿ ಮನಸ್ಥಿತಿಗಳೇ ಆಗಿವೆ. ಅವರೊಳಗಿನ ಆಂತರಿಕ ಕಚ್ಚಾಟದಿಂದ ಪ್ರತ್ಯೇಕವಾಗಲು ಬಯಸುತ್ತಿದ್ದಾರೆಯಷ್ಟೇ. ಆದರೆ ಕೆಲವರು ಮಾತನಾಡುವಂತೆ ಅವರನ್ನು ಅಖಂಡ ಭಾರತದೊಳಗೆ ಸೇರಿಸಿಕೊಂಡರೆ, ಅವರ ಜಿಹಾದಿ ಮನಸ್ಥಿತಿ ದೂರವಾಗುವುದಿಲ್ಲ. ನಾವು ಜಿಹಾದಿಗಳ ವಿರುದ್ಧ ನೇರವಾಗಿ ಹೋರಾಟ ನಡೆಸಬೇಕಾಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಒಂದು ದಿನದಲ್ಲಿ ಪಾಕಿಸ್ತಾನದ ಮಿತ್ರನಾಗಿದ್ದ ಅಫ್ಘಾನಿಸ್ತಾನವನ್ನು ನಾವು ಇಂದು ಬಳಸಿಕೊಳ್ಳುತ್ತಿದ್ದೇವೆ. ಆದರೆ ಆ ವಿಷ ಹಾವನ್ನು ಎಂದಿಗೂ ಅಪ್ಪಿಕೊಳ್ಳಲು ಆಗುವುದಿಲ್ಲ. ಹಾವು ಎಲ್ಲಿದ್ದರೂ ಕಚ್ಚುವ ಬುದ್ಧಿಯನ್ನು ಬಿಡುವುದಿಲ್ಲ.
ಈಗ ಪೂರ್ಣ ಪ್ರಮಾಣದ ಯುದ್ಧ ಹಾಗೂ ಪಾಕಿಸ್ತಾನದ ನಾಶವೆನ್ನುವ ಮೂಲ ವಿಷಯಕ್ಕೆ ಬರೋಣ. ಪಾಕಿಸ್ತಾನದ ಭೂಪಟ ಅಳಿಸುತ್ತೇವೆ ಎನ್ನುವುದೆಲ್ಲ ಪಬ್-ಜಿ ಆಟವಾಡುವ ಹುಡುಗರು ಹೇಳಿದಂತೆ ಬಾಲಿಶವಾಗಿ ಕೇಳಿಸುತ್ತದೆ. ಆ ದೇಶಲ್ಲಿಯೂ 25 ಕೋಟಿ ಜನರಿದ್ದಾರೆ. ಅಷ್ಟೊಂದು ದೊಡ್ಡ ಸಂಖ್ಯೆಯ ನರಮೇಧವನ್ನು ಭಾರತದಲ್ಲಿ ಯಾವುದೇ ಸರ್ಕಾರ ಬಂದರೂ ಮಾಡುವುದಿಲ್ಲ. ಹಿಟ್ಲರ್‌ನಂಥ ರಾಕ್ಷಸರಿಂದಲೂ ಅದು ಅಸಾಧ್ಯವಾದ ಕೆಲಸ. ಒಂದೊಮ್ಮೆ ಭಾರತದಲ್ಲಿ ಪಾಕಿಸ್ತಾನದಂಥ ಬೇಜವಾಬ್ದಾರಿ ಸರ್ಕಾರ ಬಂದರೂ ಅದೆಲ್ಲ ಸಂಭವಿಸಲಾಗದ ಕಾರ್ಯವಾಗಿದೆ.
ಈ ಹಿಂದಿನ ಲೇಖನದಲ್ಲಿ ಹೇಳಿದ್ದನ್ನೇ ಮತ್ತೆ ಬರೆಯುತ್ತಿದ್ದೇನೆ. ಉಕ್ರೇನ್-ರಷ್ಯಾ ನಡುವೆ ಮೂರು ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಇಸ್ರೇಲ್ ಹಾಗೂ ಕೆಲ ಅರಬ್ ರಾಷ್ಟ್ರಗಳ ಮಧ್ಯೆ ಅರ್ಧ ಶತಮಾನದಿಂದ ಹೋರಾಟ ನಡೆಯುತ್ತಿದೆ. ಇವೆರಡರಲ್ಲೂ ಲಾಭ ಪಡೆದವರು ಒಬ್ಬರೇ ಎನ್ನುವುದನ್ನು ನಾವು ಮರೆಯಕೂಡದು. ಈ ಸಂಘರ್ಷದಲ್ಲಿ ಬಲಿಷ್ಠ ರಾಷ್ಟ್ರಗಳ ರಕ್ಷಣಾ ಉದ್ಯಮವು ತನ್ನ ಕೋಟೆಯೊಳಗೆ ಇನ್ನಷ್ಟು ಖಜಾನೆಯನ್ನು ತುಂಬಿಸಿಕೊಂಡಿದೆಯಷ್ಟೇ. ಅಂದ್ಹಾಗೆ ಒಂದು ಕಾಲದಲ್ಲಿ ಭಾರತಕ್ಕಿಂತ ಸಮೃದ್ಧವಾಗಿದ್ದ ಪಾಕಿಸ್ತಾನವನ್ನು ಭಯೋತ್ಪಾದನೆಯ ರಾಜಧಾನಿಯನ್ನಾಗಿಸಿದ್ದು, ಇಂದು ಮಧ್ಯಸ್ಥಿಕೆ ವಹಿಸಿದ್ದೇವೆ ಎಂದು ಹೇಳುತ್ತಿರುವ ಅಮೆರಿಕ. ಅಂದು ಅಮೆರಿಕ ಮಾಡಿದ ಕೆಲಸವನ್ನು ಇಂದು ಚೀನಾ ಮಾಡುತ್ತಿದೆ. ಒಟ್ಟಾರೆಯಾಗಿ ಒಂದು ಬಲಿಷ್ಠ ದೇಶವನ್ನು ಕಟ್ಟಿ ಹಾಕಲು, ಇನ್ನೊಂದು ಸೂಪರ್ ಪವರ್ ದೇಶವು ಪಾಕಿಸ್ತಾನದಂಥ ಗೊಂಬೆಯನ್ನು ಆಡಿಸುತ್ತಿರುತ್ತವೆ. ಗೊಂಬೆಯ ಸೂತ್ರಧಾರಿಗಳು ಎಂದಿಗೂ ಇಂತಹ ಕಿಡಿಗೇಡಿ ಕೆಲಸವನ್ನು ಮಾಡುತ್ತಲೇ ಇರುತ್ತವೆ. ಇದಕ್ಕೆ ಭಾರತವು ಹೊರತಾಗುವಷ್ಟರ ಮಟ್ಟಿಗೆ ʼಸೂಪರ್ ಪವರ್ʼ ಆಗಿ ಬೆಳೆದಿಲ್ಲ. ಹೀಗಾಗಿ ಈ ಯುದ್ಧೋನ್ಮಾದವನ್ನು ಬಿಟ್ಟು, ಭಾರತವ ಸೂಪರ್ ಪವರ್ ಆಗುವತ್ತ ಏನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮಾತುಕತೆಯನ್ನು ಪುನರಾರಂಭಿಸೋಣ.
ಆಲೋಚನೆ ಮಾರಿಕೊಳ್ಳದಿರೋಣ
ಕೆಲವೇ ದಿನಗಳ ಹಿಂದೆ ಕೇಂದ್ರ ಸರ್ಕಾರದ ದುಬಾರಿ ತೆರಿಗೆಗಳನ್ನು ನಾವು ವಾಚಾಮಗೋಚರವಾಗಿ ಟೀಕಿಸಿದ್ದೆವು. ಆದರೆ ಮೊನ್ನೆ ಪಾಕಿಸ್ತಾನದ ದಾಳಿಯನ್ನು ನಿಷ್ಕ್ರಿಯಗೊಳಸುತ್ತಿದ್ದಂತೆ, ನಮ್ಮ ತೆರಿಗೆ ಹಣದ ಸದುಪಯೋಗವಾಗುತ್ತಿದೆ ಎಂದು ಲಕ್ಷಾಂತರ ಜನ ಸಂಭ್ರಮಿಸಿದರು. ಇಂದು ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ, ಮತ್ತೆ ಕೂಗಾಟ ಆರಂಭಿಸುತ್ತಿದ್ದಾರೆ. ಈ ಕದನ ವಿರಾಮದಿಂದ ನಮ್ಮದೇ ತೆರಿಗೆ ಹಣ ಉಳಿಯುತ್ತಿದೆ ಎನ್ನುವುದನ್ನು ಮರೆಯಬೇಡಿ. ಕಳೆದ ಮೂರ್ನಾಲ್ಕು ದಿನದ ಕಾರ್ಯಾಚರಣೆಗೆ ಸಾವಿರಾರು ಕೋಟಿ ಖರ್ಚಾಗಿರುತ್ತದೆ. ಪೂರ್ಣ ಪ್ರಮಾಣದ ಯುದ್ಧ ನಡೆದರೆ ಲಕ್ಷಾಂತರ ಕೋಟಿ ಹಣ ಹರಿದುಹೋಗುತ್ತಿತ್ತು. ಆಗ ಅದಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚುವರಿ ತೆರಿಗೆ ಹಾಕುತ್ತಿದ್ದರೆ, ಸುಮ್ಮನಿರುತ್ತಿದ್ದೀರಾ? ಯುದ್ಧದ ಪರಿಣಾಮವಾಗಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೆ ಅದನ್ನು ಸಹಿಸುತ್ತಿದ್ದೀರಾ? ಯುದ್ಧದಿಂದ ಭಾರತದ ಅಭಿವೃದ್ಧಿ ಕುಂಠಿತವಾಗಿ ಉದ್ಯೋಗ ನಷ್ಟವಾಗಿದ್ದರೆ, ಇಂಧನ ಬೆಲೆ ಇನ್ನಷ್ಟು ಹೆಚ್ಚಾಗಿದ್ದರೆ ಯುದ್ಧ ಮಾಡುವ ಮೋದಿಯನ್ನು ಬೆಂಬಲಿಸುತ್ತಿದ್ದೀರಾ?
ಇಸ್ರೇಲ್‌ನಲ್ಲಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದಾಗ, ಎಲ್ಲ ಯಹೂದಿಗಳು ಸಂಭ್ರಮಿಸಿದ್ದರು. ಆ ದಿನದಲ್ಲಿ ನೆತನ್ಯಾಹು ಜನಪ್ರಿಯತೆ ದೊಡ್ಡ ಪ್ರಮಾಣದಲ್ಲಿತ್ತು. ಆದರೆ ಇಂದು ಆ ದೇಶದಲ್ಲಿ ಚುನಾವಣೆ ನಡೆದರೆ, ನೆತನ್ಯಾಹು ಹೀನಾಯಾಗಿ ಸೋಲುತ್ತಾರೆ. ಇದಕ್ಕೆ ಕಾರಣ ಹೆಚ್ಚುವರಿ ತೆರಿಗೆ ಹಾಗೂ ಬೆಲೆ ಏರಿಕೆ. ಜನರ ದೈನಂದಿನ ಬದುಕು ದುಬಾರಿ ಆಗುತ್ತಿದೆ. ಚುನಾವಣೆಯನ್ನು ಎದುರಿಸಲು ಭಯ ಪಡುತ್ತಿರುವ ನೆತನ್ಯಾಹು, ಯುದ್ಧದಿಂದ ಹಿಂದೆ ಸರಿಯುವ ಆಲೋಚನೆ ಮಾಡುತ್ತಿಲ್ಲ ಎಂದು ಅವರದ್ದೇ ಪಕ್ಷದ ನಾಯಕರು ಆರೋಪಿಸಿ ಸರ್ಕಾರದಿಂದ ಹೊರಹೋಗುತ್ತಿದ್ದಾರೆ. ಪಾಕ್ ನಾಶವಾಗಬೇಕು, ಪಿಒಜಿಕೆ ಭಾರತದ ಪಾಲಾಗಬೇಕು, ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯ ಕೊಡಿಸಬೇಕು ಎನ್ನುವವರ ಮಾತು ಕೇಳಿಕೊಂಡು ಹೋದರೆ, ಇನ್ನೊಂದು ವರ್ಷದಲ್ಲಿ ಮೋದಿ ಕಥೆಯೂ ಅದುವೇ ಆಗಿರುತ್ತಿತ್ತು. ಮೋದಿಯ ಆ ಸಂಭಾವ್ಯ ಕ್ರಮವನ್ನು ಹೊಗಳುವವರು ವರ್ಷ ಕಳೆಯುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಿದ್ದರು. ಆಗ ಮೋದಿ ಟೀಕಿಸುವರಿಗೆ ಆಹಾರ ಸಿಗುತ್ತಿತ್ತು. ಆ ದಿನದಲ್ಲಿ ಮೋದಿಯನ್ನು ಸಮರ್ಥಿಸಿಕೊಳ್ಳಲು ಇಂದಿನ ಸಮರ್ಥಕರಿಗೆ ನೈತಿಕವಾಗಿಯೂ ಕಷ್ಟವಾಗುತ್ತಿತ್ತು. ಕಳೆದೊಂದು ದಶಕದಲ್ಲಿ ಯುದ್ಧ ಮಾಡಿದ ಪ್ರತಿಯೊಂದು ದೇಶದ ಕಥೆಯಿದು.
ಇಂದಿನ ಆಧುನಿಕ ಯುದ್ಧದಲ್ಲಿ ಹಾವು ಸಾಯುವುದಿಲ್ಲ, ಕೋಲು ಮುರಿಯುವುದಿಲ್ಲ. ಡ್ರೋನ್ ಸಮರವು ಅಂತಹ ಕಿಡಿಗೇಡಿ ಯುದ್ಧಭೂಮಿಯನ್ನು ಸೃಷ್ಟಿಸಿದೆ. ಆದರೆ ಇಂತಹ ವಾತಾವರಣದಿಂದ ಬಿಕಾರಿ ಹಾಗೆ ಬೇಜವಾಬ್ದಾರಿ ದೇಶಗಳಿಗೆ ಅಗುವುದು ಏನಿಲ್ಲ. ತನ್ನದೇ ದೇಶದ ಜನರ ಜೀವಕ್ಕೆ ಕಾಳಜಿ ಮಾಡದ ದೇಶದೊಂದಿಗೆ ಸಂಘರ್ಷಕ್ಕೆ ನಿಂತಾಗ, ನಾವು ಅದೇ ರೀತಿ ಆಲೋಚಿಸಲು ಸಾಧ್ಯವಿಲ್ಲ. ಭಾರತದ ಪಾಲಿಗೆ ಎಂದಿಗೂ ಪಾಕಿಸ್ತಾನದ ನಾಶಕ್ಕಿಂತ, ನಮ್ಮವರ ರಕ್ಷಣೆ ಮುಖ್ಯವಾಗಿರುತ್ತದೆ. ಯುದ್ಧ ಭೂಮಿಯಿಂದ ದೂರ ಕುಳಿತವರೂ ಎಷ್ಟೇ ಕೂಗಾಡಬಹುದು. ಆದರೆ ರಣರಂಗದೊಳಗೆ ಕುಳಿತಿರುವ ಆಡಳಿತಗಾರರು, ಯುದ್ಧೋನ್ಮಾದದಲ್ಲಿ ಆಲೋಚಿಸಿದರೆ ನಾವು ಪಾಕಿಸ್ತಾನವಾಗುವ ದಿನ ದೂರವಿರುವುದಿಲ್ಲ. ನಮ್ಮ ದೇಶವನ್ನು ಬಲೂಚಿಸ್ತಾನದಂತೆ ಮಾಡಲು ಕನಸು ಕಾಣುವ ದೇಶದ್ರೋಹಿಗಳಿದ್ದಾರೆ ಎನ್ನುವುದನ್ನು ಮರೆಯಬೇಡಿ. ಸಂಭಾವ್ಯ ಯುದ್ಧಗಳಿಂದ ಯಾವುದೇ ದೇಶ ಸಮೃದ್ಧವಾದ ಉದಾಹರಣೆಯಿಲ್ಲ. ಆದರೆ ಹೈರಾಣಾದಾಗ ಒಡೆಯಲು ಇನ್ನಷ್ಟು ಜನರು ಸೇರಿಕೊಳ್ಳುತ್ತಾರೆ.
ಅಷ್ಟಕ್ಕೂ ಈ ಸಂಘರ್ಷದಲ್ಲಿ ಭಾರತ ಗೆದ್ದಿರುವುದು ಹಾಗೂ ಗಳಿಸಿರುವುದು ಸಾಕಷ್ಟಿದೆ. ಕದನ ವಿರಾಮ ಘೋಷಿಸಿ, ಭಾರತ ಎಲ್ಲವನ್ನೂ ಕಳೆದುಕೊಂಡಿದೆ ಎಂದೇನಿಲ್ಲ. ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟು, ಅವರ ನಿಜವಾದ ದೇಶದೊಳಗೆ ನುಗ್ಗಿ ನಮ್ಮ ಸೇನೆ ಹೊಡೆದಿದೆ. ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಎಷ್ಟು ಕೆಟ್ಟದಾಗಿದೆ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದೆ. ʼಡ್ರೋನ್ ಹೊಡೆದರೆ ನಮ್ಮ ಲೊಕೇಷನ್ ಗೊತ್ತಾಗಿಬಿಡುತ್ತದೆ ಎಂದು ಸುಮ್ಮನಿದ್ದೆವುʼ ಎಂದು ಪಾಕ್ ಸಚಿವ ಹೇಳಿಕೆ ಕೊಡುವಷ್ಟು ಅವರನ್ನು ಭಾರತ ಬೆತ್ತಲಾಗಿಸಿದೆ. ನಾವು ಅವರ ರಾಜಧಾನಿಯವರೆಗೆ ಹೋದರೂ, ಅವರಿಂದ ನಮ್ಮ ಸೇನೆಯ ಏರ್ ಡಿಫೆನ್ಸ್ ಅನ್ನು ದಾಟಲು ಸಾಧ್ಯವಿಲ್ಲ ಎನ್ನುವುದನ್ನು ಸಾರಿ ಹೇಳಿದ್ದೇವೆ. ಇವೆಲ್ಲವುದರ ಮಧ್ಯೆ ಇಂಡಸ್ ನೀರು ಬೇಕಿದ್ದರೆ, ಉಗ್ರವಾದ ನಿಲ್ಲಿಸಿ ಎನ್ನುವ ನಮ್ಮ ಮೊದಲ ದಿನದ ಮಂತ್ರಕ್ಕೆ ಕದನ ವಿರಾಮದ ಬಳಿಕವೂ ಬದ್ಧರಾಗಿದ್ದೇವೆ. ಹಾಗೆಯೇ ನಮ್ಮ ತಂಟೆಗೆ ಬಂದರೆ ಸುಮ್ಮನೇ ಬಿಡುವುದಿಲ್ಲ ಎಂದು ಕದನ ವಿರಾಮದ ಹೇಳಿಕೆಯಲ್ಲೇ ಭಾರತ ಸ್ಪಷ್ಟವಾಗಿ ತಿಳಿಸಿದೆ.
ಕೊನೆಯದಾಗಿ: ಯುದ್ಧೋನ್ಮಾದದಲ್ಲಿ ವಾಸ್ತವವನ್ನು ಮರೆಯುವುದು ಬೇಡ. ಒಂದು ಸರ್ಕಾರದ ನಡೆಯಲ್ಲಿ ಕೆಲವರಿಗೆ ಮುಖಭಂಗ ಕಾಣಬಹುದು, ಕೆಲವರಿಗೆ ಸೋಲು ಕಾಣಬಹುದು. ಆದರೆ ದೇಶದ ಭದ್ರತೆ ಎನ್ನುವ ವಿಚಾರ ಬಂದಾಗ ನಮ್ಮೆಲ್ಲರಿಗಿಂತ ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಕೂತವರು ಸರಿಯಾಗಿಯೇ ಕ್ರಮ ಕೈಗೊಂಡಿರುತ್ತಾರೆ ಎನ್ನುವ ನಂಬಿಕೆಯನ್ನು ನನಗಂತೂ ಇದೆ. ನಮ್ಮ ತಾಯಂದಿರ ʼಸಿಂದೂರʼ ಅಳಸಿದರೆ, ನಿಮ್ಮ ಮನೆಗೆ ಬಂದೂ ʼರಕ್ತ ಸಿಂದೂರʼವಿಡುತ್ತೇವೆ ಎಂದು ಭಾರತೀಯ ಸೇನೆ ಹೇಳಿದೆ. ಇನ್ನು ಕೆಲವು ದಿನ, ತಿಂಗಳು, ವರ್ಷಗಳ ಮಟ್ಟಿಗೆ ಈ ಭಯ ಪಾಕಿಸ್ತಾನಿಗಳಿಗೆ ಇರಲಿದೆ. ಮತ್ತೆ ಅವರು ದಾಳಿ ಮಾಡುತ್ತಾರೆ, ನಾವಂದು ಇದಕ್ಕಿಂತ ದೊಡ್ಡ ಏಟು ಕೊಡಬೇಕಾಗುತ್ತದೆ. ದೇಶ ವಿಭಜನೆಯಲ್ಲಿನ ಪ್ರಮಾದದಿಂದ ಇದು ನಿರಂತರ ಪ್ರಕ್ರಿಯೆ ಹಾಗೂ ಪ್ರತಿಕ್ರಿಯೆ ಆಗಿರಲಿದೆ. ಹೀಗಾಗಿ ನನ್ನ ಮಟ್ಟಿಗೆ ʼಆಪರೇಷನ್ ಸಿಂದೂರʼಕ್ಕಿಂತ ದೊಡ್ಡ ಖುಷಿ ಬೇರೆನಿಲ್ಲ. ಸರ್ಜಿಕಲ್ ಸ್ಟ್ರೈಕ್ ಆಗಿದ್ದಾಗ ಎರಡು ವರ್ಷ ಸುಮ್ಮನಿದ್ದರು. ಏರ್ ಸ್ಟ್ರೈಕ್ ನಡೆದಾಗ ಆರು ವರ್ಷ ನಡುಕವಿತ್ತು. ಈ ಅಂತರ ಇನ್ನಷ್ಟು ಹೆಚ್ಚಾಗಲಿ ಅಥವಾ ಅಂತಹ ಸ್ಥಿತಿ ಬರದಂತ ಅಪರೂಪದ ಬುದ್ಧಿ ಪಾಕಿಸ್ತಾನಿಗಳಿಗೆ ಬರಲಿ ಎನ್ನುವುದಷ್ಟೇ ಆಶಿಸಬಹುದು.