ಭಾರತೀಯ ಸೇನಾ ಬತ್ತಳಿಕೆ ಸೇರಲಿದೆ ಭಾರ್ಗವಾಸ್ತ್ರ; ಏನಿದು, ಪರೀಕ್ಷಾ ಪ್ರಯೋಗ ಯಶಸ್ವಿ, 4 ವಿಶೇಷ ಅಂಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತೀಯ ಸೇನಾ ಬತ್ತಳಿಕೆ ಸೇರಲಿದೆ ಭಾರ್ಗವಾಸ್ತ್ರ; ಏನಿದು, ಪರೀಕ್ಷಾ ಪ್ರಯೋಗ ಯಶಸ್ವಿ, 4 ವಿಶೇಷ ಅಂಶ

ಭಾರತೀಯ ಸೇನಾ ಬತ್ತಳಿಕೆ ಸೇರಲಿದೆ ಭಾರ್ಗವಾಸ್ತ್ರ; ಏನಿದು, ಪರೀಕ್ಷಾ ಪ್ರಯೋಗ ಯಶಸ್ವಿ, 4 ವಿಶೇಷ ಅಂಶ

ಭಾರ್ಗವಾಸ್ತ್ರ ಪ್ರಯೋಗ ಯಶಸ್ವಿ: ಸೇನಾ ವಾಯು ರಕ್ಷಣೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಭಾರ್ಗವಾಸ್ತ್ರ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಏನಿದು ಭಾರ್ಗವಾಸ್ತ್ರ, 4 ವಿಶೇಷ ಅಂಶಗಳ ವಿವರ ಇಲ್ಲಿದೆ.

ಒಡಿಶಾದ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಸ್ವದೇಶಿ ನಿರ್ಮಿತ ಭಾರ್ಗವಾಸ್ತ್ರದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ.
ಒಡಿಶಾದ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಸ್ವದೇಶಿ ನಿರ್ಮಿತ ಭಾರ್ಗವಾಸ್ತ್ರದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ. (ANI)

ಭಾರ್ಗವಾಸ್ತ್ರ ಪ್ರಯೋಗ ಯಶಸ್ವಿ: ಒಡಿಶಾದ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಸ್ವದೇಶಿ ನಿರ್ಮಿತ ಭಾರ್ಗವಾಸ್ತ್ರದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ. ಭಾರ್ಗವಾಸ್ತ್ರ ಪರೀಕ್ಷೆ ನಡೆಸುವುದಕ್ಕಾಗಿ ಮೈಕ್ರೋ ರಾಕೆಟ್‌ಗಳನ್ನು ಉಡಾವಣೆ ಮಾಡಲಾಗಿತ್ತು. ಪಾಕಿಸ್ತಾನದ ಜತೆಗಿನ 4 ದಿನಗಳ ತೀವ್ರ ಬಿಕ್ಕಟ್ಟು ಶಮನಗೊಳಿಸುವ ಕದನ ವಿರಾಮ ಘೋಷಿಸಿದ ಬೆನ್ನಿಗೆ ನಡೆದ ಈ ಪರೀಕ್ಷಾ ಪ್ರಯೋಗ ಗಮನಸೆಳೆದಿದೆ. ಸೋಲಾರ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಲಿಮಿಟೆಡ್ ಈ ಭಾರ್ಗವಾಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಗುಂಪು ಡ್ರೋನ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಭಾರ್ಗವಾಸ್ತ್ರ ಬಹುದೊಡ್ಡ ವರದಾನವಾಗಲಿದೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರ್ಗವಾಸ್ತ್ರ ಪ್ರಯೋಗ ಯಶಸ್ವಿ

ಸೇನಾ ವಾಯು ರಕ್ಷಣೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಭಾರ್ಗವಾಸ್ತ್ರ ಪರೀಕ್ಷೆ ನಡೆಯಿತು. ಒಟ್ಟು ಮೂರು ಪರೀಕ್ಷೆ ನಡೆಸಲಾಗಿದ್ದು, ಎರಡು ಪರೀಕ್ಷೆಗಳನ್ನು ತಲಾ ಒಂದು ರಾಕೆಟ್ ಉಡಾವಣೆ ಮಾಡಿ ಮಾಡಲಾಗಿತ್ತು. ಒಂದು ಪರೀಕ್ಷೆಯನ್ನು ಎರಡು ರಾಕೆಟ್‌ಗಳನ್ನು ಸಾಲ್ವೋ ಮೋಡ್‌ನಲ್ಲಿ ಅಂದರೆ ಎರಡು ಸೆಕೆಂಡ್ ಅಂತರದಲ್ಲಿ ಉಡಾವಣೆ ಮಾಡಿ ನಡೆಸಲಾಗಿತ್ತು. ಎಲ್ಲ ನಾಲ್ಕು ರಾಕೆಟ್‌ಗಳು ಕೂಡ ಉತ್ತಮ ಸಾಧನೆ ತೋರಿದೆ ಎಂದು ಎಎನ್‌ಐ ವರದಿ ಹೇಳಿದೆ.

ಭಾರ್ಗವಾಸ್ತ್ರ ಪ್ರಯೋಗದ ವಿಡಿಯೋ

ಭಾರ್ಗವಾಸ್ತ್ರದ 4 ಮುಖ್ಯ ಅಂಶಗಳು

ಭಾರ್ಗವಾಸ್ತ್ರ ಎಂದರೆ ಗುಂಪು ಡ್ರೋನ್‌ಗಳನ್ನು ತಡೆಯುವ ಸಾಮರ್ಥ್ಯದೊಂದಿಗೆ ಸಣ್ಣ, ಮಾರ್ಗದರ್ಶಿ ಕ್ಷಿಪಣಿಗಳನ್ನು ಬಳಸಿಕೊಂಡು ನಿಶ್ಚಿತ ಡ್ರೋನ್‌ಗಳನ್ನು ತ್ವರಿತವಾಗಿ ಪ್ರತಿಬಂಧಿಸುವುದಕ್ಕೆ ಬೇಕಾದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಪರಿಹಾರವು ಅನೇಕ ಡ್ರೋನ್‌ಗಳ ಏಕಕಾಲದ ದಾಳಿ ತಡೆಯುವ ರಕ್ಷಣಾಸ್ತ್ರವಾಗಿ ಬಳಕೆಯಾಗಲಿದೆ.

1) ಬಹುಪದರದ ರಕ್ಷಣೆ

ಭಾರ್ಗವಾಸ್ತ್ರ ಬಹುಸ್ತರ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು ಮೂರು ಪದರಗಳ ವಿವರ ಹೀಗಿದೆ.

1ನೇ ಪದರ: 2.5 ಕಿ.ಮೀವರೆಗೆ ಡ್ರೋನ್ ಹಿಂಡುಗಳನ್ನು ತಟಸ್ಥಗೊಳಿಸುವುದಕ್ಕೆ ಅನುಕೂಲವಾಗುವಂತೆ 20 ಮೀಟರ್ ಮಾರಕ ತ್ರಿಜ್ಯವನ್ನು ಹೊಂದಿರುವ ಮಾರ್ಗದರ್ಶನವಿಲ್ಲದ ಮೈಕ್ರೋ ರಾಕೆಟ್‌ಗಳು

2ನೇ ಪದರ: ನಿಖರ ಗುರಿಗಾಗಿ ಮಾರ್ಗದರ್ಶನ ಹೊಂದಿದ ಕಿರು ಕ್ಷಿಪಣಿಗಳು. ಈಗಾಗಲೇ ಇವುಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಐಚ್ಛಿಕ ಪದರ: ಸಮಗ್ರ ರಕ್ಷಣೆಗಾಗಿ ಜಾಮಿಂಗ್ ಮತ್ತು ಸ್ಪೂಫಿಂಗ್‌ನಂತಹ ನಿಧಾನವಾಗಿ ನಾಶ ಮಾಡುವ ವಿಧಾನಗಳು ಈ ಪದರದಲ್ಲಿದೆ.

2) ಸುಧಾರಿತ ಪತ್ತೆ ಮತ್ತು ಗುರಿ

ಭಾರ್ಗವಾಸ್ತ್ರ ಸುಧಾರಿತ ಪತ್ತೆ ಮತ್ತು ಗುರಿ ನಾಶ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.

6 ರಿಂದ 10 ಕಿ.ಮೀ.ನ ರಾಡಾರ್ ಶ್ರೇಣಿಯೊಳಗೆ ಸಣ್ಣ ವೈಮಾನಿಕ ಬೆದರಿಕೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ರಾಡಾರ್ ನಿಗಾ ವ್ಯಾಪ್ತಿಯಲ್ಲಿ ಕಡಿಮೆ ಪತ್ತೆ ಸಾಧ್ಯತೆಯ ಅಡ್ಡ-ವಿಭಾಗದ ಡ್ರೋನ್‌ಗಳನ್ನು ಗುರುತಿಸಲು ಇಒ/ಐಆರ್ ಸಂವೇದಕಗಳನ್ನು ಹೊಂದಿದೆ. ಏಕ ಅಥವಾ ಬಹು ಬೆದರಿಕೆಗಳನ್ನು ಎದುರಿಸುವುದಕ್ಕೆ ಸಂಪೂರ್ಣ ಸಾಂದರ್ಭಿಕ ಅರಿವನ್ನು ಇದು ಒದಗಿಸುತ್ತದೆ.

3) ಭೂಪ್ರದೇಶ ಹೊಂದಾಣಿಕೆ ಮತ್ತು ಮಾಡ್ಯುಲರ್ ವ್ಯವಸ್ಥೆ

ಹೆಚ್ಚಿನ-ಎತ್ತರದ ಪ್ರದೇಶಗಳನ್ನು ಒಳಗೊಂಡಂತೆ ವೈವಿಧ್ಯಮಯ ಭೂಪ್ರದೇಶಗಳಲ್ಲಿ ನಿಯೋಜನೆಗಾಗಿ ವಿನ್ಯಾಸಗೊಳಿಸಲಾಗಿದೆ. ಮಾಡ್ಯುಲರ್ ಸಿಸ್ಟಮ್ ಪ್ರತಿ ಮಿಷನ್‌ಗೆ ಅಗತ್ಯವಿರುವ ಸಂವೇದಕಗಳು ಮತ್ತು ಲಾಂಚರ್‌ಗಳ ಸಂರಚನೆಯನ್ನು ಕೂಡ ಒಳಗೊಂಡಿದೆ.

4) ಭಾರ್ಗವಾಸ್ತ್ರ ಸ್ವದೇಶಿ ವಿನ್ಯಾಸ

ಭಾರ್ಗವಾಸ್ತ್ರವು ಸ್ವದೇಶಿ ವಿನ್ಯಾಸ ಹೊಂದಿದೆ. ಅಸ್ತಿತ್ವದಲ್ಲಿರುವ ನೆಟ್‌ವರ್ಕ್-ಕೇಂದ್ರಿತ ಯುದ್ಧ ವ್ಯವಸ್ಥೆಗಳೊಂದಿಗೆ ಭಾರ್ಗವಾಸ್ತ್ರವು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅಧ್ಯಯನ ನಡೆಸುತ್ತ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದ್ದು, ಭಾರತವನ್ನು ರಕ್ಷಣಾ ವಲಯದಲ್ಲಿ ಹೆಚ್ಚು ಸ್ವಾವಲಂಬಿಯನ್ನಾಗಿಸುವಲ್ಲಿ ನೆರವಾಗಲಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.