India Weather Today: ಉತ್ತರ ಭಾರತ ಮಂದಿಗೆ ಸಿಹಿ ಸುದ್ದಿ; ಮಾರ್ಚ್ 18, 19ಕ್ಕೆ ಈ ರಾಜ್ಯಗಳಲ್ಲಿ ಮಳೆಯ ಮನ್ಸೂಚನೆ
India Weather Update Today: ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಸೇರಿ 6 ರಾಜ್ಯಗಳಲ್ಲಿ ಮಾರ್ಚ್ 18 ಮತ್ತು 19ಕ್ಕೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ದೆಹಲಿ: ಬಿಸಿಲಿನಿಂದ ಬಸವಳಿದಿರುವ ಉತ್ತರ ಭಾರತದ (India Weather Today) ಜನರಿಗೆ ಭಾರತೀಯ ಹವಾಮಾನ ಇಲಾಖೆ-ಐಎಂಡಿ ಗುಡ್ ನ್ಯೂಸ್ ನೀಡಿದೆ. ಮಧ್ಯ ಭಾರತದ ಹಲವಾರು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹೇಳಿದೆ. ಇದರ ಜೊತೆಗೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಉಷ್ಣಾಂಶ ಇರಲಿದೆ ಅಂತಲೂ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ. ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶ 6 ರಾಜ್ಯಗಳಲ್ಲಿ ಇಂದು (ಮಾರ್ಚ್ 18) ಮತ್ತು ನಾಳೆ (ಮಾರ್ಚ್ 19, ಮಂಗಳವಾರ) ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಅತ್ತ ಉತ್ತರ ಭಾರತದಲ್ಲಿ ವರುಣನ ಆಗಮನವಾಗುವ ಸಾಧ್ಯತೆ ಇದ್ದರೆ ಇತ್ತ ದಕ್ಷಿಣ ಭಾರತದಲ್ಲಿ ಬಿಸಿ ಏರಿಕೆಯಾಗಲಿದೆ ಎಂದಿದೆ. ಕರ್ನಾಟಕದ ಉತ್ತರ ಒಳನಾಡಿನ ಕೆಲವು ಕಡೆ, ಕೇರಳದ ಹಲವು ಕಡೆ, ಆಂಧ್ರ ಪ್ರದೇಶದ ರಾಯಲಸೀಮಾ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಬಿಸಿ ಹೆಚ್ಚಾಗಿರಲಿದೆ ಎಂದು ಐಎಂಡಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾರ್ಚ್ 20 ರವರೆಗೆ ಹಿಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಆದರೆ ಮಾರ್ಚ್ 22 ರಿಂದ 24 ರವರೆಗೆ ಹಲವು ಸ್ಥಳಗಳಲ್ಲಿ ಮಳೆ ಅಥವಾ ಹಿಮ ಬೀಳುವ ನಿರೀಕ್ಷೆ ಇದೆ. ಈಶಾನ್ಯ ಭಾರತದಲ್ಲಿನ ಹವಾಮಾನ ಬಗ್ಗೆ ಮಾಹಿತಿ ನೀಡಿರುವ ಐಎಂಡಿ, ಮಾರ್ಚ್ 18 ರಿಂದ 20 ರವರೆಗೆ ಅರುಣಾಚಲ ಪ್ರದೇಶದಲ್ಲಿ ಚದುರಿದಂತೆ ಸಾಧಾರಣ ಮಳೆ ಅಥವಾ ಹಿಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಪಶ್ಚಿಮ ಬಂಗಾಳದ ಗಂಗಾನದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರ್ಚ್ 18 ಮತ್ತು 19 ರಂದು ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಕಚೇರಿಯ ಮಾಹಿತಿ ಪ್ರಕಾರ, ಮಾರ್ಚ್ 18 ರಿಂದ 20ರ ಅವಧಿಯಲ್ಲಿ ಜಾರ್ಖಂಡ್ ಮತ್ತು ಒಡಿಶಾದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.ಇದೇ ಅವಧಿಯಲ್ಲಿ ಮಧ್ಯಪ್ರದೇಶದ ಪೂರ್ವ, ವಿದರ್ಭ ಹಾಗೂ ಛತ್ತೀಸ್‌ಗಢದಲ್ಲೂ ಮಳೆಯ ಸಿಂಚನವಾಗಲಿದೆ.
ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢದ ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆಯ ಮುನ್ಸೂಚನೆ
ಇಂದು (ಮಾರ್ಚ್ 18, ಸೋಮವಾರ) ಮಾತ್ರ ಮಧ್ಯಪ್ರದೇಶ, ವಿದರ್ಭ ಹಾಗೂ ಛತ್ತೀಸ್‌ಗಢದ ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮೂರು ದಿನ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರಾದಲ್ಲಿ ಪ್ರತ್ಯೇಕವಾಗಿ ಲಘು ಮಳೆಯಾಗುವ ಸಾಧ್ಯತೆ ಇದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಯ ವಾತಾವರಣ ಮುಂದುವರಿಯಲಿದೆ. ಇಲ್ಲಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಷ್ಟು ಇರಲಿದೆ.
ಇತ್ತ ಕರ್ನಾಟಕದ ಬೀದರ್, ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಕೆಲವು ಕಡೆ ನಿನ್ನೆ (ಮಾರ್ಚ್ 19, ಭಾನುವಾರ) ಮಳೆಯಾಗಿದೆ. ತೀವ್ರ ಬರ ಹಾಗೂ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ರಾಜ್ಯದಲ್ಲಿ ಮಳೆಯಾಗುತ್ತಿರುವ ರೈತರಲ್ಲಿ ಸಂತಸ ಮೂಡಿಸಿದೆ. ಔರಾದ್, ಭಾಲ್ಕಿಯಲ್ಲಿ ಮಳೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ಮಳೆಯ ಮುನ್ಸೂಚನೆ ಇದೆ.