ಫೆ 13ರಂದು ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್ ಭೇಟಿ ಸಾಧ್ಯತೆ; ಅಮೆರಿಕದಲ್ಲಿ ಭಾರತದ ಪ್ರಧಾನಿಗೆ ಔತಣಕೂಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಫೆ 13ರಂದು ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್ ಭೇಟಿ ಸಾಧ್ಯತೆ; ಅಮೆರಿಕದಲ್ಲಿ ಭಾರತದ ಪ್ರಧಾನಿಗೆ ಔತಣಕೂಟ

ಫೆ 13ರಂದು ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್ ಭೇಟಿ ಸಾಧ್ಯತೆ; ಅಮೆರಿಕದಲ್ಲಿ ಭಾರತದ ಪ್ರಧಾನಿಗೆ ಔತಣಕೂಟ

ಫ್ರಾನ್ಸ್ ಪ್ರವಾಸ ಮುಗಿಸಿದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಫೆಬ್ರುವರಿ 12ರ ಸಂಜೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಗೆ ಆಗಮಿಸುವ ನಿರೀಕ್ಷೆಯಿದೆ. ಅಲ್ಲಿ ಯುಎಸ್‌ಎ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಯಾಗುವ ಸಾಧ್ಯತೆ ಇದೆ.

ಫೆ 13ರಂದು ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್ ಭೇಟಿ ಸಾಧ್ಯತೆ (AFP FILE PHOTO)
ಫೆ 13ರಂದು ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್ ಭೇಟಿ ಸಾಧ್ಯತೆ (AFP FILE PHOTO)

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 13ರಂದು ಯುಎಸ್ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ವಾರ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಗೆ ತೆರಳಲಿರುವ ಪ್ರಧಾನಿ,‌ ಇತ್ತೀಚೆಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿಯ ಸಮಯದಲ್ಲಿ ಮೋದಿಗೆ ಟ್ರಂಪ್ ಔತಣಕೂಟವನ್ನು ಆಯೋಜಿಸುವ ಸಾಧ್ಯತೆಯಿದೆ.

ಫ್ರಾನ್ಸ್ ಪ್ರವಾಸ ಕೈಗೊಳ್ಳಲಿರುವ ನರೇಂದ್ರ ಮೋದಿ, ಅಲ್ಲಿಂದ ಫೆಬ್ರುವರಿ 12ರ ಸಂಜೆ ವಾಷಿಂಗ್ಟನ್ ಡಿಸಿಗೆ ಆಗಮಿಸುವ ನಿರೀಕ್ಷೆಯಿದೆ. ಫೆಬ್ರುವರಿ 14ರವರೆಗೆ ಯುಎಸ್ ರಾಜಧಾನಿಯಲ್ಲಿ ಉಳಿಯಲಿದ್ದಾರೆ. ಅಮೆರಿಕದ ಕಾರ್ಪೊರೇಟ್ ನಾಯಕರು ಮತ್ತು ಸಮುದಾಯದೊಂದಿಗೆ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನರೇಂದ್ರ ಮೋದಿಯೊಂದಿಗೆ ಟ್ರಂಪ್ ಫೋನ್ ಕರೆಯಲ್ಲಿ ಮಾತನಾಡಿದ್ದರು. ಅದಾದ ಬಳಿಕ, ಮೋದಿ ಫೆಬ್ರುವರಿಯಲ್ಲಿ ಶ್ವೇತಭವನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅದರಂತೆಯೇ ಈಗ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.

ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ

ಭಾರತವು ಹೆಚ್ಚು ಅಮೆರಿಕ ನಿರ್ಮಿತ ಭದ್ರತಾ ಉಪಕರಣಗಳನ್ನು ಖರೀದಿಸುವ ಮತ್ತು ನ್ಯಾಯಯುತ ವ್ಯಾಪಾರ ಸಂಬಂಧದತ್ತ ಸಾಗುವ ಮಹತ್ವವನ್ನು ಟ್ರಂಪ್ ಮೋದಿಗೆ ಒತ್ತಿಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಇದೇ ವೇಳೆ ಕೆನಡಾ, ಮೆಕ್ಸಿಕೊ ಮತ್ತು ಚೀನಾದ ಮೇಲೆ ಟ್ರಂಪ್ ಸುಂಕ ವಿಧಿಸಿದ ಹಿನ್ನೆಲೆಯಲ್ಲಿ, ವ್ಯಾಪಾರದ ಸಂಬಂಧಿತ ಸಂಭಾಷಣೆ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

ಭಾರತವು ಈಗಾಗಲೇ ಅಮೆರಿಕದಿಂದ ಹೆಚ್ಚಿನ ಇಂಧನ ಖರೀದಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಅದಕ್ಕೆ ಪೂರಕವಾಗಿ ಬಜೆಟ್‌ನಲ್ಲಿ, ಯುಎಸ್ ಕಂಪನಿಗಳಿಗೆ ಪ್ರಯೋಜನವಾಗಬಹುದಾದ ಪ್ರಮುಖ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿದೆ.

ಅಕ್ರಮ ವಲಸಿಗರಲ್ಲಿ ಹೆಚ್ಚಿನವರು ಗುಜರಾತ್‌ನವರು

ಅಕ್ರಮ ವಲಸೆಯ ಬಗ್ಗೆ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ ಮತ್ತು ಮೋದಿ “ಸರಿಯಾದ ಕೆಲಸವನ್ನು ಮಾಡುತ್ತಾರೆ” ಎಂದು ಟ್ರಂಪ್ ಸೂಚಿಸಿದ್ದರು. ಭಾರತೀಯರು ಎಂದು ಗುರುತಿಸಲ್ಪಟ್ಟ ನಂತರ ಅಕ್ರಮವಾಗಿ ಯುಎಸ್‌ಗೆ ಪ್ರವೇಶಿಸಿದ ಎಲ್ಲಾ ಭಾರತೀಯರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳುವುದಾಗಿ ಭಾರತ ಈಗಾಗಲೇ ಹೇಳಿದೆ. ಸದ್ಯ ಸಮಸ್ಯೆಯ ಪ್ರಮಾಣ ಅನಿಶ್ಚಿತವಾಗಿದ್ದು, ಅದರ ನಿರ್ವಹಣೆಯು ರಾಜಕೀಯವಾಗಿ ಸೂಕ್ಷ್ಮವಾಗಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರು ಗುಜರಾತ್ ಮೂಲದವರು ಎಂದು ತಿಳಿದುಬಂದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.