ಅಮ್ಮಾ ಎಂದರೆ ಏನೋ ಹರುಷವು: ಅಂದು ಅನಾಥ ಬಾಲಕಿ, ಇಂದು ಸ್ಪೇನ್‌ ಪ್ರಜೆ; ಅಮ್ಮನನ್ನು ಹುಡುಕಿಕೊಂಡು ಭಾರತಕ್ಕೆ ಬಂದ ಯುವತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮ್ಮಾ ಎಂದರೆ ಏನೋ ಹರುಷವು: ಅಂದು ಅನಾಥ ಬಾಲಕಿ, ಇಂದು ಸ್ಪೇನ್‌ ಪ್ರಜೆ; ಅಮ್ಮನನ್ನು ಹುಡುಕಿಕೊಂಡು ಭಾರತಕ್ಕೆ ಬಂದ ಯುವತಿ

ಅಮ್ಮಾ ಎಂದರೆ ಏನೋ ಹರುಷವು: ಅಂದು ಅನಾಥ ಬಾಲಕಿ, ಇಂದು ಸ್ಪೇನ್‌ ಪ್ರಜೆ; ಅಮ್ಮನನ್ನು ಹುಡುಕಿಕೊಂಡು ಭಾರತಕ್ಕೆ ಬಂದ ಯುವತಿ

ಒಂದು ಕಾಲಕ್ಕೆ ಅನಾಥಳಾಗಿದ್ದ, ಆನಂತರ ಸ್ಪೇನ್‌ ದಂಪತಿಯೊಂದಿಗೆ ದತ್ತು ಪುತ್ರಿಯಾಗಿ ತೆರಳಿ ಈಗ ಮೂಲ ಅಮ್ಮನನ್ನು ಹುಡುಕಿಕೊಂಡು ಭಾರತಕ್ಕೆ ಆಗಮಿಸಿರುವ ಯುವತಿಯ ಕಥೆ ಇದು.

ಭುವನೇಶ್ವರದಲ್ಲಿ ಸಾಕು ಅಮ್ಮನೊಂದಿಗೆ ಸ್ವಂತ ಅಮ್ಮನ ಹುಡುಕಾಟದಲ್ಲಿರುವ ಸ್ನೇಹ.
ಭುವನೇಶ್ವರದಲ್ಲಿ ಸಾಕು ಅಮ್ಮನೊಂದಿಗೆ ಸ್ವಂತ ಅಮ್ಮನ ಹುಡುಕಾಟದಲ್ಲಿರುವ ಸ್ನೇಹ.

ದೆಹಲಿ: ಆಕೆಗೆ ಈಗ 20 ವರ್ಷ. ಸ್ಪೇನ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿ. ಹುಟ್ಟಿದ್ದು ಭಾರತದಲ್ಲಿಯಾದರೂ ಬಾಲಕಿಯಾಗಿದ್ದಾಗ ನಡೆದ ಅನಿರೀಕ್ಷಿತ ಬೆಳವಣಿಗೆಗಳಿಂದ ತನ್ನ ಸಹೋದರನೊಂದಿಗೆ ಸೇರಿದ್ದು ಸ್ಪೇನ್‌ ದೇಶವನ್ನು. ಈಗ ತನ್ನನ್ನು ಪೋಷಣೆ ಮಾಡಿದವರೊಂದಿಗೆ ಆಕೆ ಭಾರತಕ್ಕೆ ಬಂದಿದ್ದಾಳೆ. ತಾನು ಹುಟ್ಟಿದ ರಾಜ್ಯದಲ್ಲಿ ಅಮ್ಮನ ಹುಡುಕಾಟದಲ್ಲಿದ್ದಾಳೆ. ಮೂರ್ನಾಲ್ಕು ದಿನದಿಂದ ತಾನು ಹುಟ್ಟಿದ ಸ್ಥಳ, ಆನಂತರ ಸೇರಿದ ಅನಾಥ ಮಕ್ಕಳ ಶಾಲೆ ಸಹಿತ ಎಲ್ಲೆಡೆ ಸುತ್ತು ಹಾಕಿ ನನ್ನ ಅಮ್ಮನನ್ನು ಕಂಡಿದ್ದೀರಾ ಎಂದು ಕೇಳುತ್ತಳೇ ಇದ್ದಾಳೆ. ಆಕೆ ಜತೆಗೆ ಬಂದಿರುವ ಪೋಷಕಿ ಕೂಡ ದತ್ತು ಮಗಳ ಆಸೆ ಪೂರೈಸಲು ಹೆಜ್ಜೆ ಹಾಕುತ್ತಿದ್ಧಾರೆ. ಈಕೆಯ ಬಯಕೆ ಈಡೇರಿಸಲು ಒಡಿಶಾ ಪೊಲೀಸರು ಕೈ ಜೋಡಿಸಿದ್ದಾರೆ. ಅಮ್ಮ ಇನ್ನೂ ಸಿಕ್ಕಿಲ್ಲ. ಹುಡುಕಾಟ ನಿಂತಿಲ್ಲ.

ಈ ಬಾಲಕಿಯ ಹೆಸರು ಸ್ನೇಹಾ. ಹುಟ್ಟಿದ್ದು ಒಡಿಶಾ ರಾಜ್ಯದ ಭುವನೇಶ್ವರದಲ್ಲಿ. ಒಂದು ವರ್ಷದ ಬಾಲಕಿಯಾಗಿದ್ದಾಗ ತನ್ನ ನಾಲ್ಕು ವರ್ಷದ ಸಹೋದರ ಸೋಮು ಜತೆಗೆ ಅನಾಥಾಶ್ರಮ ಸೇರಿದ್ದವಳು ಸ್ನೇಹಾ. ಅದೇನೋ ಆಕೆಯ ಅದೃಷ್ಟ ಸ್ಪೇನ್‌ಗೆ ಸೇರುವಂತೆ ಮಾಡಿತು. ಈಗ ಆಕೆಗೆ ಅಮ್ಮನ ನೋಡುವ ಆಸೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದಾಳೆ.

ಸ್ಪೇನ್‌ನವರಾದ ಗೆಮಾ ವಿಡಾಲ್ ಮತ್ತು ಜುವಾನ್ ಜೋಶ್ ಎಂಬುವವರಿಗೆ ಮಕ್ಕಳಿರಲಿಲ್ಲ. 2010ರಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದ ಅವರು ಭುವನೇಶ್ವರದ ಅನಾಥಾಶ್ರಮಕ್ಕೆ ತೆರಳಿದ್ದರು. ಅಲ್ಲಿ ಹೋದಾಗ ಸ್ನೇಹಳನ್ನು ನೋಡಿದ್ದರು. ಜತೆಗೆ ಅವರ ಸಹೋದರ ಸೋಮು ಕೂಡ ಇದ್ದ. ಇಬ್ಬರೂ ದತ್ತು ತೆಗೆದುಕೊಳ್ಳಲು ನಿರ್ಧರಿಸಿ ಅನುಮತಿ ಕೇಳಿದ್ದರು. ಎಲ್ಲಾ ಕಾನೂನು ಪ್ರಕ್ರಿಯೆಗಳ ನಂತರ ಸ್ನೇಹ ಹಾಗು ಸೋಮು ಅವರನ್ನು ದತ್ತು ಪಡೆದಿದ್ದರು ಗೆಮಾ ಹಾಗೂ ಜುವಾನ್‌ ದಂಪತಿ. ಅಲ್ಲಿಂದ ಇಬ್ಬರನ್ನೂ ಸ್ಪೇನ್‌ಗೆ ಕರೆದೊಯ್ದು ಶಿಕ್ಷಣವನ್ನೂ ನೀಡಿದರು. ಇದಾಗಿ ಹದಿನೈದು ವರ್ಷದಲ್ಲಿ ಇಬ್ಬರೂ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಈಗ 20 ವರ್ಷದ ಸ್ನೇಹಗೆ ಅಮ್ಮನನ್ನು ನೋಡುವ ಆಸೆಯಾಯಿತು. ಪೋಷಕರಿಗೆ ಹೇಳಿದರು. ಗೆಮಾ ಮಗಳನ್ನು ಕರೆದುಕೊಂಡು ಭುವನೇಶ್ವರಕ್ಕೆ ಬಂದೇ ಬಿಟ್ಟರು.

ಇಲ್ಲಿ ಬಂದವರೇ ತಾವು ದತ್ತು ಪಡೆದಿದ್ದ ಅನಾಥಾಶ್ರಮಕ್ಕೆ ತೆರಳಿದರು. ಅಲ್ಲಿ ಇವರಿಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಏಕೆಂದರೆ ಸ್ನೇಹ ತಾಯಿ ಇಬ್ಬರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಳು. ಹೆಸರು ಗೊತ್ತಿದ್ದರೂ ಬೇರೆ ವಿವರ ಅಮ್ಮನ ಬಗ್ಗೆ ತಿಳಿದಿರಲಿಲ್ಲ. ಆಡುಗೆ ಕೆಲಸ ಮಾಡಿಕೊಂಡಿದ್ದ ಆಕೆಯ ತಂದೆ ಇನ್ನೂ ಮೊದಲೇ ಅಲ್ಲಿಂದ ಹೋಗಿದ್ದ. ನಾಲ್ವರು ಮಕ್ಕಳಲ್ಲಿ ಈಕೆಯ ಕೊನೆಯವಳು. ಮಕ್ಕಳನ್ನು ಸಾಕಲಾಗದೇ ಅಮ್ಮ ಕೂಡ ಇಬ್ಬರು ಮಕ್ಕಳನ್ನು ಕರೆದುಕೊಂಡು ಈ ಇಬ್ಬರು ಬಿಟ್ಟು ಹೋಗಿದ್ದಳು. ನೆರೆಹೊರೆಯವರು, ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಇಬ್ಬರನ್ನೂ ಭುವನೇಶ್ವರದಲ್ಲಿಯೇ ಅನಾಥಾಶ್ರಮಕ್ಕೆ ಇಬ್ಬರನ್ನೂ ಸೇರಿಸಿದ್ದರು. ನಾಲ್ಕು ವರ್ಷ ಸ್ನೇಹ ಹಾಗೂ ಸೋಮು ಅದೇ ಅನಾಥಾಶ್ರಮದಲ್ಲಿದ್ದಾಗ ಸ್ಪೇನ್‌ ದಂಪತಿ ದತ್ತು ಮಕ್ಕಳಾಗಿದ್ದರು.

ಇಲ್ಲಿ ಬಂದರೆ ಪೋಷಕರ ಮಾಹಿತಿ. ಸಮೀಪದಲ್ಲಿಯೇ ಕಲಿತ ಶಾಲೆಗೆ ಹೋದರೆ ಅಲ್ಲಿನ ಶಿಕ್ಷಕಿಯಾಗಿದ್ದ ಸ್ನೇಹಸುಧಾ ಮಿಶ್ರ ಕೊಂಚ ಮಾಹಿತಿಯಿತ್ತು. ಶಾಲೆಗೆ ಹೋದಾಗ ಅಲ್ಲಿ ಮಿಶ್ರ ಅವರ ಮಾಹಿತಿ ನೀಡಿದ್ದರು. ಅವರನ್ನು ಹುಡುಕಿಕೊಂಡು ಸ್ನೇಹಾ ತೆರಳಿದಾಗ ಕೊಂಚ ಮಾಹಿತಿ ತಿಳಿಯಿತು,

ಸ್ನೇಹಾ ಅವರ ತಾಯಿ ಬನಲತಾ ಅವರು 2005 ರಲ್ಲಿ ಭುವನೇಶ್ವರದ ನಯಾಪಲ್ಲಿ ಪ್ರದೇಶದ ಬಾಡಿಗೆ ಮನೆಯಲ್ಲಿ ಸ್ನೇಹಾ ಮತ್ತು ಸೋಮು ಅವರನ್ನು ತೊರೆದಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆಕೆಯ ಪತಿ ಸಂತೋಷ್, ಈ ಹಿಂದೆ ಪತ್ನಿ ಮತ್ತು ಸ್ನೇಹಾ ಮತ್ತು ಸೋಮು ಸೇರಿದಂತೆ ನಾಲ್ವರು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ತೊರೆದಿದ್ದರು. ನಂತರ, ಬನಲತಾ ತನ್ನ ಇತರ ಇಬ್ಬರು ಮಕ್ಕಳೊಂದಿಗೆ ಸ್ನೇಹಾ ಮತ್ತು ಸೋಮು ಅವರನ್ನು ಬಿಟ್ಟು ಬಾಡಿಗೆ ಮನೆಯನ್ನು ತೊರೆದರು. ನಂತರ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರು ಮತ್ತು ಅವರನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಿದ್ದು, ಶಾಲೆಗೆ ಸೇರಿದ್ದ ಮಾಹಿತಿಯನ್ನು ಮನೆಗೆ ತೆರಳಿ ಸಂಗ್ರಹಿಸಿದ್ದರು. ಇದಕ್ಕೆ ಬೇಕಾದ ಸಹಾಯವನ್ನು ಮಿಶ್ರ ಒದಗಿಸಿದ್ದರು. ಆದರೆ ಪೋಷಕರು ಎಲ್ಲಿದ್ದಾರೆ ಎನ್ನುವ ಮಾಹಿತಿಯಿಲ್ಲ.

ಸೀಮಿತ ರಜೆಯೊಂದಿಗೆ ಬಂದಿದ್ದ ಸ್ನೇಹಾ ಸ್ಪೇನ್‌ಗೆ ವಾಪಾಸಾಗಬೇಕು. ಕೊನೆಗೆ ಭುವನೇಶ್ವರದ ಪೊಲೀಸರನ್ನು ಎಡತಾಕಿದರು ತಾಯಿ ಹಾಗೂ ಮಗಳು.

ನಯಾಪಲ್ಲಿಯಲ್ಲಿರುವ ಮನೆಯ ಮಾಲೀಕರಿಂದ ಆಕೆಯ ಹೆತ್ತವರ ಹೆಸರುಗಳ ಬಗ್ಗೆ ನಾವು ತಿಳಿದುಕೊಂಡೆವು ಮತ್ತು ನಂತರ ಹೆಸರುಗಳನ್ನು ಪೊಲೀಸರು ಮತ್ತು ಅನಾಥಾಶ್ರಮದೊಂದಿಗೆ ಪರಿಶೀಲಿಸಲಾಯಿತು. "ಬನಲತಾ ದಾಸ್ ಮತ್ತು ಸಂತೋಷ್ ಕಟಕ್ ಜಿಲ್ಲೆಯ ಬಾದಂಬಾ-ನರಸಿಂಗಪುರ ಪ್ರದೇಶದವರು ಎನ್ನುವುದು ನಮ್ಮ ಮಾಹಿತಿ ಪ್ರಕಾರ ತಿಳಿದಿದೆ. ಅವರನ್ನು ಪತ್ತೆಹಚ್ಚಲು ನಾವು ಅಲ್ಲಿನ ಪೊಲೀಸರು ಮತ್ತು ಪಂಚಾಯತ್‌ ನವರನ್ನು ಕೇಳಿಕೊಂಡಿದ್ದೇವೆ ಎಂದು ಇನ್ಸ್‌ಪೆಕ್ಟರ್ ಅಂಜಲಿ ಛೋಟ್ರೆ ಹೇಳುತ್ತಾರೆ.

ಸ್ನೇಹಾ ತರಬೇತಿ ಕಾರ್ಯಕ್ರಮಕ್ಕೆ ಸೇರಿರುವುದರಿಂದ ನಾವು ಸ್ಪೇನ್‌ಗೆ ತುರ್ತಾಗಿ ಮರಳಬೇಕಾಗಿದೆ. ತರಬೇತಿಯನ್ನು ಆಕೆ ನಿಲ್ಲಿಸಬಾರದು. ಮುಂದಿನ 24 ಗಂಟೆಗಳಲ್ಲಿ ನಮಗೆ ಸ್ನೇಹಾ ತಾಯಿ ಸಿಗದೇ ಇದ್ದರೆ ನಾವು ಮಾರ್ಚ್‌ನಲ್ಲಿ ಮತ್ತೆ ಭುವನೇಶ್ವರಕ್ಕೆ ಬರುತ್ತೇವೆ ಎಂದರು ಗೆಮಾ.

ಏನೇನೋ ತಿರುವುಗಳ ನಂತರ ನಮ್ಮ ಬದುಕು ಹೀಗೆ ಸಾಗಿದೆ. ಗೆಮಾ ಹಾಗೂ ಜುವಾನ್‌ ಅವರು ನಮಗೆ ಪ್ರೀತಿ ಕೊಟ್ಟು ಎಲ್ಲವನ್ನೂ ನೀಡಿದ್ದಾರೆ. ಈಗ ಮೂಲ ತಾಯಿ ಸಿಕ್ಕರೆ ಅದಕ್ಕಿಂತ ಖುಷಿಯಿಲ್ಲ ಎಂದು ಸ್ನೇಹ ಹೇಳುವಾಗ ಆಕೆ ಮೊಗದಲ್ಲಿ ಸಂತಸ ಕಂಡಿತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.