ಮಹಿಳೆಯ ಶವದೊಂದಿಗೆ ಸಂಭೋಗ ಅತ್ಯಾಚಾರ ಅಪರಾಧ ಅಂತ ಐಪಿಸಿ ಪರಿಗಣಿಸಿಲ್ಲ ಎಂದ ಸುಪ್ರೀಂ ಕೋರ್ಟ್; ಶಿರಾ ತಾಲೂಕು ಕೊಲೆ ಮತ್ತು ರೇಪ್ ಕೇಸ್
Landmark Judgement: ಶಿರಾ ತಾಲೂಕು ಕೊಲೆ ಮತ್ತು ರೇಪ್ ಕೇಸ್ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಹಿಳೆಯ ಶವದೊಂದಿಗೆ ಸಂಭೋಗ ಅತ್ಯಾಚಾರ ಅಪರಾಧ ಅಂತ ಐಪಿಸಿ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

Landmark Judgement: ಕರ್ನಾಟಕದ ಶಿರಾ ತಾಲೂಕಿನ ಕೊಲೆ ಮತ್ತು ಅತ್ಯಾಚಾರ ಕೇಸ್‌ಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮಹಿಳೆಯ ಶವದೊಂದಿಗೆ ಸಂಭೋಗ ಅತ್ಯಾಚಾರ ಅಪರಾಧ ಅಂತ ಐಪಿಸಿ ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ, ಶವದೊಂದಿಗೆ ಸಂಭೋಗ (ನೆಕ್ರೋಫಿಲಿಯಾ)ವು ಅಪರಾಧ ಎಂಬ ಅಂಶ ಭಾರತೀಯ ದಂಡ ಸಂಹಿತೆಯಲ್ಲಿ ಉಲ್ಲೇಖವಾಗಿಲ್ಲ ಎಂಬುದರ ಕಡೆಗೆ ಕೋರ್ಟ್ ಗಮನಸೆಳೆದಿದೆ.
ಮಹಿಳೆಯ ಶವದೊಂದಿಗೆ ಸಂಭೋಗ ಅಪರಾಧ ಅಂತ ಐಪಿಸಿ ಪರಿಗಣಿಸಿಲ್ಲ- ಕೋರ್ಟ್ ಐತಿಹಾಸಿಕ ತೀರ್ಪು
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಹಾ ಅವರನ್ನು ಒಳಗೊಂಡ ನ್ಯಾಯಪೀಠವು ಈ ಕೇಸ್‌ನ ವಿಚಾರಣೆ ಕೈಗೆತ್ತಿಕೊಂಡಿತ್ತು. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಶವದ ಜೊತೆಗೆ ಸಂಭೋಗ ಅಥವಾ ಅಸ್ವಾಭಾವಿಕ ಕ್ರಿಯೆಗಳನ್ನು ಪ್ರಸ್ತುತ ದಂಡದ ಕಾನೂನುಗಳು ಅಪರಾಧ ಎಂದು ಪರಿಗಣಿಸುವುದನ್ನು ಅನುಮತಿಸಿಲ್ಲ. ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಕಾನೂನು ಪ್ರಕಾರ ಸರಿ ಇದೆ ಎಂದು ಸ್ಪಷ್ಟಪಡಿಸಿದೆ.
ಶವದೊಂದಿಗೆ ಸಂಭೋಗ (ನೆಕ್ರೋಫಿಲಿಯಾ)ವು ಅಪರಾಧ ಎಂಬ ಅಂಶ ಭಾರತೀಯ ದಂಡ ಸಂಹಿತೆಯಲ್ಲಿ ಉಲ್ಲೇಖವಾಗಿಲ್ಲ ಎಂಬುದು ನಿಜ. ಕಾನೂನು ರೂಪಿಸಬೇಕಾದುದು ಶಾಸಕಾಂಗದ ಹೊಣೆಗಾರಿಕೆ. ಹಾಗಿಲ್ಲದೇ ಇದ್ದರೆ ಈಗಿರುವ ದಂಡ ಸಂಹಿತೆ ಪ್ರಕಾರ ಅಪರಾಧ ಎಂದು ಪರಿಗಣಿಸಲ್ಪಡದ ಕೃತ್ಯವನ್ನು ಅಪರಾಧ ಎಂದು ಕೋರ್ಟ್ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.
ಕರ್ನಾಟಕದ ಶಿರಾ ತಾಲೂಕಿನಲ್ಲಿ ನಡೆದ ಹತ್ಯೆ ಮತ್ತು ರೇಪ್ ಕೇಸ್
ಕರ್ನಾಟಕದ ಶಿರಾ ತಾಲೂಕಿನಲ್ಲಿ ನಡೆದ ಹತ್ಯೆ ಮತ್ತು ರೇಪ್ ಕೇಸ್‌ನಲ್ಲಿ, ಮಹಿಳೆಯ ಶವದೊಂದಿಗೆ ಸಂಭೋಗವನ್ನು ಅತ್ಯಾಚಾರ ಎಂದು ಪರಿಗಣಿಸಿದ ವಿಚಾರಣಾ ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆ ವಿಧಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ 2023ರ ಮೇ ತಿಂಗಳಲ್ಲಿ ರದ್ದುಗೊಳಿಸಿತು. ಅಲ್ಲದೆ, ಭಾರತೀಯ ದಂಡ ಸಂಹಿತೆಯ ಪ್ರಕಾರ ಮಹಿಳೆಯ ಶವದೊಂದಿಗೆ ಸಂಭೋಗವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು. ಮಹಿಳೆಯ ಶವದೊಂದಿಗೆ ಸಂಭೋಗವನ್ನು ಅಪರಾಧ ಎಂದು ದಂಡ ಸಂಹಿತೆ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಕಾನೂನು ಪ್ರಕಾರ ಕರ್ನಾಟಕ ಹೈಕೋರ್ಟ್ ತೀರ್ಪು ಸರಿಯಾಗಿಯೇ ಇದೆ. ಕಾನೂನಿಗೆ ತಿದ್ದುಪಡಿ ಬೇಕಾದರೆ ಸರ್ಕಾರವು ಅದಕ್ಕೆ ಬೇಕಾದ ಅಂಶಗಳ ಕಡೆಗೆ ಗಮನಹರಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿತು.
ಶವದೊಂದಿಗೆ ಸಂಭೋಗ ಅಪರಾಧವೇ ಅಥವಾ ಅಪರಾಧವಲ್ಲವೇ- ವಾದ ಸರಣಿ ಹೀಗಿತ್ತು
ಕೋರ್ಟ್ ವಿಚಾರಣೆ ವೇಳೆ ಕರ್ನಾಟಕದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಮನ್ ಪನ್ವಾರ್ ಅವರು, ಭಾರತೀಯ ದಂಡ ಸಂಹಿತೆಯ (ಅತ್ಯಾಚಾರ) ಸೆಕ್ಷನ್ 375 (ಸಿ) ನಲ್ಲಿನ 'ಶರೀರ (Body)' ಎಂಬ ಪದವನ್ನು ಮೃತ ದೇಹವನ್ನು ಸೇರಿಕೊಂಡಂತೆ ವ್ಯಾಖ್ಯಾನಿಸಬೇಕು. ಸತ್ತ ವ್ಯಕ್ತಿಯಿಂದ ಒಪ್ಪಿಗೆಯ ಕೊರತೆ ಇರುವುದನ್ನು ಗಮನಿಸಬೇಕು. ಹಾಗಾಗಿಯೇ ಇದನ್ನು ಅತ್ಯಾಚಾರ ಎಂದು ಪರಿಗಣಿಸಬೇಕೆಂದು ವಾದಿಸಿದರು. ಆದಾಗ್ಯೂ, ಅಂತಹ ವ್ಯಾಖ್ಯಾನವು ನ್ಯಾಯಾಂಗ ವ್ಯಾಪ್ತಿಯನ್ನು ಮೀರಿದೆ ಎಂದು ಸ್ಪಷ್ಟವಾಗಿ ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಈ ಸಮಸ್ಯೆ ನಿವಾರಣೆ ಸಂಸತ್‌ಗೆ ಮಾತ್ರ ಸಾಧ್ಯ ಎಂದು ಪುನರುಚ್ಚರಿಸಿತು.
ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅತ್ಯಾಚಾರ ಮತ್ತು ಅಸ್ವಾಭಾವಿಕ ಅಪರಾಧಗಳ ಶಾಸನಬದ್ಧ ವ್ಯಾಖ್ಯಾನವು ಸಂತ್ರಸ್ತ ವ್ಯಕ್ತಿಯು ಜೀವಂತ ವ್ಯಕ್ತಿಯಾಗಿದ್ದಾಗ ಮಾತ್ರ ಅನ್ವಯಿಸುತ್ತದೆ. ಭಾರತೀಯ ದಂಡ ಸಂಹಿತೆಯು ಮೃತ ದೇಹವನ್ನು ಮಾನವ ಅಥವಾ ವ್ಯಕ್ತಿ ಎಂದು ಕರೆಯಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ವಿವರಿಸಿದೆ.
ಶವದೊಂದಿಗಿನ ಲೈಂಗಿಕ ಸಂಭೋಗ ಎಂಬುದು ಮಾನಸಿಕ ಕಾಯಿಲೆಯಾಗಿದ್ದು ವೈದ್ಯಕೀಯ ಶಾಸ್ತ್ರದಲ್ಲಿ ಅದನ್ನು ನೆಕ್ರೋಫಿಲಿಯಾ ಎನ್ನುತ್ತಾರೆ. ಇದು ಮಾನಸಿಕ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಸಂಖ್ಯಾಶಾಸ್ತ್ರೀಯ ಕೈಪಿಡಿ ಪ್ರಕಾರ ಡಿಎಸ್‌ಎಂ ನಾಲ್ಕನೇ ಹಂತ (DSM-IV). ಇದನ್ನು ಅಪರಾಧ ಎಂದು ನಿರ್ಣಯಿಸುವ ಕಾನೂನು ಇಲ್ಲ ಎಂಬ ಕಾರಣಕ್ಕೆ ಆರೋಪಿ ಮೇಲಿನ ಅತ್ಯಾಚಾರದ ಆರೋಪವನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮೃತರ ಘನತೆಯ ಹಕ್ಕು ಕಾಪಾಡಲು ಕಾನೂನು ಬೇಕು- ಹೈಕೋರ್ಟ್
ಮೃತ ದೇಹಗಳ ಬಗ್ಗೆ ವಿಶೇಷವಾಗಿ ಆಸ್ಪತ್ರೆಯ ಶವಾಗಾರಗಳಲ್ಲಿರುವ ಮೃತದೇಹಗಳ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಸೂಕ್ತ ನಿಬಂಧನೆಯನ್ನು ಸಂಯೋಜಿಸಲು ಅಥವಾ ನೆಕ್ರೋಫಿಲಿಯಾವನ್ನು ಸ್ಪಷ್ಟವಾಗಿ ಅಪರಾಧ ಎಂದು ಪರಿಗಣಿಸುವ ಹೊಸ ನಿಬಂಧನೆಯನ್ನು ಪರಿಚಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಅಮೆರಿಕ, ಬ್ರಿಟನ್, ಕೆನಡಾ, ನ್ಯೂಜಿಲೆಂಡ್, ದಕ್ಷಿಣಾ ಆಫ್ರಿಕಾ ಮುಂತಾದ ರಾಷ್ಟ್ರಗಳಲ್ಲಿ ಈ ರೀತಿ ಕಾನೂನುಗಳಿವೆ.
“ಮೃತರ ಘನತೆಯ ಹಕ್ಕನ್ನು ಕಾಪಾಡಿಕೊಳ್ಳಲು, ಭಾರತೀಯ ದಂಡಸಂಹಿತೆಯ ಸೆಕ್ಷನ್ 377ರಲ್ಲಿ (ಅಸ್ವಾಭಾವಿಕ ಅಪರಾಧಗಳು) ಯಾವುದೇ ಪುರುಷ, ಮಹಿಳೆ, ಅಥವಾ ಪ್ರಾಣಿಗಳ ಮೃತ ದೇಹವನ್ನು ಸೇರಿಸಲು ತಿದ್ದುಪಡಿ ಮಾಡಲು ಇದು ಸರಿಯಾದ ಸಮಯ. ಸತ್ತ ಮಹಿಳೆಯ ವಿರುದ್ಧ ನೆಕ್ರೋಫಿಲಿಯಾ ಅಥವಾ ಸ್ಯಾಡಿಸಂ ಎಂದು ಅಪರಾಧವಾಗಿ ಪ್ರತ್ಯೇಕ ನಿಬಂಧನೆಯನ್ನು ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಗಮನಹರಿಸಬೇಕು”ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯದಂತೆಯೇ, ಛತ್ತೀಸ್‌ಗಡ ಹೈಕೋರ್ಟ್ ಕೂಡ 2024ರ ಡಿಸೆಂಬರ್‌ನಲ್ಲಿ ಇದೇ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ಅದನ್ನು ಸ್ಪಷ್ಟಪಡಿಸಿದ್ದು, ಹೊಸ ಕಾನೂನು ರೂಪಿಸುವ ಹೊಣೆಗಾರಿಕೆ ಶಾಸಕಾಂಗದ ಹೆಗಲೇರಿದೆ.

ವಿಭಾಗ