ಆಪರೇಷನ್ ಸಿಂದೂರ್: ಭಾರತದ ಸೇನಾ ನೆಲೆಗಳ ಮೇಲೆ ಮತ್ತೆ ದಾಳಿಗೆ ಪಾಕಿಸ್ತಾನ ವಿಫಲ ಯತ್ನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪರೇಷನ್ ಸಿಂದೂರ್: ಭಾರತದ ಸೇನಾ ನೆಲೆಗಳ ಮೇಲೆ ಮತ್ತೆ ದಾಳಿಗೆ ಪಾಕಿಸ್ತಾನ ವಿಫಲ ಯತ್ನ

ಆಪರೇಷನ್ ಸಿಂದೂರ್: ಭಾರತದ ಸೇನಾ ನೆಲೆಗಳ ಮೇಲೆ ಮತ್ತೆ ದಾಳಿಗೆ ಪಾಕಿಸ್ತಾನ ವಿಫಲ ಯತ್ನ

ದೇಶದ ಮಿಲಿಟರಿ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ಬಳಸಿ ದಾಳಿ ನಡೆಸಲು ಪಾಕಿಸ್ತಾನ ಮತ್ತೆ ಪ್ರಯತ್ನಿಸಿದೆ. ಆದರೆ ಭಾರತೀಯ ಸೇನೆ ಪಾಕಿಸ್ತಾನದ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿದೆ.

ಭಾರತದ ಸೇನಾ ನೆಲೆಗಳ ಮೇಲೆ ಮತ್ತೆ ದಾಳಿಗೆ ಪಾಕಿಸ್ತಾನ ವಿಫಲ ಯತ್ನ
ಭಾರತದ ಸೇನಾ ನೆಲೆಗಳ ಮೇಲೆ ಮತ್ತೆ ದಾಳಿಗೆ ಪಾಕಿಸ್ತಾನ ವಿಫಲ ಯತ್ನ

ನವದೆಹಲಿ: ಪೆಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಕೈಗೊಂಡ ಆಪರೇಷನ್ ಸಿಂದೂರ್ ಉಗ್ರ ನಿಗ್ರಹ ಕಾರ್ಯಾಚರಣೆಯಿಂದ ಕಂಗೆಟ್ಟಿರುವ ಪಾಕಿಸ್ತಾನ, ಮತ್ತೆ ಭಾರತದ ಸೇನಾ ನೆಲೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ. ಅದಕ್ಕಾಗಿ ಡ್ರೋನ್ ಮತ್ತು ಕ್ಷಿಪಣಿಗಳನ್ನು ಪಾಕಿಸ್ತಾನ ಬಳಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಪಾಕಿಸ್ತಾನದ ಅನೇಕ ದಾಳಿಗಳನ್ನು ಭಾರತೀಯ ಸೇನೆ ಗುರುವಾರ ರಾತ್ರಿ ಹಿಮ್ಮೆಟ್ಟಿಸಿದೆ ಮತ್ತು ದೇಶದ ಪಶ್ಚಿಮ ಗಡಿಯುದ್ದಕ್ಕೂ ವಿವಿಧ ನಿರ್ಬಂಧವನ್ನು ವಿಧಿಸಿದೆ.

ಭಾರತೀಯ ವಾಯುಮಿತಿಯೊಳಗೆ ನುಸುಳಲು ಯತ್ನಿಸಿದ ಎಫ್ -16 ಸೇರಿದಂತೆ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಮತ್ತು ಕನಿಷ್ಠ ಒಬ್ಬ ಪೈಲಟ್ ಅನ್ನು ಭಾರತೀಯ ಪಡೆಗಳು ಸೆರೆಹಿಡಿದಿವೆ ಎಂದು ವರದಿಯಾಗಿದೆ. ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯೆಯಾಗಿ ಸಿಯಾಲ್ಕೋಟ್, ಲಾಹೋರ್ ಮತ್ತು ಇಸ್ಲಾಮಾಬಾದ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲು ಭಾರತವು ಡ್ರೋನ್‌ಗಳನ್ನು ಬಳಸುತ್ತಿದೆ.

ಉಗ್ರರನ್ನು ಸದೆಬಡಿಯುವ ಸಲುವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತದ ಆಪರೇಷನ್ ಸಿಂದೂರ ದಾಳಿ ನಡೆಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಜಮ್ಮು ಪ್ರದೇಶದ ಸತ್ವಾರಿ, ಸಾಂಬಾ, ಆರ್ ಎಸ್ ಪುರ ಮತ್ತು ಅರ್ನಿಯಾದಲ್ಲಿ ಪಾಕಿಸ್ತಾನದ ಎಂಟು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು, ಪಠಾಣ್‌ಕೋಟ್, ಉಧಂಪುರ ಮತ್ತು ಜಲಂಧರ್‌ನ ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ಮೂಲಕ ದಾಳಿಗೆ ಯತ್ನಿಸಿರುವುದು ದೃಢಪಟ್ಟಿವೆ.

ಜಮ್ಮುವಿನಿಂದ ಜೈಸಲ್ಮೇರ್ ಮತ್ತು ಅಮೃತಸರದಿಂದ ಚಂಡೀಗಢದವರೆಗೆ ಹಲವಾರು ನಗರಗಳು ಮತ್ತು ಕುಗ್ರಾಮಗಳಲ್ಲಿ ವಾಯು ದಾಳಿಯ ಸೈರನ್ ಹೊರಡಿಸಿ ಜನರನ್ನು ಎಚ್ಚರಿಸಲಾಗಿದೆ ಮತ್ತು ಬ್ಲ್ಯಾಕೌಟ್‌ಗಳನ್ನು ವಿಧಿಸಲಾಗಿದೆ. ಜತೆಗೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದ ಗಡಿ ಪ್ರದೇಶಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.