ನಡೆದದ್ದು ರಾಷ್ಟ್ರಯುದ್ಧ, ಮಾನಸಿಕವಾಗಿಯೂ ನೈತಿಕವಾಗಿಯೂ ಗೆಲುವು ಇಡೀ ಭಾರತ ದೇಶದ್ದು; ಮಧು ವೈಎನ್ ಬರಹ
ಮಧು ವೈಎನ್ ಬರಹ: ನಮ್ಮ ದೇಶ ಎಂದಿಗೂ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನಗಳಾದಿಯಾಗಿ ಪ್ರಗತಿಯತ್ತಲೇ ಮುಖ ಮಾಡಿರಬೇಕು. ಜನರು ಮೌಢ್ಯರು ಮತಾಂಧರಾಗಿರಬಾರದು. ಈಗ ನಡೆದದ್ದು ರಾಷ್ಟ್ರಯುದ್ಧ, ಧರ್ಮಯುದ್ಧವಲ್ಲ.

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಆಪರೇಷನ್ ಸಿಂದೂರ ಹೆಸರಿನಲ್ಲಿ ಭಾರತವು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಪಾಕಿಸ್ತಾನವು ಭಾರತ ಗಡಿಭಾಗಗಳಲ್ಲಿ ಪ್ರತಿದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ವಿಶ್ವದ ದೊಡ್ಡಣ ಅಮೆರಿಕ ಮಧ್ಯಪ್ರವೇಶದಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಕದನ ವಿರಾಮದ ಬಳಿಕ ಪಾಕಿಸ್ತಾನವು ಇದು ನಮ್ಮ ಐತಿಹಾಸಿಕ ಗೆಲುವು ಎಂದು ಹೇಳಿಕೊಂಡಿದೆ. ಆದರೆ ಈ ಗೆಲುವು ಭಾರತದ್ದು, ಇದು ರಾಷ್ಟ್ರಯುದ್ಧ, ಧರ್ಮಯುದ್ಧವಲ್ಲ; ಮಾನಸಿಕವಾಗಿಯೂ ನೈತಿಕವಾಗಿಯೂ ಈ ಗೆಲುವು ಇಡೀ ಭಾರತ ದೇಶದ್ದು ಎಂದಿದ್ದಾರೆ ಲೇಖಕ ಮಧು ವೈಎನ್. ಭಾರತ-ಪಾಕ್ ಕದನ ವಿರಾಮ ಹಾಗೂ ಸಂಘರ್ಷದ ಬಗ್ಗೆ ತಮ್ಮ ನಿಲುವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಮಧು, ಅವರ ಬರಹವನ್ನು ನೀವೂ ಓದಿ.
ಮಧು ವೈಎನ್ ಬರಹ
ಕದನ ವಿರಾಮ ಘೋಷಿಸಿದ ನಂತರ, ಅದರ ಉಲ್ಲಂಘನೆಯೂ ಆದ ನಂತರ ರಾತ್ರಿ ಹನ್ನೊಂದುವರೆಗೆ ಪಾಕ್ ಪ್ರಧಾನಿ ಪ್ರೆಸ್ ಕಾನ್ಫರೆನ್ಸ್ ಮಾಡಿದ್ದಾರೆ. ಈ ಯುದ್ಧದಲ್ಲಿ ಪಾಕಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಮ್ಮ ದೇಶವಾಸಿಗಳಿಗೆ ಸಂಭ್ರಮಿಸಲು ಸೂಚಿಸಿದ್ದಾರೆ.
ಭಾರತೀಯರು ನಮ್ಮ ಮಸೀದಿಗಳನ್ನು ಧ್ವಂಸ ಮಾಡಿದ್ದರು ಎಂದಿದ್ದಾರೆ. ಭಾರತದ ಸೈನ್ಯ ತಮ್ಮ ಕಡೆಯ ಮೀಟಿಂಗ್‌ನಲ್ಲಿ ನಾವು ಸೆಕ್ಯುಲರ್, ಯಾವುದೇ ಮಸೀದಿ ಕೆಡವಿಲ್ಲ ಎಂದು ಒತ್ತಿ ಹೇಳಿದ್ದು ನೆನಪಿಸಿಕೊಳ್ಳಬಹುದು.
ಪಾಕ್ ಪ್ರಧಾನಿ ಮುಖ್ಯವಾಗಿ ತಮ್ಮ ಗೆಲುವಿನ ಭಾಷಣದಲ್ಲಿ ಅನೇಕ ದೇಶಗಳಿಗೆ ಧನ್ಯವಾದ ತಿಳಿಸಿದ್ದಾರೆ. ಅಮೆರಿಕ, ಸೌದಿ ಅರೇಬಿಯಾ, ಚೈನಾ, ಟರ್ಕಿ, ಕತಾರ್, ಇಂಗ್ಲೆಂಡ್ ಮುಂತಾಗಿ. ಜೊತೆಗೆ ವಿಶ್ವಸಂಸ್ಥೆ ಕೂಡ. ಒಂದು ಡಜನ್ ದೇಶಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು ಎಂದಿದ್ದಾರೆ. ಮತ್ತು ಈ ಶಾಂತಿ ಸಂಧಾನ ಕಳೆದ ಮೂರು ದಿನಗಳಿಂದ ಪರದೆ ಹಿಂದೆ ನಡೆಯುತ್ತಾ ಬಂದಿದೆ. ಹೊರಗೆ ಮಾತ್ರ 'ಯುದ್ಧ' ಜೋರಾಗಿ ಜರುಗಿದೆ.
ಒಟ್ಟು ತಾತ್ಪರ್ಯ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಬಹಳ ಹಿನ್ನಡೆಯಾದಂತಿದೆ. ದೈತ್ಯ ದೇಶಗಳಾದ ಅಮೆರಿಕಾ, ಚೈನಾ ಅವರ ಜೊತೆಗೆ ಯುಕೆ ಮತ್ತು ಯುಎನ್, ಸೌದಿ.. ಎಲ್ಲರೂ ಪಾಕ್ ಪರವಾಗಿಯೇ ಬ್ಯಾಟ್ ಬೀಸಿದ್ದಾರೆ.
ಆದ್ದರಿಂದ ನಮ್ಮ ಸೈನ್ಯ ಗೆಲ್ಲುವ ಹಂತಕ್ಕೆ ಹೋಗಿದ್ದರೂ ನಮ್ಮ ಸರ್ಕಾರ ತನ್ನ ರಾಜತಾಂತ್ರಿಕತೆಯ ಪಾತ್ರದಲ್ಲಿ ಸೋತಿರುವಂತೆ ಕಾಣುತ್ತಿದೆ. ಒತ್ತಡಕ್ಕೆ ಬಿದ್ದು ಕದನ ವಿರಾಮಕ್ಕೆ ಒಪ್ಪಿಕೊಂಡಿದೆ.
ಇದೆಲ್ಲ ಮಾಹಿತಿ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿದೆ. ಭಾರತೀಯ ಮಾಧ್ಯಮಗಳಲ್ಲಿ ಇಲ್ಲ.
ಸೋಮವಾರದ ಮೀಟಿಂಗ್‌ನಲ್ಲಿಯೂ ಭಾರತಕ್ಕೆ ಯಾವುದೇ ಅಡ್ವಾಂಟೇಜ್ ಇದ್ದಂತಿಲ್ಲ. ನಮ್ಮ ನೀರು, ನೆಲ ಮುಂತಾಗಿ ಇನ್ನಷ್ಟು ಪಟ್ಟುಗಳನ್ನು ಸಡಿಲಗೊಳಿಸಲು ಒತ್ತಡ ಬೀಳುವ ಸಾಧ್ಯತೆಯಿದೆ. ಈ ಎಲ್ಲ ಸಂಕಟ ಮಿಸ್ತ್ರಿಯವರ ಮತ್ತು ಅನಂತರ ಬಂದಿದ್ದ ನಾಯರ್ ಎಂಬ ಕಮ್ಯಾಂಡರ್‌ನ ಗದ್ಗದಿತ ದನಿಯಲ್ಲಿ ತುಂಬಿಕೊಂಡಿದ್ದು ಈಗ ಗೊತ್ತಾಗ್ತಾ ಇದೆ.
ಈ ಒಟ್ಟು ಪ್ರಹಸನದಿಂದ ನನಗೆ ಅರ್ಥವಾಗಿದ್ದು ಇಷ್ಟು
1. ಭಯೋತ್ಪಾದನೆ ವಿರುದ್ಧ ಭಾರತದ ಪ್ರತಿಕ್ರಿಯೆ ಹಂತಹಂತವಾಗಿ ತೀಕ್ಷ್ಣಗೊಳ್ಳುತ್ತಾ ಬಂದಿದೆ. ಆ ನಾಲ್ಕು ಉಗ್ರರನ್ನೇ ಹಿಡಿಯಬೇಕು ಅನ್ನುವ ಒತ್ತಾಯ ಸಮಂಜಸವಲ್ಲ. ಒಟ್ಟು ಆ ವ್ಯವಸ್ಥೆಯ ಮೇಲೆ ದಾಳಿ ಮಾಡುವುದು ಅದಕ್ಕಿಂತ ಉತ್ತಮ ಪ್ರತಿಕ್ರಿಯೆ. ಅದನ್ನು ಭಾರತ ಮಾಡಿದೆ. ಇದು ಒಂದು ಪಕ್ಷದ ಹೋರಾಟವಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಭಾರತದ ನಿಲುವು ಹೀಗೇ ಇರಬೇಕು. ಇನ್ನೂ ಉತ್ತಮಗೊಳ್ಳುತ್ತಾ ಹೋಗಬೇಕು.
2. ಕೇವಲ ಪಾಕಿಸ್ತಾನ ಮಾತ್ರ ನಮ್ಮ ಶತ್ರುವಲ್ಲ. ಅದಷ್ಟೇ ಆಗಿದ್ದರೆ ಭಾರತ ಎಂದೋ ಆ ದೇಶವನ್ನು ಹೊಸಕಿ ಹಾಕುತ್ತಿತ್ತು. ವಿಶ್ವದ ನಾನಾ ದೇಶಗಳು ಭಾರತದ ಪ್ರಗತಿಯನ್ನು ತಡೆಯಲು ಪಾಕಿಸ್ತಾನವನ್ನು ಪ್ರಾಕ್ಸಿಯನ್ನಾಗಿ ಬಳಸಿಕೊಳ್ಳುತ್ತಿವೆ. ಇಸ್ಲಾಂ ಭಯೋತ್ಪಾದಕರು ಜಾಗತಿಕ ರಾಜಕೀಯದ ದಾಳಗಳು. ಇಸ್ಲಾಂ ಮತ ದುರ್ಬಲವಾಗಿರುವುದರಿಂದ ಇದನ್ನು ಬಹಳ ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ.
3. ಭಾರತ ಪಾಕಿಸ್ತಾನದ ಸೈನ್ಯದ ಶಕ್ತಿಯನ್ನೇ ರೆಫರೆನ್ಸಾಗಿಟ್ಟುಕೊಂಡು ಪ್ರಿಪೇರಾಗುವುದು ಮೂರ್ಖತನ. ಅಮೆರಿಕ ಚೈನಾ ದೇಶಗಳ ವಿರುದ್ಧ ಸೆಣೆಸುವಷ್ಟು ನಮ್ಮ ಸೈನ್ಯ ಅತ್ಯಾಧುನಿಕವಾಗಬೇಕಿದೆ.
4. ನಮ್ಮ ಸೈನ್ಯದ ವ್ಯವಸ್ಥೆ ಬಗ್ಗೆ ನನಗೆ ಬಹಳ ಹೆಮ್ಮೆ ಮೂಡಿತು. ಇಡೀ ನಾಲ್ಕೈದು ದಿವಸ ಅದು ತೋರಿಸಿದ ಪ್ರಬುದ್ಧತೆ, ಸಂಯಮ, ಕೆಚ್ಚು, ಪಾರದರ್ಶಕತೆ, ಜನತೆಗೆ ವರದಿ ಒಪ್ಪಿಸುತ್ತಿದ್ದುದು ಎಲ್ಲವೂ ನಮ್ಮ ಘನತೆಯನ್ನು ಎತ್ತಿಹಿಡಿಯುವಂಥದಾಗಿತ್ತು. ಮುಖ್ಯವಾಗಿ ಒಂದು ಸ್ವತಂತ್ರ ಸಂಸ್ಥೆಯಾಗಿ ವರ್ತಿಸುತ್ತಿತ್ತು. ಮೂರು ಭಿನ್ನ ಧರ್ಮೀಯರು, ಇಬ್ಬರು ಮಹಿಳೆಯರು ಸೈನ್ಯದ ಮುಖವಾಣಿಯಾಗಿದ್ದರು. ಯುದ್ಧದ ಸಂದರ್ಭವಾದ್ದರಿಂದ ಸೈನ್ಯ ಕೆಲವು ಮಾಹಿತಿಯನ್ನು ಹಿಡಿದಿಟ್ಟಿದೆ ಎಂದು ನಮಗೆ ಗೊತ್ತಿದೆ. ಎಲ್ಲವೂ ತಿಳಿಗೊಂಡ ನಂತರ ಜನತೆಗೆ ಎದುರಾಳಿಗೆ ಉಂಟು ಮಾಡಿದ ಒಟ್ಟು ನಷ್ಟ, ತನಗಾದ ಒಟ್ಟು ನಷ್ಟದ ವರದಿಯನ್ನು ಒಪ್ಪಿಸಬೇಕು.
5. ಯುದ್ಧಕಾಲದಲ್ಲಿ ಐಎಂಎಫ್‌ನಿಂದ ಸಾಲ ಪಡೆದ ದೇಶ ಪಾಕಿಸ್ತಾನ. ಅಂದರೆ ಅವರೆಷ್ಟು ಬರಗೆಟ್ಟವರು ಎಂದು ಜಗತ್ತಿಗೆ ಗೊತ್ತಾಗಿದೆ. ನಮಗೆ ಅವರ ರೀತಿ ನೀತಿ, ಅವರ ದುಷ್ಟತನ ಮಾದರಿಯಲ್ಲ. ನಮ್ಮ ದೇಶ ಎಂದಿಗೂ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನಗಳಾದಿಯಾಗಿ ಪ್ರಗತಿಯತ್ತಲೇ ಮುಖ ಮಾಡಿರಬೇಕು. ಜನರು ಮೌಢ್ಯರು ಮತಾಂಧರಾಗಿರಬಾರದು. ಈಗ ನಡೆದದ್ದು ರಾಷ್ಟ್ರಯುದ್ಧ. ಧರ್ಮಯುದ್ಧವಲ್ಲ.
5. ಕೊನೆಯದಾಗಿ- ಯಾರು ಗೆದ್ದರು ಎಂಬ ಪ್ರಶ್ನೆಯಲ್ಲವೇ? ನಮ್ಮ ಸರ್ಕಾರ ಆ 'ಇಂಟೆಂಟ್' ತೋರಿಸಿದ್ದರಿಂದ, ನಮ್ಮ ಸೈನ್ಯ ಆ 'ಹಸಿವು' ತೋರಿಸಿದ್ದರಿಂದ, ನಮ್ಮೆಲ್ಲ ವಿರೋಧ ಪಕ್ಷಗಳು 'ಒಗ್ಗಟ್ಟು' ಪ್ರದರ್ಶಿಸಿದ್ದರಿಂದ, ಕೆಲವು ಮುಖ್ಯ ಉಗ್ರರನ್ನು ಹತ್ಯೆಗೈದಿದ್ದರಿಂದ, ಪಾಕಿಸ್ತಾನ ಸೈನ್ಯ ಉಗ್ರರಿಗೆ ಸ್ಟೇಟ್ ಫ್ಯೂನರಲ್ ಕೊಟ್ಟಿದ್ದು ಜಗಜ್ಜಾಹೀರಾತು ಮಾಡಿದ್ದರಿಂದ, ಯುದ್ಧದ ನಡುವೆ ಅವರು ಸಾಲಕ್ಕೆ ಕೈಚಾಚಿದ್ದರಿಂದ, ನಾವು ಸಂಪೂರ್ಣವಾಗಿ ನಮ್ಮದೇ ಹಣ, ಶಕ್ತಿ, ಶೌರ್ಯಗಳಿಂದ ಹೋರಾಡಿದ್ದರಿಂದ- ಮಾನಸಿಕವಾಗಿಯೂ ನೈತಿಕವಾಗಿಯೂ ಗೆಲುವು ನಮ್ಮದೇ, ಅಂದರೆ ಇಡೀ ಭಾರತ ದೇಶದ್ದು.
ಇಲ್ಲಿಗೆ ಎಲ್ಲ ಮುಗಿಯಿತಾ ಅಂದರೆ ಇಲ್ಲ. ಅವರು ಮತ್ತೆ ತರಕಲಾಂಡಿ ಕೆಲಸ ಮಾಡಿಯೇ ಮಾಡುತ್ತಾರೆ. ಅದೇ ಅವರ ಉದ್ಯೋಗ. ಪಾಕಿಸ್ತಾನ ಸಡನ್ನಾಗಿ ಸನ್ಯಾಸಿ ಆಗಿಬಿಟ್ಟರೆ ಅವರಿಗೆ ಮುಂದೇನು ಮಾಡಬೇಕು ಎಂದು ತೋಚುವುದಿಲ್ಲ. ಇನ್ಯಾವಾಗಲೋ ಇನ್ನೊಂದು ಟೆರರಿಸ್ಟ್ ಅಟ್ಯಾಕ್ ಆಗಿಯೇ ಆಗುತ್ತದೆ. ನಾವು ಅದಕ್ಕೆ ತಯಾರಿಯಾಗಿರಬೇಕಿರುತ್ತದೆ. ಇನ್ನಷ್ಟು ತಯಾರಿ, ಇನ್ನಷ್ಟು ಆಯುಧ, ಇನ್ನಷ್ಟು ತಂತ್ರಜ್ಞಾನ, ರಾಜತಾಂತ್ರಿಕ ಸ್ನೇಹ ಮುಂತಾದವುಗಳೊಂದಿಗೆ.
ಮುಖ್ಯವಾದ್ದು ಮರೆತಿದ್ದೆ. ಇದರಿಂದ ಮಾಧ್ಯಮ ಅಂತ ಕರೆಸಿಕೊಳ್ಳುವ ನಮ್ಮ ದೇಶದ ಚಾನೆಲ್ಲುಗಳು ಅದೆಷ್ಟು ಲಜ್ಜೆಗೆಟ್ಟವರು, ಅನೈತಿಕರು, ಮಾರಿಕೊಂಡವರು ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ ಅಂದುಕೊಳ್ತೀನಿ.