Agni-V Ballistic Missile: ಬೀಜಿಂಗ್‌ ತಲುಪುವ ಸಾಮರ್ಥ್ಯದ ಅಗ್ನಿ-V ಖಂಡಾಂತರ ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Agni-v Ballistic Missile: ಬೀಜಿಂಗ್‌ ತಲುಪುವ ಸಾಮರ್ಥ್ಯದ ಅಗ್ನಿ-V ಖಂಡಾಂತರ ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

Agni-V Ballistic Missile: ಬೀಜಿಂಗ್‌ ತಲುಪುವ ಸಾಮರ್ಥ್ಯದ ಅಗ್ನಿ-V ಖಂಡಾಂತರ ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

5,400 ಕಿ.ಮೀ. ಗೂ ಹೆಚ್ಚಿನ ಗುರಿ ತಲುಪಬಲ್ಲ ಅಗ್ನಿ-V ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ರಾತ್ರಿ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ಕ್ಷಿಪಣಿಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು, ಈ ಪರೀಕ್ಷೆಯನ್ನು ನಡೆಸಲಾಗಿದೆ ಎಂದೂ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

Agni-V ಖಂಡಾಂತರ ಕ್ಷಿಪಣಿ (ಸಂಗ್ರಹ ಚಿತ್ರ)
Agni-V ಖಂಡಾಂತರ ಕ್ಷಿಪಣಿ (ಸಂಗ್ರಹ ಚಿತ್ರ) (ANI)

ನವದೆಹಲಿ: ಕಳೆದ ವಾರ ಅರುಣಾಚಲ ಪ್ರದೇಶದ ವಾಸ್ತವಿಕ ಗಡಿ ರೇಖೆ(ಎಲ್‌ಎಸಿ) ಬಳಿ ಭಾರತ-ಚೀನಾ ಯೋಧರ ನಡುವೆ ನಡೆದ ಘರ್ಷಣೆ ಮಧ್ಯೆಯೇ, 5,400 ಕಿ.ಮೀ. ಗೂ ಹೆಚ್ಚಿನ ಗುರಿ ತಲುಪಬಲ್ಲ ಅಗ್ನಿ-V ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ರಾತ್ರಿ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ.

ಈ ಕುರಿತು ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ಅಗ್ನಿ-V ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ರಾತ್ರಿ ಪ್ರಯೋಗ ಯಶಸ್ವಿಯಾಗಿದೆ ಎಂದು ತಿಳಿಸಿದೆ. ಕ್ಷಿಪಣಿಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು, ಈ ಪರೀಕ್ಷೆಯನ್ನು ನಡೆಸಲಾಗಿದೆ ಎಂದೂ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಅಗ್ನಿ-V ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯು, ಈಗ ಮೊದಲಿಗಿಂತ ಹೆಚ್ಚು ದೂರದಲ್ಲಿರುವ ಗುರಿಗಳನ್ನು ಹೊಡೆಯಬಲ್ಲದು ಎಂದು ಸಾಬೀತುಪಡಿಸಿದೆ. ಅಲ್ಲದೇ ರಾತ್ರಿ ವೇಳೆಯೂ ಈ ಕ್ಷಿಪಣಿ ಕರಾರುವಕ್ಕಾದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪರಮಾಣು ಸಾಮರ್ಥ್ಯದ ಅಗ್ನಿ-V ಖಂಡಾಂತರ ಕ್ಷಿಪಣಿಯನ್ನು, ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಉಡಾಯಿಸಲಾಯಿತು. ಇದು ಅಗ್ನಿ-V ಯ ಒಂಬತ್ತನೇ ಯಶಸ್ವಿ ಪ್ರಯೋಗಾರ್ಥ ಹಾರಾಟವಾಗಿದೆ. 2012ರಲ್ಲಿ ಮೊದಲ ಬಾರಿಗೆ ಅಗ್ನಿ-V ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿತ್ತು. ಇದು ವಾಡಿಕೆಯ ಪರೀಕ್ಷೆಯಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ತವಾಂಗ್‌ ಘರ್ಷಣೆ ನಡೆದ ಕೆಲವೇ ದಿನಗಳಲ್ಲಿ ಅಗ್ನಿ-V ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಲಾಗಿದ್ದರೂ, ಪರೀಕ್ಷೆ ನಡೆಸುವ ಕುರಿತು ಮೊದಲೇ ತೀರ್ಮಾನ ಮಾಡಲಾಗಿತ್ತು ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತವು ದೀರ್ಘ-ಶ್ರೇಣಿಯ ಕ್ಷಿಪಣಿಯನ್ನು ಪರೀಕ್ಷಿಸುವ ಉದ್ದೇಶವನ್ನುಈ ಮೊದಲೇ ಪ್ರಕಟಿಸಿತ್ತು. ಅಲ್ಲದೇ ತವಾಂಗ್‌ ಘರ್ಷಣೆಗೂ ಮೊದಲೇ ಏರ್‌ಮೆನ್‌ಗಳಿಗೆ NOTAM ಸೂಚನೆಯನ್ನು ನೀಡಲಾಗಿತ್ತು ಎಂದೂ ರಕ್ಷಣಾ ಇಲಾಖೆ ಹೇಳಿದೆ.

ಅಗ್ನಿ-V ಖಂಡಾಂತರ ಕ್ಷಿಪಣಿಯ ರಾತ್ರ ಪ್ರಯೋಗ ಯಶಸ್ವಿಯಾಗುವ ಮೂಲಕ, ಭಾರತದ ಪರಮಾಣು ಸಜ್ಜಿತ ಕ್ಷಿಪಣಿಗಳ ಬಲ ಹೆಚ್ಚಿದೆ. ಇದು ಭಾರತದತ್ತ ವಕ್ರದೃಷ್ಟಿ ಬೀರುವ ಚೀನಾ ಮತ್ತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ.

ಡಿಸೆಂಬರ್ 9(ಶುಕ್ರವಾರ)ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ, ಗಡಿ ಉಲ್ಲಂಘನೆ ಮಾಡಿದ ಚೀನಿ ಸೈನಿಕರು ಭಾರತೀಯ ಸೈನಿಕರೊಂದಿಗೆ ಮುಖಾಮುಖಿಯಾಗಿದ್ದರು. ಗಡಿ ದಾಟಿ ಬರಲು ಯತ್ನಿಸಿದ ಚೀನಿ ಸೈನಿಕರನ್ನು ಅತ್ಯಂತ ದಿಟ್ಟವಾಗಿ ಎದುರಿಸಿದ ಭಾರತೀಯ ಸೈನಿಕರು, ಚೀನಿ ಸೈನಿಕರನ್ನು ಹಿಂದಕ್ಕೆ ದಬ್ಬುವಲ್ಲಿ ಯಶಸ್ವಿಯಾಗಿದ್ದರು.

ಘರ್ಷಣೆಯಲ್ಲಿ ಭಾರತಸೀಯ ಸೈನಿಕರಿಗಿಂತ ಚೀನಾದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದು, ಭಾರತೀಯ ಸೈನಿಕರ ಪೆಟ್ಟು ತಾಳಲಾರದೇ ಹಿಂದಕ್ಕೆ ಓಡಿ ಹೋದರು ಎಂದು ಸೇನಾ ಮೂಲಗಳು ಖಚಿತಪಡಿಸಿವೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್ಟ್ಸೆ ಪ್ರದೇಶದಲ್ಲಿ, ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯನ್ನು ಉಲ್ಲಂಘಿಸಲು ಯತ್ನಿಸಿದ ಚೀನಾದ ಸೈನಿಕರನ್ನು ಭಾರತೀಯ ಸೈನಿಕರು ಧೈರ್ಯವಾಗಿ ತಡೆದಿದ್ದಾರೆ. ಘರ್ಷಣೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ಭಾರತೀಯ ಸೈನಿಕರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಂಸತ್ತಿಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರೈಫಲ್ಸ್, ಜಾಟ್ ರೆಜಿಮೆಂಟ್ ಮತ್ತು ಸಿಖ್ ಲೈಟ್ ಇನ್‌ಫೆಂಟ್ರಿ ಸೇರಿದಂತೆ, ಮೂರು ವಿಭಿನ್ನ ಬೆಟಾಲಿಯನ್‌ಗಳಿಗೆ ಸೇರಿದ ಭಾರತೀಯ ಯೋಧರು, ಚೀನಾದ ಪಿಎಲ್‌ಎ ಯೋಧರನ್ನು ಗಡಿಯಿಂದ ಹಿಂದಕ್ಕೆ ದಬ್ಬುವಲ್ಲಿ ಯಶಸ್ವಿಯಾಗಿವೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.