ಪರೀಕ್ಷಾ ಪೇ ಚರ್ಚಾ 2025: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದದ ನೇರಪ್ರಸಾರ ಇಲ್ಲಿ ವೀಕ್ಷಿಸಿ
ಈ ವರ್ಷ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ 3.30 ಕೋಟಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಯ ಸಿದ್ಧತೆ, ಒತ್ತಡ ನಿರ್ವಹಣೆ, ವೃತ್ತಿಜೀವನ ಸೇರಿದಂತೆ ಇನ್ನಿತರ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಉತ್ತರಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸುವ ಪರೀಕ್ಷಾ ಪೇ ಚರ್ಚಾ (PPC 2025) ಕಾರ್ಯಕ್ರಮದ ಎಂಟನೇ ಆವೃತ್ತಿಯು ಇಂದು (ಫೆ. 10, ಸೋಮವಾರ) ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಹಾಗೂ ಶಿಕ್ಷಕರೊಂದಿಗೆ ಲೈವ್ ಸೆಷನ್‌ನಲ್ಲಿ ಮಾತನಾಡಲಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಜತೆಗೆ ಆಧ್ಯಾತ್ಮಿಕ ಗುರು ಸದ್ಗುರು, ಬಾಲಿವುಡ್ ಸ್ಟಾರ್‌ಗಳಾದ ದೀಪಿಕಾ ಪಡುಕೋಣೆ ಮತ್ತು ವಿಕ್ರಾಂತ್ ಮಾಸ್ಸಿ, ಬಾಕ್ಸರ್ ಮೇರಿ ಕೋಮ್ ಮತ್ತು ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅವನಿ ಲೆಖಾರಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೈ ಗವರ್ನ್‌ಮೆಂಟ್ ವೆಬ್ ಪೋರ್ಟಲ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವರ್ಷ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದಾದ್ಯಂತ 3.30 ಕೋಟಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರೊಂದಿಗೆ 20.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು 5.51 ಲಕ್ಷಕ್ಕೂ ಹೆಚ್ಚು ಪೋಷಕರು ಈ ಕಾರ್ಯಕ್ರಮಕ್ಕೆ ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಾರ್ಷಿಕವಾಗಿ ಆಯೋಜಿಸುವ ಈ ಕಾರ್ಯಕ್ರಮದಲ್ಲಿ, ಬೋರ್ಡ್ ಪರೀಕ್ಷೆಯ ಸಿದ್ಧತೆ, ಒತ್ತಡ ನಿರ್ವಹಣೆ, ವೃತ್ತಿಜೀವನ ಸೇರಿದಂತೆ ಇನ್ನಿತರ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುತ್ತಾರೆ.
ಪರೀಕ್ಷಾ ಪೇ ಚರ್ಚಾ 2025 ಯಾವಾಗ ಪ್ರಾರಂಭವಾಗುತ್ತದೆ?
ಇಂದು ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮ ನಡೆಯುತ್ತದೆ. ಪಿಪಿಸಿ 2025 ಕಾರ್ಯಕ್ರಮವು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದ್ದು, ಇದರ ನೇರಪ್ರಸಾರ ವೀಕ್ಷಿಸಬಹುದು.
ಇಲ್ಲಿದೆ ನೇರಪ್ರಸಾರ
ಪರೀಕ್ಷಾ ಪೇ ಚರ್ಚಾ 2025 ವೀಕ್ಷಿಸುವುದು ಹೇಗೆ?
ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ (ಫೇಸ್‌ಬುಕ್, ಎಕ್ಸ್, ಯೂಟ್ಯೂಬ್) ಮತ್ತು ಶಿಕ್ಷಣ ಸಚಿವಾಲಯ, ಪಿಐಬಿ, ನರೇಂದ್ರ ಮೋದಿ, ಪ್ರಧಾನಿ ಕಚೇರಿ ಇತ್ಯಾದಿಗಳ ಯೂಟ್ಯೂಬ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಟಿವಿ ಮೂಲಕ ನೋಡಲು ಬಯಸುವ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ದೂರದರ್ಶನ ಮತ್ತು ಇತರ ಚಾನೆಲ್‌ಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.
ಕಳೆದ ವರ್ಷ ಜನವರಿ 29ರಂದು ಈ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮದಲ್ಲಿ 205.62 ಲಕ್ಷ ವಿದ್ಯಾರ್ಥಿಗಳು, 14.93 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು 5.69 ಲಕ್ಷಕ್ಕೂ ಹೆಚ್ಚು ಪೋಷಕರು ನೋಂದಾಯಿಸಿಕೊಂಡಿದ್ದರು.
