ಇಂದು ಭಾರತೀಯ ವಾಯುಪಡೆ ದಿನ: ಈ ವರ್ಷದ ಥೀಮ್, ದಿನದ ಇತಿಹಾಸ ಮತ್ತು ಮಹತ್ವ ತಿಳ್ಕೊಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂದು ಭಾರತೀಯ ವಾಯುಪಡೆ ದಿನ: ಈ ವರ್ಷದ ಥೀಮ್, ದಿನದ ಇತಿಹಾಸ ಮತ್ತು ಮಹತ್ವ ತಿಳ್ಕೊಳಿ

ಇಂದು ಭಾರತೀಯ ವಾಯುಪಡೆ ದಿನ: ಈ ವರ್ಷದ ಥೀಮ್, ದಿನದ ಇತಿಹಾಸ ಮತ್ತು ಮಹತ್ವ ತಿಳ್ಕೊಳಿ

ಪ್ರತಿ ವರ್ಷ ಅಕ್ಟೋಬರ್ 8ರಂದು ಭಾರತೀಯ ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ. ಇದು 1932ರಲ್ಲಿ ಭಾರತೀಯ ವಾಯುಪಡೆಯ (IAF) ಸ್ಥಾಪನೆಯನ್ನು ಸೂಚಿಸುತ್ತದೆ. ಈ ದಿನದ ಮೂಲ ಮತ್ತು ಮಹತ್ವ ಹಾಗೂ ಈ ಬಾರಿಯ ಥೀಮ್ ಬಗ್ಗೆ ತಿಳಿಯೋಣ.

ಇಂದು ಭಾರತೀಯ ವಾಯುಪಡೆ ದಿನ: ಈ ವರ್ಷದ ಥೀಮ್, ದಿನದ ಇತಿಹಾಸ ಮತ್ತು ಮಹತ್ವ ತಿಳ್ಕೊಳಿ
ಇಂದು ಭಾರತೀಯ ವಾಯುಪಡೆ ದಿನ: ಈ ವರ್ಷದ ಥೀಮ್, ದಿನದ ಇತಿಹಾಸ ಮತ್ತು ಮಹತ್ವ ತಿಳ್ಕೊಳಿ

Indian Air Force Day 2024: ಪ್ರತಿ ವರ್ಷ ಅಕ್ಟೋಬರ್ 8ರಂದು ಭಾರತದಲ್ಲಿ ಏರ್‌ಫೋರ್ಸ್‌ ಡೇ ಆಚರಿಸಲಾಗುತ್ತದೆ. ಇದುವೇ ಭಾರತೀಯ ವಾಯುಪಡೆಯ ದಿನ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿ ಹುತಾತ್ಮರಾದ ಸೈನಿಕರು ಮತ್ತು ಪೈಲಟ್‌ಗಳನ್ನು ಸ್ಮರಿಸುವುದು ಈ ದಿನದ ಮುಖ್ಯ ಉದ್ದೇಶವಾದರೆ, ಭಾರತೀಯ ವಾಯುಪಡೆಯ (IAF) ಸ್ಥಾಪನೆಯ ಸ್ಮರಣಾರ್ಥವಾಗಿ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಇಂಡಿಯನ್‌ ಏರ್‌ಫೋರ್ಸ್‌ ಆರಂಭವಾಗಿ 92 ವರ್ಷಗಳಾಗುತ್ತಿವೆ. ಭಾರತದ ವಾಯುಪಡೆಯು ವಿಶ್ವದ ನಾಲ್ಕನೇ ಬಲಿಷ್ಠ ವಾಯುಪಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ವರ್ಷದ ವಾಯುಪಡೆಯ ದಿನದ ಆಚರಣೇ ಈಗಾಗಲೇ ಆರಂಭವಾಗಿದೆ. ಚೆನ್ನೈನ ಮರೀನಾ ಬೀಚ್‌ನಲ್ಲಿ ಅಕ್ಟೋಬರ್‌ 6ರ ಭಾನುವಾರ ವೈಮಾನಿಕ ಪ್ರದರ್ಶನವನ್ನು ನಡೆಸಿದೆ. ಭಾರತೀಯ ವಾಯುಪಡೆಯ ಸಾಮರ್ಥ್ಯ ಹಾಗೂ ಸಾಧನೆಗಳನ್ನು ಪ್ರದರ್ಶಿಸುವ ವೈಮಾನಿಕ ಪ್ರದರ್ಶನ ಜನರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪಾಲ್ಗೊಂಡರು. ಅಲ್ಲದೆ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಮುಖ್ಯ ಕಾರ್ಯದರ್ಶಿ ಎನ್ ಮುರುಗಾನಂದಂ ಭಾಗವಹಿಸಿದರು.

ಭಾರತೀಯ ವಾಯುಪಡೆಯ ದಿನ 2024ರ ದಿನಾಂಕ ಮತ್ತು ಥೀಮ್

2024ರ ಭಾರತೀಯ ವಾಯುಪಡೆಯ ದಿನವನ್ನು ಪ್ರತಿವರ್ಷದಂತೆ ಅಕ್ಟೋಬರ್ 8ರ ಮಂಗಳವಾರದಂದು ಆಚರಿಸಲಾಗುತ್ತಿದೆ. ಈ ಬಾರಿಯ ಥೀಮ್‌ ವಿಶಿಷ್ಟವಾಗಿದೆ. ಸಕ್ಷಮ, ಸಶಕ್ತ ಮತ್ತು ಆತ್ಮನಿರ್ಭರ (ಸಮರ್ಥ, ಶಕ್ತಿಯುತ ಮತ್ತು ಸ್ವಾವಲಂಬಿ) ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ವಾಯುಪಡೆ ದಿನ ಆಚರಣೆಯಾಗುತ್ತದೆ. ಈ ಥೀಮ್ ಸ್ವಾವಲಂಬನೆ ಮತ್ತು ಆಧುನೀಕರಣಕ್ಕೆ ಐಎಎಫ್‌ನ್ ಬದ್ಧತೆಯನ್ನು ಒತ್ತಿಹೇಳುತ್ತದೆ. 1932ರಲ್ಲಿ IAF ಸ್ಥಾಪನೆಯಾಯ್ತು. ಅಂದಿನಿಂದಲೂ ಪ್ರತಿವರ್ಷ ಇದೇ ದಿನಾಂಕದಂದು ವಾಯುಪಡೆಯ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಭಾರತೀಯ ವಾಯುಪಡೆಯ ದಿನದ ಮಹತ್ವ

ಭಾರತೀಯ ವಾಯುಪಡೆಯನ್ನು ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿಯೇ ಸೇನೆಯ ಸಹಾಯಕ ಪಡೆಯಾಗಿ ಸ್ಥಾಪಿಸಲಾಯ್ತು. ಆರಂಭದಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಕೆಲವು ವಿಮಾನಗಳು ಮತ್ತು ಸಿಬ್ಬಂದಿ ಮಾತ್ರ ಇದ್ದರು. ಐಎಎಫ್‌ನ ಮೊದಲ ಅಧಿಕೃತ ಹಾರಾಟವು 1933ರ ಏಪ್ರಿಲ್ 1ರಂದು ನಡೆಯಿತು. ಇದು ವಾಯುಪಡೆಯ ಕಾರ್ಯಾಚರಣೆಯ ಆರಂಭವನ್ನು ಸೂಚಿಸುತ್ತದೆ. ಅದಾದ ಕೆಲವೇ ದಶಕಗಳಲ್ಲಿ ಭಾರತದ ವಾಯುಪಡೆಯು ವಿಶ್ವದ ಅತ್ಯಂತ ಬಲಿಷ್ಠ ವಾಯುಪಡೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ. ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಪ್ರತಿವರ್ಷದ ಏರ್‌ಫೋರ್ಸ್‌ ದಿನದಂದು, ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸುವ ಐಎಎಫ್‌ ಸಿಬ್ಬಂದಿಯ ಶೌರ್ಯ ಮತ್ತು ಸಮರ್ಪಣೆಗೆ ಭಾರತ ತಲೆಬಾಗಿ ಗೌರವ ಸಲ್ಲಿಸುತ್ತದೆ. ಇದೇ ವೇಳೆ ಸೇನಾಪಡೆಯ ಕಾರ್ಯಾಚರಣೆ ವೇಳೆ ಹುತಾತ್ಮರಾದವರಿಗೆ ಗೌರವ ಸಲ್ಲಿಸುತ್ತದೆ.

ಸಿಬ್ಬಂದಿಯ ಧೈರ್ಯ, ಸಮರ್ಪಣಾಭಾವ ಮತ್ತು ವೃತ್ತಿಪರತೆಗೆ ಗೌರವ ಸಲ್ಲಿಸುತ್ತದೆ. ವೈಮಾನಿಕ ಪ್ರದರ್ಶನಗಳು ಮತ್ತು ಪರೇಡ್‌ಗಳ ಮೂಲಕ ಐಎಎಫ್‌ನ ಪರಾಕ್ರಮವನ್ನು ಪ್ರದರ್ಶಿಸಲು ಈ ದಿನ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತದ ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಐಎಎಫ್‌ನ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ. ಇಷ್ಟೇ ಅಲ್ಲದೆ ದೇಶದೊಳಗೆ ಮತ್ತು ಗಡಿಯ ಆಚೆಗೂ ಶಾಂತಿ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಬದ್ಧತೆಯನ್ನು ಸಾರಿ ಹೇಳುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.