8113 ಪದವಿ ಮಟ್ಟದ ಹುದ್ದೆಗಳಿಗೆ ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆ ದಿನಾಂಕ ಪ್ರಕಟ; ಇಲ್ಲಿದೆ ವಿವರ
2025ರ ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆ ದಿನಾಂಕ ಪ್ರಕಟಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯು 8113 ನಾನ್-ಟೆಕ್ನಿಕಲ್ ಪಾಪ್ಯುಲರ್ ಪದವೀಧರ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಪರೀಕ್ಷೆ ಪ್ರಕ್ರಿಯೆ ಆರಂಭವಾಗುತ್ತಿದೆ.

ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board -RRB) 2025ರ ಆರ್‌ಆರ್‌ಬಿ ಎನ್‌ಟಿಪಿಸಿ (Non-Technical Popular Categories) ಪರೀಕ್ಷೆ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಬಿ ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಗಳಿಗೆ (ಪದವೀಧರ) ನೋಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರಾದೇಶಿಕ ಆರ್‌ಆರ್‌ಬಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಬಿಟಿ 1 ಪರೀಕ್ಷೆಯ ದಿನಾಂಕಗಳ ಅಧಿಸೂಚನೆ ಪರಿಶೀಲಿಸಬಹುದು.
ಆರ್‌ಆರ್‌ಬಿ ಎನ್‌ಟಿಪಿಸಿ 8113 ಪದವೀಧರ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಇದರಲ್ಲಿ 1736 ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್ ಹುದ್ದೆಗಳು ಸೇರಿವೆ. ಇದರೊಂದಿಗೆ 994 ಸ್ಟೇಷನ್ ಮಾಸ್ಟರ್, 3144 ಗೂಡ್ಸ್ ಟ್ರೈನ್ ಮ್ಯಾನೇಜರ್, 1507 ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಮತ್ತು 732 ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಆರ್‌ಆರ್‌ಬಿ ಎನ್‌ಟಿಪಿಸಿ ಕಂಪ್ಯೂಟರ್ ಆಧಾರಿತ ಪರೀಕ್ಷೆ 1, ಜೂನ್ 5ರಿಂದ ಜೂನ್ 23ರವರೆಗೆ ನಡೆಯಲಿದೆ. ಸಿಬಿಟಿ 1 ಪರೀಕ್ಷೆಯ ಅವಧಿ ಒಟ್ಟು 90 ನಿಮಿಷಗಳು. ಪ್ರತಿ ಪ್ರಶ್ನೆಗೆ 1 ಅಂಕ ಇರುತ್ತದೆ. ಒಟ್ಟು 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರಲ್ಲಿ 40 ಪ್ರಶ್ನೆಗಳು ಸಾಮಾನ್ಯ ಅರಿವು, 30 ಪ್ರಶ್ನೆಗಳು ಗಣಿತ ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕ ವಿಷಯಕ್ಕೆ ಸಂಬಂಧಿಸಿರುತ್ತವೆ. ಮುಖ್ಯವಾಗಿ ಇಲ್ಲಿ ನಕಾರಾತ್ಮಕ ಅಂಕ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕವನ್ನು ಕಡಿತಗೊಳಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ಟೈಪಿಂಗ್ ಕೌಶಲ್ಯ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (ಅನ್ವಯವಾಗುವಂತೆ) ಮತ್ತು ದಾಖಲೆ ಪರಿಶೀಲನೆ ಅಥವಾ ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಮೇಲೆ ತಿಳಿಸಿದ ನೇಮಕಾತಿ ಹಂತಗಳ ಆಧಾರದ ಮೇಲೆ ಅರ್ಹತೆಯ ಪ್ರಕಾರವಾಗಿ ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಪರೀಕ್ಷೆಯ ನಗರ ಮತ್ತು ದಿನಾಂಕವನ್ನು ಮತ್ತು ಟ್ರಾವೆಲ್ ಅಥಾರಿಟಿ ಡೌನ್‌ಲೋಡ್ ಮಾಡಲು ಅಗತ್ಯ ಲಿಂಕ್ ಅನ್ನು ಎಲ್ಲಾ ಆರ್‌ಆರ್‌ಬಿಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರೀಕ್ಷಾ ದಿನಾಂಕಕ್ಕೆ 10 ದಿನಗಳ ಮುಂಚಿತವಾಗಿ ಬಿಡಲಾಗುತ್ತದೆ. ಪರೀಕ್ಷಾ ನಗರ ಮತ್ತು ದಿನಾಂಕ ಮಾಹಿತಿ ಲಿಂಕ್‌ನಲ್ಲಿ ಉಲ್ಲೇಖಿಸಲಾದ ಪರೀಕ್ಷಾ ದಿನಾಂಕಕ್ಕೆ 4 ದಿನಗಳ ಮೊದಲು ಇ-ಕಾಲ್ ಲೆಟರ್ ಪ್ರಾರಂಭವಾಗುತ್ತವೆ.