ವಿಶ್ಲೇಷಣೆ: ಸಶಸ್ತ್ರ ಪಡೆಗಳ ನಿವೃತ್ತ ಸಿಬ್ಬಂದಿ ಬದುಕಿನಲ್ಲಿ ಗಣನೀಯ ಬದಲಾವಣೆ ತಂದ ಏಕರೂಪ ಪಿಂಚಣಿ ವ್ಯವಸ್ಥೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಿಶ್ಲೇಷಣೆ: ಸಶಸ್ತ್ರ ಪಡೆಗಳ ನಿವೃತ್ತ ಸಿಬ್ಬಂದಿ ಬದುಕಿನಲ್ಲಿ ಗಣನೀಯ ಬದಲಾವಣೆ ತಂದ ಏಕರೂಪ ಪಿಂಚಣಿ ವ್ಯವಸ್ಥೆ

ವಿಶ್ಲೇಷಣೆ: ಸಶಸ್ತ್ರ ಪಡೆಗಳ ನಿವೃತ್ತ ಸಿಬ್ಬಂದಿ ಬದುಕಿನಲ್ಲಿ ಗಣನೀಯ ಬದಲಾವಣೆ ತಂದ ಏಕರೂಪ ಪಿಂಚಣಿ ವ್ಯವಸ್ಥೆ

'ಒಂದು ಶ್ರೇಣಿ ಒಂದು ಪಿಂಚಣಿ' (OROP - One Rank One Pension) ಜಾರಿಗೆ ಬಂದ ನಂತರ ನಿವೃತ್ತ ಸೈನಿಕರ ಬದುಕಿನಲ್ಲಿ ನೆಮ್ಮದಿ ಮೂಡಿದೆ. ರಕ್ಷಣಾ ಪಡೆಗಳ ಸಿಬ್ಬಂದಿ ಇತರ ನಾಗರಿಕ ಸೇವೆಯಲ್ಲಿರುವ ಸಿಬ್ಬಂದಿಯ ಸರಿಸಮನಾಗಿ ಪಿಂಚಣಿ ಪಡೆಯಲು ಇದರಿಂದ ಸಾಧ್ಯವಾಗಿದೆ. (ಬರಹ: ಬ್ರಿಗೇಡಿಯರ್ (ನಿವೃತ್ತ) ಆರ್ ವಿನಾಯಕ)

ಭಾರತೀಯ ಸೇನೆಯ ಸೈನಿಕರು (ಪ್ರಾತಿನಿಧಿಕ ಚಿತ್ರ)
ಭಾರತೀಯ ಸೇನೆಯ ಸೈನಿಕರು (ಪ್ರಾತಿನಿಧಿಕ ಚಿತ್ರ)

One Rank One Pension: ಭಾರತೀಯ ಸಶಸ್ತ್ರಪಡೆಗಳ ಹಿರಿಯ ಯೋಧರ ಅತ್ಯಂತ ನಿರ್ಣಾಯಕ ಮತ್ತು ಬಹು ದಿನಗಳ ಬೇಡಿಕೆಯಾಗಿತ್ತು 'ಒಂದು ಶ್ರೇಣಿ ಒಂದು ಪಿಂಚಣಿ' (OROP - One Rank One Pension). ಅದಕ್ಕೆ ಸುದೀರ್ಘ ಇತಿಹಾಸವಿದೆ. ಅದರ ಪ್ರಮುಖ ಉದ್ದೇಶ ಒಂದೇ ಶ್ರೇಣಿಯಲ್ಲಿ ನಿವೃತ್ತರಾದ ಸಿಬ್ಬಂದಿಗೆ ಅವರ ಸೇವಾ ಅವಧಿಯನ್ನು ಸಮಾನವಾಗಿ ಪರಿಗಣಿಸಿ, ಅವರ ನಿವೃತ್ತಿ ದಿನಾಂಕವನ್ನು ಪರಿಗಣಿಸದೆ, ಪಿಂಚಣಿ ನೀಡಬೇಕು ಎನ್ನುವುದೇ ಆಗಿತ್ತು. ಒಆರ್‌ಒಪಿಯನ್ನು 2014ರ ಜುಲೈ 1 ರಿಂದ ಜಾರಿಗೊಳಿಸಲಾಯಿತು. ಆನಂತರ ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದ್ದು, ಅದು ಸಶಸ್ತ್ರ ಪಡೆಗಳ ನಿವೃತ್ತ ಸಿಬ್ಬಂದಿಯ ಜೀವನದ ಮೇಲೆ ಗಣನೀಯ ಪರಿಣಾಮವನ್ನು ಉಂಟುಮಾಡಿದೆ.

ಒಆರ್‌ಒಪಿ ಚಿಂತನೆಯ ವಿಕಾಸ

ಭಾರತದ ವಿಭಜನೆಯ ನಂತರ ಹಿಂದಿನ ಮಿಲಿಟರಿ ಅಕೌಂಟ್ಸ್ (ಪಿಂಚಣಿ) ನಿಯಂತ್ರಕರ ಕಚೇರಿ ಕೂಡ ವಿಭಜನೆಯಾಯಿತು. ಪಿಂಚಣಿ ಕೆಲಸ ಕಾರ್ಯಗಳು 1947ರ ಸೆಪ್ಟೆಂಬರ್‌ನಲ್ಲಿ ಅಲಹಾಬಾದ್‌ನ ಕಂಟ್ರೋಲರ್ ಆಫ್ ಮಿಲಿಟರಿ ಅಕೌಂಟ್ಸ್ (ಪಿಂಚಣಿಗಳು) ಕಚೇರಿಗೆ ವರ್ಗಾವಣೆಗೊಂಡಿತು. ಈ ಕಚೇರಿ ನವದೆಹಲಿಯ ಸಿಜಿಡಿಎ ಆಡಳಿತ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆ ಕಚೇರಿಯನ್ನು 1951ರಲ್ಲಿ ಅಲಹಾಬಾದ್‌ನ ಸಿಡಿಎ(ಪಿ) ಎಂದು ಮರು ವಿನ್ಯಾಸಗೊಳಿಸಲಾಯಿತು.

ಅಧಿಕಾರಿಗಳ ಶ್ರೇಣಿಗಿಂತ ಕೆಳಗಿನ ಯೋಧರ ನೇಮಕಾತಿಯು 'ಕಲರ್ಸ್ ಸ್ಕೀಂ' ಆಧರಿಸಿತ್ತು. ಆದರೆ ಬದಲಾಗುತ್ತಿರುವ ಭೌಗೋಳಿಕ ಕಾರ್ಯತಂತ್ರ ಪರಿಸರದ ಹಿನ್ನೆಲೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಮೀಸಲು ಪಡೆಗಳನ್ನು ನೇಮಕ ಮಾಡಿಕೊಳ್ಳಲಾರಂಭಿಸಿತು. ಯುವಕರನ್ನು 8 ರಿಂದ 9 ವರ್ಷಗಳ ಅವಧಿಗೆ ಸೇವೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಮುಂದಿನ 7 ರಿಂದ 6 ವರ್ಷಗಳ ಕಾಲ ಅವರಿಗೆ ಕಡಿತಗೊಳಿಸಿದ ಪಿಂಚಣಿಯನ್ನು ನೀಡಲಾಗುತ್ತಿತ್ತು. 10 ವರ್ಷಗಳ ಕಾಲ ಸೇವೆ ಸಲ್ಲಿಸಿದರೆ ಅವರಿಗೆ ಪ್ರತ್ಯೇಕ ಪಿಂಚಣಿ ನೀಡಲಾಗುತ್ತಿತ್ತು. 1985ರ ವೇಳೆಗೆ 14 ವರ್ಗದ ಪಿಂಚಣಿದಾರರಿದ್ದರು.

1971 ರ ಭಾರತ-ಪಾಕ್ ಯುದ್ಧದ ನಂತರ ಏನಾಯಿತು?

ಸಹಜವಾಗಿಯೇ ಹಿರಿಯ ಯೋಧರು ಏಕರೂಪದ ವ್ಯವಸ್ಥೆಯನ್ನು ಬಯಸಿದ್ದರು. ಒಆರ್‌ಒಪಿಯ ಅಗತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಾದರೆ ಮೊದಲಿಗೆ 1971 ರ ಭಾರತ – ಪಾಕ್ ಯುದ್ಧದ ನಂತರ ಏನಾಯಿತು ಎನ್ನುವುದನ್ನು ತಿಳಿದುಕೊಳ್ಳಬೇಕು. ಭಾರತದ ಅತ್ಯುತ್ತಮ ಮಿಲಿಟರಿ ಪಡೆಯ ಗೆಲುವು ಭಾರತದ ಉಪಖಂಡದ ಭೌಗೋಳಿಕ ಸ್ಥಿತಿಗತಿಯನ್ನೇ ಬದಲಿಸಿತು. ಮೂರನೇ ವೇತನ ಆಯೋಗವನ್ನು ಯುದ್ಧಕ್ಕೆ ಮುನ್ನವೇ ರಚಿಸಲಾಗಿತ್ತು ಮತ್ತು ಆನಂತರ ಎರಡು ವರ್ಷಗಳಲ್ಲಿ ಅದು ಪೂರ್ಣಗೊಂಡಿತು. 3ನೇ ವೇತನ ಆಯೋಗ ಸಶಸ್ತ್ರ ಪಡೆಗಳಿಗೆ ಪ್ರತ್ಯೇಕ ವೇತನ ಆಯೋಗ ರಚನೆಯನ್ನು ರದ್ದುಗೊಳಿಸಿತು ಮತ್ತು ಸಶಸ್ತ್ರ ಪಡೆಗಳು ಮತ್ತು ನಾಗರಿಕ ಸೇವಾ ಸಿಬ್ಬಂದಿ ನಡುವೆ ಸಮಾನತೆಯನ್ನು ಸೃಷ್ಟಿಸಬೇಕು ಎಂದು ಹೇಳಿತು.

3ನೇ ಸಿಪಿಸಿ ರಕ್ಷಣಾ ಪಿಂಚಣಿಯಲ್ಲಿ ಎಲ್ಲಾ ಹೆಚ್ಚಿನ ನ್ಯೂನತೆಗಳನ್ನು ಗುರುತು ಮಾಡಿತು. ಅಧಿಕಾರಿಗಳ ಶ್ರೇಣಿಗಿಂತ ಕೆಳಗಿನ ಯೋಧರ ಪಿಂಚಣಿಯನ್ನು ಶೇ 70 ರಿಂದ 50ಕ್ಕೆ ಇಳಿಕೆ ಮಾಡಲಾಯಿತು. ಸಿಪಿಸಿ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಿಗುತ್ತಿದ್ದ ಮೊತ್ತವನ್ನು ಕಡಿತಗೊಳಿಸಿತು. 3ನೇ ಸಿಪಿಸಿ ನಾಗರಿಕ ಸಿಬ್ಬಂದಿಯ ಪಿಂಚಣಿಯನ್ನು ಶೇ 30 ರಿಂದ ಶೇ 50ಕ್ಕೆ ಹೆಚ್ಚಳ ಮಾಡಿತು.

ಹಿರಿಯ ಯೋಧರು 1986ರ ವೇಳೆಗೆ ಒಆರ್‌ಒಪಿ ಬೇಡಿಕೆಯನ್ನು ಮುಂದಿಟ್ಟರು. 5ನೇ ವೇತನ ಆಯೋಗಕ್ಕೂ ಮುನ್ನ 1992ರಲ್ಲಿ ಸರ್ಕಾರ “ಒಂದು ಬಾರಿಯ ಹೆಚ್ಚಳ” (ಒನ್ ಟೈಮ್ ಇನ್‌ಕ್ರೀಸ್) ಅನುಮೋದಿಸಿತು. ನಂತರ 5ನೇ ವೇತನ ಆಯೋಗ 1996ಕ್ಕೆ ಮುನ್ನ ಇದ್ದ ಎಲ್ಲ ವರ್ಗಗಳ ಪಿಂಚಣಿದಾರರನ್ನು ಒಂದೇ ವರ್ಗದಡಿ ಸೇರಿಸಿತು. ಅದರ ಪರಿಣಾಮ ಸದ್ಯ ನಾವು ಎರಡು ವರ್ಗದ ಪಿಂಚಣಿದಾರರಿದ್ದೇವೆ. ಒಂದು 1996ಕ್ಕೂ ಮುನ್ನಾ ದಿನಗಳ ಪಿಂಚಣಿದಾರರು ಮತ್ತು 1996ರ ನಂತರದ ಪಿಂಚಣಿದಾರರು. ಇದರಿಂದ 14 ವರ್ಗದವರಿದ್ದ ಪಿಂಚಣಿದಾರರ ಸಂಖ್ಯೆ ಕೇವಲ 2 ವರ್ಗಕ್ಕೆ ಇಳಿಕೆಯಾಯಿತು. ಇದರಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಯಿತು. ಎಲ್ಲ 14 ವರ್ಗದವರಲ್ಲೂ ಗೊಂದಲಗಳು ಏರ್ಪಟ್ಟವು.

ಮದನ್‌ ಲಾಲ್ ಖುರಾನ ಸಮಿತಿ

6ನೇ ವೇತನ ಆಯೋಗದ ವರದಿಗೂ ಮುನ್ನ ಭಾರತ ಸರ್ಕಾರ ಶ್ರೀ ಮದನ್ ಲಾಲ್ ಖುರಾನ ಅವರ ಅಧ್ಯಕ್ಷತೆಯಲ್ಲಿ ಸಂಸದೀಯ ಸಮಿತಿಯನ್ನು ರಚಿಸಿತ್ತು. ಸಮಿತಿಯು ಹಿರಿಯ ಯೋಧರಿಗೆ 1996ರಿಂದ ಇದ್ದ ಬಾಕಿಯನ್ನು ಪರಿಗಣಿಸಿದರೆ, ಸುಮಾರು 4 ಸಾವಿರ ಕೋಟಿಯಷ್ಟು ಹಣ ನೀಡಬೇಕಾಗುತ್ತದೆ ಎಂದು ಅಂದಾಜಿಸಿತ್ತು. ಅಲ್ಲದೆ ಸಮಿತಿ ತನ್ನ ಮುಂದೆ ಅದೇ ಗೊಂದಲವನ್ನು ಮುಂದುವರಿಸಿತು. 6ನೇ ವೇತನ ಆಯೋಗ ಕೂಡ ಒಆರ್‌ಒಪಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಕ್ರಮೇಣ 2006ರ ನಂತರ ಯೋಧರಿಗೆ ಶೇ 40ರಷ್ಟು ವೇತನ ಹೆಚ್ಚಳ ಮಾಡಲಾಯಿತು. ಆದರೆ ಜೆಸಿಒಗಳಿಗೆ 1ನೇ ಜನವರಿ 2006 ರಲ್ಲಿದ್ದಂತೆ ಶೇ 20ರಷ್ಟು ಪಿಂಚಣಿಯನ್ನು ಹೆಚ್ಚಳ ಮಾಡಿತು. 2009ರ ಜುಲೈ 1 ಮತ್ತು 2012ರ ಸೆಪ್ಟೆಂಬರ್ 24ರಂದು 2006ರ ನಂತರ ನಿವೃತ್ತರಾದ ಪಿಂಚಣಿದಾರರಿಗೆ ಪಿಂಚಣಿ ಪರಿಷ್ಕರಿಸಲಾಯಿತು.

ಸರ್ಕಾರ ಜೆಸಿಒಗಳಿಗೆ ಮತ್ತು ಒಆರ್‌ಗಳಿಗೆ ಪಿಂಚಣಿ ಪರಿಷ್ಕರಣೆ ಮಾಡಿತು. ಆದರೆ ಅಧಿಕಾರಿಗಳಿಗಲ್ಲ. 6ನೇ ವೇತನ ಆಯೋಗ ಮಿಲಿಟರಿ ಸೇವಾ ಪಾವತಿ (ಎಂಎಸ್‌ಪಿ) ಅನ್ನು ಪರಿಚಯಿಸಿತು. ಅದರಡಿ ಬ್ರಿಗೇಡಿಯರ್ ಶ್ರೇಣಿವರೆಗೆ ಸಶಸ್ತ್ರ ಪಡೆಗಳ ಎಲ್ಲ ಶ್ರೇಣಿಯ ಅಧಿಕಾರಿಗಳಿಗೆ ಹಣಕಾಸಿನ ಪರಿಹಾರ ಒದಗಿಸಲಾಯಿತು. ಅವರ ಮಿಲಿಟರಿ ಸೇವೆಗಳನ್ನು ಪರಿಗಣಿಸಿ, ಅದನ್ನು ಪರಿಹಾರ ರೂಪದಲ್ಲಿ ನೀಡಲಾಯಿತು. ಇದು ಹಲವು ಗೊಂದಲಗಳಿಗೆ ಕಾರಣವಾಯಿತು.

5 ವರ್ಷಗಳ ಸಮಾನತೆ

2015ರಲ್ಲಿ ಒಆರ್‌ಒಪಿ ಜಾರಿಗೊಳಿಸಿದ ನಂತರ 2013ಕ್ಕೂ ಮುನ್ನ ಪಿಂಚಣಿ ಪಡೆಯುತ್ತಿದ್ದವರಿಗೆ ಅವರ ಶ್ರೇಣಿಗೆ ಅನುಗುಣವಾಗಿ ಸರಾಸರಿ ಪಿಂಚಣಿಗೆ ಸೇರ್ಪಡೆಗೊಳಿಸಲಾಯಿತು. 2013ನೇ ವರ್ಷದಲ್ಲಿ ನಿವೃತ್ತರಾದವರ ಸೇವಾ ಅವಧಿಯನ್ನು ಪರಿಗಣಿಸಲಾಯಿತು. ಇದರಿಂದಾಗಿ 2016ಕ್ಕೂ ಮುನ್ನ ನಿವೃತ್ತರಾದ ಪಿಂಚಣಿದಾರರಿಗೆ ಒಆರ್‌ಒಪಿ ಜಾರಿಗೊಳಿಸಲಾಯಿತು. ಇದರ ಪರಿಣಾಮ 2013ಕ್ಕೂ ಮುನ್ನ ನಿವೃತ್ತರಾದವರಿಗೆ ಅಂದಾಜು ಶೇ 96ರಷ್ಟು ಮಂದಿಗೆ ಪಿಂಚಣಿ ಹೆಚ್ಚಾಯಿತು. ವರ್ಷಗಳು ಕಳೆದಂತೆ ವ್ಯತ್ಯಯ ಇಳಿಕೆಯಾಯಿತು. 5ನೇ ವರ್ಷದ ವೇಳೆಗೆ ಮೇಲೆ ಉಲ್ಲೇಖಿಸಿದ ಶೇಕಡಾವಾರು ಅಂದಾಜು 80ಕ್ಕೆ ಇಳಿಕೆಯಾಯಿತು. ಮತ್ತೆ 5 ವರ್ಷಗಳ ಬಳಿಕ ಇಂದಿನ ಪಿಂಚಣಿದಾರರ ಪಿಂಚಣಿಯನ್ನು ಸಮೀಕರಿಸಲಾಯಿತು ಮತ್ತು ಸದ್ಯದ ನಿವೃತ್ತ ಸಿಬ್ಬಂದಿಗೆ ಅಂದಾಜು ಶೇ 95ರಷ್ಟು ಉನ್ನತೀಕರಿಸಲಾಯಿತು. ಒಆರ್‌ಒಪಿ–3 ಹಿಂದಿನ ಗತವೈಭವವನ್ನು ಮರುಸ್ಥಾಪಿಸಿದ್ದು, ಸಶಸ್ತ್ರ ಪಡೆಗಳ ಸಿಬ್ಬಂದಿ ತಮ್ಮದೇ ಶ್ರೇಣಿಯ ಇತರ ನಾಗರಿಕ ಸಹವರ್ತಿಗಳಿಗೆ ಹೋಲಿಸಿದರೆ ನ್ಯಾಯಯುತ ವೇತನ ಮತ್ತು ಪಿಂಚಣಿ ಪಡೆಯುವಂತಾಗಿದೆ.

- ಬರಹ: ಬ್ರಿಗೇಡಿಯರ್ (ನಿವೃತ್ತ) ಆರ್ ವಿನಾಯಕ, ವಿಶಿಷ್ಟ ಸೇವಾ ಪದಕ ಪುರಸ್ಕೃತರು

(ಗಮನಿಸಿ: ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.