ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಅಪಾಯ; ಕೇಂದ್ರ ಸರ್ಕಾರದಿಂದ ಎಚ್ಚರಿಕೆ, ಬೇಗನೆ ಅಪ್ಡೇಟ್‌ ಮಾಡುವಂತೆ ಸೂಚನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಅಪಾಯ; ಕೇಂದ್ರ ಸರ್ಕಾರದಿಂದ ಎಚ್ಚರಿಕೆ, ಬೇಗನೆ ಅಪ್ಡೇಟ್‌ ಮಾಡುವಂತೆ ಸೂಚನೆ

ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಅಪಾಯ; ಕೇಂದ್ರ ಸರ್ಕಾರದಿಂದ ಎಚ್ಚರಿಕೆ, ಬೇಗನೆ ಅಪ್ಡೇಟ್‌ ಮಾಡುವಂತೆ ಸೂಚನೆ

ಭಾರತದಲ್ಲಿ ಆಪಲ್ ಐಫೋನ್‌, ಐ‌ಪ್ಯಾಡ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ, ಜಾಗರೂಕರಾಗಿರಬೇಕಾದ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರವು ಐಫೋನ್‌ ಬಳಕೆದಾರರಿಗೆ ಕೆಲವೊಂದು ಪ್ರಮುಖ ಸಲಹೆ-ಸೂಚನೆಗಳನ್ನು ಕೊಟ್ಟಿದೆ.

ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಅಪಾಯ; ಕೇಂದ್ರ ಸರ್ಕಾರದಿಂದ ಎಚ್ಚರಿಕೆ (ಐಫೋನ್‌ ಸಂಗ್ರಹ ಚಿತ್ರ)
ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಅಪಾಯ; ಕೇಂದ್ರ ಸರ್ಕಾರದಿಂದ ಎಚ್ಚರಿಕೆ (ಐಫೋನ್‌ ಸಂಗ್ರಹ ಚಿತ್ರ) (Bloomberg)

ಭಾರತ ಸರ್ಕಾರವು ಐಫೋನ್‌ ಬಳಕೆದಾರರಿಗೆ ಗಂಭೀರ ಭದ್ರತಾ ಎಚ್ಚರಿಕೆ ನೀಡಿದೆ. ಆಪಲ್‌ನ ಐಒಎಸ್ ಮತ್ತು ಐಪ್ಯಾಡ್ಒಎಸ್ ಸಾಫ್ಟ್‌ವೇರ್‌ನಲ್ಲಿನ ಅನೇಕ ದೌರ್ಬಲ್ಯಗಳ ಬಗ್ಗೆ ಭಾರತ ಸರ್ಕಾರ ಆಪಲ್ ಐಫೋನ್ ಹಾಗೂ ಐಪ್ಯಾಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ನ್ಯೂನತೆಗಳನ್ನು ದುರ್ಬಳಕೆ ಮಾಡಿಕೊಂಡರೆ, ದಾಳಿಕೋರರು ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ, ಅಥವಾ ನಿಮ್ಮ ಸಾಧನಗಳನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿಸುತ್ತದೆ. ಹೀಗಾಗಿ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು (CERT-In) ಆಪಲ್ ಸಾಧನ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಆಪಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಬಳಕೆದಾರರು ವಹಿಸಬೇಕಾದ ಜವಾಬ್ದಾರಿಯೂ ಹೆಚ್ಚಾಗುತ್ತದೆ.

ಕೇಂದ್ರ ಸರ್ಕಾರದ ಸಲಹೆಯ ಪ್ರಕಾರ, ಈ ದೌರ್ಬಲ್ಯವು ಆಪಲ್‌ನ ಹಳೆಯ ಮತ್ತು ಹೊಸ ಮಾದರಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಾಧನಗಳ ಮೇಲೆ ಪರಿಣಾಮ ಬೀರುತ್ತವೆ. ಬಾಧಿತ ಸಾಧನಗಳಲ್ಲಿ ಐಒಎಸ್ ಆವೃತ್ತಿ 18.3ಕ್ಕಿಂತ ಮೊದಲ ಐಫೋನ್‌ಗಳು ಮತ್ತು ಮಾದರಿಯನ್ನು ಅವಲಂಬಿಸಿ 17.7.3 ಅಥವಾ 18.3ಕ್ಕಿಂತ ಮುಂಚಿನ ಐಪ್ಯಾಡ್ ಒಎಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಐಪ್ಯಾಡ್‌ಗಳು ಸೇರಿವೆ. ಇದರಲ್ಲಿ ಐಫೋನ್ ಎಕ್ಸ್ಎಸ್ ಮತ್ತು ಹೊಸ ಮಾದರಿಗಳು, ಜೊತೆಗೆ ಐಪ್ಯಾಡ್ ಪ್ರೊ (ಸೆಕೆಂಡ್‌ ಜನರೇಷನ್ ಮತ್ತು ನಂತರದವು), ಐಪ್ಯಾಡ್ ಸಿಕ್ಸ್ತ್ ಜನರೇಷನ್‌ ಮತ್ತು ಅದಕ್ಕಿಂತ ನಂತರದವು, ತರ್ಡ್‌ ಜನರೇಷನ್‌ ನಂತರದ ಐಪ್ಯಾಡ್ ಏರ್ ಮತ್ತು ಫಿಫ್ತ್ ಜನರೇಷನ್‌ ನಂತರದ ಐಪ್ಯಾಡ್ ಮಿನಿ ಸೇರಿವೆ.

ಆಪಲ್‌ನ ಆಂತರಿಕ ಸಂದೇಶ ಚೌಕಟ್ಟಿನ ಪ್ರಮುಖ ಭಾಗವಾದ ಡಾರ್ವಿನ್ ನೋಟಿಫಿಕೇಶನ್‌ ಸಿಸ್ಟಮ್‌ನಲ್ಲಿ ಒಂದು ನಿರ್ಣಾಯಕ ನ್ಯೂನತೆ ಇದೆ. ಈ ದೌರ್ಬಲ್ಯವು ವಿಶೇಷ ಅನುಮತಿಗಳಿಲ್ಲದೆಯೂ ಸಹ ಯಾವುದೇ ಅಪ್ಲಿಕೇಶನ್ ಸೂಕ್ಷ್ಮ ಸಿಸ್ಟಮ್-ಮಟ್ಟದ ನೋಟಿಫಿಕೇಶನ್‌ ಕಳುಹಿಸಲು ಅನುಮತಿಸುತ್ತದೆ. ಒಂದು ವೇಳೆ ಇದರ ದುರುಪಯೋಗವಾದರೆ, ಈ ದೋಷವು ನಿಮ್ಮ ಫೋನ್‌ ಅನ್ನು ಕ್ರ್ಯಾಶ್ ಮಾಡಬಹುದು. ರೀಸ್ಟೋರ್‌ ಮಾಡುವವರೆಗೆ ಫೋನ್‌ ಪ್ರತಿಕ್ರಿಯಿಸುವುದಿಲ್ಲ.

ಸಂಭಾವ್ಯ ಪರಿಣಾಮಗಳೇನು?

ಈ ದೌರ್ಬಲ್ಯದ ಪರಿಣಾಮ ತೀವ್ರವಾಗುವ ಸಾಧ್ಯತೆ ಇದೆ. ಹ್ಯಾಕರ್‌ಗಳು ಬಳಕೆದಾರರ ವೈಯಕ್ತಿಕ ಮತ್ತು ಹಣಕಾಸು ಮಾಹಿತಿ ಸೇರಿದಂತೆ ಕೆಲವೊಂದು ಗೌಪ್ಯ ಮಾಹಿತಿನ್ನು ಕದಿಯಲು ಸಾಧ್ಯವಾಗುತ್ತದೆ. ಇದೇ ವೇಳೆ ಅಂತರ್ನಿರ್ಮಿತ ಭದ್ರತಾ ಕಾರ್ಯವಿಧಾನಗಳನ್ನು ತಿಳಿದುಕೊಳ್ಳಲು ಮತ್ತು ಅನಧಿಕೃತ ಕೋಡ್ ಅನ್ನು ಕಾರ್ಯಗತಗೊಳಿಸಲು ದುರ್ಬಳಕೆ ಮಾಡಲು ಸಾಧ್ಯವಾಗುತ್ತದೆ. ಅತ್ಯಂತ ಆತಂಕಕಾರಿ ಎಂಬಂತೆ, ಕೆಲವು ಸಂದರ್ಭಗಳಲ್ಲಿ ಹ್ಯಾಕರ್‌ಗಳು ಸಾಧನವನ್ನು ಸಂಪೂರ್ಣವಾಗಿ ಕ್ರ್ಯಾಶ್ ಕೂಡಾ ಮಾಡಬಹುದು. ಆಮೇಲೆ ಅದನ್ನು ಬಳಸಲು ಬಿಡುವುದಿಲ್ಲ.

ಐಫೋನ್‌ ಬಳಕೆದಾರರು ಮಾಡಬೇಕಾದ್ದು ಏನು?

ಸಮಸ್ಯೆಗಳಿಗೆ ಪರಿಹಾರ ಇರುತ್ತದೆ. ಅದರಂತೆಯೇ ಆಪಲ್ ಸಂಸ್ಥೆ ಕೂಡಾ ಇದಕ್ಕೆ ಪ್ರತಿಕ್ರಿಯೆಯಾಗಿ ಈ ನ್ಯೂನತೆಗಳನ್ನು ಸರಿಪಡಿಸಲು ಭದ್ರತಾ ನವೀಕರಣಗಳನ್ನು (security update) ಹೊರತಂದಿದೆ. ಬಳಕೆದಾರರು ತಮ್ಮ ಸಾಧನಗಳನ್ನು (ಐಫೋನ್‌ ಅಥವಾ ಐಪಾಡ್) ಐಒಎಸ್ ಅಥವಾ ಐಪ್ಯಾಡ್ಒಎಸ್‌ನ ಇತ್ತೀಚಿನ ಲಭ್ಯವಿರುವ ಆವೃತ್ತಿಗೆ ಬೇಗನೆ ಅಪ್ಡೇಟ್‌ ಮಾಡಲು ಸೂಚಿಸಲಾಗಿದೆ. ಇದೇ ವೇಳೆ, ಥರ್ಡ್‌ ಪಾರ್ಟಿ ಅಥವಾ ಪರಿಶೀಲಿಸದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವುದನ್ನು ತಪ್ಪಿಸಬೇಕು. ದುರುದ್ದೇಶಪೂರಿತ ಚಟುವಟಿಕೆಯನ್ನು ಸೂಚಿಸುವ ಯಾವುದೇ ಅಸಾಮಾನ್ಯ ಚಟುವಟಿಕೆಗಳಿಂದ ಜಾಗರೂಕರಾಗಿರಬೇಕು.

ವೇಗವಾಗಿ ವಿಕಸನಗೊಳ್ಳುತ್ತಿರುವ ಈಗಿನ ಡಿಜಿಟಲ್ ಬೆದರಿಕೆಗಳ ಕಾಲಘಟ್ಟದಲ್ಲಿ, ಕ್ಷಣಮಾತ್ರದಲ್ಲೇ ನಿಮ್ಮ ಸಾಧನೆಗಳು ದುರ್ಬಳಕೆಯಾಗಬಹುದು. ಇಂಥಾ ದೌರ್ಬಲ್ಯದಿಂದ ವಿರುದ್ಧ ರಕ್ಷಿಸಲು ನಿಯಮಿತ ಸಾಫ್ಟ್‌ವೇರ್‌ ಅಪ್ಡೇಟ್‌ ಮತ್ತು ಸ್ಮಾರ್ಟ್ ಬಳಕೆಯ ಅಭ್ಯಾಸ ಅತ್ಯಗತ್ಯ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.