ಮತ್ತೆ ಈ ಕೊಚ್ಚೆ ರಾಜಕೀಯದ ದೇಶದಲ್ಲಿ ಹುಟ್ಟಿ ಬರಬೇಡಿ ಪ್ಲೀಸ್; ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಕುರಿತು ರಂಗಸ್ವಾಮಿ ಮೂಕನಹಳ್ಳಿ ಬರಹ
ಭಾರತ ಆರ್ಥಿಕವಾಗಿ ಜಗತ್ತಿನ ಎದುರು ಗುರುತಿಸಿಕೊಳ್ಳಲು ಖ್ಯಾತ ಆರ್ಥಿಕ ತಜ್ಞರು, ಮಾಜಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಕೊಡುಗೆ ಅಪಾರವಾಗಿದೆ. ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ಮೂಲಕ ದೇಶದ ಆರ್ಥಿಕತೆಗೆ ಬಲ ತುಂಬಿದವರು. ಆದರೆ ರಾಜಕಾರಣದಿಂದಾಗಿ ಇವರನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಿದ್ದು ಮಾತ್ರ ದುರಂತ. ರಂಗಸ್ವಾಮಿ ಮೂಕನಹಳ್ಳಿ ಅವರ ಬರಹ ಓದಿ.
ಅದು 1994 ರ ಸಮಯ . ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಎನ್ನುವ ವಿಷಯವನ್ನು ಹೇಳಿಕೊಡುತ್ತಿದ್ದ ಈಶ್ವರಪ್ಪ ಎನ್ನುವ ಲೆಕ್ಚರರ್ ಒಬ್ಬರು ಇನ್ನೊಂದು ಹತ್ತು ವರ್ಷದಲ್ಲಿ ಭಾರತ ಮಹತ್ತರ ಬದಲಾವಣೆ ಹೊಂದಲಿದೆ. ರಸ್ತೆಗಳಲ್ಲಿ ಕಾರಿನ ಕಾರುಬಾರು , ಜನರ ಕೈಯಲ್ಲಿ ಹೆಚ್ಚಿನ ಹಣ ಹರಿದಾಡುತ್ತದೆ. ಎಂದಿದ್ದರು ! ಜೊತೆಗೆ ಇನ್ನೊಂದು ಮಾತನ್ನೂ ಸೇರಿಸಿದ್ದರು. ಭಾರತ ದೇಶ ಕಾಣಲಿರುವ ಇಷ್ಟು ದೊಡ್ಡ ಬದಲಾವಣೆಗೆ ಕಾರಣ ಮನಮೋಹನ್ ಸಿಂಗ್ ಎನ್ನುವ ಆರ್ಥಿಕ ತಜ್ಞ ಮತ್ತು ಅವರಿಗೆ ಫ್ರೀ ಹ್ಯಾಂಡ್ ಕೊಟ್ಟಿರುವ ಪಿ. ವಿ ನರಸಿಂಹ ರಾವ್ ! ಇವರಿಬ್ಬರನ್ನೂ ದೇಶ , ಜನತೆ ಎಂದಿಗೂ ಮರೆಯಬಾರದು.
ಸೈಕಲ್ ಅಥವಾ ಮೂರು ಗಾಲಿಯ ರಿಕ್ಷಾ ಓಡಾಡಲು ಮಾತ್ರ ಸಾಧ್ಯವಿರುವ ಸಣ್ಣ ಸಣ್ಣ ಗಲ್ಲಿಗಳಲ್ಲೂ ಇಂದು ಕಾರಿನ ಸಾಮ್ರಾಜ್ಯ. ಪ್ರತಿ ಬಡಾವಣೆಯೂ ಪಾರ್ಕಿಂಗ್ ಲಾಟ್ ಎನ್ನಿಸುವ ಮಟ್ಟಿಗೆ ರಸ್ತೆಯ ಎರಡೂ ಬದಿಯಲ್ಲೂ ಕಾರುಗಳು ನಿಂತಿರುತ್ತವೆ. ಜನರ ಕೈಯಲ್ಲಿ ಖರ್ಚು ಮೀರಿದ ಆದಾಯ ಸಂಗ್ರಹಣೆಯಾಗುತ್ತಿದೆ. ಭಾರತ ಇಂದಿಗೆ ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇವೆಲ್ಲಕ್ಕೂ ಮೂಲ ಸಸಿ ನೆಟ್ಟವರು ಮನಮೋಹನ್ ಸಿಂಗ್ ಮತ್ತು ನರಸಿಂಹ ರಾಯರು !
ನಾವು ತುಂಬಾ ಕೆಟ್ಟ ಜನ. ಈ ಎರಡೂ ಮಹಾನ್ ಚೇತನವನ್ನು ಹೇಗೆ ನಡೆಸಿಕೊಂಡೆವು ಎನ್ನುವುದು ನೆನಪಿದೆ.ಭಾರತಕ್ಕೆ ನಿಮ್ಮಂತಹ ಚೇತನದ ಸೇವೆ ಬೇಕಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಸಣ್ಣ ಪುಟ್ಟ ಎಕಾನಾಮಿಸ್ಟ್ಗಳನ್ನೂ ಕೂಡ ಅದೆಷ್ಟು ಅಕ್ಕರೆಯಿಂದ ಕಾಣುತ್ತಾರೆ ! ನಾವು ?
ನಿಮ್ಮ ಪ್ರಯಾಣ ಸುಖಮಯವಾಗಿರಲಿ ಮನಮೋಹನ್ ಜೀ . ಮತ್ತೆ ಈ ಕೊಚ್ಚೆ ರಾಜಕೀಯದ ದೇಶದಲ್ಲಿ ಹುಟ್ಟಿ ಬರಬೇಡಿ ಪ್ಲೀಸ್ . ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ಸಮಾಜದಲ್ಲಿ ಹುಟ್ಟಿ . ಶುಭ ಪ್ರಯಾಣ . ಓಂ ಶಾಂತಿ .
ಸೂಚನೆ: ಮನಮೋಹನ್ ಜೀ ಮತ್ತು ನರಸಿಂಹ ರಾಯರು ಇರದಿದ್ದರೆ ಇಂದಿಗೆ ನಾವು ಪಾಕಿಸ್ತಾನ ಅಥವಾ ಬಾಂಗ್ಲಾ ಆಗಿರುತ್ತಿದ್ದೆವು. ಈ ಮಹಾನ್ ಆತ್ಮದ ಬಗ್ಗೆ ವಿಷ ಕಾರುವ ಕಾಮೆಂಟ್ ಕೊನೆಪಕ್ಷ ಇಂದು ಹಾಕಬೇಡಿ