ಅಪಾಯಕಾರಿ ಸರಕು ಸಹಿತ 640 ಕಂಟೇನರ್ ಒಯ್ಯುತ್ತಿದ್ದ ಹಡಗು ಅರಬ್ಬಿ ಸಮುದ್ರದಲ್ಲಿ ಮುಳುಗಡೆ: ಭಾರತೀಯ ಕೋಸ್ಟ್ ಗಾರ್ಡ್‌ನಿಂದ ರಕ್ಷಣೆ
ಕಂಟೇನರ್‌ಗಳನ್ನು ಒಯ್ಯುತ್ತಿದ್ದ ವಿದೇಶಿ ಹಡಗು ಸಮುದ್ರದ ಮಧ್ಯದಲ್ಲಿ ಮುಳುಗಿದ ನಂತರ ಭಾರತೀಯ ಕೋಸ್ಟ್ ಗಾರ್ಡ್ ಅದರಲ್ಲಿದ್ದ ಸಿಬ್ಬಂದಿಯನ್ನು ಅತ್ಯಂತ ಸಾಹಸದಿಂದ ರಕ್ಷಿಸಿದೆ.

ಕೊಚ್ಚಿ: ಲೈಬೀರಿಯನ್ ಧ್ವಜ ಹೊಂದಿರುವ ಸರಕು ಹಡಗು ಎಂಎಎಸ್‌ಸಿ ಎಲ್ಸಾ 3 ಭಾನುವಾರ ಮುಂಜಾನೆ ಕೇರಳದ ಕರಾವಳಿಯಲ್ಲಿ ತೀವ್ರ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿದೆ. ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ ನಿರ್ವಹಿಸುವ 184 ಮೀಟರ್ ಉದ್ದದ ಹಡಗು ವಿಝಿಂಜಂ ಬಂದರಿನಿಂದ ಕೊಚ್ಚಿಗೆ ತೆರಳುತ್ತಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಮೇ 24 ರಂದು ತೀವ್ರವಾಗಿ ಮುಳುಗಲು ಆರಂಭವಾಯಿತು. ನಂತರ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಮತ್ತು ಅದೇ ಮಾರ್ಗವಾಗಿ ಹಾದುಹೋಗುವ ಹಡಗುಗಳು ಕಂಟೇನರ್ ಶಿಪ್‌ನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಿವೆ.
ಸಿಂಗಾಪುರ ಮೂಲದ ಹಡಗು ಹಾನ್ ಯಿ ಶನಿವಾರ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಿದರೆ, ಇತರ 12 ಜನರನ್ನು ಕೋಸ್ಟ್ ಗಾರ್ಡ್ ಹಡಗು ಅನ್ವೇಶ್ ರಕ್ಷಿಸಿದೆ. ಹಡಗಿನಲ್ಲಿದ್ದ ಉಳಿದ ಮೂವರು - ಕ್ಯಾಪ್ಟನ್ (ರಷ್ಯಾದ ಪ್ರಜೆ), ಮುಖ್ಯ ಎಂಜಿನಿಯರ್ ಮತ್ತು ಸಹ ಎಂಜಿನಿಯರ್ ಕಂಪನಿಯ ಪ್ರೋಟೋಕಾಲ್‌ಗೆ ಅನುಗುಣವಾಗಿ ಹಡಗಿನಲ್ಲಿದ್ದರು. ಆದರೆ ನಂತರ ಭಾನುವಾರ ಮುಂಜಾನೆ ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ಸುಜಾತಾ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಅವರನ್ನು ರಕ್ಷಿಸಿತು.
ಹಡಗು ಸ್ಥಿರವಾಗಬಹುದು ಎಂದು ನಾವು ಭಾವಿಸಿದ್ದೆವು, ಆದರೆ ಹಡಗಿನಲ್ಲಿ ನೀರಿನ ಒಳಹರಿವು ಇತ್ತು ಮತ್ತು ಅದು ಮುಳುಗಿತು ಎಂದು ಪಶ್ಚಿಮ ವಲಯದ ಕೋಸ್ಟ್ ಗಾರ್ಡ್ ಇನ್ಸ್ಪೆಕ್ಟರ್ ಜನರಲ್ ಭೀಷಮ್ ಶರ್ಮಾ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ, ಮತ್ತು ಕೋಸ್ಟ್ ಗಾರ್ಡ್ ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಮತ್ತು ರಾಜ್ಯ ಅಧಿಕಾರಿಗಳಿಗೆ ಸಲಹೆಗಳನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಹಡಗು ಕೊಚ್ಚಿಯಿಂದ ಸುಮಾರು 38 ನಾಟಿಕಲ್ ಮೈಲಿ ದೂರದಲ್ಲಿ ಮುಳುಗಿದೆ. ಅಪಾಯಕಾರಿ ವಸ್ತುಗಳನ್ನು ಹೊಂದಿರುವ ಕೆಲವು ಸರಕು ಸೇರಿದಂತೆ ನೂರಾರು ಸರಕು ಕಂಟೇನರ್ ಅರಬ್ಬಿ ಸಮುದ್ರಕ್ಕೆ ಬಿದ್ದಿದೆ. ಇದರಿಂದ ಕಂಟೇನರ್ ಸೋರಿಕೆಯು ಕೇರಳದ ಪರಿಸರ ಸೂಕ್ಷ್ಮ ಕರಾವಳಿಯುದ್ದಕ್ಕೂ ಪರಿಸರ ಹಾನಿಯ ಭಯವನ್ನು ಹುಟ್ಟುಹಾಕಿದೆ.
ಹಡಗಿನಲ್ಲಿ ಒಟ್ಟು 640 ಕಂಟೇನರ್‌ಗಳು ಇದ್ದು, ಅದರಲ್ಲಿ 13 ಕಂಟೇನರ್‌ಗಳಲ್ಲಿ ಅಪಾಯಕಾರಿ ಸರಕುಗಳು ಇದ್ದು, ಕ್ಯಾಲ್ಸಿಯಂ ಕಾರ್ಬೈಡ್ ತುಂಬಿದ 12 ಕಂಟೇನರ್‌ಗಳು ಕೂಡ ಸೇರಿವೆ. ಅದರ ಜತೆಗೆ ಹಡಗಿನಲ್ಲಿ 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367.1 ಮೆಟ್ರಿಕ್ ಟನ್ ತೈಲವನ್ನು ಹೊಂದಿತ್ತು. ಇಲ್ಲಿಯವರೆಗೆ ಯಾವುದೇ ತೈಲ ಸೋರಿಕೆ ಅಧಿಕೃತವಾಗಿ ವರದಿಯಾಗಿಲ್ಲವಾದರೂ, ಸುಧಾರಿತ ತೈಲ ಸೋರಿಕೆ ಮ್ಯಾಪಿಂಗ್ ತಂತ್ರಜ್ಞಾನವನ್ನು ಹೊಂದಿರುವ ಕೋಸ್ಟ್ ಗಾರ್ಡ್ ಹಡಗು ಆ ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮನ್ವಯದೊಂದಿಗೆ ಭಾರತೀಯ ಕೋಸ್ಟ್ ಗಾರ್ಡ್ ಮಾಲಿನ್ಯ ಪ್ರತಿಕ್ರಿಯೆ ಸನ್ನದ್ಧತೆಯನ್ನು ಹೆಚ್ಚಿಸಿದೆ.